
ಕಲಬುರಗಿ: ‘ಸೌರಶಕ್ತಿ, ಜಲಶಕ್ತಿ ಹಾಗೂ ಜೈವಿಕ ಶಕ್ತಿಗಳೆಂಬ ನೈಸರ್ಗಿಕ ಸಂಪನ್ಮೂಲಗಳನ್ನು ಸರಿಯಾಗಿ ನಿರ್ವಹಿಸಿದರೆ ಎಕರೆಗೆ 100 ಟನ್‌ಗಳಷ್ಟು ಕಬ್ಬಿನ ಇಳುವರಿ ಪಡೆಯಬಹುದು’ ಎಂದು ಧಾರವಾಡ ಕೃಷಿ ವಿಶ್ವವಿದ್ಯಾಲಯದ ವಿಶ್ರಾಂತ ಕುಲಪತಿ ವಿಠ್ಠಲ ಐ.ಬೆಣಗಿ ಪ್ರತಿಪಾದಿಸಿದರು.
ನಗರದ ಸೇಡಂ ರಸ್ತೆಯ ಎಂಆರ್‌ಎಂಸಿ ಸ್ಯಾಕ್ ಸಭಾಂಗಣದಲ್ಲಿ ಹೈದರಾಬಾದ್ ಕರ್ನಾಟಕ ಶಿಕ್ಷಣ ಸಂಸ್ಥೆ ಹಾಗೂ ಪ್ರಫುಲ್ಲತಾ ಫೌಂಡೇಷನ್ ಸಹಯೋಗದಲ್ಲಿ ಸೋಮವಾರ ಆಯೋಜಿಸಿದ್ದ ಕಬ್ಬು ಬೆಳೆಗಾರರ ವಿಚಾರ ಸಂಕಿರಣದಲ್ಲಿ ಅವರು ಮಾತನಾಡಿದರು.
‘ಕಬ್ಬು ಸಮೃದ್ಧವಾಗಿ ಬೆಳೆಯಲು ಉತ್ತಮ ಸೌರಶಕ್ತಿ ಬೇಕು. ಬೇಕಾದಷ್ಟೇ ನೀರು ಉಣಿಸಬೇಕು (ಹಾಯಿಸಬಾರದು). ಜೊತೆಗೆ ಮಣ್ಣು ಕೂಡ ಸತ್ವಯುತವಾಗಿರಬೇಕು. ಇವುಗಳೊಂದಿಗೆ ವೈಜ್ಞಾನಿಕ ಪದ್ಧತಿಯಲ್ಲಿ ಕಬ್ಬು ಬೆಳೆದರೆ ಉತ್ತಮ ಇಳುವರಿ ಪಡೆದು ರೈತರು ಲಾಭ ಕಾಣಬಹುದು’ ಎಂದರು.
‘ಪ್ರತಿ ಎಕರೆಗೆ ಮೂರು ಟನ್ ಕಬ್ಬಿನ ಬೀಜ ನಾಟಿ ಮಾಡಿದರೆ, ಅವುಗಳು ಮರಿ ಒಡೆದು 2 ಲಕ್ಷದಷ್ಟು ಸಸಿಗಳಾಗುತ್ತವೆ. ಅದರಲ್ಲಿ ಬರೀ 50 ಸಾವಿರ ಸಸಿಗಳಷ್ಟೇ ಕಬ್ಬುಗಳಾಗಿ ಬೆಳೆದು ಕಾರ್ಖಾನೆಗೆ ಹೋಗುತ್ತವೆ. ಪ್ರತಿ ಕಬ್ಬು 1 ಕೆ.ಜಿ ತೂಗಿದರೆ ಒಟ್ಟು 50 ಟನ್ ಇಳುವರಿ ಸಿಗುತ್ತದೆ. ಇನ್ನುಳಿದ 1.50 ಲಕ್ಷ ಸಸಿಗಳು ಬರೀ ರೈತರು ಬಿಡುವ ನೀರು, ಹಾಕುವ ಗೊಬ್ಬರ ಉಂಡು ವ್ಯರ್ಥ ಮಾಡಿಬಿಡುತ್ತವೆ’ ಎಂದು ವಿಶ್ಲೇಷಿಸಿದರು.
‘ಒಂದು ಕಬ್ಬು ಸಮೃದ್ಧವಾಗಿ ಬೆಳೆಯಲು ಒಂದು ಚದರಡಿ ಜಾಗ ಬೇಕು. ಈ ಪದ್ಧತಿಯಲ್ಲಿ ಬೆಳೆಯಲು ಸಾಲಿನಿಂದ ಸಾಲಿಗೆ 5ರಿಂದ 6 ಅಡಿ ಅಂತರ ಕಾಯ್ದುಕೊಳ್ಳಬೇಕು. ಸಸಿಯಿಂದ ಸಸಿಗೆ ಎರಡು ಅಡಿ ಅಂತರ ಇರಬೇಕು. ಆಗ ಪ್ರತಿ ಸಸಿಗಳ ಏಳೆಂಟು ಮರಿಗಳು ಒಡೆದು ಪ್ರತಿಯೊಂದು ಒಂದೂವರೆ ಕೆ.ಜಿ ತೂಗಿದರೆ, ಎಕರೆಗೆ ಕನಿಷ್ಠ 80 ಟನ್ ಇಳುವರಿ ಸಿಗುತ್ತದೆ’ ಎಂದರು.
‘ಕಬ್ಬಿನ ಬೆಳೆಯಲ್ಲಿ ಉತ್ತಮ ಇಳುವರಿ ಪಡೆಯಲು ಮಣ್ಣಿನ ಜೈವಿಕ ಶಕ್ತಿ ಹೆಚ್ಚಿಸಬೇಕು. ಅದಕ್ಕಾಗಿ ಸೆಗಣಿ ಗೊಬ್ಬರ ಹಾಕಬೇಕು. ಆದರೆ, ದನಗಳ ಸಂಖ್ಯೆ ಕ್ಷೀಣಿಸಿದ್ದರಿಂದ ಸೆಗಣಿ, ಮೂತ್ರವೂ ಸಿಗುತ್ತಿಲ್ಲ. ಜೊತೆಗೆ ಈಗಿನ ಸೆಗಣಿ ಗೊಬ್ಬರದಲ್ಲಿ ಶೇ 25ರಷ್ಟು ಪ್ಲಾಸ್ಟಿಕ್ ಇರುತ್ತದೆ. ಹೀಗಾಗಿ ಮಣ್ಣಿನಲ್ಲಿರುವ ಸಾವಯವ ಇಂಗಾಲ ಹೆಚ್ಚಿಸಲು ಹಸಿರೆಲೆ ಗೊಬ್ಬರ ಕೊಡಬೇಕು. ಪ್ರತಿ ಎಕರೆಗೆ 25 ಕೆ.ಜಿಗಳಷ್ಟು ಸೆಣಬು, ಡಯಾಂಚಿ, ಅಲಸಂದಿ ಹಾಕಬೇಕು. ಇವು ಸಿಗದಿದ್ದರೆ ಹೆಸರು, ಉದ್ದು, ತೊಗರಿಯಂಥ ನವಧಾನ್ಯಗಳನ್ನು ಬೆಳೆದು ಒಂದೂವರೆ ತಿಂಗಳಲ್ಲಿ ಅದನ್ನು ಮಣ್ಣಿಗೆ ಸೇರಿಸಬೇಕು. ಹೀಗೆ ಮಾಡಿದರೆ, ಒಂದು ಎಕರೆಗೆ 6 ಟನ್ ತಿಪ್ಪಿಗೊಬ್ಬರ ಹಾಕಿದ್ದಕ್ಕೆ ಸಮವಾಗುತ್ತದೆ’ ಎಂದರು.
‘ಕಬ್ಬು ನಾಟಿಗೂ ಮುನ್ನವೇ ಕಡ್ಡಾಯವಾಗಿ ಕಬ್ಬಿನ ಬೀಜೋಪಚಾರ ಮಾಡಬೇಕು. 200 ಲೀಟರ್ ನೀರಿಗೆ 400 ಗ್ರಾಂ ಕಾರ್ಬನ್ ಡೈಜಿಮ್, 400 ಎಂಎಲ್ ಕ್ಲೋರೊಪೈರಿಫಾಸ್, 200 ಗ್ರಾಂ ಯೂರಿಯಾ ಹಾಕಿ ಅದರಲ್ಲಿ ಕನಿಷ್ಠ 10ರಿಂದ 15 ನಿಮಿಷ ಬೀಜೋಪಚಾರ ನಡೆಸಬೇಕು’ ಎಂದು ರೈತರಿಗೆ ಕಿವಿಮಾತು ಹೇಳಿದರು.
ಕೃಷಿ ವಿಜ್ಞಾನಿ ಸಂಜಯ ಪಾಟೀಲ ಕಬ್ಬಿನ ತಳಿಗಳು, ಅವುಗಳ ನಾಟಿ ವಿಧಾನ, ಆರೈಕೆ ವಿಧಾನಗಳ ಕುರಿತು ಬೆಳಕು ಚೆಲ್ಲಿದರು.
ಕಾರ್ಯಕ್ರಮ ಉದ್ಘಾಟಿಸಿದ ಎಚ್‌ಕೆಇ ಸಂಸ್ಥೆಯ ಕಾರ್ಯದರ್ಶಿ ಉದಯಕುಮಾರ ಚಿಂಚೋಳಿ ಮಾತನಾಡಿದರು. ಪ್ರಫುಲ್ಲತಾ ಫೌಂಡೇಷನ್ ಸಂಸ್ಥಾಪಕ ಪ್ರಕಾಶ ಎಚ್.ಕುಲಕರ್ಣಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಜಿಲ್ಲಾ ಕೃಷಿ ಸಮಾಜದ ಅಧ್ಯಕ್ಷ ಸಿದ್ರಾಮಪ್ಪ ಪಾಟೀಲ ದಂಗಾಪುರ, ರೈತ ಮುಖಂಡ ಜಗದೀಶ ಪಾಟೀಲ, ಕೃಷಿ ವಿಜ್ಞಾನಿ ರಾಜು ತೆಗ್ಗಳ್ಳಿ ವೇದಿಕೆಯಲ್ಲಿದ್ದರು.
ನಾವೆಲ್ಲ ಕಬ್ಬನ್ನು ವೈಜ್ಞಾನಿಕವಾಗಿ ಬೆಳೆಯುತ್ತಿಲ್ಲ. ಪ್ರತಿ ಎಕರೆಗೆ 30ರಿಂದ 40 ಟನ್‌ಗಳಷ್ಟು ಬೆಳೆದು ಅಷ್ಟಕ್ಕೇ ತೃಪ್ತರಾಗುತ್ತಿದ್ದೇವೆ. ವೈಜ್ಞಾನಿಕವಾಗಿ ಬೆಳೆದು ಹೆಚ್ಚಿನ ಆದಾಯ ಗಳಿಸಬೇಕುಪ್ರಕಾಶ ಎಚ್.ಕುಲಕರ್ಣಿ, ಪ್ರಫುಲ್ಲತಾ ಫೌಂಡೇಷನ್ ಸಂಸ್ಥಾಪಕ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.