
ಕಲಬುರಗಿ: ಜಿಲ್ಲೆಯ ಕಾಳಗಿ ತಾಲ್ಲೂಕಿನ ವಚ್ಚಾ ಗ್ರಾಮ ವ್ಯಾಪ್ತಿಯಲ್ಲಿ ಅಕ್ರಮವಾಗಿ ಕಲ್ಲು ಗಣಿಗಾರಿಕೆ ನಡೆಸಿದ ಪ್ರಕರಣದ ಸಂಬಂಧ ಕೇಂದ್ರದ ಮಾಜಿ ಸಚಿವ ಭಗವಂತರಾಯ ಖೂಬಾ ಅವರಿಗೆ ₹25.30 ಕೋಟಿ ಪಾವತಿಸುವಂತೆ ಕಾಳಗಿ ತಹಶೀಲ್ದಾರ್ ನೋಟಿಸ್ ನೀಡಿದ್ದಾರೆ.
2014ರ ಜುಲೈ 19ರಿಂದ 2019ರ ಜುಲೈ 18ರವರೆಗೆ ಗ್ರಾಮದ ಸರ್ವೆ ನಂಬರ್ 24/4ರಲ್ಲಿ 2 ಎಕರೆಯಲ್ಲಿ ಕಟ್ಟಡದ ಕಲ್ಲುಗಣಿಗಾರಿಕೆಗೆ ಖೂಬಾ ಅನುಮತಿ ಪಡೆದಿದ್ದರು. ಅನುಮತಿ ಪಡೆದಿದ್ದ ಪ್ರದೇಶಕ್ಕಿಂತಲೂ ಹೆಚ್ಚಿನ ಪ್ರದೇಶದಲ್ಲಿ ಕಲ್ಲುಗಣಿಗಾರಿಕೆ ನಡೆಸಿದ ಆರೋಪ ಕೇಳಿ ಬಂದಿತ್ತು. ಈ ಕುರಿತು ಸಂಜೀವಕುಮಾರ ಜವಕರ ಎಂಬುವರು ದೂರು ನೀಡಿದ್ದರು.
ಬಳಿಕ ಭೂ ದಾಖಲೆಗಳ ಸಹಾಯಕ ನಿರ್ದೇಶಕರ ಕಚೇರಿ ಹಾಗೂ ಗಣಿ ಮತ್ತು ಭೂವಿಜ್ಞಾನ ಇಲಾಖೆಯಿಂದ ಜಂಟಿ ಸಮೀಕ್ಷೆ ನಡೆದಿದ್ದು, 7.19 ಲಕ್ಷ ಮೆಟ್ರಿಕ್ ಟನ್ ಕಲ್ಲು ಅಕ್ರಮ ಗಣಿಗಾರಿಕೆ ನಡೆಸಿದ್ದು ಕಂಡು ಬಂದಿತ್ತು. ಈ ಕೃತ್ಯಕ್ಕೆ ದಂಡ, ರಾಜಧನ ಹಾಗೂ ಸ್ಥಿರ ಬಾಡಿಗೆ ರೂಪದಲ್ಲಿ ₹25.30 ಕೋಟಿ ಪಾವತಿಸುವಂತೆ ಖೂಬಾ ಅವರಿಗೆ ಕಾಳಗಿ ತಹಶೀಲ್ದಾರ್ ಹಲವು ನೋಟಿಸ್ ನೀಡಿದ್ದರು. ಅದನ್ನು ಪಾವತಿಸಲು ಖೂಬಾ ವಿಫಲರಾಗಿದ್ದರು.
ಬಳಿಕ ದಂಡ, ರಾಜಧನ ಹಾಗೂ ಸ್ಥಿರ ಬಾಡಿಗೆ ರೂಪದಲ್ಲಿ ಬರಬೇಕಿದ್ದ ₹25.30 ಕೋಟಿ ಮೊತ್ತವನ್ನು ಕರ್ನಾಟಕ ಉಪ ಖನಿಜ ನಿಯಮಾವಳಿಯಂತೆ ಭೂ ಕಂದಾಯ ಬಾಕಿ ಎಂದು ಪರಿಗಣಿಸಲು ನೋಟಿಸ್‌ನಲ್ಲಿ ಸೂಚಿಸಲಾಗಿದೆ.
ಪ್ರತಿಕ್ರಿಯೆಗೆ ಖೂಬಾ ಅವರನ್ನು ಸಂಪರ್ಕಿಸಿದರೂ ಅವರು ಮೊಬೈಲ್ ಕರೆ ಸ್ವೀಕರಿಸಲಿಲ್ಲ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.