ADVERTISEMENT

ಕಲಬುರಗಿ| ದೇಶದ ಪ್ರಗತಿ ಯುವಜನ ಅವಲಂಬಿತ: ಎಂ.ವೆಂಕಟ ರಮಣ

ತಾರಾದೇವಿ ರಾಂಪುರೆ ಔಷಧ ವಿಜ್ಞಾನಗಳ ಸಂಸ್ಥೆಯ ಪದವಿ ಪ್ರದಾನ ದಿನಾಚರಣೆ

​ಪ್ರಜಾವಾಣಿ ವಾರ್ತೆ
Published 21 ಜನವರಿ 2026, 7:09 IST
Last Updated 21 ಜನವರಿ 2026, 7:09 IST
<div class="paragraphs"><p>ಕಲಬುರಗಿಯ ಪಿಡಿಎ ಎಂಜಿನಿಯರಿಂಗ್ ಕಾಲೇಜಿನ ಸಭಾಂಗಣದಲ್ಲಿ ಮಂಗಳವಾರ ತಾರಾದೇವಿ ರಾಂಪುರೆ ಔಷಧ ವಿಜ್ಞಾನ ಸಂಸ್ಥೆಯಿಂದ ನಡೆದ ಉತ್ಕರ್ಷ–2025 ಕಾರ್ಯಕ್ರವನ್ನು ನವದೆಹಲಿ ಭಾರತೀಯ ಔಷಧ ಪರಿಷತ್‌ನ ಕೇಂದ್ರೀಯ ಮಂಡಳಿ ಸದಸ್ಯ ಡಾ.ಎಂ.ವೆಂಕಟರಮಣ ಉದ್ಘಾಟಿಸಿದರು.&nbsp;ಎಚ್‌ಕೆಇ ಸೊಸೈಟಿ ಅಧ್ಯಕ್ಷ ಶಶಿಲ್ ಜಿ. ನಮೋಶಿ ಸೇರಿದಂತೆ ಹಲವರು ನೆರವಾದರು </p></div>

ಕಲಬುರಗಿಯ ಪಿಡಿಎ ಎಂಜಿನಿಯರಿಂಗ್ ಕಾಲೇಜಿನ ಸಭಾಂಗಣದಲ್ಲಿ ಮಂಗಳವಾರ ತಾರಾದೇವಿ ರಾಂಪುರೆ ಔಷಧ ವಿಜ್ಞಾನ ಸಂಸ್ಥೆಯಿಂದ ನಡೆದ ಉತ್ಕರ್ಷ–2025 ಕಾರ್ಯಕ್ರವನ್ನು ನವದೆಹಲಿ ಭಾರತೀಯ ಔಷಧ ಪರಿಷತ್‌ನ ಕೇಂದ್ರೀಯ ಮಂಡಳಿ ಸದಸ್ಯ ಡಾ.ಎಂ.ವೆಂಕಟರಮಣ ಉದ್ಘಾಟಿಸಿದರು. ಎಚ್‌ಕೆಇ ಸೊಸೈಟಿ ಅಧ್ಯಕ್ಷ ಶಶಿಲ್ ಜಿ. ನಮೋಶಿ ಸೇರಿದಂತೆ ಹಲವರು ನೆರವಾದರು

   

‌ಪ್ರಜಾವಾಣಿ ಚಿತ್ರ

ಕಲಬುರಗಿ: ‘ದೇಶದ ಪ್ರಗತಿಯು ಯುವಜನರ ಕೊಡುಗೆ ಅವಲಂಬಿಸಿದ್ದು, ನಾವೆಲ್ಲ ಅತ್ಯುತ್ತಮ ಕೊಡುಗೆ ನೀಡಿದರೆ ನಿಶ್ಚಿತವಾಗಿಯೂ 2047ರ ಹೊತ್ತಿಗೆ ಭಾರತವು ಸೂಪರ್‌ ಪವರ್‌ ರಾಷ್ಟ್ರವಾಗಲಿದೆ’ ಎಂದು ಭಾರತೀಯ ಔಷಧ ಪರಿಷತ್ತಿನ ಕೇಂದ್ರೀಯ ಮಂಡಳಿಯ ಸದಸ್ಯ ಎಂ.ವೆಂಕಟ ರಮಣ ಹೇಳಿದರು.

ADVERTISEMENT

ನಗರದ ‍ಪಿಡಿಎ ಎಂಜಿನಿಯರಿಂಗ್ ಕಾಲೇಜಿನ ಸ್ಯಾಕ್‌ ಸಭಾಂಗಣದಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ಮಾತೋಶ್ರೀ ತಾರಾದೇವಿ ರಾಂಪುರೆ ಔಷಧ ವಿಜ್ಞಾನಗಳ ಸಂಸ್ಥೆಯ ‍ವಿದ್ಯಾರ್ಥಿಗಳ ಪದವಿ ಪ್ರದಾನ ದಿನಾಚರಣೆ ‘ಉತ್ಕರ್ಷ–2025’ ಉದ್ಘಾಟಿಸಿ ಅವರು ಮಾತನಾಡಿದರು.

‘ಫಾರ್ಮಾ ದೇಶದ ಬೊಕ್ಕಸಕ್ಕೆ ಐಟಿ ಕ್ಷೇತ್ರದ ನಂತರದಲ್ಲಿ ಅತಿಹೆಚ್ಚು ವರಮಾನ ನೀಡುವ ಕ್ಷೇತ್ರವಾಗಿದೆ. ಸಹಜವಾಗಿಯೇ ಫಾರ್ಮಸಿ ಸೇರಿದಂತೆ ಯಾವುದೇ ಕ್ಷೇತ್ರದಲ್ಲಿ ವಿಪುಲ ಉದ್ಯೋಗಾವಕಾಶಗಳು ಇವೆ. ಆದರೆ, ಅದಕ್ಕೆ ತಕ್ಕುದಾದ ಜ್ಞಾನ, ಕೌಶಲಗಳ ಅರ್ಹತೆಯನ್ನು ಯುವಜನರು ಪಡೆಯಬೇಕಿದೆ. ಅದಕ್ಕೂ ಮಿಗಿಲಾಗಿ ಯುವಜನರು ಉದ್ಯೋಗಾಕಾಂಕ್ಷಿಗಳಾಗದೇ ಉದ್ದಿಮೆಗಳ ಸ್ಥಾಪನೆ ಮೂಲಕ ಉದ್ಯೋಗ ಸೃಷ್ಟಿಸಲು ಒತ್ತು ನೀಡಬೇಕು’ ಎಂದು ಹುರಿದುಂಬಿಸಿದರು.

‘ಯುವ ಪದವೀಧರರು ವೃತ್ತಿ ಜೀವನದಲ್ಲಿ ಶಿಸ್ತು ಕಾಯ್ದುಕೊಳ್ಳಬೇಕು. ಫಾರ್ಮಸಿ ಕಲಿತರೂ ಬೇರೆ ಉದ್ಯೋಗ ಮಾಡುವ ಮನಸ್ಸಿದ್ದರೆ ಅದರಲ್ಲಿ ಮುಂದುವರಿಯಿರಿ. ಆದರೆ, ನಿಮ್ಮ ಪ್ರಮಾಣಪತ್ರಗಳನ್ನು ಮತ್ತೊಬ್ಬರಿಗೆ ಎರವಲು ಕೊಡಬೇಡಿ. ಬೇಕಿದ್ದರೆ ಅವುಗಳನ್ನು ಗೌರವಯುತವಾಗಿ ಮನೆಯಲ್ಲಿರಿಸಿ’ ಎಂದು ಮಾರ್ಮಿಕವಾಗಿ ನುಡಿದರು.

‘ಎಂದಿಗೂ ದುಡ್ಡಿನ ಬೆನ್ನತ್ತಬೇಡಿ. ನಮ್ಮೆಲ್ಲರ ಬದುಕಿಗೆ ಹಣ ಅಗತ್ಯ. ಆದರೆ, ದುಡ್ಡೇ ಎಲ್ಲವೂ ಅಲ್ಲ. ಬದುಕಿನಲ್ಲಿ ನೈತಿಕತೆ ಹಾಗೂ ಸಂಬಂಧಗಳು ಮುಖ್ಯವಾದ ಸಂಗತಿಗಳು. ಹಣ ಹಿಂದೆ ಹೋದರೆ ನೈತಿಕತೆ ಮಾರ್ಗ ಹಾಗೂ ಸಂಬಂಧಗಳನ್ನು ಕಳೆದುಕೊಳ್ಳುವ ಅಪಾಯವಿರುತ್ತದೆ’ ಎಂದು ಎಚ್ಚರಿಸಿದರು.

ಪ್ರಾಸ್ತಾವಿಕವಾಗಿ ಮಾತನಾಡಿ ಕಾಲೇಜಿನ ಪ್ರಾಂಶುಪಾಲ ಡಾ.ಪ್ರಕಾಶ ಸರಸಂಬಿ, ‘ಪದವಿ ಪಡೆದ ಕ್ಷಣ ಬದುಕಿನಲ್ಲಿ ಮಹತ್ವದ ಮೈಲಿಗಲ್ಲು. ಈ ಪದವಿ ಬರೀ‌ ಪ್ರಮಾಣಪತ್ರವಲ್ಲ, ಬದಲಾಗಿ ಒಂದು ಹೊಣೆಗಾರಿಕೆ. ಇಲ್ಲಿ ಪಡೆದ ಜ್ಞಾನ, ಕಲಿತ ಮೌಲ್ಯಗಳನ್ನು ನಿತ್ಯದ ಬದುಕಿನಲ್ಲಿ ನೈತಿಕ ಪಥವಾಗಿ ಅಳವಡಿಸಿಕೊಳ್ಳುವ ಸಮಯ. ಜೀವನದುದ್ದಕ್ಕೂ ಕಲಿಕೆಯುತ್ತಿರಬೇಕು. ಸಮಾಜ ಸೇವೆ ಮಾಡುತ್ತಿರಬೇಕು. ಬಸವಣ್ಣನವರ ಕಾಯಕವೇ ಕೈಲಾಸ ಮಂತ್ರವನ್ನು ಬದುಕಿನಲ್ಲಿ ಅಳವಡಿಸಿಕೊಳ್ಳಬೇಕು’ ಎಂದು ಸಲಹೆ ನೀಡಿದರು.

ಎಚ್‌ಕೆಇ ಸಂಸ್ಥೆಯ ಅಧ್ಯಕ್ಷರೂ ಆಗಿರುವ ವಿಧಾನ ಪರಿಷತ್ ಸದಸ್ಯ ಶಶೀಲ್‌ ನಮೋಶಿ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಎಚ್‌ಕೆಇ ಉಪಾಧ್ಯಕ್ಷ ರಾಜಾ ಭೀಮಳ್ಳಿ, ಕಾರ್ಯದರ್ಶಿ ಉದಯಕುಮಾರ ಚಿಂಚೋಳಿ, ಎಂಟಿಆರ್‌ಐಪಿಎಸ್‌ ಸಂಚಾಲಕ ಅನಿಲಕುಮಾರ ಮರಗೋಳ, ನಿರ್ದೇಶಕ ಅಶೋಕಕುಮಾರ ದಸ್ತಾಪುರ, ಕಾಲೇಜು ಉಪಪ್ರಾಂಶುಪಾಲ ಡಾ.ಲಿಂಗರಾಜ ಎಸ್‌.ಡಂಕಿ ಸೇರಿದಂತೆ ಹಲವರು ವೇದಿಕೆಯಲ್ಲಿದ್ದರು.

‘ಔಷಧಗಳ ಬಳಕೆಗೆ ಜಾಗೃತಿ ಮೂಡಿಸಿ’

‘ಇತ್ತೀಚೆಗೆ ಸೂಕ್ಷ್ಮಜೀವಿಗಳು ಔಷಧಗಳಿಂತಲೂ ಹೆಚ್ಚಿನ ಪ್ರತಿರೋಧ ಕ್ಷಮತೆ ಬೆಳೆಸಿಕೊಳ್ಳುತ್ತಿವೆ. ಇದರಿಂದ ರೋಗಗಳ ಗುಣಮುಖ ಪ್ರಮಾಣ ತಗ್ಗುತ್ತಿದೆ. ಇದು ಬರೀ ಮಾನವನ ದೇಹಕ್ಕೆ ಸೀಮಿತವಾಗಿಲ್ಲ. ಕೃಷಿ ಕ್ಷೇತ್ರ ಸೇರಿದಂತೆ ಪ್ರಾಣಿಗಳಲ್ಲೂ ಈ ಬಗೆಯ ಬದಲಾವಣೆ ಕಾಣುತ್ತಿದೆ. ಹೀಗಾಗಿ ಔಷಧಗಳ ಬಳಕೆಯ ಬಗೆಗೆ ಜನರಲ್ಲಿ ತುರ್ತಾಗಿ ಜಾಗೃತಿ ಮೂಡಿಸುವ ಅಗತ್ಯವಿದೆ’ ಎಂದು ವೆಂಕಟರಮಣ ಅಭಿಪ್ರಾಯಪಟ್ಟರು.

101 ಜನರಿಗೆ ಪದವಿ ಪ್ರದಾನ

ಪದವಿ ದಿನಾಚರಣೆಯಲ್ಲಿ 101 ವಿದ್ಯಾರ್ಥಿಗಳಿಗೆ 2024–25ನೇ ಸಾಲಿನ ಪದವಿ ಪ್ರದಾನ ಮಾಡಲಾಯಿತು. ಇದರಲ್ಲಿ ನಾಲ್ಕು ವರ್ಷದ ಬಿ ಫಾರ್ಮಾ ಕೋರ್ಸ್‌ನ 57 ವಿದ್ಯಾರ್ಥಿಗಳು 6 ವರ್ಷದ ಫಾರ್ಮಾ ಡಿ ಕೋರ್ಸ್‌ನ 24 ವಿದ್ಯಾರ್ಥಿಗಳು ಹಾಗೂ 2 ವರ್ಷದ ಎಂ ಫಾರ್ಮಾ 20 ವಿದ್ಯಾರ್ಥಿಗಳು ಸೇರಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.