ADVERTISEMENT

ಡಿಜಿಪಿ ರಾಮಚಂದ್ರರಾವ್ ವಿರುದ್ಧ FIR ದಾಖಲಿಸಿ: ಜನವಾದಿ ಮಹಿಳಾ ಸಂಘಟನೆ ಒತ್ತಾಯ

​ಪ್ರಜಾವಾಣಿ ವಾರ್ತೆ
Published 22 ಜನವರಿ 2026, 4:44 IST
Last Updated 22 ಜನವರಿ 2026, 4:44 IST
ಪದ್ಮಿನಿ ಕಿರಣಗಿ 
ಪದ್ಮಿನಿ ಕಿರಣಗಿ    

ಕಲಬುರಗಿ: ಮಹಿಳೆಯೊಂದಿಗೆ ತಮ್ಮ ಕಚೇರಿಯಲ್ಲಿ ಅಸಭ್ಯವಾಗಿ ವರ್ತಿಸಿ ಅಧಿಕಾರ ದುರುಪಯೋಗ ಮಾಡಿಕೊಂಡಿರುವ ಐಪಿಎಸ್ ಅಧಿಕಾರಿ ಕೆ.ರಾಮಚಂದ್ರರಾವ್ ವಿರುದ್ಧ ಸೂಕ್ತ ತನಿಖೆ ನಡೆಸಿ ಎಫ್‌ಐಆರ್ ದಾಖಲಿಸಬೇಕು ಎಂದು ಜನವಾದಿ ಮಹಿಳಾ ಸಂಘಟನೆ ಜಿಲ್ಲಾ ಸಮಮಿತಿ ಒತ್ತಾಯಿಸಿದೆ.

ಈ ಕುರಿತು ಜಂಟಿ ಪತ್ರಿಕಾ ಹೇಳಿಕೆ ನೀಡಿರುವ ಸಂಘಟನೆಯ ಜಿಲ್ಲಾ ಅಧ್ಯಕ್ಷೆ ಪದ್ಮಿನಿ ಕಿರಣಗಿ, ಕಾರ್ಯದರ್ಶಿ ಶಾಂತಾ ಸರಡಗಿ, ‘ರಾಮಚಂದ್ರರಾವ್ ಸರ್ಕಾರಿ ಕಚೇರಿಯಲ್ಲಿ ಮಹಿಳೆಯರೊಂದಿಗೆ ಲೈಂಗಿಕ ದುರ್ವರ್ತನೆ ನಡೆಸಿರುವ ವಿಡಿಯೊಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿವೆ. ಇವರು ತಮ್ಮ ಅಧಿಕಾರ ದುರುಪಯೋಗ ಮಾಡಿಕೊಂಡು ಸಂವಿಧಾನಾತ್ಮಕ ಮೌಲ್ಯಗಳನ್ನು ಹಾಳು ಮಾಡಿ ಪೊಲೀಸ್ ಇಲಾಖೆಗೆ ಕಳಂಕವನ್ನುಂಟು ಮಾಡಿದ್ದಾರೆ. ಮಹಿಳೆಯರಿಗೆ ಹಾಗೂ ನಾಗರಿಕರಿಗೆ ರಕ್ಷಣೆ ನೀಡಿ ಸಾರ್ವಜನಿಕರಿಗೆ ಕುಂದುಂಟಾಗದಂತೆ ಬದುಕಿನಲ್ಲಿ ಭರವಸೆ ಮೂಡಿಸಬೇಕಾದ ಇಲಾಖೆಯ ಉನ್ನತ ಸ್ಥಾನದಲ್ಲಿರುವ ಅಧಿಕಾರಿಯ ಈ ವರ್ತನೆಯನ್ನು ತೀವ್ರವಾಗಿ ಖಂಡಿಸುತ್ತೇವೆ’ ಎಂದಿದ್ದಾರೆ.

‘ಸರ್ಕಾರ ಸೂಕ್ತ ತನಿಖೆ ನಡೆಸಿ ಇಲಾಖೆಯ ಸೇವೆಯಿಂದಲೇ ವಜಾ ಮಾಡಬೇಕು. ಯಾವುದೇ ಅಧಿಕಾರಿಗಳು, ಜನಪ್ರತಿನಿಧಿಗಳು ತಮ್ಮ ಜೊತೆಯಲ್ಲಿ ಕೆಲಸ ಮಾಡುವ ನೌಕರರಾಗಿರಲಿ ಮತ್ತು ಕೆಳಗಿನ ಅಧಿಕಾರಿಗಳಾಗಿರಲಿ ಅಥವಾ ನ್ಯಾಯ, ಸಹಾಯ ಕೇಳಲು ಬರುವ ಮಹಿಳೆಯರನ್ನು ಭೋಗದ ವಸ್ತುವಾಗಿ ನೋಡುವ ಮನಸ್ಥಿತಿ ಬದಲಾಗಬೇಕು. ಈ ಹಿನ್ನೆಲೆಯಲ್ಲಿ ಸರ್ಕಾರ ಹಲವಾರು ಇಲಾಖೆಗಳು ಸೇರಿದಂತೆ ಲಿಂಗ ಸಂವೇದನೆ ತರಬೇತಿ ನೀಡಬೇಕು. ಎಷ್ಟೋ ಮಹಿಳೆಯರು ದೂರು ಕೊಡಲು ಪೊಲೀಸ್ ಠಾಣೆಗಳಿಗೆ ಹೋದಾಗ ಅಲ್ಲಿನ ಪುರುಷ ಅಧಿಕಾರಿಗಳು ಮಹಿಳೆಯರ ಘನತೆಗೆ ಕುಂದುಂಟು ಮಾಡುವ ಮಾತುಗಳನ್ನಾಡುವುದು ಅವರ ಜೊತೆ ಅನುಚಿತವಾಗಿ ವರ್ತಿಸುವುದು ಇಂಥ ನಡವಳಿಕೆಗಳಿಂದ ಇಲಾಖೆಗಳ ಮೇಲೆ ನಂಬಿಕೆಗಳು ಇಲ್ಲದಂತಾಗಿವೆ’ ಎಂದು ತಿಳಿಸಿದ್ದಾರೆ.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.