ADVERTISEMENT

ಸಂಯಮ, ಸಾಹಸವೇ ನಿಮ್ಮ ದೊಡ್ಡ ಅಸ್ತ್ರ: ಎಡಿಜಿಪಿ ಬಿ.ದಯಾನಂದ

ಪಿಎಸ್‌ಐ, ಆರ್‌ಎಸ್‌ಐ ‍ಪ್ರಶಿಕ್ಷಣಾರ್ಥಿಗಳ ನಿರ್ಗಮನ ಪಥಸಂಚಲನ

​ಪ್ರಜಾವಾಣಿ ವಾರ್ತೆ
Published 5 ಏಪ್ರಿಲ್ 2021, 6:45 IST
Last Updated 5 ಏಪ್ರಿಲ್ 2021, 6:45 IST
ಪಿಎಸ್‌ಐ, ಆರ್‌ಎಸ್‌ಐ ‍ಪ್ರಶಿಕ್ಷಣಾರ್ಥಿಗಳ ನಿರ್ಗಮನ ಪಥಸಂಚಲನ
ಪಿಎಸ್‌ಐ, ಆರ್‌ಎಸ್‌ಐ ‍ಪ್ರಶಿಕ್ಷಣಾರ್ಥಿಗಳ ನಿರ್ಗಮನ ಪಥಸಂಚಲನ   

ಕಲಬುರ್ಗಿ: ‘ಪೊಲೀಸ್‌ ಅಧಿಕಾರಿಗಳಾಗಿ ನೀವು ತೆಗೆದುಕೊಳ್ಳುವ ಒಂದು ನಿರ್ಧಾರ ನಿಮ್ಮ ಭವಿಷ್ಯ ಮಾತ್ರವಲ್ಲ; ಸಮಾಜದ ಸ್ವಸ್ಥ್ಯದ ಮೇಲೂ ಗಂಭೀರ ಪರಿಣಾಮ ಬೀರುತ್ತದೆ. ಎಂಥದ್ದೇ ಒತ್ತಡದ ಮಧ್ಯೆಯೂ ಸರಿಯಾದ ನಿರ್ಧಾರ ತೆಗೆದುಕೊಳ್ಳುವ ಚಾಣಾಕ್ಷತೆ ಬೆಳೆಸಿಕೊಳ್ಳಿ’ ಎಂದು ಗುಪ್ತದಳ ವಿಭಾಗದ ಎಡಿಜಿಪಿ ಬಿ.ದಯಾನಂದ ಕಿವಿಮಾತು ಹೇಳಿದರು.

ಸಮೀಪದ ನಾಗನಹಳ್ಳಿಯ ಕರ್ನಾಟಕ ರಾಜ್ಯ ಪೊಲೀಸ್‌ ತರಬೇತಿ ಕಾಲೇಜಿನ ‍ಪರೇಡ್‌ ಮೈದಾನದಲ್ಲಿ ಸೋಮವಾರ ನಡೆದ ಪಿಎಸ್‌ಐ, ಆರ್‌ಎಸ್‌ಐ ‍ಪ್ರಶಿಕ್ಷಣಾರ್ಥಿಗಳ ನಿರ್ಗಮನ ಪಥಸಂಚಲನ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಅವರು ಮಾತನಾಡಿದರು.

‘ಪೊಲೀಸ್‌ ಇಲಾಖೆ ಎಂದಮೇಲೆ ಒತ್ತಡಗಳು ಸಹಜ. ದಿನವೂ ಹೊಸ ಸವಾಲುಗಳು, ಸಂಕಷ್ಟಗಳು ಎದುರಾಗುತ್ತವೆ. ಕಠಿಣಾತೀತ ಕಠಿಣ ಸಂದರ್ಭಗಳಲ್ಲಿ ಕೂಡ ಕೆಲವೇ ಕ್ಷಣಗಳಲ್ಲಿ ನಿರ್ಧಾರ ತೆಗೆದುಕೊಳ್ಳಬೇಕಾದ ಹೊಣೆ ನಿಮ್ಮ ಮೇಲಿರುತ್ತದೆ. ಅಂಥ ಸಂದರ್ಭಗಳಲ್ಲಿ ನಿಮ್ಮ ವೈಯಕ್ತಿಕ ಭವಿಷ್ಯ ಮಾತ್ರವಲ್ಲ; ಸಮಾಜದ ಭವಿಷ್ಯವನ್ನೂ ಗಮನದಲ್ಲಿಟ್ಟುಕೊಂಡು ಮುನ್ನುಗ್ಗಿ’ ಎಂದೂ ಅವರು ಸಲಹೆ ನೀಡಿದರು.

ADVERTISEMENT

‘ಸಾರ್ವಜನಿಕ ಸೇವೆಗಾಗಿ, ರಕ್ಷಣೆಗಾಗಿ ದುಡಿಯುವುದನ್ನೇ ಫ್ಯಾಷನ್‌ ಮಾಡಿಕೊಳ್ಳಿ. ಆಗ ಕೆಲಸದ ಮೇಲೆ ಹೆಚ್ಚು ಆಸ್ಥೆ ಬರುತ್ತದೆ. ಸಂಯಮ ಹಾಗೂ ಸಾಹಸ ನಿಮ್ಮ ದೊಡ್ಡ ಅಸ್ತ್ರಗಳಾಗಲಿ’ ಎಂದೂ ಕರೆ ನೀಡಿದರು.

‘ಯೂನಿಫಾರ್ಮ್ ಧರಿಸಿ ನೀವು ತೆಗೆದುಕೊಳ್ಳುವ ಪ್ರತಿಜ್ಞೆ ಇವತ್ತಿಗೆ ಮಾತ್ರ ಸೀಮಿತವೆಂದು ಮರೆತು ಬಿಡಬೇಡಿ. ಇದನ್ನು ಜೀವನದುದ್ದಕ್ಕೂ ನೆನಪಿಟ್ಟುಕೊಂಡರೆ ನೀವು ಯಾವತ್ತೂ ಅಡ್ಡದಾರಿ ತುಳಿಯುವುದಿಲ್ಲ. ಯಾವತ್ತು ನೀವು ಮಾಡಿದ ಪ್ರತಿಜ್ಞೆ ನೀವೇ ಮರೆಯುತ್ತೀರೋ ಅವತ್ತೇ ನಿಮಗೆ ಅವಮಾನಗಳು, ಕೆಡಕುಗಳು ಎದುರಾಗುತ್ತವೆ’ ಎಂದೂ ಎಚ್ಚರಿಸಿದರು.

‘ನಿಗದಿಗಿಂತ ಹೆಚ್ಚಿನ ಶಿಕ್ಷಣ ಪಡೆದ ಯುವಕ, ಯುವತಿಯರು ಕೂಡ ಈಗ ಪೊಲೀಸ್‌ ಇಲಾಖೆ ಆಯ್ಕೆ ಮಾಡಿಕೊಳ್ಳುತ್ತಿರುವುದು ಸಂತಸದ ಬೆಳವಣಿಗೆ. ವಿಜ್ಞಾನ, ತಂತ್ರಜ್ಞಾನ, ಪತ್ರಿಕೋದ್ಯಮ ಮುಂತಾದ ಪದವಿಗಳನ್ನು ಪಡೆದವರ ಉನ್ನತ ಜ್ಞಾನವನ್ನು ಇಲಾಖೆಯ ಬೆಳವಣಿಗೆಗೆ ಬಳಸಿಕೊಳ್ಳುತ್ತೇವೆ. ಇದರಿಂದ ನಮ್ಮ ಮಾನವ ಸಂಪನ್ಮೂಲ ಹೆಚ್ಚು ಸಮರ್ಥವಾಗುತ್ತದೆ. ನೌಕರಿ ಸಿಕ್ಕಿದ್ದೇ ಸಾಕು ಎಂದು ಕುಳಿತುಕೊಳ್ಳದೇ, ನಿಮ್ಮಲ್ಲಿರುವ ಕೌಶಲವನ್ನು ಬೆಳಕಿಗೆ ತನ್ನಿ. ಕೌಶಲ ಇದ್ದವರಿಗೆ ಇಲಾಖೆಯಲ್ಲಿ ದೊಡ್ಡ ಪ್ರೋತ್ಸಾಹ, ಗೌರವವಿದೆ’ ಎಂದು ದಯಾನಂದ ತಿಳಿಸಿದರು.

ಮಹಾನಗರ ಪಾಲಿಕೆ ಆಯುಕ್ತ ಸ್ನೇಹಲ್‌ ಸುಧಾಕರ ಲೋಖಂಡೆ ಮುಖ್ಯ ಅತಿಥಿಯಾಗಿ ಪಾಲ್ಗೊಂಡಿದ್ದರು. ಪೊಲೀಸ್‌ ತರಬೇತಿ ಕಾಲೇಜಿನ ಪ್ರಾಂಶುಪಾಲ ಯಡಾ ಮಾರ್ಟಿನ್‌ ಮಾರ್ಬನ್ಯಾಂಗ್‌ ಪ್ರತಿಜ್ಞಾವಿಧಿ ಬೋಧಿಸಿದರು. ಉಪ ಪ್ರಾಂಶುಪಾಲ ಅರುಣ್‌ ರಂಗರಾಜನ್‌ ವಂದಿಸಿದರು.

108 ಪ್ರಶಿಕ್ಷಣಾರ್ಥಿಗಳ ಪಥಸಂಚಲನ

3ನೇ ತಂಡದ ಪಿಎಸ್‌ಐ (ಪಿಎಸ್‌ಐ), 5ನೇ ತಂಡದ ಪಿಎಸ್‌ಐ (ವೈರ್‌ಲೆಸ್‌), 5ನೇ ತಂಡದ ವಿಶೇಷ ಆರ್‌ಎಸ್‌ಐ ಆಗಿ ನೇಮಕಕೊಂಡ ಒಟ್ಟು 108 ಪ್ರಶಿಕ್ಷಣಾರ್ಥಿಗಳು ಆಕರ್ಷಕ ಪಥ ಸಂಚಲನ ನಡೆಸಿದರು. ರಾಷ್ಟ್ರಧ್ವಜ, ಪೊಲೀಸ್‌ ಧ್ವಜಗಳಿಗೆ ಗೌರವ ವಂದನೆ ಸಲ್ಲಿಸಿದರು. ರಾಷ್ಟ್ರಧ್ವಜ ನುಡಿಸಿದ ಬಳಿಕ, ಅತಿಥಿಗಳು ಪ್ರಶಿಕ್ಷಣಾರ್ಥಿಗಳ ನಿರ್ಗಮನ ಪಥಸಂಚಲನಕ್ಕೆ ಅನುಮತಿ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.