ADVERTISEMENT

ಕಲಬುರಗಿ: ಮುಂದುವರಿದ ತರಕಾರಿ ಬೆಲೆ ಅನಿಶ್ಚಿತತೆ: ಟೊಮೆಟೊ, ಈರುಳ್ಳಿ ದರ ಇಳಿಕೆ

ದೀಪಾವಳಿಗೆ ಮತ್ತೆ ‘ಶಾಕ್’ ನಿಶ್ಚಿತ!

​ಪ್ರಜಾವಾಣಿ ವಾರ್ತೆ
Published 23 ಅಕ್ಟೋಬರ್ 2021, 3:28 IST
Last Updated 23 ಅಕ್ಟೋಬರ್ 2021, 3:28 IST
ಕಲಬುರಗಿ ಸೂಪರ್ ಮಾರುಕಟ್ಟೆಯಲ್ಲಿ ಖರೀದಿಯಲ್ಲಿ ನಿರತರಾಗಿರುವ ಜನ
ಕಲಬುರಗಿ ಸೂಪರ್ ಮಾರುಕಟ್ಟೆಯಲ್ಲಿ ಖರೀದಿಯಲ್ಲಿ ನಿರತರಾಗಿರುವ ಜನ   

ಕಲಬುರಗಿ: ನವರಾತ್ರಿ ಸಮಯದಲ್ಲಿ ಏರಿಕೆಯಾಗಿದ್ದ ಟೊಮೊಟೊ ದರ ಈ ವಾರ ಇಳಿಕೆಯಾಗಿದೆ. ಈರುಳ್ಳಿ ದರವೂ ತುಸು ಕಡಿಮೆಯಾಗಿದ್ದರೆ, ಎಲೆಕೋಸು, ಚೌಳೆಕಾಯಿ ಮತ್ತು ಬದನೆಕಾಯಿ ಬೆಲೆ ಸ್ಥಿರವಾಗಿದೆ.

ಕಳೆದ ವಾರ ಪ್ರತಿ ಕೆ.ಜಿಗೆ ₹50ರಂತೆ ಮಾರಾಟವಾಗಿದ್ದ ಟೊಮೊಟೊ ಈ ವಾರ ₹10 ಕಡಿಮೆಯಾಗಿ, ₹40ರಂತೆ ಮಾರಾಟವಾಗುತ್ತಿದೆ. ಈರುಳ್ಳಿ ಬೆಲೆ ಸಹ ₹10 ಇಳಿಕೆಯಾಗಿದ್ದು, ಕೆ.ಜಿಗೆ ₹30ರಂತೆ ಮಾರಲಾಗುತ್ತಿದೆ.

ಕಳೆದ ವಾರ ಪ್ರತಿ ಕೆ.ಜಿಗೆ ₹60ರಂತೆ ಮಾರಾಟವಾಗಿದ್ದ ಎಲೆಕೋಸು, ಬದನೆಕಾಯಿ ಬೆಲೆಯಲ್ಲಿ ಬದಲಾವಣೆಯಾಗಿಲ್ಲ. ಕಳೆದ ವಾರ ₹40ರಂತೆ ಮಾರಾಟವಾಗಿದ್ದ ಚೌಳೆಕಾಯಿಯನ್ನು ಅದೇ ಬೆಲೆಗೆ ಖರೀದಿಸಲಾಗುತ್ತಿದ್ದರೆ, ₹10 ಇಳಿಕೆಯಾದ ಹೀರೆಕಾಯಿ ಈ ವಾರ ₹50 ರಂತೆ ಮಾರಾಟವಾಗುತ್ತಿದೆ.

ADVERTISEMENT

ಕಳೆದ ವಾರಕ್ಕಿಂತ ಈ ವಾರ ಪ್ರತಿ ಕೆ.ಜಿಗೆ ₹60ರಂತೆ ಮಾರಾಟವಾಗಿದ್ದ ಬೀನ್ಸ್‌, ಡಬ್ಬು ಮೆಣಸಿನಕಾಯಿಗಳನ್ನು ಈ ವಾರ ₹50 ನಂತೆ ಖರೀದಿಸಲಾಗುತ್ತಿದೆ. ಆಲೂಗಡ್ಡೆ ಬೆಲೆ ಕಳೆದ ವಾರಕ್ಕಿಂತ ₹5 ಹೆಚ್ಚಾಗಿದ್ದು ಈ ವಾರ ₹35 ಇದೆ.

ಸೊಪ್ಪಿನ ಬೆಲೆ ಸ್ಥಿರ: ಕೊತ್ತಂಬರಿ, ಕರಿಬೇವು, ಪುಂಡಿಪಲ್ಲೆ, ಪುದಿನಾ, ಸಬ್ಬಸಗಿ ಸೇರಿ ಬಹುತೇಕ ಸೊ‌ಪ್ಪಿನ ಬೆಲೆಯೂ ಕಳೆದ ವಾರದಷ್ಟೇ ಇದೆ. ಕೊತ್ತಂಬರಿ ₹10ಕ್ಕೆ 3 ಕಟ್ಟು, ಪುದಿನಾ ಹಾಗೂ ಸಬ್ಬಸಗಿ ಸೊಪ್ಪು ₹10ಕ್ಕೆ 1 ಕಟ್ಟು, ಪುಂಡಿಪಲ್ಲೆ, ಮೂಲಂಗಿ ₹10ಕ್ಕೆ 3 ಕಟ್ಟಿನಂತೆ ಮಾರಾಟವಾಗುತ್ತಿವೆ. ಈರುಳ್ಳಿ ಸೊಪ್ಪು ಒಂದು ಕಟ್ಟಿಗೆ ₹10 ಇದೆ.

ಬಾಳೆಹಣ್ಣಿನ ದರ ಡಜನ್‌ಗೆ ₹40–₹50 ಇದೆ. ಒಂದು ಕೆ.ಜಿ ಸೇಬು ₹80–₹100 ಇದೆ. ದ್ರಾಕ್ಷಿ ಕೆ.ಜಿ ₹60 ರಿಂದ ₹80 ರವರೆಗೂ ಮಾರಲಾಗುತ್ತಿದೆ. ಮೂಸಂಬಿ ಕೆ.ಜಿ ₹50 ಕ್ಕೆ ಮಾರಲಾಗುತ್ತಿದೆ. ದಾಳಿಂಬೆ ಕೆ.ಜಿಗೆ ₹100 ತೆಗೆದುಕೊಳ್ಳಲಾಗುತ್ತಿದೆ. ಪಪ್ಪಾಯವನ್ನು ಗಾತ್ರದ ಆಧಾರದ ಮೇಲೆ ₹40 ರಿಂದ ₹60 ರವರೆಗೂ ಮಾರಲಾಗುತ್ತಿದೆ.

ಶ್ರಾವಣದಲ್ಲಿ ಕೊಂಚ ನಿಟ್ಟುಸಿರು ಬಿಡುವಂತಿದ್ದ ಬೆಲೆ ನವರಾತ್ರಿಗೆ ಉಸಿರುಗಟ್ಟಿಸಿದ್ದವು. ಮುಂದಿನ ತಿಂಗಳ ಆರಂಭದಲ್ಲೇ ದೀಪಾವಳಿ ಹಬ್ಬವಿದೆ. ಈ ಅವಧಿಯಲ್ಲಿ ಶ್ರಾವಣ, ನವರಾತ್ರಿಗಿಂತಲೂ ಬೆಲೆಗಳು ಹೆಚ್ಚಾಗುವ ಸಾಧ್ಯತೆ ಇದೆ. ತರಕಾರಿ, ಪೂಜಾ ಸಾಮಗ್ರಿ ಸೇರಿದಂತೆ ಎಲ್ಲ ವಸ್ತುಗಳ ಸಾಗಣೆಗೂ ವಾಹನ ಬೇಕು. ವಾಹನಗಳಿಗೆ ಹಾಕುವ ಪೆಟ್ರೋಲ್, ಡೀಸೆಲ್‌ ಬೆಲೆ ದಿನೇ ದಿನೇ ಹೆಚ್ಚಾಗುತ್ತಿರುವುದರಿಂದ ಸಾಗಾಟದ ವೆಚ್ಚಾಗುತ್ತದೆ. ಅನಿವಾರ್ಯವಾಗಿ ಹೆಚ್ಚಿನ ಬೆಲೆಗೆ ವಸ್ತುಗಳನ್ನು ಮಾರಾಟ ಮಾಡಬೇಕಾಗುತ್ತದೆ’ ಎನ್ನುತ್ತಾರೆ ವ್ಯಾಪಾರಸ್ಥ ಅಶ್ಫಕ್. ‘ಇಂಧನ ಬೆಲೆ ಏರಿಕೆ ಗತಿಯನ್ನು ಗಮನಿಸಿದರೆ ಮುಂದಿನ 15 ದಿನಗಳ ಒಳಗೆ ಅಂದರೆ ದೀಪಾವಳಿ ಹಬ್ಬದ ಒಳಗೆ ಬೆಲೆಗಳು ಹೆಚ್ಚಾದರೂ ಆಶ್ಚರ್ಯವಿಲ್ಲ’ ಎಂದು ಅವರು ಹೇಳುತ್ತಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.