ADVERTISEMENT

ಅಂತರರಾಜ್ಯ ಇರಾನಿ ಗ್ಯಾಂಗ್‌ ಬಂಧನ: ₹27.30 ಲಕ್ಷ ಮೌಲ್ಯದ ಸ್ವತ್ತುಗಳು ಜಪ್ತಿ

​ಪ್ರಜಾವಾಣಿ ವಾರ್ತೆ
Published 3 ಫೆಬ್ರುವರಿ 2026, 5:22 IST
Last Updated 3 ಫೆಬ್ರುವರಿ 2026, 5:22 IST
ಜಹೀರ್ ಅಬ್ಬಾಸ್‌
ಜಹೀರ್ ಅಬ್ಬಾಸ್‌   

ಕಲಬುರಗಿ: ತೆಲಂಗಾಣದ ವಿವಿಧೆಡೆ ಒಂದೇ ದಿನ ಮೂರು ಅಪರಾಧ ಕೃತ್ಯಗಳನ್ನು ಎಸೆಗಿ ನಗರದಲ್ಲಿ ಆಶ್ರಯ ಪಡೆದಿದ್ದ ಕುಖ್ಯಾತ ಅಂತರರಾಜ್ಯ ಇರಾನಿ ಗ್ಯಾಂಗ್‌ನ ಏಳು ಮಂದಿಯನ್ನು ಸಬರ್ಬನ್‌ ಠಾಣೆ ಪೊಲೀಸರು ಬಂಧಿಸಿದ್ದಾರೆ.

‘ಮಹಾರಾಷ್ಟ್ರದ ಬೀಡ್‌ ಜಿಲ್ಲೆಯವರಾದ ಜಹೀರ್‌ ಅಬ್ಬಾಸ್ ಅಲಿ, ಆತನ ಸಹೋದರ ಅಲಿರಜಾಕ್‌ ಶೇಖುಬ್‌ ಬೇಗ್‌, ಅಲಿಮಿರ್ಜಾ ದರಬೇಶ, ಜಾಫರ್‌ ಅಜಮ್‌ ಸೈಯದ್‌, ಠಾಣೆ ಜಿಲ್ಲೆಯ ಅಂಬೆವಿಲಿಯ ಲಾಲ್‌ ಸಮೀರ್‌ ಅಲಿಯಾಸ್‌ ಲಾಲ್‌ಗಾಂಧಿ, ಜಾಫರ್‌ ಅಲಿ ಸೈಯದ್‌ ಹಾಗೂ ಮಧ್ಯಪ್ರದೇಶದ ಭೂಪಾಲ್‌ನ ಖಾಸಿಂ ಜೋಜೋ ಜಾಫ್ರಿ ಬಂಧಿತರು. ಅಪರಾಧಿಗಳ ಪೈಕಿ ಒಬ್ಬ ಮುಂಬೈ ಪೊಲೀಸರ ಮಾಹಿತಿದಾರನಾಗಿಯೂ ಕೆಲಸ ಮಾಡಿದ್ದಾನೆ’ ಎಂದು ನಗರ ಪೊಲೀಸ್‌ ಕಮಿಷನರ್‌ ಶರಣಪ್ಪ ಎಸ್‌.ಡಿ. ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.

‘ಜನವರಿ 23ರಂದು ತಾವರಗೇರಾ ಕ್ರಾಸ್‌ ಹತ್ತಿರ ಆರೇಳು ಮಂದಿ ಕೈಯಲ್ಲಿ ಮಾರಕಾಸ್ತ್ರಗಳನ್ನು ಹಿಡಿದು ಮುಖಕ್ಕೆ ಬಟ್ಟೆ ಕಟ್ಟಿಕೊಂಡು ರಸ್ತೆಯಲ್ಲಿ ಸಂಚರಿಸುವ ವಾಹನಗಳನ್ನು ತಡೆದು ದರೋಡೆಗೆ ಯತ್ನಿಸುತ್ತಿರುವ ಮಾಹಿತಿ ಬಂತು. ಈ ಮಾಹಿತಿ ಆಧರಿಸಿ ಆರೋಪಿಗಳ ಮೇಲೆ ನಿಗಾ ಇರಿಸಲಾಗಿತ್ತು’ ಎಂದು ವಿವರಿಸಿದರು.

ADVERTISEMENT

‘ದರೋಡೆಗೆ ಸಂಚು ಹಾಗೂ ಮಾರಾಕಾಸ್ತ್ರಗಳನ್ನು ಹೊಂದಿದ ಆರೋಪದಡಿ ಏಳು ಮಂದಿಯನ್ನು ವಶಕ್ಕೆ ಪಡೆದು ವಿಚಾರಿಸಲಾಯಿತು. ಆಗ ಪೊಲೀಸರು ಎಂದು ಹೇಳಿಕೊಂಡು ತೆಲಂಗಾಣದ ಮಹಬೂಬ್‌ ನಗರ ಹಾಗೂ ಏವಲಾ ಪೊಲೀಸ್‌ ಠಾಣೆ ವ್ಯಾಪ್ತಿಗಳಲ್ಲಿ ಒಂದೇ ದಿನ ಮೂರು ಅಪರಾಧ ಕೃತ್ಯಗಳನ್ನು ಎಸೆಗಿರುವುದಾಗಿ ತಪ್ಪೊಪ್ಪಿಕೊಂಡರು. ಬಂಧಿತರು ಕದ್ದ ಚಿನ್ನಾಭರಣಗಳನ್ನು ಕಾರಿನ ಮಧ್ಯದ ಸೀಟ್‌ನ ಹ್ಯಾಂಡಲ್‌ನಲ್ಲಿ ಅಡಗಿಸಿಟ್ಟಿದ್ದರು’ ಎಂದು ಮಾಹಿತಿ ನೀಡಿದರು.

‘ಬಂಧಿತರಿಂದ ಒಟ್ಟು ₹15.30 ಲಕ್ಷ ಮೌಲ್ಯದ್ಯ 90 ಗ್ರಾಂ ಚಿನ್ನಾಭರಣ, ಕೃತ್ಯಕ್ಕೆ ಉಪಯೋಗಿಸಿದ ಟಾಟಾ ಹೆಕ್ಸಾನ್‌ ಕಾರು, ಟಿವಿಎಸ್ ಅಪಾಚಿ ಬೈಕ್‌, ಹೋಂಡಾ ಹಾರ್ನೆಟ್‌ ಬೈಕ್‌, ಕಬ್ಬಿಣ ರಾಡ್‌, ತಲವಾರ, ಕಾರದ ಪುಡಿ, ಕಪ್ಪು ಬಟ್ಟೆಗಳನ್ನು ಜಪ್ತಿಮಾಡಿಕೊಳ್ಳಲಾಗಿದೆ’ ಎಂದು ಶರಣಪ್ಪ  ವಿವರಿಸಿದರು.

‘ಎಲ್ಲ ಆರೋಪಿಗಳು ರೂಢಿಗತ ಅಪರಾಧಿಗಳೇ ಆಗಿದ್ದಾರೆ. ಉತ್ತರಪ್ರದೇಶ, ಪಶ್ಚಿಮ ಬಂಗಾಳ, ಮಧ್ಯಪ್ರದೇಶ, ಮಹಾರಾಷ್ಟ್ರ, ತೆಲಂಗಾಣ ಹಾಗೂ ಕರ್ನಾಟಕದ ವಿವಿಧ ಠಾಣೆಗಳಲ್ಲಿ ನಕಲಿ ಪೊಲೀಸ್‌ ಅಂತಾ ವಂಚನೆ, ಸುಲಿಗೆ ಹಾಗೂ ದರೋಡೆ ಮಾಡಿದ ಪ್ರಕರಣಗಳು ದಾಖಲಾಗಿವೆ. ಕಳೆದ 10ರಿಂದ15 ವರ್ಷಗಳಿಂದ ಬರೀ ಅಪರಾಧ ಕೃತ್ಯಗಳನ್ನೇ ನೆಚ್ಚಿಕೊಂಡು ಬದುಕುತ್ತಿರುವುದು ಗೊತ್ತಾಗಿದೆ’ ಎಂದರು.

‘ಪ್ರಕರಣದ 1ನೇ ಆರೋಪಿ ಜಹೀರ್‌ ಅಬ್ಬಾಸ್‌ಅಲಿ ವಿರುದ್ಧ ಮಹಾರಾಷ್ಟ್ರದ ಪರ್ಲಿಯಲ್ಲಿ ಐದು ಪ್ರಕರಣಗಳಿವೆ. ಇತ್ತೀಚೆಗೆ ಅಮರಾವತಿಯಲ್ಲಿ 15 ಪ್ರಕರಣಗಳಲ್ಲಿ ಬಂಧಿತನಾಗಿದ್ದ. ಜಾಮೀನಿನ ಮೇಲೆ ಹೊರಬಂದು ಮತ್ತೆ ಅಪರಾಧ ಕೃತ್ಯಗಳಲ್ಲಿ ತೊಡಗಿದ್ದಾನೆ. 3ನೇ ಆರೋಪಿ ಲಾಲ್‌ಸಮೀರ್‌ ವಿರುದ್ಧ ಬೆಂಗಳೂರು, ಮುಂಬೈನಲ್ಲಿ ಪ್ರಕರಣಗಳಿವೆ. ಅಮರಾವತಿಯಲ್ಲಿ 15 ಪ್ರಕರಣಗಳಲ್ಲಿ ಈತನೂ ಬಂಧನಕ್ಕೆ ಒಳಗಾಗಿದ್ದ. 7ನೇ ಆರೋಪಿ ಜಾಫರ್‌ ಅಜಮ್‌ ಸೈಯದ್‌ ವಿರುದ್ಧ ಐದು ಪ್ರಕರಣಗಳಿವೆ. 4ನೇ ಆರೋಪಿ ಖಾಸಿಂ ವಿರುದ್ಧ ಐದು ಪ್ರಕರಣಗಳಿವೆ. ಲಾಲ್‌ಸಮೀರ್‌ ಮಗಳನ್ನು ಕಲಬುರಗಿಯ ಹುಡುಗನಿಗೆ ಮದುವೆ ಮಾಡಿಕೊಟ್ಟಿದ್ದಾರೆ. ಅದಕ್ಕಾಗಿಯೇ ಇಲ್ಲಿ ಆಶ್ರಯ ಪಡೆಯಲು ಬಂದಿದ್ದರು’ ಎಂದು ಶರಣಪ್ಪ ವಿವರಿಸಿದರು.

‘ಈ ಗ್ಯಾಂಗ್‌ ಎಲ್ಲಿ ಆಶ್ರಯ ಪಡೆಯುತ್ತದೆಯೋ ಅಲ್ಲಿ ಅಪರಾಧ ಕೃತ್ಯ ಎಸೆಗುತ್ತಿರಲಿಲ್ಲ. ಕಲಬುರಗಿಯಲ್ಲಿ ಆಶ್ರಯ ಪಡೆದ ಆರೋಪಿಗಳು, ತೆಲಂಗಾಣದ ಮಹಬೂಬ್‌ನಗರ ಹಾಗೂ ಏವಲಾ ಠಾಣೆಗಳ ವ್ಯಾಪ್ತಿಯಲ್ಲಿ ಒಂದೇ ದಿನ ಬೆಳಿಗ್ಗೆ, ಮಧ್ಯಾಹ್ನ ಹಾಗೂ ರಾತ್ರಿ ಕೃತ್ಯ ಎಸೆಗಿ ಇಲ್ಲಿಗೆ ಬಂದಿದ್ದರು’ ಎಂದರು.

ಪತ್ರಿಕಾಗೋಷ್ಠಿಯಲ್ಲಿ ಡಿಸಿಪಿ ಪ್ರವೀಣ ನಾಯಕ, ಸಬರ್ಬನ್‌ ಎಸಿಪಿ ಬಸವೇಶ್ವರ ಹೀರಾ, ಇನ್‌ಸ್ಪೆಕ್ಟರ್‌ ನಟರಾಜ ಲಾಡೆ ಇದ್ದರು.

ಹೆಚ್ಚು ಹಣ ಕೊಟ್ಟಿದ್ದೇ ಸುಳಿವು

‘ಕಲಬುರಗಿಯ ಒಂದೆಡೆ ವಾಹನ ಪಾರ್ಕಿಂಗ್‌ಗೆ ₹50 ದರವಿತ್ತು. ಆರೋಪಿಗಳು ವಾಹನ ಚೆನ್ನಾಗಿ ನೋಡಿಕೊಳ್ಳಲು ₹250 ಕೊಟ್ಟಿದ್ದರು. ಆಗ ಶಂಕೆ ವ್ಯಕ್ತವಾಗಿ ಸ್ಥಳೀಯರು ಮಾಹಿತಿ ಕೊಟ್ಟರು. ಮೊದಲ ದಿನ ನಿಗಾ ಇರಿಸಿ ಎರಡನೇ ದಿನ ಆರೋಪಿಗಳನ್ನು ವಶಕ್ಕೆ ಪಡೆದು ವಿಚಾರಿಸಿದಾಗ ಅಪರಾಧ ಕೃತ್ಯಗಳು ಬೆಳಕಿಗೆ ಬಂದಿವೆ’ ಎಂದು ನಗರ ಪೊಲೀಸ್‌ ಕಮಿಷನರ್‌ ಶರಣಪ್ಪ ಎಸ್‌.ಡಿ. ಹೇಳಿದರು. ‘ಅಪರಾಧ ಕೃತ್ಯಗಳಿಗೂ ಮುನ್ನ ಆರೋಪಿಗಳು ತಿಂಗಳುಗಟ್ಟಲೆ ನಿಗಾ ಇಡುತ್ತಿದ್ದರು. ಕನ್ನಡಕ ಬೆಲ್ಟ್‌ ಪರ್ಫ್ಯೂಮ್‌ನಂಥ ವಸ್ತುಗಳ ಮಾರಾಟದಲ್ಲಿ ತೊಡಗುತ್ತಿದ್ದರು. ಬಳಿಕ ಹೊಂಚು ಹಾಕಿ ಅಪರಾಧ ಕೃತ್ಯ ಎಸೆಗುತ್ತಿದ್ದರು. ಕಾರಿನಲ್ಲಿ ಇಬ್ಬರು ಸಬ್‌ಇನ್‌ಸ್ಪೆಕ್ಟರ್‌ಗಳ ವೇಷದಲ್ಲಿ ಓಡಾಡುತ್ತಿದ್ದರು. ಮಿಕ್ಕವರು ಬೈಕ್‌ಗಳಲ್ಲಿ ಸಾರ್ವಜನಿಕರಂತೆ ವರ್ತಿಸಿ ಜನರ ಗಮನ ಬೇರೆಡೆ ಸೆಳೆಯುತ್ತಿದ್ದರು. ದರೋಡೆ ಸೇರಿದಂತೆ ಅಪರಾಧ ಕೃತ್ಯ ಎಸಗುತ್ತಿದ್ದರು. ದೆಹಲಿ ಪೊಲೀಸ್‌ ಕ್ರೈಂ ಬ್ರ್ಯಾಂಚ್‌ ಹೆಸರಿಲ್ಲಿ ನಕಲಿ ದಾಖಲೆ ಸೃಷ್ಟಿಸಿಕೊಂಡಿದ್ದರು. ಅವರ ನಕಲಿ ದಾಖಲೆಗಳನ್ನೂ ಜಪ್ತಿ ಮಾಡಿಕೊಳ್ಳಲಾಗಿದೆ’ ಎಂದು ವಿವರಿಸಿದರು. ಡಿಸಿಪಿ ಪ್ರವೀಣ ನಾಯಕ್ ಎಸಿಪಿ ಬಸವೇಶ್ವರ ಹೀರಾ ಮಾರ್ಗದರ್ಶನದಲ್ಲಿ ಇನ್‌ಸ್ಪೆಕ್ಟರ್‌ ನಟರಾಜ ಲಾಡೆ ನೇತೃತ್ವದ ತಂಡವು ಆರೋಪಿಗಳನ್ನು ಬಂಧಿಸಿದೆ ಎಂದು ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.