ಎಫ್‌ಐಆರ್
ಕಲಬುರಗಿ: ವರದಕ್ಷಿಣೆ ತರುವಂತೆ ಗಂಡನ ಮನೆಯವರು ಕಿರುಕುಳ ನೀಡುತ್ತಿದ್ದಾರೆ ಎಂದು ಆರೋಪಿಸಿ ಮಹಿಳೆಯೊಬ್ಬರು ಪೊಲೀಸರಿಗೆ ದೂರು ನೀಡಿದ್ದಾರೆ.
‘2021ರಲ್ಲಿ ಮದುವೆ ಸಮಯದಲ್ಲಿ ₹ 4 ಲಕ್ಷ ವರದಕ್ಷಿಣೆ ನೀಡಲಾಗಿತ್ತು. ಮದುವೆಯಾದ ವರ್ಷದ ಬಳಿಕ ₹ 5 ಲಕ್ಷ ವರದಕ್ಷಿಣೆ ತರುವಂತೆ ಕಿರುಕುಳ ನೀಡಿದ್ದಾರೆ. ನಂತರ ಕಾರು ತೆಗೆದುಕೊಳ್ಳಲು ₹ 4 ಲಕ್ಷಕ್ಕೆ ಬೇಡಿಕೆ ಇಟ್ಟಿದ್ದರು. ಕಾರು ತೆಗೆದುಕೊಳ್ಳಲು ನಾನು ₹ 2.50 ಲಕ್ಷ ನೀಡಿದ್ದೆ. ಬಳಿಕ ತಂಗಿ ಮದುವೆಗಾಗಿ ₹ 5 ಲಕ್ಷ ವರದಕ್ಷಿಣೆ ತರುವಂತೆ ಕಾಟಕೊಟ್ಟಿದ್ದಾರೆ’ ಎಂದು ಕಲಬುರಗಿಯ ಜೆ.ಆರ್.ನಗರ ನಿವಾಸಿ ಶ್ವೇತಾರಾಣಿ ಪೊಲೀಸರಿಗೆ ನೀಡಿದ ದೂರಿನಲ್ಲಿ ತಿಳಿಸಿದ್ದಾರೆ.
ಈ ದೂರಿನ್ವಯ ಕೊಡಗು ಜಿಲ್ಲೆಯ ಸೋಮವಾರಪೇಟೆ ನಿವಾಸಿ, ಪತಿ ಅಶ್ವಲ, ಮಾವ ಟಿ.ಕೆ.ಮಾಚಯ್ಯ, ಅತ್ತೆ ಇಂದು ಹಾಗೂ ನಾದಿನಿ ಅಖಿಲಾ ವಿರುದ್ಧ ಐಪಿಸಿಯ ಕಲಂ 498ಎ, 323, 504, 506, 109, 34 ಹಾಗೂ ವರದಕ್ಷಿಣೆ ನಿಷೇಧ ಕಾಯ್ದೆಯ ಕಲಂ 3 ಹಾಗೂ 4ರಡಿ ಕಲಬುರಗಿ ಮಹಿಳಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ತರಕಾರಿ ಖರೀದಿ ವೇಳೆ ಬೈಕ್ ಕಳವು
ನಗರದ ತಾಜ ಸುಲ್ತಾನಪುರ ಕ್ರಾಸ್ ಹತ್ತಿರದ ಎಪಿಎಂಸಿ ಯಾರ್ಡ್‌ಗೆ ತರಕಾರಿ ಖರೀದಿಸಲು ಹೋದ ವ್ಯಕ್ತಿಯೊಬ್ಬರ ಬೈಕ್ ಕಳುವಾಗಿದೆ.
ಭವನಿ ನಗರ ನಿವಾಸಿ ನಾಗೇಶ ಅಂಬಲಗಿ ಬೈಕ್ ಕಳೆದುಕೊಂಡವರು. ‘ನಮ್ಮ ತಾಯಿಯೊಂದಿಗೆ ತರಕಾರಿ ತರಲು ಬೆಳಿಗ್ಗೆ 6.30ರ ಹೊತ್ತಿಗೆ ಎಪಿಎಂಸಿ ಯಾರ್ಡ್‌ಗೆ ಹೋಗಿದ್ದೆ. ಯಾರ್ಡ್ ಒಳಗಿರುವ ಟೀ ಪಾಯಿಂಟ್ ಮುಂದೆ ಬೈಕ್ ನಿಲ್ಲಿಸಿ ನಾವಿಬ್ಬರೂ ಕೂಡಿ ತರಕಾರಿ ತೆಗೆದುಕೊಂಡು ಅರ್ಧ ಗಂಟೆಯಲ್ಲಿ ಮರಳಿ ಬಂದೆವು. ಅಷ್ಟರಲ್ಲಿ ನನ್ನ ಬೈಕ್ ಕಳುವಾಗಿತ್ತು’ ಎಂದು ದೂರಿನಲ್ಲಿ ನಾಗೇಶ ತಿಳಿಸಿದ್ದಾರೆ.
ಈ ಸಂಬಂಧ ಸಬರ್ಬನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇಸ್ಪೀಟ್ ಜೂಜಾಟ: ಪ್ರಕರಣ ದಾಖಲು
ನಗರದ ಆಳಂದ ಚೆಕ್‌ಪೋಸ್ಟ್ ಹತ್ತಿರವಿರುವ ರೇಲ್ವೆ ಬ್ರಿಡ್ಜ್ ಸಮೀಪ ಹೊಲದಲ್ಲಿ ಇಸ್ಪೀಟ್ ಜೂಜಾಟ ಆಡುತ್ತಿದ್ದ ಆರೋಪದಡಿ ಐವರ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.
ಆರೋಪಿಗಳಿಂದ ಒಟ್ಟು ₹ 7,100 ವಶಕ್ಕೆ ಪಡೆಯಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಈ ಸಂಬಂಧ ಸಬರ್ಬನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಮಟ್ಕಾ ಜೂಜಾಟ
ನಗರದ ಶಹಾಬಾದ್ ಕ್ರಾಸ್ ಹತ್ತಿರ ಇರುವ ಎಚ್‌ಪಿ ಪೆಟ್ರೋಲ್ ಬಂಕ್ ಸಮೀಪ ಮಟ್ಕಾ ಜೂಜಾಟದಲ್ಲಿ ತೊಡಗಿದ್ದ ವ್ಯಕ್ತಿ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಆರೋಪಿ ಶರಣಯ್ಯ ಮಠ ಎಂಬುವರಿಂದ ₹ 1,400 ವಶಕ್ಕೆ ಪಡೆಯಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಈ ಸಂಬಂಧ ವಿಶ್ವವಿದ್ಯಾಲಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.