
ಜೇವರ್ಗಿ: ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ತಾಲ್ಲೂಕಿನ ಹರನೂರ ಗ್ರಾಮ ಪಂಚಾಯತಿ ಎದುರು ನಡೆಸಲಾಗುತ್ತಿರುವ ಕೂಲಿಕಾರ್ಮಿಕರ ಹೋರಾಟ ಸೋಮವಾರ ಐದನೇ ದಿನಕ್ಕೆ ಕಾಲಿಟ್ಟಿದೆ.
ನರೇಗಾ ಕೆಲಸ ಮಾಡಿದ ಕೂಲಿಕಾರ್ಮಿಕರಿಗೆ ₹370 ಬದಲು ₹36 ಕೂಲಿ ಹಣ ನೀಡಲಾಗಿದೆ. ದಿನವಿಡಿ ಬಿಸಿಲಲ್ಲಿ ಕೆಲಸ ಮಾಡಿದ ಕೂಲಿಕಾರ್ಮಿಕರ ಹೊಟ್ಟೆ ಮೇಲೆ ಬರೆ ಎಳೆಯುವ ಕೆಲಸ ಮಾಡಲಾಗುತ್ತಿದೆ. ಕೂಡಲೇ ಉದ್ಯೋಗ ಖಾತ್ರಿಯಲ್ಲಿ ಕೆಲಸ ಮಾಡಿದ ಎಲ್ಲಾ ಕಾರ್ಮಿಕರಿಗೆ ದಿನಕ್ಕೆ ₹370 ಕೂಲಿ ಹಣ ನೀಡಬೇಕು. ನಿರಂತರವಾಗಿ ನರೇಗಾದಡಿ ಕೃಷಿ ಕೂಲಿಕಾರ್ಮಿಕರಿಗೆ ಕೆಲಸ ನೀಡಬೇಕು ಎಂದು ಧರಣಿನಿರತರು ಆಗ್ರಹಿಸಿದ್ದಾರೆ.
ಮುಂದುವರೆದು, ಅತಿವೃಷ್ಟಿಯಿಂದ ಹಾಳಾದ ಬೆಳೆಗಳಿಗೆ ಸೂಕ್ತ ಪರಿಹಾರ ಹಾಗೂ ಬೆಳೆ ವಿಮೆ ಕೊಡಬೇಕು. ತಾಲ್ಲೂಕಿನ ಗ್ರಾಮೀಣ ಭಾಗದಲ್ಲಿ ರಸ್ತೆಗಳು ತೀರಾ ಹದಗೆಟ್ಟು ಹೋಗಿದ್ದು, ಕೂಡಲೇ ರಸ್ತೆಗಳನ್ನು ದುರಸ್ತಿ ಮಾಡಬೇಕು. ಬೇಸಿಗೆ ಆರಂಭವಾಗಿದ್ದು ನೀರಿನ ಸಮಸ್ಯೆಯಾಗದಂತೆ ಎಚ್ಚರ ವಹಿಸಬೇಕು ಎಂಬಿತ್ಯಾದಿ ಬೇಡಿಕೆಗಳನ್ನು ಈಡೇರಿಸುವಂತೆ ಪ್ರಾಂತ ರೈತ ಸಂಘದ ತಾಲ್ಲೂಕು ಅಧ್ಯಕ್ಷ ಸುಭಾಷ ಹೊಸಮನಿ ಒತ್ತಾಯಿಸಿದರು.
ಕಳೆದ ಐದು ದಿನಗಳಿಂದ ಹೋರಾಟ ನಡೆಸಲಾಗುತ್ತಿದ್ದು, ಸಂಬಂಧಪಟ್ಟ ಅಧಿಕಾರಿಗಳು ಭೇಟಿ ನೀಡಿ ಸಮಸ್ಯೆ ಆಲಿಸುವ ಕೆಲಸ ಮಾಡುತ್ತಿಲ್ಲ. ಕೂಡಲೇ ಕೂಲಿಕಾರ್ಮಿಕರಿಗೆ ಅನ್ಯಾಯ ಮಾಡಿದ ಅಧಿಕಾರಿಗಳ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕು. ನಿರ್ಲಕ್ಷ್ಯ ವಹಿಸಿದರೇ ತಾಲ್ಲೂಕು ಪಂಚಾಯತ್ ಕಚೇರಿಗೆ ಮುತ್ತಿಗೆ ಹಾಕಲಾಗುವುದು ಎಂದು ಹೊಸಮನಿ ಎಚ್ಚರಿಸಿದರು.
ಈ ಸಂದರ್ಭದಲ್ಲಿ ರೈತ ಸಂಘದ ರೇವು ನಾಯಕ್ ಜಾಧವ, ಮಲ್ಕಪ್ಪ ಹರನೂರ, ಬಸವರಾಜ ನಡುವಿನಕೆರೆ, ಶ್ರೀಕಾಂತ ದಾಸರ್, ಸತೀಶ, ಮರೆವ್ವ ತಳಕೇರಿ, ಕಸ್ತೂರಿಬಾಯಿ ಗೌಡ್ತಿ, ಬಸಮ್ಮ ಮ್ಯಾಗೇರಿ, ಸಕ್ರಪ್ಪ ಮ್ಯಾಗೇರಿ, ನೀಲಮ್ಮ ಜಟ್ಟಪ್ಪ, ಯಂಕಮ್ಮ ಶರಣಪ್ಪ, ಉಸ್ಮಾನ್ ಅಲಿ ಇನಾಮ್ದಾರ್, ಈರಣ್ಣ ರಾಠೋಡ, ರಾಜು ಸಾತಖೇಡ, ಬಸವರಾಜ ಹನ್ನೂರ, ಶಾಂತಪ್ಪ ಕಟ್ಟಿಮನಿ ಸೇರಿದಂತೆ ಅನೇಕರು ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.