ADVERTISEMENT

ಶಬ್ದ ಮಾಲಿನ್ಯಕ್ಕೆ ಕಾರಣವಾಗುವಷ್ಟು ಲೋಡ್‌ಸ್ಪೀಕರ್‌ ಬಳಸದಂತೆ ಸೂಚನೆ: ಎಸ್ಪಿ ಇಶಾ

ನಿವರ್ಧಕ: ಮಸೀದಿ, ಮಂದಿರಗಳಿಗೆ ನೋಟಿಸ್‌

​ಪ್ರಜಾವಾಣಿ ವಾರ್ತೆ
Published 7 ಏಪ್ರಿಲ್ 2022, 15:38 IST
Last Updated 7 ಏಪ್ರಿಲ್ 2022, 15:38 IST
ಇಶಾ ಪಂತ್
ಇಶಾ ಪಂತ್   

ಕಲಬುರಗಿ: ‘ಧ್ವನಿವರ್ಧಕ ಬಳಕೆಯಲ್ಲಿ ನ್ಯಾಯಾಲಯದ ಆದೇಶವನ್ನು ಯಾರೂ ಉಲ್ಲಂಘನೆ ಮಾಡಕೂಡದು. ಉಲ್ಲಂಘಿಸಿದರೆ ಕಾನೂನು ರೀತಿಯ ಕ್ರಮ ವಹಿಸಲಾಗುವುದು’ ಎಂದು ಜಿಲ್ಲೆಯ ಎಲ್ಲ ಮಸೀದಿ, ದರ್ಗಾ, ದೇವಸ್ಥಾನ, ಚರ್ಚ್‌, ಗುರುದ್ವಾರಗಳಿಗೆ ನೋಟಿಸ್‌ ನೀಡಲಾಗುತ್ತಿದೆ’ ಎಂದು ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಇಶಾ ಪಂತ್‌ ಹೇಳಿದರು.

‘ಶಬ್ದ ಮಾಲಿನ್ಯ ನಿಯಂತ್ರಣ ನಿಯಮ 2000ರ ತಿದ್ದುಪಡಿ 2010’ ಮತ್ತು ‘ಪರಿಸರ ಸಂರಕ್ಷಣೆ ಕಾಯ್ದೆ–1986’ರ ಅಡಿ ಅತಿಯಾದ ಶಬ್ದ ಮಾಡುವುದನ್ನು ನಿಷೇಧಿಸಲಾಗಿದೆ.ಇದನ್ನು ಶಬ್ದ ಮಾಲಿನ್ಯ ಎಂದು ಪರಿಗಣಿಸಲಾಗುತ್ತದೆ.ಕೈಗಾರಿಕಾ ಪ್ರದೇಶ,ವಾಣಿಜ್ಯ ಪ್ರದೇಶ,ಜನವಸತಿ ನೆಲೆ,ನಿಶ್ಯಬ್ದ ಪ್ರದೇಶಗಳಿಗೆ ಇದು ಅನ್ವಯಿಸುತ್ತದೆ. ಈ ಬಗ್ಗೆ ಹೈಕೋರ್ಟ್‌ ಆದೇಶವನ್ನು ಎಲ್ಲರೂ ಪಾಲಿಸಬೇಕು ಎಂದು ಸೂಚನೆ ನೀಡುವ ಸಂಬಂಧ ನೋಟಿಸ್‌ ನೀಡಲಾಗುತ್ತಿದೆ. ಯಾವ ಸಂದರ್ಭದಲ್ಲಿ ಎಷ್ಟು ಡೆಸಿಬಲ್ಸ್ (ಶಬ್ದದ ಪ್ರಮಾಣ) ಇರಬೇಕು ಎಂಬ ಬಗ್ಗೆಯೂ ನೋಟಿಸ್‌ನಲ್ಲಿ ನಮೂದಿಸಲಾಗಿದೆ. ಆಯಾ ಪೊಲೀಸ್‌ ಠಾಣೆ ವ್ಯಾಪ್ತಿಗೆ ಬರುವ ಮಸೀದಿ, ಚರ್ಚ್, ದೇವಸ್ಥಾನ, ಸಾರ್ವಜನಿಕ ಸ್ಥಳ ಬಳಕೆ ಮಾಡುವವರಿಗೂ ನೋಟಿಸ್‌ ಕಳುಹಿಸಲಾಗಿದೆ.

‘ನ್ಯಾಯಾಲಯದ ಆದೇಶವನ್ನು ಕಟ್ಟುನಿಟ್ಟಾಗಿ ಪಾಲಿಸಲಾಗುವುದು. ಯಾವುದೇ ಧರ್ಮ, ಜಾತಿ ಎನ್ನದೇ ಎಲ್ಲರೂ ಈ ಕಾಯ್ದೆಗೆ ಒಳಪಡುತ್ತಾರೆ. ಹಾಗಾಗಿ, ಎಲ್ಲ ಸ್ಥಳಗಳಿಗೂ ನೋಟಿಸ್‌ ನೀಡುವುದು ಮತ್ತು ಅಗತ್ಯವಿದ್ದಲ್ಲಿ ತಿಳಿವಳಿಕೆ ಮೂಡಿಸಲಾಗುವುದು’ ಎಂದು ಎಸ್ಪಿ ‘ಪ್ರಜಾವಾಣಿ’ಗೆ ತಿಳಿಸಿದರು.

ADVERTISEMENT

ರಾಮನವಮಿವರೆಗೆ ಕಾಯುತ್ತೇವೆ:‘ಮಸೀದಿಗಳ ಮೇಲಿನ ಧ್ವನಿವರ್ಧಕ ತೆರವುಗೊಳಿಸುವಂತೆ ಈಗಾಗಲೇ ಸಾಕಷ್ಟು ಹೋರಾಟ ಮಾಡಿದ್ದೇವೆ. ನ್ಯಾಯಾಲಯದ ಆದೇಶವಿದ್ದರೂ ಮಸೀದಿಯವರು ಉಲ್ಲಂಘನೆ ಮಾಡುತ್ತ ಬಂದಿದ್ದಾರೆ. ದಶಕ ಕಳೆದರೂ ತಿಳಿವಳಿಕೆ ನೀಡಬೇಕು, ಸೌಹಾರ್ದದಿಂದ ಹೇಳಬೇಕು ಎನ್ನುವುದು ಸರಿಯಲ್ಲ. ಹೀಗಾಗಿ, ಹೋರಾಟ ಆರಂಭಿಸಿದ್ದೇವೆ’ ಎಂದು ಹಿಂದೂ ಜಾಗೃತಿ ಸೇನೆ ಜಿಲ್ಲಾ ಘಟಕದ ಅಧ್ಯಕ್ಷ ಲಕ್ಷ್ಮಿಕಾಂತ ಸ್ವಾದಿ ಪ್ರತಿಕ್ರಿಯಿಸಿದ್ದಾರೆ.

‘ಏಪ್ರಿಲ್‌ 10ರಂದು ರಾಮನವಮಿ ನಡೆಯಲಿದೆ. ಅಲ್ಲಿಯವರೆಗೂ ನಾವು ಕಾಯುತ್ತೇವೆ. ಒಂದು ವೇಳೆ ಮಸೀದಿಗಳ ಮೇಲಿನ ಲೋಡ್‌ಸ್ಪೀಕರ್‌ ತೆಗೆಯದಿದ್ದರೆ ನಾವು ರಾಮಮಂದಿರ, ಹನುಮ ಮಂದಿರಗಳ ಮೇಲೆ ಧ್ವನಿವರ್ಧಕ ಹಾಕಿ, ಹನುಮಾನ್‌ ಚಾಲೀಸ ಆರಂಭಿಸುತ್ತೇವೆ’ ಎಂದರು.

ಸೌಹಾರ್ದಯುತ ನಿರ್ಧಾರವಾಗಲಿ; ಮಕ್ಸೂದ್‌ ಅಫ್ಜಲ್‌

‘ಇಂಥದ್ದೇ ಜಾತಿ, ಧರ್ಮಕ್ಕೆ ಕಾಯ್ದೆ ಅನ್ವಯಿಸುತ್ತದೆ ಎಂದು ಬಿಂಬಿಸುವುದು ಸರಿಯಲ್ಲ. 2010ರಲ್ಲೇ ಸುಪ್ರೀಂ ಕೋರ್ಟ್‌ನಿಂದ ಈ ಆದೇಶ ಬಂದಿದೆ. ಸರ್ಕಾರಗಳೇ ಅದರ ಬಗ್ಗೆ ಸರಿಯಾದ ಅರಿವು ಮೂಡಿಸಿ, ಕಾಯ್ದೆ ಪಾಲನೆ ಬಗ್ಗೆ ಮೊದಲಿನಿಂದಲೂ ಸೌಹಾರ್ದಯುತ ಹೆಜ್ಜೆ ಇಟ್ಟಿದ್ದರೆ ಇಂದು ಇಂಥ ಸಮಸ್ಯೆ ತಲೆ ಎತ್ತುತ್ತಿರಲಿಲ್ಲ. ಹಿಂದೆ ಸರ್ಕಾರಗಳೇ ಕಾಯ್ದೆಯನ್ನು ನಿರ್ಲಕ್ಷ್ಯ ಮಾಡುತ್ತ ಬಂದಿವೆ.ಈಗಲೂ ಕಾಲ ಮಿಂಚಿಲ್ಲ. ಮಸೀದಿಯವರನ್ನು ಸೌಹಾರ್ದದಿಂದ ಕರೆಯಿಸಿ ಶಬ್ದ ಮಾಲಿನ್ಯದ ಬಗ್ಗೆ ತಿಳಿಸುವುದು ಅಗತ್ಯ’ ಎಂದು ಎನ್ನುವುದು ಮುಸ್ಲಿಂ ಸಮಾಜದ ಮುಖಂಡ, ವಕೀಲಮಕ್ಸೂದ್‌ ಅಫ್ಜಲ್‌ ಜಾಗೀರದಾರ್‌ ಸಲಹೆ.

‘ಕೇವಲ ಮಸೀದಿಯವರೇ ಕಾಯ್ದೆ ಉಲ್ಲಂಘನೆ ಮಾಡುತ್ತಿದ್ದಾರೆ ಎಂದು ಹೇಳುವುದು ಸರಿಯಲ್ಲ. ಮಸೀದಿಗಳಲ್ಲಿ ಎರಡರಿಂದ ಮೂರು ನಿಮಿಷ ಧ್ವನಿವರ್ಧಕ ಬಳಸುತ್ತಾರೆ. ಆದರೆ, ಬಹಳಷ್ಟು ದೇವಸ್ಥಾನಗಳಲ್ಲಿ ಇಡೀ ದಿನ ಲೋಡ್‌ಸ್ಪೀಕರ್‌ ಬಳಸುತ್ತಾರೆ. ಕೆಲವು ಜಾತ್ರೆಗಳಲ್ಲಿ ತಿಂಗಳಾನುಗಟ್ಟಲೇ ಭಜನೆ, ಕೀರ್ತನೆ, ಮನರಂಜನೆಯಿಂದ ದೊಡ್ಡ ಶಬ್ದ ಉಂಟಾಗುತ್ತದೆ. ಆದರೆ, ಅದು ಧರ್ಮದ ಆಚರಣೆ ಎಂಬ ಗೌರವದಿಂದ ಯಾರೂ ತಕರಾರು ಮಾಡುವುದಿಲ್ಲ. ಮುಸ್ಲೀಮರೂ ಅದನ್ನು ವಿರೋಧಿಸಿದ ಉದಾಹರಣೆ ಇಲ್ಲ. ಕಾಯ್ದೆ ಪಾಲನೆಯ ಬಗ್ಗೆ ನೋಟಿಸ್‌ ನೀಡಿ ಎಚ್ಚರಿಸುವ ಬದಲು, ಕಾಯ್ದೆಯ ನಿಯಮಗಳೇನು? ಇನ್ನೊಬ್ಬರಿಗೆ ತೊಂದರೆ ಆಗದಂತೆ ಧ್ವನಿವರ್ಧಕ ಬಳಸುವುದು ಹೇಗೆ? ಎಷ್ಟು ಬಳಸಬೇಕು ಎಂಬ ಬಗ್ಗೆ ಅರಿವು ಮೂಡಿಸುವುದು ಅಗತ್ಯ’ ಎನ್ನುತ್ತಾರೆ ಅವರು.

ಯಾವ ಪ್ರದೇಶ, ಎಷ್ಟು ಶಬ್ದ ಇರಬೇಕು (ಪ್ರಮಾಣ: ಡೆಸಿಬಲ್ಸ್‌)

ಪ್ರದೇಶ;ಹಗಲು;ರಾತ್ರಿ

ಕೈಗಾರಿಕಾ ಪ್ರದೇಶ;75;70

ವಾಣಿಜ್ಯ ಪ್ರದೇಶ;65;55

ಜನವಸತಿ ನೆಲೆ;55;45

ನಿಶಬ್ದ ಪ್ರದೇಶ;50;40

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.