ಕಲಬುರಗಿ: ಬೀದರ್‌ನ ಗುತ್ತಿಗೆದಾರ ಸಚಿನ್ ಪಾಂಚಾಳ್ ಆತ್ಮಹತ್ಯೆ ಪ್ರಕರಣದ ಆರೋಪಿ ಮಾಜಿ ಕಾರ್ಪೊರೇಟರ್ ರಾಜು ಕಪನೂರ ಸೇರಿ ನಾಲ್ವರು ಆರೋಪಿಗಳ ಮನೆಗಳ ಮೇಲೆ ಮಂಗಳವಾರ ಸಿಐಡಿ ಅಧಿಕಾರಿಗಳು ದಾಳಿ ಮಾಡಿ, ಶೋಧ ಕಾರ್ಯಾಚರಣೆ ನಡೆಸಿದರು.
ಸಿಐಡಿ ಡಿಐಜಿಪಿ ಶಾಂತನು ಸಿನ್ಹಾ ನೇತೃತ್ವದಲ್ಲಿ ನಾಲ್ಕು ಕಡೆ ಡಿವೈಎಸ್‌ಪಿಗಳಾದ ಅಸ್ಲಾಂ ಭಾಷಾ, ಯೋಗನಗೌಡ, ನಾಲ್ವರು ಇನ್‌ಸ್ಪೆಕ್ಟರ್‌ಗಳು ಸೇರಿ 40ಕ್ಕೂ ಹೆಚ್ಚು ಸಿಬ್ಬಂದಿ ದಾಳಿ ಮಾಡಿದರು. ಮಧ್ಯಾಹ್ನ 3 ಗಂಟೆಯವರೆಗೆ ಶೋಧ ನಡೆಸಿದರು.
ಸಚಿವ ಪ್ರಿಯಾಂಕ್ ಖರ್ಗೆ ಆಪ್ತ, ರಾಜು ಕಪನೂರ ಅವರಿಗೆ ಸೇರಿದ ಹುಮನಾಬಾದ್ ರಸ್ತೆಯ ಕಪನೂರ ಕೈಗಾರಿಕಾ ಪ್ರದೇಶದಲ್ಲಿನ ಮನೆ, ಘಾಟಗೆ ಲೇಔಟ್‌ನಲ್ಲಿನ ಜಿಲ್ಲಾ ಪಂಚಾಯಿತಿ ಮಾಜಿ ಉಪಾಧ್ಯಕ್ಷ ಗೋರಖನಾಥ ಸಜ್ಜನ್, ಪ್ರಥಮ ದರ್ಜೆ ಗುತ್ತಿಗೆದಾರ ರಾಮನಗೌಡ ಪಾಟೀಲ ಹಾಗೂ ಗಂಜ್ ಪ್ರದೇಶದಲ್ಲಿನ ಬ್ಲಾಕ್ ಕಾಂಗ್ರೆಸ್ ಪ್ರಚಾರ ಸಮಿತಿ ಅಧ್ಯಕ್ಷ ನಂದಕುಮಾರ ನಾಗಭುಜಂಗೆ ಅವರ ಮನೆಗಳಲ್ಲಿ ಶೋಧ ನಡೆಯಿತು.
ನಾಲ್ಕು ಕಡೆ ಏಕಕಾಲದಲ್ಲಿ ದಾಳಿ ನಡೆಸಿ, ಸಚಿನ್ ಮತ್ತು ಆರೋಪಿಗಳಿಗೆ ಸಂಬಂಧಿಸಿದ ದಾಖಲೆಗಳು, ಎಲೆಕ್ಟ್ರಾನಿಕ್ ಗ್ಯಾಜೆಟ್‌ಗಳಿಗಾಗಿ ಪರಿಶೀಲಿಸಿದರು ಎಂದು. ಮಧ್ಯಾಹ್ನದ 3ರ ಬಳಿಕ ಬೀದರ್‌ಗೆ ಮರಳಿದರು ಎಂದು ಮೂಲಗಳು ತಿಳಿಸಿವೆ.
ಹುಮನಾಬಾದ್ ರಸ್ತೆಯ ಕಪನೂರ ಕೈಗಾರಿಕಾ ಪ್ರದೇಶದ ಗೋಲ ಲೇಔಟ್‌ನ ಬಾಡಿಗೆ ಮನೆಯಲ್ಲಿ ವಾಸವಿದ್ದ ಸಚಿನ್ ಪಾಂಚಾಳ್ ಮನೆಗೆ ಜನವರಿ 4ರಂದು ಕಲಬುರಗಿ ಸಿಐಡಿ ಅಧಿಕಾರಿಗಳ ತಂಡ ಭೇಟಿ ನೀಡಿತ್ತು. ಯಾವುದೇ ದಾಖಲೆಗಳು ಸಿಗದೆ ವಾಪಸ್ ಆಗಿತ್ತು.
ರಾಜು ಕಪನೂರ, ಗೋರಖನಾಥ ಸಜ್ಜನ್, ನಂದಕುಮಾರ, ರಾಮನಗೌಡ ಹಾಗೂ ಸತೀಶ ರತ್ನಾಕರ ದುಬಲಗುಂಡಿ ಅವರು ಸದ್ಯ ಸಿಐಡಿ ಕಸ್ಟಡಿಯಲ್ಲಿದ್ದಾರೆ. ಸಚಿನ್ ಅವರು ಡೆತ್‌ನೋಟ್ ಬರೆದಿಟ್ಟು, ಡಿ.26ರಂದು ಆತ್ಮಹತ್ಯೆ ಮಾಡಿಕೊಂಡಿದ್ದರು. ಒಂಬತ್ತು ಆರೋಪಿಗಳ ವಿರುದ್ಧ ರೈಲ್ವೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.