ADVERTISEMENT

ಕಲಬುರಗಿ | ಒಗ್ಗೂಡಿದರಷ್ಟೇ ರಾಜಕೀಯ ಶಕ್ತಿ ಸಾಧ್ಯ: ಗೋಪಾಲರಾವ್‌ ಕಟ್ಟಿಮನಿ

​ಪ್ರಜಾವಾಣಿ ವಾರ್ತೆ
Published 6 ಜನವರಿ 2026, 4:51 IST
Last Updated 6 ಜನವರಿ 2026, 4:51 IST
ಕಲಬುರಗಿಯ ಡಾ.ಎಸ್‌.ಎಂ.ಪಂಡಿತ ರಂಗಮಂದಿರದಲ್ಲಿ ಸೋಮವಾರ ಆಯೋಜಿಸಿದ್ದ ಮಾದರ ಸಮುದಾಯದ ಆನ್‌ಲೈನ್‌ ಸದಸ್ಯತ್ವ ಅಭಿಯಾನ ಕಾರ್ಯಕ್ರಮವನ್ನು ಗಣ್ಯರು ಉದ್ಘಾಟಿಸಿದರು
ಕಲಬುರಗಿಯ ಡಾ.ಎಸ್‌.ಎಂ.ಪಂಡಿತ ರಂಗಮಂದಿರದಲ್ಲಿ ಸೋಮವಾರ ಆಯೋಜಿಸಿದ್ದ ಮಾದರ ಸಮುದಾಯದ ಆನ್‌ಲೈನ್‌ ಸದಸ್ಯತ್ವ ಅಭಿಯಾನ ಕಾರ್ಯಕ್ರಮವನ್ನು ಗಣ್ಯರು ಉದ್ಘಾಟಿಸಿದರು   

ಕಲಬುರಗಿ: ‘ನಮ್ಮ ಸಮುದಾಯದಲ್ಲಿ ಅನೇಕ ಒಡಕಿವೆ; ತಾಳ್ಮೆಯೂ ಇಲ್ಲ. ಹೀಗಾಗಿ ಬಹು ಸಂಖ್ಯಾತರಾದರೂ ರಾಜಕೀಯ ಅಧಿಕಾರ ಪಡೆಯುವಲ್ಲಿ ನಾವು ವಿಫಲರಾಗಿದ್ದೇವೆ’ ಎಂದು ಕರ್ನಾಟಕ ಮಾದರ ಮಹಾಸಭಾದ ಜಿಲ್ಲಾಧ್ಯಕ್ಷ ಗೋಪಾಲರಾವ್‌ ಕಟ್ಟಿಮನಿ ಅಭಿಪ್ರಾಯಪಟ್ಟರು.

ನಗರದ ಡಾ.ಎಸ್‌.ಎಂ.ಪಂಡಿತ ರಂಗಮಂದಿರದಲ್ಲಿ ಸೋಮವಾರ ಆಯೋಜಿಸಿದ್ದ ಸಮುದಾಯದ ಆನ್‌ಲೈನ್‌ ಸದಸ್ಯತ್ವ ಅಭಿಯಾನ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

‘ಕೆಲವು ಸಮುದಾಯಗಳು ಅಧಿಕಾರವನ್ನು ತಮ್ಮ ಮುಷ್ಠಿಯಲ್ಲಿ ಇಟ್ಟುಕೊಂಡಿವೆ. ನಾವು 45 ಲಕ್ಷಕ್ಕೂ ಹೆಚ್ಚು ಜನರಿದ್ದೇವೆ. ಆದರೆ, ಶಕ್ತಿಯೇ ಇಲ್ಲ. ನಮ್ಮವರು ಎಷ್ಟು ಜಿಲ್ಲಾ ಪಂಚಾಯಿತಿ, ತಾಲ್ಲೂಕು ಪಂಚಾಯಿತಿ, ಗ್ರಾಮ ಪಂಚಾಯಿತಿಗಳಲ್ಲಿ ಸದಸ್ಯರಿದ್ದಾರೆ? ಯಾವುದೇ ಪಕ್ಷವೂ ನಮಗೆ ಸುಲಭಕ್ಕೆ ಅವಕಾಶ ನೀಡಲ್ಲ. ಯಾಕೆ ಎಂಬುದರ ಆತ್ಮಾವಲೋಕನ ಅಗತ್ಯ’ ಎಂದರು.

ADVERTISEMENT

‘21ನೇ ಶತಮಾನದಲ್ಲಿ ರಾಜಕೀಯ ಶಕ್ತಿ ಮಹತ್ವ ಪಡೆದಿದೆ. ಇದಕ್ಕಾಗಿ ನಾವೆಲ್ಲ ಒಡಕು ಬಿಟ್ಟು ಸಂಘಟಿತರಾಗಿ ಒಗ್ಗಟ್ಟು ಪ್ರದರ್ಶಿಸಬೇಕು. ಆಗಷ್ಟೇ ರಾಜಕೀಯ ಶಕ್ತಿ ಪಡೆಯಲು ಸಾಧ್ಯ. ನಮ್ಮ ಸಮುದಾಯದವರು ಹಣಕ್ಕೆ ಮತ ಹಾಕದೇ ಸಮಾಜಕ್ಕಾಗಿ ಮತ ಹಾಕಬೇಕು’ ಎಂದರು.

‘ನಮ್ಮ ಸಮುದಾಯದ ಶಕ್ತಿಯನ್ನು ಅರಿಯಲು ಆನ್‌ಲೈನ್‌ ನೋಂದಣಿ ನಡೆಸಲಾಗುತ್ತಿದೆ. ಇದು ಪಕ್ಷಾತೀತವಾಗಿ ನಮ್ಮ ಸಮುದಾಯದ ಮುಖಂಡರು ಕೈಗೊಂಡ ನಿರ್ಧಾರ. ಜಿಲ್ಲೆಯಲ್ಲಿ 25 ಸಾವಿರ ಸದಸ್ಯತ್ವ ನೋಂದಣಿಯ ಗುರಿ ಹೊಂದಲಾಗಿದೆ’ ಎಂದರು.

ಮುಖಂಡರಾದ ವಿಜಯಕುಮಾರ ಜಿ.ರಾಮಕೃಷ್ಣ, ಚಂದ್ರಿಕಾ ಪರಮೇಶ್ವರಿ, ಶಾಮ ನಾಟೀಕರ, ಲಿಂಗರಾಜ ತಾರಫೈಲ್‌, ರಾಜು ವಾಡೇಕರ್‌, ಮಲ್ಲಿಕಾರ್ಜುನ ದಿನ್ನಿ ಸೇರಿದಂತೆ ಹಲವರು ಮಾತನಾಡಿದರು.

ದಶರಥ ಕಲಗುರ್ತಿ, ಲಿಂಗಮ್ಮ ಕಟ್ಟಿಮನಿ, ಪರಮೇಶ್ವರ ಖಾನಾಪುರ, ಗುಂಡಪ್ಪ ಶಿರೋಡನ್, ಪ್ರಕಾಶ ಮಾಳಗೆ ಸೇರಿದಂತೆ ಹಲವು ಮುಖಂಡರು ಉಪಸ್ಥಿತರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.