ಕಮಲಾಪುರ ತಾಲ್ಲೂಕಿನ ಕಲಕುಟಗಾ ಗ್ರಾಮದ ರಸ್ತೆ ಹದಗೆಟ್ಟಿದ್ದು ಹನುಮಾನ ದೇವರ ಕಳಶ ಹೊತ್ತೊಯ್ಯುವಾಗ ಭಕ್ತರು ಕೆಸರಲ್ಲೇ ಸಾಗಿದರು
ಕಮಲಾಪುರ: ತಾಲ್ಲೂಕಿನ ಕಲಕುಟಗಾ ಗ್ರಾಮಕ್ಕೆ ಸಂಪರ್ಕ ಕಲ್ಪಿಸುವ ರಸ್ತೆ ಸಂಪೂರ್ಣ ಹದಗೆಟ್ಟಿದ್ದು ಸಾಧಾರಣ ಮಳೆಯಾದರೂ ಸಂಚಾರ ಸ್ಥಗಿತಗೊಳ್ಳುತ್ತದೆ.
ಅಂಬಲಗಾ ಗ್ರಾಮ ಪಂಚಾಯಿತಿ ವ್ಯಾಪ್ತಿಗೆ ಒಳಪಡುವ ಈ ಕಲಕುಟಗಾ ಗ್ರಾಮಕ್ಕೆ ಬಸವಕಲ್ಯಾಣ ತಾಲ್ಲೂಕಿನ ಬಾಗ್ ಹಿಪ್ಪರಗಾ ಗ್ರಾಮದ ಮೂಲಕ ರಸ್ತೆ ಸಂಪರ್ಕವಿದೆ. ಸುಮಾರು 3 ಕಿ.ಮೀ.ವರೆಗಿನ ಈ ರಸ್ತೆ ತುಂಬೆಲ್ಲಾ ಮೊಣಕಾಲುವರೆಗೆ ಹೊಂಡ ಬಿದ್ದಿವೆ. ಡಾಂಬರ್ ಸಂಪೂರ್ಣ ಕಿತ್ತು ಹೋಗಿದೆ. ಹೊಲ ಗದ್ದೆಗಳಿಂದ ಮಣ್ಣು ಹರಿದು ಬಂದು ರಸ್ತೆ ತುಂಬೆಲ್ಲಾ ಆವರಿಸುತ್ತದೆ.
ಅಲ್ಪ ಮಳೆಯಾದರೂ ರಸ್ತೆ ಕೆಸರು ಗದ್ದೆಯಂತಾಗುತ್ತದೆ. ಮಳೆಗಾಲದಲ್ಲಿ ನಾಲ್ಕು ತಿಂಗಳು ವಾಹನ ಸಂಚಾರ ಸಂಪೂರ್ಣ ಸ್ಥಗಿತಗೊಳ್ಳುತ್ತದೆ. ಗ್ರಾಮದಲ್ಲಿ ಸುಮಾರು ಮೂರು ಸಾವಿರ ಜನಸಂಖ್ಯೆ ಇದೆ. ಹಿರಿಯ ಪ್ರಾಥಮಿಕ ಶಾಲೆ ಇದೆ. ಹೆಚ್ಚಿನ ವಿದ್ಯಾಭ್ಯಾಸಕ್ಕೆ ಮಕ್ಕಳು ಪಕ್ಕದ ಹಿಪ್ಪರಗಾ ಗ್ರಾಮಕ್ಕೆ ತೆರಳಬೇಕು. ನಿತ್ಯ ಬೆಳಗಾದರೆ ಅಗತ್ಯ ಕಾರ್ಯ ಹಾಗೂ ಕೂಲಿ ಕೆಲಸಕ್ಕೆ ಜನ ಕಮಲಾಪುರ, ಕಲಬುರಗಿಗೆ ತೆರಳುತ್ತಾರೆ. ಎಲ್ಲರೂ ಕಾಲ್ನಡಿಗೆಯಲ್ಲೇ ಸಾಗುತ್ತಾರೆ.
ಚಪ್ಪಲಿ ಧರಿಸಿ ನಡೆದರೆ ಕೆಸರಲ್ಲಿ ಸಿಕ್ಕಿಕೊಳ್ಳುತ್ತವೆ. ಬರಿಗಾಲಿನಲ್ಲೆ ನಡೆದುಕೊಂಡು ಸಾಗುವುದು ಅನಿವಾರ್ಯ.
‘ಕಲಬುರಗಿ ಜಿಲ್ಲೆಯ ಗಡಿ ಗ್ರಾಮವಾದ ಈ ಕಲಕುಟಗಾ ಈ ಹಿಂದೆ ಆಳಂದ ತಾಲ್ಲೂಕಿನಲ್ಲಿತ್ತು. ತಾಲ್ಲೂಕಿನ ಪುನರ್ ರಚನೆ ಬಳಿಕ ಕಮಲಾಪುರ ತಾಲ್ಲೂಕಿಗೆ ಒಳಪಟ್ಟಿದೆ. ಆಳಂದ ಸುಮಾರು 80 ಕಿ.ಮೀ ಅಂತರದಲ್ಲಿತ್ತು. ಸದ್ಯ ಕಮಲಾಪುರ ತಾಲ್ಲೂಕಿಗೆ ಒಳಪಟ್ಟಿದ್ದು ಕೇವಲ 15 ಕಿ.ಮೀ ಅಂತರದಲ್ಲಿ ತಾಲ್ಲೂಕು ಕೇಂದ್ರವಿದೆ. ಕಮಲಾಪುರ ತಾಲ್ಲೂಕಿಗೆ ಒಳಪಟ್ಟು ಸುಮಾರು 8 ವರ್ಷ ಗತಿಸಿದರೂ ಗ್ರಾಮಕ್ಕೆ ಸೂಕ್ತ ರಸ್ತೆ ಸಂಪರ್ಕ ಒದಗಿಸಲು ಅಧಿಕಾರಿಗಳು ಕ್ರಮ ಕೈಗೊಳ್ಳುತ್ತಿಲ್ಲ’ ಎಂದು ಗ್ರಾಮ ಪಂಚಾಯಿತಿ ಅಧ್ಯಕ್ಷ ತಾಜ್ಜೋದ್ದೀನ ಪಟೇಲ ಬೇಸರ ವ್ಯಕ್ತಪಡಿಸಿದರು.
‘ಶಾಸಕರು ಮುತುವರ್ಜಿ ವಹಿಸಿ ಕೂಡಲೇ ಕಲಕುಟಗಾ ಗ್ರಾಮಕ್ಕೆ ರಸ್ತೆ ಅಭಿವೃದ್ಧಿಗೆ ಅನುದಾನ ಒದಗಿಸಬೇಕು’ ಎಂದು ಗ್ರಾಮಸ್ಥರು ಒತ್ತಾಯಿಸಿದ್ದಾರೆ. ಸದ್ಯ ಮುರುಮ್ ಹಾಕಿಸಿ ದುರಸ್ತಿಗೊಳಿಸಿ ಸಾರ್ವಜನಿಕರ ಸಂಚಾರಕ್ಕೆ ಅನುಕೂಲ ಮಾಡಿಕೊಡಬೇಕು. ಬೇಡಿಕೆ ಈಡೇರಿಸದಿದ್ದರೆ ತಹಶೀಲ್ದಾರ್ ಕಚೇರಿ ಎದುರು ಪ್ರತಿಭಟನೆ ನಡೆಸುವುದಾಗಿ ಎಚ್ಚರಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.