ADVERTISEMENT

ಗೂಳಿಹಟ್ಟಿ ಶೇಖರ್‌ ಹೇಳಿಕೆಗೆ ಖಂಡನೆ; ಸೆ.28ಕ್ಕೆ ಬೀದರ್‌ನಲ್ಲಿ ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 26 ಸೆಪ್ಟೆಂಬರ್ 2021, 11:31 IST
Last Updated 26 ಸೆಪ್ಟೆಂಬರ್ 2021, 11:31 IST
ಗೂಳಿಹಟ್ಟಿ ಶೇಖರ್‌
ಗೂಳಿಹಟ್ಟಿ ಶೇಖರ್‌   

ಕಲಬುರ್ಗಿ: ‘ಶಾಸಕ ಗೂಳಿಹಟ್ಟಿ ಶೇಖರ್‌ ಅವರು ವಿಧಾನಸಭೆ ಅಧಿವೇಶನದಲ್ಲಿಯೇ ಕ್ರೈಸ್ತ ಸಮುದಾಯದ ವಿರುದ್ಧ ಇಲ್ಲಸಲ್ಲದ ಮಾತುಗಳನ್ನಾಡಿದ ಕ್ರಮ ಖಂಡಿಸಿ, ಬೀದರ್‌ನಲ್ಲಿ ಸೆ. 28ರಂದು ಬೀದರ್‌ನಲ್ಲಿ ಬೃಹತ್ ಪ್ರತಿಭಟನೆ ನಡೆಸಲಾಗುತ್ತದೆ. ಇದರಲ್ಲಿ ಜಿಲ್ಲೆಯ ಸಮುದಾಯದವರೂ ಪಾಲ್ಗೊಳ್ಳಬೇಕು’ ಎಂದು ಅಖಿಲ ಭಾರತ ಕ್ರೈಸ್ತ ಮಹಾಸಭಾದ ಕಲ್ಯಾಣ ಕರ್ನಾಟಕ ವಿಭಾಗದ ಅಧ್ಯಕ್ಷ ಜ್ಞಾನಮಿತ್ರ ಸಾಮುಯೆಲ್‌ ತಿಳಿಸಿದ್ದಾರೆ.

‘ಮತಾಂತರ ಮಾಡುವವರನ್ನು ತಡೆಯಲು ಹೋದರೆ ಜಾತಿ ನಿಂದನೆ, ಅತ್ಯಾಚಾರದಂಥ ಸುಳ್ಳು ಕೇಸ್‌ಗಳನ್ನು ದಾಖಲಿಸುತ್ತಾರೆ ಎಂದು ಕ್ರೈಸ್ತರ ವಿರುದ್ಧ ಸುಳ್ಳು ಹಾಗೂ ಅಸಂಬದ್ಧ ಹೇಳಿಕೆ ನೀಡಿದ್ದಾರೆ. ಇಂಥದರ ಬಗ್ಗೆ ಒಂದೇ ಒಂದು ಪ್ರಕರಣವೂ ದಾಖಲಾಗಿಲ್ಲ. ಪ್ರಜಾಪ್ರಭುತ್ವದ ದೇಗುಲವಾದ ವಿಧಾನಸೌಧದಲ್ಲೇ ಈ ರೀತಿ ಒಂದು ಸಮುದಾಯವನ್ನು ನಿಂದಿಸಿದ್ದು ಖಂಡನಾರ್ಹ. ಜವಾಬ್ದಾರಿ ಸ್ಥಾನದಲ್ಲಿರುವ ಶಾಸಕರ ಈ ವರ್ತನೆಯಿಂದ ಸಮಸ್ತ ಕ್ರೈಸ್ತ ಸಮುದಾಯಕ್ಕೆ ನೋವಾಗಿದೆ’ ಎಂದು ಮಹಾಸಭಾ ರಾಷ್ಟ್ರೀಯ ಉಪಾಧ್ಯಕ್ಷ ಸಾಮುಯೆಲ್‌ ಸಂಧ್ಯರಾಜ ಹೇಳಿದ್ದಾರೆ.

‘ಬೀದರ್‌ನಲ್ಲಿ ಮಹಾಸಭಾದ ಜಿಲ್ಲಾ ಘಟಕದ ಅಧ್ಯಕ್ಷರಾದಬ್ರದರ್‌ ಯೇಸುದಾಸ್‌ ಅಣುದುರೆ ಅವರ ನೇತೃತ್ವದಲ್ಲಿ ಉಗ್ರ ಪ್ರತಿಭಟನೆ ನಡೆಯಲಿದೆ. ಶಾಸಕರು ಕ್ಷಮೆ ಕೇಳಬೇಕು, ಈ ಬಗ್ಗೆ ಅಧಿವೇಶನದಲ್ಲಿ ಸತ್ಯ ಆಧಾರಿತ ಚರ್ಚೆ ನಡೆಯಬೇಕು. ರಾಜ್ಯದ ಬೇರೆ ಬೇರೆ ಕಡೆ ಕ್ರೈಸ್ತರ ಮೇಲೆ ನಡೆಯುತ್ತಿರುವ ದಾಳಿಗಳನ್ನು ತಡೆಯಬೇಕಾಗಿ ಪ್ರತಿಭಟನೆಯಲ್ಲಿ ಒತ್ತಾಯಿಸಲಾಗುವುದು’ ಎಂದು ಅವರು ತಿಳಿಸಿದ್ದಾರೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.