ಕಲಬುರಗಿಯಲ್ಲಿ ಆಯೋಜಿಸಿದ್ದ ನಾರಾಯಣಗುರು ಜಯಂತ್ಯುತ್ಸವದ ಪೂರ್ವಭಾವಿ ಸಭೆಯಲ್ಲಿ ವೆಂಕಟೇಶ ಕಡೇಚೂರ, ಪ್ರಣವಾನಂದ ಸ್ವಾಮೀಜಿ, ವಿನಯ್ ಗುತ್ತೇದಾರ, ಗಾರಂಪಳ್ಳಿ, ಸತೀಶ್ ಗುತ್ತೇದಾರ ಇತರರು ಇದ್ದರು
ಕಲಬುರಗಿ: ಬ್ರಹ್ಮಶ್ರೀ ನಾರಾಯಣ ಗುರುಗಳ 171ನೇ ಜಯಂತಿ ಉತ್ಸವವನ್ನು ಸೆಪ್ಟೆಂಬರ್ 16ರಂದು ನಗರದಲ್ಲಿ ಸಂಭ್ರಮದಿಂದ ಆಚರಿಸಲಾಗುತ್ತಿದ್ದು, ಈ ಸಂದರ್ಭದಲ್ಲಿ ಈಡಿಗ ಸಮುದಾಯದ 11 ಬಡ ವಿದ್ಯಾರ್ಥಿಗಳನ್ನು ದತ್ತು ಸ್ವೀಕಾರ ಮಾಡಲಾಗುತ್ತಿದೆ ಎಂದು ಜಯಂತ್ಯುತ್ಸವ ಸಮಿತಿ ಅಧ್ಯಕ್ಷ ಡಾ. ವಿನಯ್ ಗುತ್ತೇದಾರ ಗಾರಂಪಳ್ಳಿ ಘೋಷಿಸಿದರು.
ನಗರದಲ್ಲಿ ಭಾನುವಾರ ನಡೆದ ಸಮಾಜದ ಹಿರಿಯ ಮುಖಂಡರ ಸಮ್ಮುಖದಲ್ಲಿ ನಡೆದ ಪೂರ್ವಸಿದ್ಧತಾ ಸಭೆಯಲ್ಲಿ ಮಾತನಾಡಿ, ನಾರಾಯಣ ಗುರುಗಳ ಕುರಿತು ಉಪನ್ಯಾಸ ನೀಡಲು ಸಮಾಜದ ಹಿರಿಯ ಮುಂದಾಳು ವಿಧಾನ ಪರಿಷತ್ ಸದಸ್ಯ ಬಿ.ಕೆ. ಹರಿಪ್ರಸಾದ್ ಸಮ್ಮತಿ ಸೂಚಿಸಿದ್ದಾರೆ. ನಟ ವಿಜಯ ರಾಘವೇಂದ್ರ, ನಿರೂಪಕಿ ಅನುಶ್ರೀ ಅವರನ್ನು ಕಾರ್ಯಕ್ರಮಕ್ಕೆ ಆಹ್ವಾನಿಸಲು ನಿರ್ಧರಿಸಲಾಗಿದೆ. ಜೊತೆಗೆ ಜಿಲ್ಲೆಯ ಎಂಟು ತಾಲ್ಲೂಕುಗಳ ಸಮುದಾಯದಲ್ಲಿರುವ ಬಡ 11 ವಿದ್ಯಾರ್ಥಿಗಳನ್ನು ಗುರುತಿಸಿ ಅವರಿಗೆ ಎಂಟರಿಂದ ಹತ್ತನೇ ತರಗತಿಯವರೆಗೆ ಪೂರ್ಣ ಶಿಕ್ಷಣದ ಖರ್ಚು ವೆಚ್ಚವನ್ನು ನೀಡುವುದಕ್ಕಾಗಿ ವಿದ್ಯಾರ್ಥಿಗಳನ್ನು ದತ್ತು ಸ್ವೀಕಾರ ಮಾಡಲು ನಿರ್ಧರಿಸಲಾಗಿದೆ. ಈಗಾಗಲೇ ದಾನಿಗಳು ದತ್ತು ಸ್ವೀಕರಿಸಲು ಒಪ್ಪಿಕೊಂಡಿದ್ದಾರೆ. ಈ ಬಾರಿಯ ಶೋಭಾಯಾತ್ರೆಯಲ್ಲಿ ಸಾಂಸ್ಕೃತಿಕ ವೈಭವ ಬಿಂಬಿಸುವ ಹುಲಿ ಕುಣಿತ ತಂಡ, ಚಿಟ್ಟಲಗೆ, ಡೊಳ್ಳು ಮೇಳ, ಭಜನಾ ತಂಡ ಮುಂತಾದವುಗಳು ವಿಶೇಷ ಆಕರ್ಷಣೆಯಾಗಲಿದೆ’ ಎಂದು ಹೇಳಿದರು.
ಕರದಾಳದ ಬ್ರಹ್ಮಶ್ರೀ ನಾರಾಯಣ ಗುರು ಶಕ್ತಿ ಪೀಠದ ಪ್ರಣವಾನಂದ ಸ್ವಾಮೀಜಿ ಮಾತನಾಡಿ, ‘ಜಯಂತಿ ಉತ್ಸವ ಆಚರಣೆಯು ಸಮಾಜವನ್ನು ಬಲಿಷ್ಠಗೊಳಿಸಲು ಹಾಗೂ ಗುರುಗಳ ತತ್ವ ಸಂದೇಶವನ್ನು ಪಾಲಿಸಲು ಪ್ರೇರಣೆ ನೀಡಬೇಕು. ಆ ನಿಟ್ಟಿನಲ್ಲಿ ನೂತನ ಸಮಿತಿಯು ಉತ್ಸವವನ್ನು ಅತ್ಯಂತ ಶ್ರದ್ಧೆ ಮತ್ತು ಭಕ್ತಿಯಿಂದ ಆಚರಿಸಿ ಮೆರುಗು ತರಬೇಕು’ ಎಂದರು.
ಜಯಂತಿ ಉತ್ಸವದ ಸಂಚಾಲಕ ಸದಾನಂದ ಪೆರ್ಲ, ಸಮಾಜದ ಹಿರಿಯ ಮುಖಂಡರಾದ ಮಹಾದೇವ ಗುತ್ತೇದಾರ, ವೆಂಕಟೇಶ್ ಎಂ ಕಡೇಚೂರ, ಸಂತೋಷ ಗುತ್ತೇದಾರ ಆಳಂದ, ಪ್ರವೀಣ್ ಶಿವಯ್ಯ ಗುತ್ತೇದಾರ, ಶಿವರಾಜ ಗುತ್ತೇದಾರ ಜೇವರ್ಗಿ, ಹರ್ಷಾನಂದ ಗುತ್ತೇದಾರ, ಮಲ್ಲಿಕಾರ್ಜುನ ಕುಕ್ಕುಂದಿ, ಮಹೇಶ್ ಹೋಳಕುಂದಾ, ವಿನಾಯಕ ಚಂದ್ರಕಾಂತ ಗುತ್ತೇದಾರ, ಬಸಯ್ಯ ಗುತ್ತೇದಾರ ತೆಲ್ಲೂರ, ರವಿ ದತ್ತು ಗುತ್ತೇದಾರ ಇತರರು ಭಾಗವಹಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.