ADVERTISEMENT

ಟಿಕೆಟ್‌ ಕೊಡಿಸಲು ಶ್ರಮಿಸಿದವರೇ ಸೋಲಿಸಿದರು: ರೇವುನಾಯಕ ಬೆಳಮಗಿ

​ಪ್ರಜಾವಾಣಿ ವಾರ್ತೆ
Published 24 ಮೇ 2023, 4:56 IST
Last Updated 24 ಮೇ 2023, 4:56 IST
ಕಮಲಾಪುರ ಹುಚ್ಚೇಶ್ವರ ದೇವಾಲಯದಲ್ಲಿ ಮಂಗಳವಾರ ಆಯೋಜಿಸಿದ್ದ ಆತ್ಮಾವಲೋಕನ ಸಭೆಯಲ್ಲಿ ರೇವುನಾಯಕ ಬೆಳಮಗಿ ಮಾತನಾಡಿದರು
ಕಮಲಾಪುರ ಹುಚ್ಚೇಶ್ವರ ದೇವಾಲಯದಲ್ಲಿ ಮಂಗಳವಾರ ಆಯೋಜಿಸಿದ್ದ ಆತ್ಮಾವಲೋಕನ ಸಭೆಯಲ್ಲಿ ರೇವುನಾಯಕ ಬೆಳಮಗಿ ಮಾತನಾಡಿದರು   

ಕಮಲಾಪುರ: ‘ಸುಮ್ಮನೆ ಮನೆಯಲ್ಲಿದ್ದ ನನಗೆ ಟಿಕೆಟ್ ಕೊಡಿಸಲು ಶ್ರಮಿಸಿದ ಮುಖಂಡರೇ ನನ್ನ ಸೋಲಿಸಿದರು’ ಎಂದು ಕಾಂಗ್ರೆಸ್‌ ಪಕ್ಷದ ಪರಾಜಿತ ಅಭ್ಯರ್ಥಿ ರೇವುನಾಯಕ ಬೆಳಮಗಿ ಆಕ್ರೋಶ ವ್ಯಕ್ತಪಡಿಸಿದರು.

ಪಟ್ಟಣದ ಹುಚ್ಚೇಶ್ವರ ದೇವಾಲಯದಲ್ಲಿ ಮಂಗಳವಾರ ಆಯೋಜಿಸಿದ್ದ ಕಲಬುರಗಿ ಗ್ರಾಮೀಣ ಮತಕ್ಷೇತ್ರದ ಕಾಂಗ್ರೆಸ್ಸ್ ಅಭ್ಯರ್ಥಿಯ ಸೋಲಿನ ಆತ್ಮಾವಲೋಕನ ಹಾಗೂ ಕಾರ್ಯಕರ್ತರಿಗೆ ಕೃತಜ್ಞತೆ ಸಲ್ಲಿಸುವ ಸಭೆಯಲ್ಲಿ ಅವರು ಮಾತನಾಡಿದರು.

ಕಾಂಗ್ರೆಸ್‌ ಟಿಕೆಟ್‌ ಕೊಡಿಸಲು ನಾಲ್ಕೈದು ಬಾರಿ ನನ್ನನ್ನು ದೆಹಲಿಗೆ ಕರೆದುಕೊಂಡು ಹೋದರು. ಟಿಕೆಟ್‌ ಕೊಡಿಸಿ ಕೊನೆ ಗಳಿಗೆಯಲ್ಲಿ ಷಡ್ಯಂತ್ರ ಮಾಡಿ ಸೋಲಿಸಿದರು. ಅವರ ಹೆಸರು ಹೇಳಲು ನಾನು ಇಚ್ಛಿಸುವುದಿಲ್ಲ ಎಂದು ಹರಿಹಾಯ್ದ ಅವರು ಕಾರ್ಯಕರ್ತರ ಜತೆ ನಾನಿದ್ದೇನೆ. ಮುಂದಿನ ಚುನಾವಣೆಗಳಲ್ಲಿ ಎಚ್ಚರಿಕೆಯಿಂದ ಹೆಜ್ಜೆ ಇಡಬೇಕು ಪಕ್ಷ ಸಂಘಟಿಸಿ ಗೆಲುವು ಸಾಧಿಸಬೇಕು ಎಂದರು.

ADVERTISEMENT

ರೇವುನಾಯಕ ಭಾಷಣ ಮಧ್ಯದಲ್ಲೆ ಕೆಲ ಕಾರ್ಯಕರ್ತರು ಪಕ್ಷ ವಿರೋಧಿ ಚಟುವಟಿಕೆಯಲ್ಲಿ ತೊಡಗಿರುವ, ಬಿಜೆಪಿಯವರಿಂದ ಹಣ ಪಡೆದ ಕಾಂಗ್ರೆಸ್ ಮುಖಂಡರು ಯಾರೆಂಬುದು ನಿಮಗೆ ಗೊತ್ತಿದೆ. ಅವರನ್ನು ಕೂಡಲೇ ಪಕ್ಷದಿಂದ ಉಚ್ಚಾಟಿಸಬೇಕು. ಪಕ್ಷ ವಿರೋಧಿ ಚಟುವಟಿಕೆಯಿಂದಲೇ ಕಾಂಗ್ರೆಸ್‌ ಪ್ರತಿಬಾರಿ ಸೋಲನುಭವಿಸುತ್ತಿದೆ. ಇದರಲ್ಲಿ ಕಾರ್ಯಕರ್ತರು ಬಡವಾಗುತ್ತಿದ್ದಾರೆ ಎಂದು ಆಕ್ರೋಶ ಹೊರಹಾಕಿದರು.

ಮುಖಂಡ ರವಿ ಬಿರಾದಾರ ಮಾತನಾಡಿ, ಪಕ್ಷವಿರೋಧಿ ಚಟುವಟಿಕೆಯಲ್ಲಿ ತೊಡಗಿರುವ ಮುಖಂಡರನ್ನು ಪಕ್ಷದಿಂದ ಉಚ್ಚಾಟಿಸಲು ರೇವು ನಾಯಕ ಬೆಳಮಗಿ ಹಾಗೂ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ವೈಜನಾಥ ತಡಕಲ್ ಸೂಕ್ತ ಕ್ರಮ ಕೈಗೊಳ್ಳಬೇಕು. ಈ ಹಿಂದೆಯೂ ಅವರು ಪಕ್ಷ ವಿರೋಧಿ ಚಟುವಟಿಕೆಯಲ್ಲಿ ತೊಡಗಿದ್ದರು ನೀವು ನಿರ್ಲಕ್ಷಿಸಿದ ಪರಿಣಾಮ ಇಂದು ರೇವು ನಾಯಕರ ಸೋಲಾಗಿದೆ. ಈ ತಪ್ಪು ಮರುಕಳಿಸದಂತೆ ನೋಡಿಕೊಳ್ಳಬೇಕು ಎಂದರು.

ಬ್ಲಾಕ್ ಕಾಂಗ್ರೆಸ್ಸ ಅಧ್ಯಕ್ಷ ವೈಜನಾಥ ತಡಕಲ ಮಾತನಾಡಿ ಪಕ್ಷ ವಿರೋಧಿ ಚಟುವಟಿಕೆಯಲ್ಲಿ ತೊಡಗಿದವರ ವಿರುದ್ಧ ಜಿಲ್ಲಾಧ್ಯಕ್ಷರಿಗೆ ವರದಿ ಸಲ್ಲಿಸಲಾಗುವುದು. ಬಹುತೇಕ ಮುಖಂಡರು ಬಿಜೆಪಿ ಪರ ಕೆಲಸ ಮಾಡಿದ ಆಧಾರ ಇದ್ದರೆ ಅವುಗಳನ್ನು ಲಗತ್ತಿಸಿ ನನಗೆ ಮಾಹಿತಿ ಒದಗಿಸಬೇಕು ಎಂದರು.

ಸುಭಾಷ ಮುರಡ, ಶರಣಗೌಡ ಪಾಟೀಲ, ಗುರುರಾಜ ಮಾಟೂರ, ಬಸವರಾಜ ಮಠಪತಿ, ಅಬ್ದುಲ್ ಸತ್ತಾರ, ಸಂತೋಷ ರಾಂಪೂರ, ಅಮರ ಚಿಕ್ಕೆಗೌಡ, ವೀರು ಸ್ವಾಮಿ, ಗುರುರಾಜ ಬಮ್ಮಣ, ದಿಗಂಬರ ಬೆಳಮಗಿ, ನಿರ್ಮಲಾ ಬರಗಾಲಿ, ಇಬ್ರಾಹಿಂ ಸಾಬ್ ಅತ್ತಾರ, ಶರಣಬಸಪ್ಪ ಹಾಗರಗಿ, ಮಜರಲಿ ದರ್ಜಿ, ಶಶಿಧರ ಮಾಕಾ, ಗುಂಡಪ್ಪ ಹೊಳಕುಂದಿ, ಪ್ರದೀಪ ಭಾಲ್ಕಿ, ಸುಭಾಷ ಕೋರೆ, ಸಂಜು ಶೆಟ್ಟಿ, ನಾಗರಾಜ ಕಲ್ಯಾಣ, ಮಲ್ಲು ಹಳ್ಳಾ, ಹಣಮಂತ ಹರಸೂರ, ಅಶೋಕ ಗೌರೆ, ಕಲ್ಲಪ್ಪ ಪೂಜಾರಿ ಮತ್ತಿತರರು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.