ADVERTISEMENT

ಇನ್‌ಸ್ಟಾಗ್ರಾಂ, ಫೇಸ್‌ಬುಕ್‌ ಖಾತೆ ಬ್ಯಾನ್‌: ಮಣಿಕಂಠ ರಾಠೋಡ ಆಕ್ರೋಶ

​ಪ್ರಜಾವಾಣಿ ವಾರ್ತೆ
Published 13 ಡಿಸೆಂಬರ್ 2025, 6:47 IST
Last Updated 13 ಡಿಸೆಂಬರ್ 2025, 6:47 IST
ಮಣಿಕಂಠ ರಾಠೋಡ
ಮಣಿಕಂಠ ರಾಠೋಡ   

ಕಲಬುರಗಿ: ‘ನಾನು ಸರ್ಕಾರದ ಹಗರಣ, ಪೊಲೀಸರ ಸುಲಿಗೆ, ಅಧಿಕಾರಿಗಳ ದಬ್ಬಾಳಿಕೆ ವಿರುದ್ಧ ಸಾಮಾಜಿಕ ಜಾಲತಾಣದಲ್ಲಿ ಧ್ವನಿ ಎತ್ತಬಾರದು ಎಂದು ರಾಜ್ಯ ಕಾಂಗ್ರೆಸ್‌ ಸರ್ಕಾರ ನನ್ನ ಇನ್‌ಸ್ಟಾಗ್ರಾಂ ಮತ್ತು ಫೇಸ್‌ಬುಕ್‌ ಖಾತೆ ಬ್ಯಾನ್‌ ಮಾಡಿದೆ. ಈ ಮೂಲಕ ಸಂವಿಧಾನದಲ್ಲಿ ನೀಡಿರುವ ಮಾತನಾಡುವ ಹಕ್ಕನ್ನು ಉಲ್ಲಂಘಿಸಿದೆ’ ಎಂದು ಬಿಜೆಪಿ ಮುಖಂಡ ಮಣಿಕಂಠ ರಾಠೋಡ ಆಕ್ರೋಶ ವ್ಯಕ್ತಪಡಿಸಿದರು.

ನಗರದಲ್ಲಿ ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ್‌ ಖರ್ಗೆ ಅವರಿಗೆ ಸಾರ್ವಜನಿಕರ ಸಮಸ್ಯೆ, ಅಭಿವೃದ್ಧಿ ಮೇಲೆ ಗಮನ ಇಲ್ಲ. ನೂರಾರು ಹೋರಾಟಗಳಾಗುತ್ತಿದ್ದರೂ ಸ್ಪಂದನೆ ಇಲ್ಲ. ಅವರಿಗೆ ಮಣಿಕಂಠ ರಾಠೋಡ ಎಲ್ಲಿ ಹೋಗುತ್ತಾನೆ? ಏನು ಧ್ವನಿ ಎತ್ತುತ್ತಿದ್ದಾನೆ? ಎಲ್ಲಿ ಸಿಕ್ಕಿಹಾಕಿಸಬೇಕು? ಎಲ್ಲಿ ಜೈಲಿಗೆ ಕಳುಹಿಸಬೇಕು ಎಂದು ಯೋಚಿಸುತ್ತಾರೆ. ಇದು ಇಲ್ಲಿಯ ಕಾನೂನು ಸುವ್ಯವಸ್ಥೆ, ವಾತಾವರಣ’ ಎಂದು ಹರಿಹಾಯ್ದರು.

‘ಜನರ ಸಮಸ್ಯೆಯನ್ನು ಎತ್ತಿ ತೋರಿಸುವವರ ಬಾಯಿ ಮುಚ್ಚಿವಂಥ ಕೆಲಸ ಮಾಡುವವರು ನಾಯಕರಲ್ಲ. ಅವರು ನಾಲಾಯಕ್‌ರು. ನನ್ನ ವಿರುದ್ಧ ಎಷ್ಟೇ ಸುಳ್ಳು ಕೇಸ್‌ ಹಾಕಿದರೂ ಮತ್ತು ಹೆದರಿಕೆ ಹಾಕಿದರೂ ಹಿಂಜರಿಯುವುದಿಲ್ಲ. ‘@ಮಣಿಕಂಠರಾಠೋಡಬಿಜೆಪಿ’ ಎನ್ನುವ ಹೊಸ ಐಡಿ ಮೂಲಕ ಸಾಮಾಜಿಕ ಜಾಲತಾಣದಲ್ಲಿ ಸಮಾಜಸೇವೆ ಮುಂದುವರಿಸುತ್ತೇನೆ’ ಎಂದರು.

ADVERTISEMENT

‘ಬಾಬಾಸಾಹೇಬರ ಅನುಯಾಯಿಗಳೆಂದು ಹೇಳುವವರೇ ಅಂಬೇಡ್ಕರ್‌ ತತ್ವ–ಸಿದ್ಧಾಂತಗಳನ್ನು ಉಲ್ಲಂಘನೆ ಮಾಡುತ್ತಿದ್ದಾರೆ. ಕಾಂಗ್ರೆಸ್‌ ಸರ್ಕಾರ ಬಂದ ಮೇಲೆ ಸುಳ್ಳು ಕೇಸ್‌ ಹಾಕಿ 6–7 ಸಲ ಜೈಲಿಗೆ ಕಳುಹಿಸಲಾಗಿದೆ. ಜಿಲ್ಲಾ ನ್ಯಾಯಾಲಯಕ್ಕೆ ಹೋದಾಗ ಕಾಂಗ್ರೆಸ್‌ ಮುಖಂಡ ರಾಮು ರಾಠೋಡ ಎಂಬುವವರು ಜೀವ ಬೆದರಿಕೆ ಹಾಕಿದ್ದೇನೆಂದು ಸ್ಟೇಷನ್‌ ಬಜಾರ್‌ ಠಾಣೆಯಲ್ಲಿ ದೂರು ದಾಖಲಿಸಿದ್ದು, ತಕ್ಷಣವೇ ಪ್ರಕರಣ ದಾಖಲಿಸಲಾಗಿದೆ. ನಾವು ಅರ್ಜಿ ಕೊಟ್ಟರೂ ಪ್ರಕರಣ ದಾಖಲಿಸುವುದಿಲ್ಲ ಮತ್ತು ನಾವು ಹೊರಗಡೆ ತಿರುಗಾಡಿದರೂ ಕೇಸ್‌ ದಾಖಲಿಸಲಾಗುತ್ತಿದೆ’ ಎಂದು ಆರೋಪಿಸಿದರು.

‘ರಾಜ್ಯ ಕಾಂಗ್ರೆಸ್‌ ಸರ್ಕಾರ ದ್ವೇಷ ಭಾಷಣ ಕಾಯ್ದೆ ಜಾರಿಗೆ ತರಲು ಹೊರಟಿದೆ. ಇದು ಬಿಜೆಪಿಯವರಿಗೆ ಮತ್ತು ಹಿಂದೂಗಳಿಗೆ ಮಾತ್ರ ಅನ್ವಯ ಆಗುತ್ತದೆಯೋ? ಅಥವಾ ಕಾಂಗ್ರೆಸ್‌ ಮತ್ತು ಬೇರೆ ಜಾತಿಯವರಿಗೂ ಅನ್ವಯವಾಗುತ್ತದೆಯೋ ಎಂಬುದನ್ನು ಸ್ಪಷ್ಟಪಡಿಸಬೇಕು’ ಎಂದು ಆಗ್ರಹಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಲಕ್ಷ್ಮಿಕಾಂತ ಸ್ವಾದಿ, ಶ್ರೀಕಾಂತ ಸುಲೇಗಾಂವ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.