ADVERTISEMENT

ಕಲಬುರ್ಗಿ: ಐಸಿಯು ಬೆಡ್‌ಗಳ ಕೊರತೆ, ಹೆಚ್ಚುತ್ತಲೇ ಇದೆ ಕೊರೊನಾ ಸೋಂಕಿತರ ಪ್ರಮಾಣ

ಗಣೇಶ-ಚಂದನಶಿವ
Published 28 ಜುಲೈ 2020, 13:46 IST
Last Updated 28 ಜುಲೈ 2020, 13:46 IST
ಪ್ರಿಯಾಂಕ್ ಖರ್ಗೆ
ಪ್ರಿಯಾಂಕ್ ಖರ್ಗೆ   

ಕಲಬುರ್ಗಿ: ಜಿಲ್ಲೆಯಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ಗಣನೀಯವಾಗಿ ಹೆಚ್ಚುತ್ತಿದೆ. ಉಸಿರಾಟದ ತೊಂದರೆಯೂ ಸೇರಿದಂತೆ ತೀವ್ರ ತರದ ಆರೋಗ್ಯ ಸಮಸ್ಯೆ ಎದುರಿಸುತ್ತಿರುವವರಿಗೆ ಕೋವಿಡ್‌ ಆಸ್ಪತ್ರೆಗಳ ತೀವ್ರ ನಿಗಾ ಘಟಕಗಳಲ್ಲಿ ಬೆಡ್‌ ಸಿಗದ ಸ್ಥಿತಿ ಇದೆ.

ಎರಡು ಸರ್ಕಾರಿ ಮತ್ತು ಎರಡು ಖಾಸಗಿ ಕೋವಿಡ್‌ ಆಸ್ಪತ್ರೆಗಳ ತೀವ್ರ ನಿಗಾ ಘಟಕ (ಐಸಿಯು)ಗಳಲ್ಲಿ ಒಟ್ಟಾರೆ 117 ಬೆಡ್‌ಗಳಿದ್ದು, ಅವುಗಳಲ್ಲಿ 115 ಭರ್ತಿಯಾಗಿವೆ. ಉಳಿದಿರುವುದು ಎರಡು ಬೆಡ್‌ಗಳು ಮಾತ್ರ. ಐಸಿಯುನಲ್ಲಿ ಇದ್ದವರು ಗುಣಮುಖರಾಗದಿದ್ದರೆ ಮತ್ತು ಐಸೋಲೇಶನ್‌ನಲ್ಲಿರುವವರ ಆರೋಗ್ಯ ಹದಗೆಟ್ಟರೆ ಅವರಿಗೆ ಐಸಿಯು ಸೌಲಭ್ಯ ಹೇಗೆ ಕಲ್ಪಿಸುವುದು ಎಂಬ ಸವಾಲು ಜಿಲ್ಲಾ ಆಡಳಿತಕ್ಕೆ ಎದುರಾಗಿದೆ.

ವೆಂಟಿಲೇಟರ್‌ ಇಲ್ಲ ಎಂಬ ಕಾರಣ ನೀಡಿ ಸರ್ಕಾರಿ ಮತ್ತು ಖಾಸಗಿ ಆಸ್ಪತ್ರೆಗಳವರು ಚಿಕಿತ್ಸೆ ನಿರಾಕರಿಸಿದ್ದರಿಂದ ವಾರದ ಅವಧಿಯಲ್ಲಿ ಇಬ್ಬರು ಮೃತಪಟ್ಟಿದ್ದಾರೆ.

ADVERTISEMENT

ನಗರದಲ್ಲಿ ನಾಲ್ಕು ವೈದ್ಯಕೀಯ ಕಾಲೇಜು ಇದ್ದರೂ ಚಿಕಿತ್ಸೆಗೆ ವೈದ್ಯರು, ನರ್ಸಿಂಗ್‌ ಸಿಬ್ಬಂದಿ ಹಾಗೂ ‘ಸೌಲಭ್ಯಗಳ ಕೊರತೆ’ ಉಂಟಾಗಿದೆ.

‘ಆರೋಗ್ಯ ತುರ್ತು ಪರಿಸ್ಥಿತಿಯ ಈ ಸಂದರ್ಭದಲ್ಲಿ ಜಿಲ್ಲೆಯ ಸರ್ಕಾರಿ ಮತ್ತು ಖಾಸಗಿ ಆಸ್ಪತ್ರೆಗಳಲ್ಲಿ ಸಿಬ್ಬಂದಿ ಕರ್ತವ್ಯಕ್ಕೆ ಗೈರು ಹಾಜರಾಗುತ್ತಿರುವುದು ಗಮನಕ್ಕೆ ಬಂದಿದೆ. ರೋಗಿಗಳಿಗೆ ಚಿಕಿತ್ಸೆ ನೀಡಲು ಸಿಬ್ಬಂದಿ ಪೂರ್ಣಪ್ರಮಾಣದಲ್ಲಿ ಕರ್ತವ್ಯಕ್ಕೆ ಹಾಜರಾಗುವಂತೆ ಆಯಾ ಆಸ್ಪತ್ರೆಗಳ ಮುಖ್ಯಸ್ಥರು ನೋಡಿಕೊಳ್ಳಬೇಕು. ಸಿಬ್ಬಂದಿ ಗೈರಾಗಿದ್ದರೆ ಆಯಾ ತಾಲ್ಲೂಕು ಆರೋಗ್ಯಾಧಿಕಾರಿಗಳು ತಕ್ಷಣವೇ ಪೊಲೀಸ್‌ ಠಾಣೆಗೆ ಮಾಹಿತಿ ನೀಡಬೇಕು’ ಎಂದು ಜಿಲ್ಲಾಧಿಕಾರಿ ಶರತ್‌ ಬಿ. ಸೂಚಿಸಿದ್ದಾರೆ.

ತಮ್ಮ ಮೇಲೆ ಕೆಲಸದ ಒತ್ತಡ ಹೆಚ್ಚುತ್ತಿದೆ ಎಂದು ಸರ್ಕಾರಿ ವೈದ್ಯರೂ ಅಳಲು ತೋಡಿಕೊಳ್ಳುತ್ತಿದ್ದಾರೆ.

‘ಒಬ್ಬ ವೈದ್ಯರು ನಿತ್ಯ ಐಸಿಯುನಲ್ಲಿಯ ಸರಾಸರಿ 20 ರೋಗಿಗಳಿಗೆ ಚಿಕಿತ್ಸೆ ನೀಡುತ್ತಿದ್ದೆವು. ರೋಗಿಗಳ ಸಂಖ್ಯೆ ಹೆಚ್ಚುತ್ತಿರುವುದರಿಂದ ಈಗ ನಿತ್ಯ 60ಕ್ಕೂ ಹೆಚ್ಚು ರೋಗಿಗಳಿಗೆ ಚಿಕಿತ್ಸೆ ನೀಡುತ್ತಿದ್ದೇವೆ. ರೋಗಿಗಳ ಕಡೆಯವರಿಗೆ ಮಾಹಿತಿ ನೀಡುವುದು. ನಿತ್ಯವೂ ಸಾವುಗಳಾಗುತ್ತಿದ್ದು, ಶವಗಳ ಹಸ್ತಾಂತರ ಹೀಗೆ ಬಿಡುವಿಲ್ಲದ ಕೆಲಸದಿಂದಾಗಿ ಬಳಲಿ ಬೆಂಡಾಗುತ್ತಿದ್ದೇವೆ’ ಎಂದು ಜಿಮ್ಸ್‌ ಆಸ್ಪತ್ರೆಯಲ್ಲಿ ಸೇವೆಸಲ್ಲಿಸುತ್ತಿರುವ ಹೆಸರು ಬಹಿರಂಗ ಪಡಿಸಲು ಒಲ್ಲದ ವೈದ್ಯರೊಬ್ಬರು ಹೇಳಿದರು.

‘ಎಲ್ಲ ಖಾಸಗಿ ಆಸ್ಪತ್ರೆಗಳಲ್ಲಿಯೂ ಕೋವಿಡ್‌ ಚಿಕಿತ್ಸೆಗೆ ತ್ವರಿತವಾಗಿ ವ್ಯವಸ್ಥೆ ಮಾಡುವುದೊಂದೇ ಈಗಿರುವ ಪರಿಹಾರ’ ಎಂಬುದು ಅವರ ಸಲಹೆ.

‘ಖಾಸಗಿ ಆಸ್ಪತ್ರೆಗಳವರು ಬೆಡ್‌ ಮೀಸಲಿಡದಿದ್ದರೆ ಅಲ್ಲಿಯಮಾನವ ಸಂಪನ್ಮೂಲವನ್ನಾದರೂ ಜಿಲ್ಲಾ ಆಡಳಿತ ಬಳಸಿಕೊಳ್ಳಬೇಕಿತ್ತು. ತಾಲ್ಲೂಕುಗಳಲ್ಲಿ ಕೋವಿಡ್‌ ಕೇರ್‌ ಸೆಂಟರ್‌ಗಳನ್ನು ತೆರೆದು ರೋಗ ಲಕ್ಷಣ ಇಲ್ಲದ ಸೋಂಕಿತರಿಗೆ ಅಲ್ಲಿ ಆರೈಕೆ ಮಾಡಬೇಕಿತ್ತು.ನಾನು ಮಾತ್ರ ಚಿತ್ತಾಪುರದಲ್ಲಿ ಕೋವಿಡ್‌ ಕೇರ್‌ ಕೇಂದ್ರ ಆರಂಭಿಸಿದ್ದೇನೆ. ಉಳಿದೆಡೆಯ ಸೋಂಕಿತರೆಲ್ಲರೂ ಕಲಬುರ್ಗಿಗೇಬರುವಂತಾಗಿದೆ’ ಎನ್ನುತ್ತಾರೆ ಚಿತ್ತಾಪುರ ಶಾಸಕ ಪ್ರಿಯಾಂಕ್‌ ಖರ್ಗೆ.

‘ಇಎಸ್‌ಐಸಿ ಆಸ್ಪತ್ರೆಯಲ್ಲಿ ಆಕ್ಸಿಜನ್‌ ಕೊರತೆಯಿಂದಾಗಿ 8 ರೋಗಿಗಳು ಮೃತಪಟ್ಟಿದ್ದು, ನಾನು ಧ್ವನಿ ಎತ್ತಿದ ನಂತರ ಜಿಲ್ಲಾಧಿಕಾರಿ ತನಿಖಾ ಸಮಿತಿ ರಚಿಸಿದ್ದಾರೆ. ಅಲ್ಲಿ ಏನೂ ನಡೆದೇ ಇಲ್ಲ ಎಂದಾದರೆ ತನಿಖಾ ಸಮಿತಿ ಏಕೆ? ಇಎಸ್‌ಐಸಿ ಡೀನ್‌ರನ್ನು ದಿಢೀರ್‌ ವರ್ಗಾವಣೆ ಮಾಡಿದ್ದು ಏಕೆ? ಅಲ್ಲಿ ಕೋವಿಡ್‌ ಪ್ರಯೋಗಾಲಯ ಆರಂಭಿಸಲು ಇನ್ನೂ ಸಾಧ್ಯವಾಗಿಲ್ಲ. ನಾನು ಜಿಲ್ಲಾ ಆಡಳಿತಕ್ಕೆ 550 ಬೆಡ್‌ಗಳನ್ನು ಕೊಟ್ಟರೂ ಅವುಗಳ ಬಳಕೆ ಆಗುತ್ತಿಲ್ಲ’ ಎಂಬುದು ಅವರ ಅಸಮಾಧಾನ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.