ADVERTISEMENT

ಮಹಾರಾಷ್ಟ್ರ ಸರ್ಕಾರ ಬೀಳಿಸಲು ಬಿಜೆಪಿ ಸಂಚು: ಡಾ.ಜಿ. ಪರಮೇಶ್ವರ್ ಟೀಕೆ

​ಪ್ರಜಾವಾಣಿ ವಾರ್ತೆ
Published 25 ಜೂನ್ 2022, 7:09 IST
Last Updated 25 ಜೂನ್ 2022, 7:09 IST
ಜಿ.ಪರಮೇಶ್ವರ್
ಜಿ.ಪರಮೇಶ್ವರ್   

ಕಲಬುರಗಿ: ಮಹಾರಾಷ್ಟ್ರದ ಕೆಲ ಶಿವಸೇನಾ ಶಾಸಕರನ್ನು ಪ್ರಚೋದಿಸಿ ಸರ್ಕಾರ ಬೀಳಿಸಲು ಬಿಜೆಪಿ ವ್ಯವಸ್ಥಿತ ಸಂಚು ರೂಪಿಸಿದ್ದು, ಇದು ಬಹಳ ದಿನ ನಡೆಯುವುದಿಲ್ಲ. ಇದನ್ನು ತಡೆಯಲು ಚುನಾವಣಾ ಕಾಯ್ದೆಗಳಲ್ಲಿ ತಿದ್ದುಪಡಿ ತರುವ ಅಗತ್ಯವಿದೆ ಎಂದು ಕಾಂಗ್ರೆಸ್ ಶಾಸಕ ಡಾ. ಜಿ. ಪರಮೇಶ್ವರ್ ಅಭಿಪ್ರಾಯಪಟ್ಟರು.

ಖಾಸಗಿ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ಶನಿವಾರ ನಗರಕ್ಕೆ ಭೇಟಿ ನೀಡಿದ್ದ ಸಂದರ್ಭದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಬಿಜೆಪಿಯವರು ಕರ್ನಾಟಕದಲ್ಲೂ ಇದನ್ನೇ ಮಾಡಿದ್ದಾರೆ. ಬೇರೆ ರಾಜ್ಯದಲ್ಲಿಯೂ ಇದನ್ನೇ ಮಾಡಿದ್ದಾರೆ. ಈಗ ಮಹಾರಾಷ್ಟ್ರದಲ್ಲಿಯೂ ಸರ್ಕಾರ ಬುಡಮೇಲು ಮಾಡುವ ಯತ್ನ ಮಾಡುತ್ತಿದ್ದಾರೆ. ಇದು ಪ್ರಜಾಪ್ರಭುತ್ವ ವ್ಯವಸ್ಥೆಗೆ ಮಾರಕ’ ಎಂದರು.

‘ಯಾವುದೇ ಪಕ್ಷಕ್ಕೆ ಬಹುಮತ ಬರದೇ ಇದ್ದ ಸಂದರ್ಭದಲ್ಲಿ ಹೊಂದಾಣಿಕೆ ಮಾಡಿಕೊಂಡು ಸರ್ಕಾರ ರಚಿಸುವುದು ಸಾಮಾನ್ಯ. ಇದಕ್ಕೆ ದೇಶದ ಸಂವಿಧಾನದಲ್ಲಿಯೇ ಅವಕಾಶ ಇದೆ. ಅದಕ್ಕಾಗಿ ಇಡೀ ದೇಶದಲ್ಲಿಯೇ ಇದನ್ನು ಚರ್ಚೆ ಮಾಡಿ ದೊಡ್ಡ ಬದಲಾವಣೆ ತರಬೇಕಾಗಿದೆ. ಇಲ್ಲದಿದ್ದಲ್ಲಿ ಯಾವುದೇ ಅಭಿವೃದ್ಧಿ ಕೆಲಸಗಳು ಆಗುವುದಿಲ್ಲ. ಇದು ಬಿಜೆಪಿಯವರೇ ಮಾಡಿಸುತ್ತಿದ್ದಾರೆ ಎಂದು ಇಡೀ ಜಗತ್ತಿಗೆ ಗೊತ್ತಾಗಿದೆ. ಈ ಸರ್ಕಾರ ಕೆಡವಿ ತಮ್ಮ ಸರ್ಕಾರ ಅಧಿಕಾರಕ್ಕೆ ತರಬೇಕು ಎಂದು ಬಿಜೆಪಿ ಹವಣಿಸುತ್ತಿದೆ’ ಎಂದು ಹೇಳಿದರು.

ADVERTISEMENT

‘ಮಹಾರಾಷ್ಟ್ರದಲ್ಲಿ ಮೈತ್ರಿ ಸರ್ಕಾರ ಅಧಿಕಾರಕ್ಕೆ ಬರುವುದನ್ನು ತಡೆಯಲು ಬಿಜೆಪಿಯವರು ನಡೆಸಿದ ಪ್ರಯತ್ನವನ್ನು ದೇಶದ ಜನ ಮರೆತಿಲ್ಲ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.