ADVERTISEMENT

ಕಲಬುರಗಿ | ಶರಣಬಸವೇಶ್ವರರ ರಥೋತ್ಸವ ಮಾ.8ರಂದು: ದಾಕ್ಷಾಯಣಿ

204ನೇ ಮಹಾದಾಸೋಹ ಯಾತ್ರಾ ಮಹೋತ್ಸವ: 7 ರಂದು ಸಂಜೆ 6 ಗಂಟೆಗೆ ಉಚ್ಚಾಯ

​ಪ್ರಜಾವಾಣಿ ವಾರ್ತೆ
Published 3 ಮಾರ್ಚ್ 2026, 4:45 IST
Last Updated 3 ಮಾರ್ಚ್ 2026, 4:45 IST
ದಾಕ್ಷಾಯಣಿ ಎಸ್. ಅಪ್ಪ
ದಾಕ್ಷಾಯಣಿ ಎಸ್. ಅಪ್ಪ   

ಕಲಬುರಗಿ: ‘ಮಹಾದಾಸೋಹಿ ಶರಣಬಸವೇಶ್ವರ 204ನೇ ಮಹಾದಾಸೋಹ ಯಾತ್ರಾ ಮಹೋತ್ಸವದ ನಿಮಿತ್ತ ಮಾ. 7ರಂದು ಸಂಜೆ 6 ಗಂಟೆಗೆ ಉಚ್ಚಾಯ ಮತ್ತು ಮಾ.8ರಂದು ಸಂಜೆ 6 ಗಂಟೆಗೆ ರಥೋತ್ಸವ ಜರುಗಲಿದೆ’ ಎಂದು ಶರಣಬಸವೇಶ್ವರ ವಿದ್ಯಾವರ್ಧಕ ಸಂಘದ ಚೇರ್‌ಪರ್ಸನ್ ದಾಕ್ಷಾಯಣಿ ಎಸ್. ಅಪ್ಪ ಹಾಗೂ ಕಾರ್ಯದರ್ಶಿ ಬಸವರಾಜ ದೇಶಮುಖ ತಿಳಿಸಿದರು.

ನಗರದ ಶರಣಬಸವೇಶ್ವರ ಮಹಾಸಂಸ್ಥಾನದಲ್ಲಿ ಸೋಮವಾರ ಜಂಟಿ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿದರು.

‘ಉಚ್ಚಾಯ ಮತ್ತು ರಥೋತ್ಸವಕ್ಕೆ ಸಂಸ್ಥಾನದ 9ನೇ ಪೀಠಾಧಿಪತಿ ದೊಡ್ಡಪ್ಪ ಅಪ್ಪ ಅವರು ಚಾಲನೆ ನೀಡುವವರು. ಅಲ್ಲದೆ ರಥೋತ್ಸವದ ದಿನ ಭಕ್ತ ಸಂಕುಲಕ್ಕೆ ಶರಣಬಸವೇಶ್ವರ ಪರುಷ ಬಟ್ಟಲು ಮತ್ತು ಲಿಂಗದ ಸಜ್ಜಿಕೆಗಳನ್ನು ತೋರಿಸಲಿದ್ದಾರೆ’ ಎಂದು ಹೇಳಿದರು.

ADVERTISEMENT

‘8ನೇ ಪೀಠಾಧಿಪತಿ ಶರಣಬಸಪ್ಪ ಅಪ್ಪ ಅವರ ಅನುಪಸ್ಥಿತಿ ಬಹುವಾಗಿ ಕಾಡುತ್ತಿದೆ. ಭಾರವಾದ ಮನಸ್ಸಿನಿಂದ ರಥೋತ್ಸವದ ತಯಾರಿಗಳನ್ನು ಮಾಡುತ್ತಿದ್ದೇವೆ. ದೇವಸ್ಥಾನದ ಆವರಣದಲ್ಲಿ ಜಾತ್ರಾ ನಿಮಿತ್ತ 30 ಅಡಿ ಎತ್ತರದ ಲಿಂ. ಶರಣಬಸಪ್ಪ ಅಪ್ಪ ಅವರ ಕಟೌಟ್ ನಿಮಿಸಲಾಗುತ್ತಿದೆ. ಅಲ್ಲದೆ ಅವರ ಸಂಕಲ್ಪದಂತೆ ದೇವಸ್ಥಾನ ಆವರಣದಲ್ಲಿನ ಈ ಹಿಂದಿನ ಎಲ್ಲ ಪಿಠಾಧಿಪತಿಗಳ ಸಮಾಧಿಗಳಿಗೆ ಗೋಪುರ ನಿರ್ಮಿಸಲಾಗುತ್ತಿದೆ’ ಎಂದರು.

ನಾಟಕ ಪ್ರದರ್ಶನ: ‘ರಥೋತ್ಸವ ಪೂರ್ವಭಾವಿಯಾಗಿ ದೇವಸ್ಥಾನದ ಆವರಣದಲ್ಲಿರುವ ಅಖಿಲ ಭಾರತ ಶಿವಾನುಭವ ಮಂಟಪದಲ್ಲಿ ಲಿಂ. ಶರಣಬಸಪ್ಪ ಅಪ್ಪ ಜೀವನ ಮತ್ತು ಅವರ ನೀಡಿದ ಕೊಡುಗೆ ಕುರಿತ ಜ್ಞಾನ ದಾಸೋಹಿ ಎಂಬ ಸರಣಿ ನಾಟಕ ಪ್ರದರ್ಶನವು ಮಾ. 4ರಿಂದ 7 ರವರೆಗೆ ನಿತ್ಯ ಸಂಜೆ 5.30ಕ್ಕೆ ನಡೆಯಲಿದೆ. ಅಲ್ಲದೆ ಹಲವು ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ’ ಎಂದು ವಿವರಿಸಿದರು.

ಗೀಗೀ ಪದ ಸಮ್ಮೇಳನ: ‘ಜನಪದ ಕಲಾವಿದರಿಗೆ ಪ್ರೋತ್ಸಾಹ ನೀಡುವ ನಿಟ್ಟಿನಲ್ಲಿ ವಾಡಿಕೆಯಂತೆ ಮಾ. 8, 9 ಮತ್ತು 10ರಂದು ರಾತ್ರಿ ರಾಜ್ಯದ ಪ್ರಖ್ಯಾತ ಕಲಾವಿದರಿಂದ ಗೀಗೀ ಪದಗಳ ಸಮ್ಮೇಳನ ನಡೆಯಲಿದೆ’ ಎಂದರು.

ಸಂಸ್ಥಾನದ ಆಡಳಿತ ಅಧಿಕಾರಿ ಡಾ. ಅಲ್ಲಮಪ್ರಭು ದೇಶಮುಖ, ಅಖಿಲ ಭಾರತ ವೀರಶೈವ ಮಹಾಸಭಾ ಜಿಲ್ಲಾಧ್ಯಕ್ಷ ಶರಣು ಮೋದಿ, ಶರಣಬಸವ ವಿಶ್ವವಿದ್ಯಾಲಯದ ಪತ್ರಿಕೋದ್ಯಮ ವಿಭಾಗದ ಡೀನ್ ಟಿ.ವಿ ಶಿವಾನಂದನ್‌, ನೀಲಾಂಬಿಕಾ ಪೊಲೀಸ್‌ ಪಾಟೀಲ ಉಪಸ್ಥಿತರಿದ್ದರು.

ಬಸವರಾಜ ದೇಶಮುಖ
ರಥೋತ್ಸವ ವೇಳೆಯಲ್ಲಿ ಎಲ್ಲ ಭಕ್ತರು ಶಾಂತಿ ಮತ್ತು ಶಿಸ್ತಿನಿಂದ ಪಾಲ್ಗೊಂಡು ಜಾತ್ರೆಯ ಯಶಸ್ಸಿಗೆ ಕೈಜೊಡಿಸಬೇಕು 
ದಾಕ್ಷಾಯಣಿ ಎಸ್. ಅಪ್ಪ  ಶರಣಬಸವೇಶ್ವರ ವಿದ್ಯಾವರ್ಧಕ ಸಂಘದ ಚೇರ್‌ಪರ್ಸನ್ 
ದೊಡ್ಡಪ್ಪ ಎಸ್‌.ಅಪ್ಪ
ಮಾ. 7 ಮತ್ತು 8ರಂದು ನಡೆಯುವ ಉಚ್ಚಾಯ ಹಾಗೂ ರಥೋತ್ಸವದಲ್ಲಿ ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳಬೇಕು
ದೊಡ್ಡಪ್ಪ ಅಪ್ಪ ಶರಣಬಸವೇಶ್ವರ ಸಂಸ್ಥಾನ 9ನೇ ಪಿಠಾಧಿಪತಿ
- ವಿವಿಧ ಪ್ರಶಸ್ತಿಗಳ ಪ್ರದಾನ
‘ರಥೋತ್ಸವ ಭಾಗವಾಗಿ ನೀಡುವ ‘ಅಪ್ಪ’ ಪ್ರಶಸ್ತಿಯನ್ನು ಮುಗಳನಾಗವಿಯ ಕಟ್ಟಿಮನಿ ಹಿರೇಮಠದ ಪಿಠಾಧಿಪತಿ ಅಭಿನವ ಸಿದ್ಧಲಿಂಗ ಶಿವಾಚಾರ್ಯರಿಗೆ ವಾರ್ಷಿಕವಾಗಿ ನೀಡುವ ‘ದಾಸೋಹ ಜ್ಞಾನ ರತ್ನ’ ಪ್ರಶಸ್ತಿಯನ್ನು ಅಖಿಲ ಭಾರತ ವೀರಶೈವ ಮಹಾಸಭಾದ ಅಧ್ಯಕ್ಷರೂ ಆಗಿರುವ ಅರಣ್ಯ ಮತ್ತು ಪರಿಸರ ಖಾತೆ ಸಚಿವ ಈಶ್ವರ ಖಂಡ್ರೆಗೆ ಅವರಿಗೆ ನೀಡಲಾಗುತ್ತಿದೆ. ಅಲ್ಲದೆ ಗೀತಾ ಖಂಡ್ರೆ ಅವರಿಗೆ ಈ ಬಾರಿ ‘ಅವ್ವ’ ಪ್ರಶಸ್ತಿಯನ್ನು ನೀಡಲು ನಿರ್ಧರಿಸಲಾಗಿದೆ’ ಎಂದು ಶರಣಬಸವೇಶ್ವರ ವಿದ್ಯಾವರ್ಧಕ ಸಂಘದ ಚೇರ್ ಪರ್ಸನ್ ದಾಕ್ಷಾಯಣಿ ಎಸ್. ಅಪ್ಪ ತಿಳಿಸಿದರು. ‘ಇದೇ ಸಂಧರ್ಭದಲ್ಲಿ 10 ವೈದ್ಯ ದಂಪತಿಗಳಿಗೆ ‘ವೈದ್ಯಶ್ರೀ’ ಪ್ರಶಸ್ತಿ ಪ್ರದಾನ ಮಾಡಲಾಗುವುದು ಮತ್ತು ‘ದಾಸೋಹ ಮತ್ತು ಮಾನವೀಯತೆ’ ಪುಸ್ತಕ ಬಿಡುಗಡೆ ಸಹ ನಡೆಯಲಿದೆ’ ಎಂದರು.
ದಾಸೋಹದ ಅಡುಗೆ ಮನೆಗೆ ಆಧುನಿಕ ಸ್ಪರ್ಶ
‘ಈ ಮೊದಲು ಸೌದೆ ಒಲೆಯಲ್ಲಿ ಭಕ್ತರಿಗೆ ಪ್ರಸಾದ ತಯಾರಿಸಲಾಗುತ್ತಿತ್ತು. ಆದರೆ ಇದಕ್ಕೆ ಆಧುನಿಕ ಸ್ಪರ್ಶ ನೀಡಿ ಒಲೆಯ ಜಾಗಕ್ಕೆ 13 ಸ್ಟೀಮ್‌ ಬಾಯ್ಲರ್ ಅಳವಡಿಸಲಾಗಿದೆ. ಇದರಿಂದ ಏಕ ಕಾಲದಲ್ಲಿ 10 ಸಾವಿರ ಜನಕ್ಕೆ ಅಡುಗೆಯನ್ನು ತಯಾರಿಸಬಹುದು’ ಎಂದು ಶರಣಬಸವ ವಿಶ್ವವಿದ್ಯಾಲಯದ ಉಪಕುಲಪತಿ ಅನಿಲಕುಮಾರ ಬಿಡವೆ ತಿಳಿಸಿದರು. ‘ಅಡುಗೆ ಮನೆಯನ್ನು ಸಂಪೂರ್ಣವಾಗಿ ನವಿಕರಿಸಲಾಗಿದ್ದು ಎಲ್ಲಿಯೂ ನೀರು ನಿಲ್ಲದಂತೆ ವ್ಯವಸ್ಥೆ ಮಾಡಲಾಗಿದೆ. ಗೊಡೆಗಳಿಗೆ ಟೈಲ್ಸ್‌ ಅಳವಡಿಸಲಾಗಿದೆ. ಸ್ಟೀಮ್‌ ಬಾಯ್ಲರ್‌ಗಳಿಗಾಗಿ 85 ಕಿಲೊ ವ್ಯಾಟ್‌ಗಳ ಸಾಮರ್ಥ್ಯದ ಎರಡು ಯಂತ್ರಗಳನ್ನು ಖರಿದಿಸಲಾಗಿದೆ. ಕೆಲವು ಭಕ್ತರು ಸಂಪ್ರದಾಯದಂತೆ ಒಲೆಗಳಲ್ಲಿ ಅಡುಗೆ ಮಾಡಿಕೊಳ್ಳಲು ಇಚ್ಚಿಸಿದರೆ ಅದಕ್ಕೂ ಸಹ ವ್ಯವಸ್ಥೆ ಮಾಡಲಾಗಿದೆ’ ಎಂದು ವಿವರಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.