ADVERTISEMENT

ಚಿತ್ತಾಪುರದಲ್ಲಿ RSS ಪಥಸಂಚಲನ: ಹೊಸದಾಗಿ ಅರ್ಜಿ ‌ಸಲ್ಲಿಕೆಗೆ ಹೈಕೋರ್ಟ್ ಸೂಚನೆ

​ಪ್ರಜಾವಾಣಿ ವಾರ್ತೆ
Published 19 ಅಕ್ಟೋಬರ್ 2025, 7:07 IST
Last Updated 19 ಅಕ್ಟೋಬರ್ 2025, 7:07 IST
   

ಕಲಬುರಗಿ: ಇಂದು ಜಿಲ್ಲೆಯ ಚಿತ್ತಾಪುರದಲ್ಲಿ ಆಯೋಜಿಸಿದ್ದ ಆರ್‌ಎಸ್ಎಸ್ ಪಥಸಂಚಲನಕ್ಕೆ ಅನುಮತಿ ನಿರಾಕರಿಸಿದ ತಹಶೀಲ್ದಾರ್ ಕ್ರಮ ಪ್ರಶ್ನಿಸಿ ಸಲ್ಲಿಸಿದ್ದ ಅರ್ಜಿಯ ತುರ್ತು ವಿಚಾರಣೆ ನಡೆಸಿದ ಹೈಕೋರ್ಟ್‌ನ ಕಲಬುರಗಿ ಪೀಠವು ಯಾವ ದಿನ ಪಥಸಂಚಲನ ನಡೆಸುತ್ತೀರಿ ಎಂದು ತೀರ್ಮಾನಿಸಿ ಹೊಸದಾಗಿ ಅರ್ಜಿ ಸಲ್ಲಿಸುವಂತೆ ಆರ್‌ಎಸ್ಎಸ್ ಪರ ಅರ್ಜಿದಾರರಿಗೆ ಸೂಚಿಸಿದೆ.

ಆರ್‌ಎಸ್ಎಸ್ ಪಥಸಂಚಲನ ನಿಗದಿಯಾದ ಭಾನುವಾರವೇ ತನಗೂ ‘ಭೀಮ ಪಥಸಂಚಲನ’ ನಡೆಸಲು ಅನುಮತಿ ನೀಡುವಂತೆ ದಲಿತ ಪರ‌ ಸಂಘಟನೆ ಭೀಮ್ ‌ಆರ್ಜಿ ತಹಶೀಲ್ದಾರ್ ಅವರಿಗೆ ಅರ್ಜಿ ಸಲ್ಲಿಸಿತ್ತು.

ಒಂದೇ ದಿನ ಏಕಕಾಲಕ್ಕೆ ಎರಡು ಸಂಘಟನೆಗಳು ಕಾರ್ಯಕ್ರಮ ಆಯೋಜಿಸುವುದರಿಂದ ಕಾನೂನು ಸುವ್ಯವಸ್ಥೆಗೆ ಧಕ್ಕೆಯಾಗಲಿದೆ ಎಂಬ ಪೊಲೀಸ್ ವರದಿ ಆಧರಿಸಿ ತಹಶೀಲ್ದಾರ್ ನಾಗಯ್ಯ ಹಿರೇಮಠ ಅವರು ಪಥಸಂಚಲನ ನಡೆಸಲು ಎರಡೂ ಸಂಘಟನೆಗಳಿಗೆ ಅನುಮತಿ ನಿರಾಕರಿಸಿದ್ದರು.

ADVERTISEMENT

ಇದನ್ನು ಪ್ರಶ್ನಿಸಿ ಆರ್‌ಎಸ್ಎಸ್ ಜಿಲ್ಲಾ ಸಂಚಾಲಕ ಅಶೋಕ ಪಾಟೀಲ ಅವರು ಹೈಕೋರ್ಟ್ ಮೆಟ್ಟಿಲೇರಿದ್ದರು.

ಪ್ರಕರಣದ ತುರ್ತು ವಿಚಾರಣೆ ‌ನಡೆಸಿದ ನ್ಯಾಯಮೂರ್ತಿ ಎಂಜಿಎಸ್ ಕಮಲ್ ಅವರಿದ್ದ ನ್ಯಾಯಪೀಠವು, ಸದ್ಯ ಆರ್‌ಎಸ್ಎಸ್ ನ.2ರಂದು ಪಥಸಂಚಲನ ಆಯೋಜಿಸಲು ನಿಗದಿಪಡಿಸಲಾಗಿದೆ. ಅದಕ್ಕೆ ಅನುಮತಿ ನೀಡಲು ರೂಟ್ ಮ್ಯಾಪ್ ಹಾಗೂ ತಹಶೀಲ್ದಾರ್ ಕೇಳಿದ್ದ ವಿವರಣೆಗಳೊಂದಿಗೆ ಹೊಸದಾಗಿ ಅರ್ಜಿದಾರರು ಅರ್ಜಿ ಸಲ್ಲಿಸಬೇಕು. ಅದನ್ನು ಕಲಬುರಗಿ ಜಿಲ್ಲಾಧಿಕಾರಿ ಪರಿಗಣಿಸಬೇಕು. ಈ ಕುರಿತ ವರದಿಯನ್ನು ಅ.24ರ ಮಧ್ಯಾಹ್ನ 2.30ಕ್ಕೆ ವರದಿ ಸಲ್ಲಿಸಬೇಕು' ಎಂದು ಸೂಚಿಸಿ ವಿಚಾರಣೆಯನ್ನು ಅ.24ಕ್ಕೆ ಮುಂದೂಡಿತು.

ಸರ್ಕಾರದ ಪರವಾಗಿ ಅಡ್ವೊಕೇಟ್ ಜನರಲ್ ಶಶಿಕಿರಣ್ ಶೆಟ್ಟಿ, ಅರ್ಜಿದಾರರ ಪರ ಅರುಣ್ ಶ್ಯಾಮ್ ಹಾಜರಾಗಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.