ADVERTISEMENT

ಕಲಬುರಗಿ | ಕಾಯಕ ನಿಷ್ಠೆಯ ಶರಣ ಮಡಿವಾಳ ಮಾಚಿದೇವ: ಪ್ರೊ. ಶಶಿಕಾಂತ ಎಸ್. ಉಡಿಕೇರಿ

​ಪ್ರಜಾವಾಣಿ ವಾರ್ತೆ
Published 6 ಫೆಬ್ರುವರಿ 2026, 5:18 IST
Last Updated 6 ಫೆಬ್ರುವರಿ 2026, 5:18 IST
ಗುಲಬರ್ಗಾ ವಿಶ್ವವಿದ್ಯಾಲಯದ ಮಹಾತ್ಮ ಗಾಂಧಿ ಸಭಾಂಗಣದಲ್ಲಿ ವೀರ ಶರಣ ಮಡಿವಾಳ ಮಾಚಿದೇವರು ಜಯಂತ್ಯುತ್ಸವ ಸಮಾರಂಭದಲ್ಲಿ ಮಡಿವಾಳ ಮಾಚಿದೇವರ ಭಾವಚಿತ್ರಕ್ಕೆ ಕುಲಪತಿ ಪ್ರೊ. ಶಶಿಕಾಂತ್ ಎಸ್. ಉಡಿಕೇರಿ ಪುಷ್ಪ ಸಮರ್ಪಿಸಿದರು. ಇತರೆ ಗಣ್ಯರು ಇದ್ದರು
ಗುಲಬರ್ಗಾ ವಿಶ್ವವಿದ್ಯಾಲಯದ ಮಹಾತ್ಮ ಗಾಂಧಿ ಸಭಾಂಗಣದಲ್ಲಿ ವೀರ ಶರಣ ಮಡಿವಾಳ ಮಾಚಿದೇವರು ಜಯಂತ್ಯುತ್ಸವ ಸಮಾರಂಭದಲ್ಲಿ ಮಡಿವಾಳ ಮಾಚಿದೇವರ ಭಾವಚಿತ್ರಕ್ಕೆ ಕುಲಪತಿ ಪ್ರೊ. ಶಶಿಕಾಂತ್ ಎಸ್. ಉಡಿಕೇರಿ ಪುಷ್ಪ ಸಮರ್ಪಿಸಿದರು. ಇತರೆ ಗಣ್ಯರು ಇದ್ದರು   

ಕಲಬುರಗಿ: 12ನೇ ಶತಮಾನದಲ್ಲಿ ಕಾಯಕ ನಿಷ್ಠೆ ಮೂಲಕ ಸಮಾಜ ಸುಧಾರಣೆಗೆ ಶ್ರಮಿಸಿದವರಲ್ಲಿ ಮಡಿವಾಳ ಮಾಚಿದೇವರು ಶ್ರೇಷ್ಠ ಹಿರಿಯ ಶರಣ. ಸಮಾಜದ ಆಚಾರ ವಿಚಾರಗಳನ್ನು ಸುಧಾರಿಸಿ ಸೂಕ್ತ ಮಾರ್ಗ ತೋರಿಸಲು ಅವತರಿಸಿದ ಮಹಾಪುರುಷ. ಅವರ ಜೀವನ ಮೌಲ್ಯ ಮತ್ತು ಗುಣಗಳನ್ನು ಅನುಸರಿಸಿ ಬದುಕುವುದನ್ನು ಕಲಿಯಬೇಕು ಎಂದು ಗುಲಬರ್ಗಾ ವಿಶ್ವವಿದ್ಯಾಲಯದ ಕುಲಪತಿ ಪ್ರೊ. ಶಶಿಕಾಂತ ಎಸ್. ಉಡಿಕೇರಿ ತಿಳಿಸಿದರು.

ಗುಲಬರ್ಗಾ ವಿಶ್ವವಿದ್ಯಾಲಯದ ಮಹಾತ್ಮ ಗಾಂಧಿ ಸಭಾಂಗಣದಲ್ಲಿ ವೀರ ಶರಣ ಮಡಿವಾಳ ಮಾಚಿದೇವರ ಜಯಂತ್ಯುತ್ಸವ ಸಮಾರಂಭದಲ್ಲಿ ಮಡಿವಾಳ ಮಾಚಿದೇವರ ಭಾವಚಿತ್ರಕ್ಕೆ ಪುಷ್ಪ ಸಮರ್ಪಿಸಿ ಅವರು ಮಾತನಾಡಿದರು.

‘ಶರಣರ ಕುರಿತ ಕಾರ್ಯಕ್ರಮಗಳಿಂದ ಅವರ ಜೀವನ, ಬೋಧನೆ ಮತ್ತು ವಚನಗಳಿಂದ ಸಮಾಜಕ್ಕೆ ಅಧಿಕೃತ ಮಾಹಿತಿಗಳು ಸಿಗುತ್ತಿವೆ. ಅವರ ಆದರ್ಶ ತತ್ವಗಳನ್ನು ನಿರ್ಲಕ್ಷಿಸದೆ ಗೌರವಿಸಿ ಅನುಸರಿಸಿದರೆ ಉತ್ತಮ ಜೀವನ ನಮ್ಮದಾಗಲಿದೆ. ಮಾಚಿದೇವ ಶರಣರನ್ನು ಪ್ರಕೃತಿ ಗೌರವಿಸಿದೆ. ಸಮಾಜದ ದುಖಃ ದುಮ್ಮಾನಗಳು ನಿವಾರಣೆಯಾಗಿವೆ. ದುರ್ಬಲರು ಮತ್ತು ನಿರ್ಗತಿಕರ ರಕ್ಷಣೆ ಮತ್ತು ಬದುಕಿನ ಸುಧಾರಣೆಗೆ ಮಾಚಿದೇವರ ನುಡಿಗಳು ಎಚ್ಚರಿಸಿವೆ’ ಎಂದರು.

ADVERTISEMENT

ಕರ್ನಾಟಕ ಕೇಂದ್ರಿಯ ವಿಶ್ವವಿದ್ಯಾಲಯದ ಕನ್ನಡ ವಿಭಾಗದ ಪ್ರಾಧ್ಯಾಪಕ ಡಾ. ಟಿ. ಡಿ. ರಾಜಣ್ಣ ಮಾತನಾಡಿ, ‘ಮಡಿವಾಳ ಮಾಚಿದೇವರು 12ನೇ ಶತಮಾನದ ಶ್ರೇಷ್ಠ ಹಾಗೂ ಹಿರಿಯ ಶರಣ. ಇವರ ಕಟ್ಟು ನಿಟ್ಟಿನ ಕಾಯಕ ನಿಷ್ಠೆ ಗುರುತಿಸಿ ಮಡಿವಾಳ ಮಾಚಿ ತಂದೆ ಎಂದು ಬಸವಣ್ಣ ಸಂಬೋಧಿಸಿದ್ದಾರೆ. ಅವರ ಕಾಯಕ ನಿಷ್ಠೆಯ ಶ್ರೇಷ್ಠತೆಯನ್ನು ಸಮಾಜ ಅರ್ಥ ಮಾಡಿಕೊಳ್ಳಬೇಕು‘ ಎಂದರು.

ಸಿಂಡಿಕೇಟ್ ಸದಸ್ಯ ಮಲ್ಲಣ್ಣ ಮಡಿವಾಳ ಮಾತನಾಡಿ, ‘ಮಡಿವಾಳ ಮಾಚಿದೇವರು 1120ರಿಂದ 1130ರ ಅವಧಿಯಲ್ಲಿ ಜನ್ಮ ತಾಳಿದರೆಂಬ ಇತಿಹಾಸವಿದೆ. ದೇವರ ಹಿಪ್ಪರಗಿಯಿಂದ ಕಲ್ಯಾಣಕ್ಕೆ ಬಂದು ಸಮಾಜ ತಿದ್ದುವ ಕೈಂಕರ್ಯ ಮಾಡಿದರು’ ಎಂದರು.

ಕಾರ್ಯಕ್ರಮ ಸಂಚಾಲಕ ಹನುಮಂತ ಜಂಗೆ ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿದರು. ಮೌಲ್ಯಮಾಪನ ಕುಲಸಚಿವ ಎನ್.ಜಿ. ಕಣ್ಣೂರ, ವಿತ್ತಾಧಿಕಾರಿ ಜಯಾಂಬಿಕ ಮತ್ತು ವಿದ್ಯಾವಿಷಯಕ ಪರಿಷತ್ ಸದಸ್ಯ ಪ್ರೊ. ದಶರಥ ನಾಯಕ ಉಪಸ್ಥಿತರಿದ್ದರು. ಸಂಗೀತ ವಿಭಾಗದ ಅತಿಥಿ ಉಪನ್ಯಾಸಕರು ಹಾಗೂ ವಿದ್ಯಾರ್ಥಿಗಳು ನಾಡಗೀತೆ ಹಾಗೂ ಮಡಿವಾಳ ಮಾಚಿದೇವರ ಕುರಿತ ವಚನಗೀತೆಗಳನ್ನು ಪ್ರಸ್ತುತಪಡಿಸಿದರು. ಎಂ.ಬಿ.ಕಟ್ಟಿ ನಿರೂಪಿಸಿದರು. ವಿವಿಧ ನಿಕಾಯಗಳ ಡೀನರು, ಸಿಂಡಿಕೇಟ್ ಹಾಗೂ ವಿದ್ಯಾ ವಿಷಯಕ ಪರಿಷತ್ ಸದಸ್ಯರು, ಸ್ನಾತಕೋತ್ತರ ವಿಭಾಗಗಳ ಮುಖ್ಯಸ್ಥರು, ಪ್ರಾಧ್ಯಾಪಕರು, ಬೋಧಕೇತರ ಸಿಬ್ಬಂದಿ, ಅತಿಥಿ ಉಪನ್ಯಾಸಕರು, ಸಂಶೋಧನಾ ಹಾಗೂ ಸ್ನಾತಕೋತ್ತರ ವಿದ್ಯಾರ್ಥಿಗಳು ಭಾಗವಹಿಸಿದ್ದರು.

‘ಸಂಶೋಧನೆಗೆ ಪ್ರೋತ್ಸಾಹಿಸಿ’
‘12ನೇ ಶತಮಾನದ ಶರಣರ ಜೀವನ ವಚನ ಚಳವಳಿ ಶರಣರ ಸಾಧನೆ ವಚನ ಕೃತಿಗಳು ಮತ್ತು ವಿಚಾರಗಳ ಕುರಿತು ಕಿರು ಸಂಶೋಧನೆ ಆಗಬೇಕು. ಶರಣರ ಬಗ್ಗೆ ಮತ್ತಷ್ಟು ಮಾಹಿತಿಗಳ ಬಗ್ಗೆ ಬೆಳಕು ಚೆಲ್ಲಬೇಕಿದೆ. ಸ್ನಾತಕೋತ್ತರ ವಿದ್ಯಾರ್ಥಿಗಳಿಗೆ ಶರಣರು ದಾರ್ಶನಿಕರ ಸತ್ಯ ಸಂದೇಶಗಳ ಬಗ್ಗೆ ಅಧ್ಯಯನ ಮತ್ತು ಸಂಶೋಧನೆಗೆ ಪ್ರೋತ್ಸಾಹಿಸಬೇಕು’ ಎಂದು ಕುಲಪತಿ ಪ್ರೊ. ಶಶಿಕಾಂತ್ ಎಸ್. ಉಡಿಕೇರಿ ಆಶಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.