
ಆಳಂದ: ಪಟ್ಟಣದ ಲಾಡ್ಲೆ ಮಶಾಕ್ ದರ್ಗಾದ ಆವರಣದಲ್ಲಿನ ರಾಘವ ಚೈತನ್ಯದ ಶಿವಲಿಂಗಕ್ಕೆ ಮಹಾಶಿವರಾತ್ರಿ ನಿಮಿತ್ತ ಭಾನುವಾರ ಹಿಂದೂ ಸಂಘಟನೆಗಳ ಪ್ರಮುಖರಿಂದ ಶಾಂತಿಯುತವಾಗಿ ಪೂಜೆ ನಡೆಯಿತು.
ಕರ್ನಾಟಕ ಹೈಕೋರ್ಟ್ ಪೀಠ ನೀಡಿದ ಪ್ರತ್ಯೇಕ ಎರಡು ಆದೇಶಗಳಲ್ಲಿ ಶಿವಲಿಂಗಕ್ಕೆ ರುದ್ರಾಭಿಷೇಕ, ಸಹಸ್ರ ಬಿಲ್ವಾರ್ಚನೆಯೊಂದಿಗೆ ಪೂಜಿಸಲು ಒಟ್ಟು 14 ಮಂದಿಗೆ ಅವಕಾಶ ನೀಡಿತ್ತು.
ಅದರಂತೆ ಬಿಜೆಪಿ ಮುಖಂಡ ಹರ್ಷಾನಂದ ಗುತ್ತೇದಾರ, ಬಿಜೆಪಿ ಜಿಲ್ಲಾಧ್ಯಕ್ಷ ಅಶೋಕ ಬಗಲಿ, ತಾಲ್ಲೂಕು ಅಧ್ಯಕ್ಷ ಮಲ್ಲಿಕಾರ್ಜುನ ಕಂದಗೋಳೆ, ಹಿಂದೂಪರ ಸಂಘಟನೆಗಳ ಪ್ರಮುಖರಾದ ಗುರುಶಾಂತ ಟೆಂಗಳಿ, ಸಿದ್ರಾಮಯ್ಯ ಹಿರೇಮಠ, ಈರಣ್ಣ ಹತ್ತರಕಿ, ರಾಕೇಶ ಜಮಾದಾರ, ಶಿವರಾಜ ಬಾಳಿ, ಶಿವಪುತ್ರ ನಡಗೇರಿ, ರವಿ ಮದನಕರ್, ರಾಜು ಚವ್ಹಾಣ, ಮಲ್ಕಪ್ಪ ಹಿರೇಪೂಜಾರಿ, ಹಣಮಂತರಾವ ಪಾಟೀಲ ಹಾಗೂ ಮಲ್ಲಿಕಾರ್ಜುನ ಸಾವಳಗಿ ಮಧ್ಯಾಹ್ನ 2.25ಕ್ಕೆ ದರ್ಗಾ ಆವರಣ ಸಮೀಪ ವಾಹನಗಳಲ್ಲಿ ಬಂದಿಳಿದರು.
ಅವರನ್ನು ಪೊಲೀಸರು ಭದ್ರತಾ ದೃಷ್ಟಿಯಿಂದ ತಪಾಸಣೆ ನಡೆಸಿದರು. ಬಳಿಕ ಹೆಚ್ಚುವರಿ ಎಸ್‌ಪಿ ಮಹೇಶ ಮೇಘಣ್ಣವರ ನೇತೃತ್ವದಲ್ಲಿ ದರ್ಗಾದ ಒಳಗೆ ಕರೆದೊಯ್ಯಲಾಯಿತು. ಅಂದಾಜು ಒಂದೂವರೆ ಗಂಟೆಗಳ ಕಾಲ ರಾಘವಚೈತನ್ಯದ ಶಿವಲಿಂಗಕ್ಕೆ ರುದ್ರಾಭಿಷೇಕ, ಸಹಸ್ರ ಬಿಲ್ವಾರ್ಚನೆ, ಭಜನೆ, ಕರ್ಪೂರ ಆರತಿ ಮತ್ತಿತರ ವಿಶೇಷ ಪೂಜೆ ಸಲ್ಲಿಸಿ ಸಂಜೆ 4 ಗಂಟೆ ಹೊತ್ತಿಗೆ ಹೊರಬಂದರು. ಪೂಜೆ ಮುಗಿಸಿ ಹೊರಬರುವಾಗ ‘ರಾಘವ ಚೈತನ್ಯ ಮಹಾರಾಜ ಕೀ ಜೈ’, ‘ಭಾರತ ಮಾತಾ ಕೀ ಜೈ’, ‘ಜೈ ಶಿವಾಜಿ, ಜೈ ಭವಾನಿ’ ಘೋಷಣೆಗಳು ಕೂಗಿದರು.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅಡ್ಡೂರು ಶ್ರೀನಿವಾಸುಲು ನೇತೃತ್ವದಲ್ಲಿ ವಿವಿಧೆಡೆಯಿಂದ ಪೊಲೀಸ್ ಅಧಿಕಾರಿಗಳು ಕಟ್ಟೆಚ್ಚರ ವಹಿಸಿದ್ದರು. ಡಿವೈಎಸ್ಪಿ ತಮ್ಮರಾಯ ಪಾಟೀಲ, ಪಿಐ ಶರಣಬಸಪ್ಪ ಕೊಡ್ಲಾ, ಮಹಾಂತೇಶ ಪಾಟೀಲ ಸೇರಿದಂತೆ ಪೊಲೀಸ್ ಅಧಿಕಾರಿಗಳ ಇದ್ದರು.
ಮುಖಂಡ ಹರ್ಷಾನಂದ ಗುತ್ತೇದಾರ ಮಾತನಾಡಿ, ‘ರಾಜ್ಯ ಕಾಂಗ್ರೆಸ್ ಸರ್ಕಾರ ಹಾಗೂ ಜಿಲ್ಲಾಡಳಿತವು ಇಲ್ಲಿಯ ಶಿವಲಿಂಗದ ಪೂಜೆಗೆ ಅನುಮತಿ ನೀಡಲು ನಿರಾಕರಿಸಿ ಹಿಂದೂಗಳ ಭಾವನೆಗೆ ಧಕ್ಕೆಯನ್ನುಂಟು ಮಾಡುತ್ತಿದೆ. ಹೀಗಾಗಿ ಸತತ ಮೂರು ವರ್ಷದಿಂದ ಕೋರ್ಟ್ ಮೊರೆ ಹೋಗಿ ನಾವೂ ಪೂಜಿಸುವ ಪರಿಸ್ಥಿತಿ ನಿರ್ಮಾಣವಾಗಿದೆ. ನಮಗೆ ಪೂಜೆಗೆ ಅವಕಾಶ ಮಾಡಿಕೊಟ್ಟ ಕೋರ್ಟ್‌ಗೆ ಧನ್ಯವಾದಗಳು’ ಎಂದರು.
ಅರ್ಜಿದಾರ ಸಿದ್ರಾಮಯ್ಯ ಹಿರೇಮಠ ಮಾತನಾಡಿ, ‘ರಾಘವಚೈತನ್ಯರ ಶಿವಲಿಂಗವನ್ನು 400 ವರ್ಷದಿಂದ ಇಲ್ಲಿಯ ಜೋಶಿ ಮನೆತನದವರು ಪೂಜಿಸುತ್ತ ಬಂದಿದ್ದಾರೆ. ಈಗ ದರ್ಗಾ ಸಮಿತಿಯವರು ಅಡ್ಡಿಪಡಿಸುತ್ತಿದೆ. ಪ್ರತಿದಿನ ಶಿವಲಿಂಗದ ಪೂಜೆಗೆ ಅವಕಾಶ ಮಾಡಿಕೊಡಬೇಕು’ ಎಂದು ಆಗ್ರಹಿಸಿದರು.
ಕಳೆದ ಎರಡು ದಿನಗಳಿಂದ ಲಾಡ್ಲೆ ಮಶಾಕ್ ದರ್ಗಾ ಹಾಗೂ ಪಟ್ಟಣದ ಮುಖ್ಯರಸ್ತೆಗಳಲ್ಲಿ ಪೊಲೀಸ್ ಬಿಗಿ ಬಂದೋಬಸ್ತ್ ವಹಿಸಲಾಗಿತ್ತು. ಕಾನೂನು ಸುವ್ಯವಸ್ಥೆ ಕಾಪಾಡಲು ಪಟ್ಟಣದಲ್ಲಿ ನಿಷೇಧಾಜ್ಞೆಯನ್ನೂ ವಿಧಿಸಲಾಗಿತ್ತು. ಇದರಿಂದ ಜನರ ಓಡಾಟ, ವಾಹನಗಳ ಸಂಚಾರ ವಿರಳವಾಗಿತ್ತು.
ಪಟ್ಟಣದ ಅಂಗಡಿ ಮುಂಗಟ್ಟುಗಳು ಸಂಪೂರ್ಣ ಬಂದ್ ಆಗಿದ್ದವು. ವಿಶೇಷವಾಗಿ ಆಳಂದ ಮುಖ್ಯರಸ್ತೆ, ದರ್ಗಾ ಚೌಕ್, ಹಳೆಯ ಚೆಕ್‌ಪೋಸ್ಟ್ ಮುಖ್ಯರಸ್ತೆಯಲ್ಲಿ ಎರಡು ಗಂಟೆಗಳ ಕಾಲ ವಾಹನ ಸಂಚಾರಕ್ಕೆ ಅಡ್ಡಿಯಾಯಿತು. ಇದರಿಂದ ಜನಸಾಮಾನ್ಯರು ಕಾಲ್ನಡಿಗೆಯಲ್ಲಿ ಸಂಚರಿಸುವುದು ಕಂಡು ಬಂತು.
ಮಹಾ ಶಿವರಾತ್ರಿಯಂದು ಶಿವಲಿಂಗಕ್ಕೆ ಪೂಜೆಗೆ ಅನುಮತಿ ನೀಡಲು ಸತತ ನಿರಾಕರಿಸುತ್ತಿರುವುದು ನೋವಿನ ಸಂಗತಿ. ಶಿವಲಿಂಗದ ಪೂಜೆ ನಮ್ಮ ಧಾರ್ಮಿಕ ಹಕ್ಕುಹರ್ಷಾನಂದ ಗುತ್ತೇದಾರ ಬಿಜೆಪಿ ಮುಖಂಡ
ರಾಘವ ಚೈತನ್ಯರ ಶಿವಲಿಂಗದ ಸ್ಥಳದಲ್ಲಿ ಸಕಲ ಹಿಂದೂ ಸಂಘಟನೆಗಳ ನೇತೃತ್ವದಲ್ಲಿ ದೇವಸ್ಥಾನ ನಿರ್ಮಾಣದ ಸಂಕಲ್ಪ ಮಾಡಲಾಗಿದೆ. ನಿತ್ಯ ಪೂಜೆಗಾಗಿ ಕೋರ್ಟ್ ಮೊರೆ ಹೋಗಲಾಗುವುದುಗುರುಶಾಂತ ಟೆಂಗಳಿ ಕಲಬುರಗಿ ಮುಖಂಡ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.