ADVERTISEMENT

ಕಲಬುರಗಿ: ಪತಿಗೆ 10 ವರ್ಷ, ನಾಲ್ವರಿಗೆ 3 ವರ್ಷ ಜೈಲು ಶಿಕ್ಷೆ

ವರದಕ್ಷಿಣೆ ಕಿರುಕುಳಕ್ಕೆ ಬೇಸತ್ತು ಡೆತ್‌ ನೋಟ್‌ ಬರೆದು ಗೃಹಿಣಿ ಆತ್ಮಹತ್ಯೆ

​ಪ್ರಜಾವಾಣಿ ವಾರ್ತೆ
Published 8 ಜನವರಿ 2025, 16:03 IST
Last Updated 8 ಜನವರಿ 2025, 16:03 IST

ಕಲಬುರಗಿ: ಗೃಹಿಣಿಗೆ ವರದಕ್ಷಿಣೆ ಕಿರುಕುಳ ಕೊಟ್ಟು ಆತ್ಮಹತ್ಯೆಗೆ ಪ್ರಚೋದನೆ ನೀಡಿದ ಆರೋಪ ಸಾಬೀತಾಗಿದ್ದರಿಂದ ಇಲ್ಲಿನ 5ನೇ ಹೆಚ್ಚುವರಿ ವಿಶೇಷ ಜಿಲ್ಲಾ ಸೆಷೆನ್ಸ್ ನ್ಯಾಯಾಲಯವು ಐವರಿಗೆ ಜೈಲು ಶಿಕ್ಷೆಯನ್ನು ವಿಧಿಸಿದೆ.

ಅಂಬಿಕಾ ನಗರದ ಮೀನಾಕ್ಷಿ ಆನಂದ ಆತ್ಮಹತ್ಯೆ ಮಾಡಿಕೊಂಡಿದ್ದ ಗೃಹಿಣಿ. ಆಕೆಯ ಪತಿ ಆನಂದ ಓಂಪ್ರಕಾಶ, ಅತ್ತೆ ಸುಮಂಗಲಾ ಓಂಪ್ರಕಾಶ, ಮಾವ ಓಂಪ್ರಕಾಶ ಶಾಂತಲಿಂಗಪ್ಪ, ಪೂಜಾ ಓಂಪ್ರಕಾಶ ಹಾಗೂ ಜಮದಗ್ನಿ ಓಂಪ್ರಕಾಶ ಶಿಕ್ಷೆಗೆ ಒಳಗಾದವರು.

ಅಕ್ಕಮಹಾದೇವಿ ಕಾಲೊನಿ ನಿವಾಸಿ ಬಸವರಾಜ ಪುತ್ರಿಯಾದ ಮೀನಾಕ್ಷಿ ಅವರು ಆನಂದ ಅವರನ್ನು ಪ್ರೀತಿಸಿ ಮದುವೆ ಆಗಿದ್ದರು. ಮದುವೆ ಬಳಿಕ ತವರು ಮನೆಯಿಂದ ಹಣ ತರುವಂತೆ ಪತಿಯ ಕುಟುಂಬಸ್ಥರು ಕಿರುಕುಳ ಕೊಟ್ಟಿದ್ದರು. ಮೀನಾಕ್ಷಿ ತಂದೆ ₹ 50 ಸಾವಿರ ತಂದು ಕೊಟ್ಟಿದ್ದರೂ ಕಿರುಕುಳವನ್ನು ಮುಂದುವರಿಸಿದ್ದರು. ಇದರಿಂದ ನೊಂದ ಮೀನಾಕ್ಷಿ ಅವರು ಮೂರ್ನಾಲ್ಕು ತಿಂಗಳು ತವರು ಮನೆಯಲ್ಲಿದ್ದರು.

ADVERTISEMENT

ಮಾವನ ಮನೆಗೆ ಬಂದ ಆನಂದ, ಪತ್ನಿ ಮೀನಾಕ್ಷಿಯನ್ನು ತಮ್ಮ ಮನೆಗೆ ಕರೆದುಕೊಂಡ ಹೋಗಿ, ಆಕೆಯ ಮೇಲೆ ಹಲ್ಲೆ ಮಾಡಿ ಅವಾಚ್ಯ ಪದಗಳಿಂದ ನಿಂದಿಸಿದ್ದರು. ಮಾನಸಿಕ ಮತ್ತು ದೈಹಿಕ ಹಿಂಸೆಯನ್ನು ತಾಳಲಾರದೆ ಆತ್ಮಹತ್ಯೆ ಮಾಡಿಕೊಂಡಿ ಮೀನಾಕ್ಷಿ, ತನ್ನ ಸಾವಿಗೆ ಈ ಐವರು ಕಾರಣವೆಂದು ಡೆತ್‌ ನೋಟ್ ಬರೆದಿಟ್ಟಿದ್ದರು.

ಈ ಬಗ್ಗೆ ಮಹಿಳಾ ಪೊಲೀಸ್ ಠಾಣೆ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡ ಆಗಿನ ಪಿಐ ವಿಜಯಲಕ್ಷ್ಮಿ ಅವರು ತನಿಖೆ ಮಾಡಿ, ದೋಷಾರೋಪ ಪಟ್ಟಿಯನ್ನು ನ್ಯಾಯಾಲಯಕ್ಕೆ ಸಲ್ಲಿಸಿದ್ದರು.

ವಾದ–ಪ್ರತಿವಾದ ಆಲಿಸಿದ ನ್ಯಾಯಾಧೀಶ ಚಂದ್ರಶೇಖರ ಕರೋಶಿ ಅವರು ಆನಂದ ಓಂಪ್ರಕಾಶಗೆ 10 ವರ್ಷ ಜೈಲು ಶಿಕ್ಷೆ ಹಾಗೂ ₹30 ಸಾವಿರ ದಂಡ, ಸುಮಂಗಲಾ, ಓಂಪ್ರಕಾಶ, ಪೂಜಾ ಹಾಗೂ ಜಮದಗ್ನಿಗೆ ತಲಾ ಮೂರು ವರ್ಷ ಜೈಲು ಶಿಕ್ಷೆ ಹಾಗೂ ₹ 5 ಸಾವಿರ ದಂಡ ವಿಧಿಸಿ ಆದೇಶಿಸಿದ್ದಾರೆ.

ಸರ್ಕಾರದ ಪರವಾಗಿ ಸರ್ಕಾರಿ ಅಭಿಯೋಜಕ ಹಯಾಳಪ್ಪ ಎನ್‌.ಬಳಬಟ್ಟಿ ಅವರು ವಾದ ಮಂಡಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.