ಕಲಬುರಗಿ: ನಾಡಹಬ್ಬ ದಸರಾ, ಬೆಳಕಿನ ಹಬ್ಬ ದೀಪಾವಳಿ ಸಮಯದಲ್ಲಿ ಇಲ್ಲಿನ ಕಲಬುರಗಿ–ಬೀದರ್–ಯಾದಗಿರಿ ಹಾಲು ಒಕ್ಕೂಟವು ಬಗೆಬಗೆಯ ನಂದಿನಿ ಸಿಹಿತಿನಿಸುಗಳ ಮಾರಾಟದಲ್ಲಿ ಗುರಿ ಮೀರಿ ಸಾಧನೆ ತೋರಿದೆ.
ದಸರಾ–ದೀಪಾವಳಿ ಅವಧಿಯಲ್ಲಿ 13 ಟನ್‌ಗೂ ಅಧಿಕ ನಂದಿನಿ ಸ್ಟೀಟ್ಸ್‌ಗಳನ್ನು ಒಕ್ಕೂಟ ಮಾರಾಟ ಮಾಡಿದೆ. ಕಳೆದ ವರ್ಷದ ಇದೇ ಅವಧಿಗೆ ಹೋಲಿಸಿದರೆ ಈ ಸಲ ಮೂರು ಪಟ್ಟಿಗೂ ಹೆಚ್ಚು ವಹಿವಾಟು ನಡೆದಿದೆ. ಕಳೆದ ವರ್ಷ ದಸರಾ–ದೀಪಾವಳಿ ಸಂದರ್ಭದಲ್ಲಿ ಎರಡು ಟನ್‌ಗಳಷ್ಟು ಸಿಹಿ ತಿನಿಸುಗಳ ಮಾರಾಟದ ಗುರಿಯನ್ನು ಒಕ್ಕೂಟ ಹಾಕಿಕೊಂಡಿತ್ತು. ಆಗ ಮೂರು ಟನ್‌ಗಳಿಗೂ ಅಧಿಕ ವಹಿವಾಟು ನಡೆಸಿತ್ತು.
ಬೇಡಿಕೆ ಗ್ರಹಿಸಿದ ಒಕ್ಕೂಟ: ‘ಗುಣಮಟ್ಟದಿಂದಾಗಿ ಮಾರುಕಟ್ಟೆಯಲ್ಲಿ ನಂದಿನಿ ಉತ್ಪನ್ನಗಳಿಗೆ ಸಾಕಷ್ಟು ಬೇಡಿಕೆಯಿದೆ. ಅದನ್ನು ಆಧರಿಸಿ ಹಬ್ಬಗಳಿಗೂ ಮೊದಲೇ ತಂಡಗಳನ್ನು ನಿರ್ಮಿಸಿ, ಜಾಗೃತಿ ಮೂಡಿಸಲಾಯಿತು. ಬೈಕ್ ಷೋರೂಂ, ಕಾರು ಷೋರೂಂ, ಕೈಗಾರಿಕೆಗಳು ಸೇರಿದಂತೆ 10ಕ್ಕೂ ಹೆಚ್ಚು ಕಾರ್ಮಿಕರಿರುವ ಸಂಘ–ಸಂಸ್ಥೆಗಳನ್ನು ಸಂಪರ್ಕಿಸಿ ನಂದಿನಿ ಸ್ವೀಟ್ಸ್ ಬಗೆಗೆ ಅರಿವು ಮೂಡಿಸಲಾಗಿತ್ತು. ಅದರ ಫಲವಾಗಿ ಈ ಸಲ ಗುರಿಯಾಗಿದ್ದ ಐದು ಟನ್‌ಗಳ ಮೂರು ಪಟ್ಟಗೂ ಅಧಿಕ ಸಿಹಿ ತಿನಿಸುಗಳ ಮಾರಾಟ ನಡೆದಿದೆ’ ಎಂದು ಒಕ್ಕೂಟದ ಅಧಿಕಾರಿಗಳು ಹೇಳುತ್ತಾರೆ.
ಫೇಡಾಗೆ ಅಗ್ರಸ್ಥಾನ: ದಸರಾ–ದೀಪಾವಳಿ ಹಬ್ಬಗಳ ಅವಧಿಯಲ್ಲಿ ಒಕ್ಕೂಟದಿಂದ ಕುಂದಾ, ಫೇಡಾ, ಮೈಸೂರು ಪಾಕ್, ವಿವಿಧ ಬಗೆಯ ಲಾಡು, ವಿವಿಧ ಬಗೆಯ ಬರ್ಫಿ, ಖೋವಾ, ರಸಗುಲ್ಲಾ, ಜಾಮೂನು ಸೇರಿದಂತೆ ಹಲವು ಬಗೆಯ ಸಿಹಿ ತಿನಿಸುಗಳ ಮಾರಾಟ ನಡೆದಿದೆ. ಈ ಪೈಕಿ ಫೇಡಾ ಅಗ್ರಸ್ಥಾನದಲ್ಲಿದೆ. ನಂದಿನಿ ಫೇಡಾ ಒಂದೇ ಐದು ಟನ್‌ಗೂ ಅಧಿಕ ವಹಿವಾಟು ನಡೆದಿದೆ.
‘ನವೆಂಬರ್ ತಿಂಗಳಲ್ಲೂ ಹಬ್ಬಗಳ ಸಂಭ್ರಮ ಮುಂದುವರಿಯಲಿದೆ. ದೀಪಾವಳಿಯ ಬಳಿಕವೂ ಬಹುತೇಕ ವ್ಯಾಪಾರಿಗಳು ಲಕ್ಷ್ಮಿ ಪೂಜೆ ನಡೆಸುತ್ತಾರೆ. ಹೀಗಾಗಿ ನಂದಿನಿ ಸಿಹಿ ತಿನಿಸುಗಳ ಮಾರಾಟ ಇನ್ನಷ್ಟು ಹೆಚ್ಚುವ ನಿರೀಕ್ಷೆಗಳಿವೆ’ ಎಂಬುದು ಅಧಿಕಾರಿಗಳ ವಿಶ್ವಾಸ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.