ADVERTISEMENT

ಆರಂಭವಾಗದ ಕಲಬುರಗಿ ಮಹಾನಗರ ಪಾಲಿಕೆ‌ ಸಾಮಾನ್ಯ ಸಭೆ: ಬಿಜೆಪಿ ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 18 ಫೆಬ್ರುವರಿ 2026, 7:26 IST
Last Updated 18 ಫೆಬ್ರುವರಿ 2026, 7:26 IST
   

ಕಲಬುರಗಿ: ಬೆಳಿಗ್ಗೆ 11 ಗಂಟೆಗೆ ನಿಗದಿಯಾಗಿದ್ದ ಕಲಬುರಗಿ ಮಹಾನಗರ ಪಾಲಿಕೆ ಸಾಮಾನ್ಯ ಸಭೆಗೆ ಆಡಳಿತ ಪಕ್ಷದ ಸದಸ್ಯರೇ ಬಾರದನ್ನು ಖಂಡಿಸಿ ಪಾಲಿಕೆಯ ಬಿಜೆಪಿ ಸದಸ್ಯರು ‌ನಗರದ‌ ಇಂದಿರಾ ‌ಸ್ಮಾರಕ‌ ಭವನದ ದ್ವಾರದಲ್ಲಿ ಬುಧವಾರ ಪ್ರತಿಭಟನೆ ‌ನಡೆಸಿದರು.

ಪಾಲಿಕೆ‌ ಸದಸ್ಯರೂ‌ ಆಗಿರುವ ಮಾಜಿ ಮೇಯರ್ ವಿಶಾಲ‌ ದರ್ಗಿ, 'ಪಾಲಿಕೆ ಆಡಳಿತ‌ದ ಚುಕ್ಕಾಣಿ ಹಿಡಿದಿರುವ ಕಾಂಗ್ರೆಸ್ ‌ಸದಸ್ಯರೇ ಸಾಮಾನ್ಯ ‌ಸಭೆಗೆ ಗೈರಾಗಿದ್ದಾರೆ. ಬೆಳಿಗ್ಗೆ 11 ಗಂಟೆಗೆ ಸಭೆ ನಿಗದಿಯಾಗಿದ್ದರೂ ಮಧ್ಯಾಹ್ನ 12 ಗಂಟೆ ಈತನಕ ಬಹುತೇಕರು ಬಂದಿಲ್ಲ. ಇದುವೇ ಕಾಂಗ್ರೆಸ್ ಪಕ್ಷದ ಕಾರ್ಪೊರೇಟರ್ ಗಳ ಜನರ ಬಗೆಗಿನ ಕಾಳಜಿ ತೋರಿಸುತ್ತದೆ. ಕಳೆದ 15 ದಿನಗಳಿಂದ ವಿವಿಧ ಪ್ರಕರಣಗಳಲ್ಲಿ ಕಚೇರಿಯ ಹಲವು ಪೀಠೋಪಕರಣ ಹಾಗೂ ಕಂಪ್ಯೂಟರಗಳನ್ನು ನ್ಯಾಯಾಲಯದ ಆದೇಶದಂತೆ ಜಪ್ತಿ ಮಾಡಿಕೊಳ್ಳಲಾಗಿದೆ. ಇದರಿಂದ ಸಾರ್ವಜನಿಕರಿಗೆ ಕನಿಷ್ಠ ಜನನ -ಮರಣ ದಾಖಲೆ ಪಡೆಯುವುದೂ ಕಷ್ಟವಾಗಿದೆ' ಎಂದು ಟೀಕಿಸಿದರು.

'ನಾಳೆಯಿಂದಲೇ ರಂಜಾನ್ ಶುರುವಾಗುತ್ತಿದ್ದರೂ ಈತನಕ ಜನರಿಗೆ‌ ಕುಡಿಯುವ ನೀರು ಒದಗಿಸಲು ಪಾಲಿಕೆ ಆಡಳಿತ ವಿಫಲವಾಗಿದೆ. ನಗರದಲ್ಲಿ ‌ಇಬ್ಬರು ಶಾಸಕರಿದ್ದರೂ ಈತನಕ ಕ್ರಮಕೈಗೊಂಡಿಲ್ಲ' ಎಂದು‌ ದೂರಿದರು.

ADVERTISEMENT

ಪಾಲಿಕೆ‌ ವಿರೋಧ‌ ಪಕ್ಷದ‌ ನಾಯಕಿ ಶೋಭಾ ದೇಸಾಯಿ, ಸದಸ್ಯರಾದ ವಿಜಯ ಕುಮಾರ ಸೇವಲಾನಿ, ಸಚಿನ್ ಕಡಗಂಚಿ, ವೀರಣ್ಣ ಹೊನ್ನಳ್ಳಿ, ಶಂಭುಲಿಂಗ ಬಳಬಟ್ಟಿ, ಗಂಗಮ್ಮ ಮುನ್ನೋಳ್ಳಿ, ರೇಣುಕಾ ಗುಮ್ಮಟ ಸೇರಿದಂತೆ ಹಲವರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.