ADVERTISEMENT

ನಾಪೋಕ್ಲು: ಮಳೆಯ ನಡುವೆಯೂ ಕೃಷಿ ಚಟುವಟಿಕೆ ಬಿರುಸು

ಯಂತ್ರೋಪಕರಣ ಬಳಸಿ ಗದ್ದೆ ಹದ ಮಾಡುತ್ತಿರುವ ರೈತರು

​ಪ್ರಜಾವಾಣಿ ವಾರ್ತೆ
Published 23 ಜುಲೈ 2025, 4:08 IST
Last Updated 23 ಜುಲೈ 2025, 4:08 IST
ನಾಪೋಕ್ಲು  ಸಮೀಪದ ಪುಲಿಕೋಟು ಗ್ರಾಮದಲ್ಲಿ ಗದ್ದೆಯನ್ನು ಉಳುಮೆ ಮಾಡಿದ ರೈತ
ನಾಪೋಕ್ಲು  ಸಮೀಪದ ಪುಲಿಕೋಟು ಗ್ರಾಮದಲ್ಲಿ ಗದ್ದೆಯನ್ನು ಉಳುಮೆ ಮಾಡಿದ ರೈತ   

ನಾಪೋಕ್ಲು: ಹೋಬಳಿ ವ್ಯಾಪ್ತಿಯಲ್ಲಿ ಬಿಡುವು ಕೊಟ್ಟು ಮಳೆ ಸುರಿಯುತ್ತಿದ್ದು ಬಿಡುವಿನ ಅವಧಿಯಲ್ಲಿ ಕೃಷಿ ಚಟುವಟಿಕೆಗಳು ಬಿರುಸುಗೊಂಡಿವೆ.

ಕಾಫಿ, ಕಾಳು ಮೆಣಸು ಕೃಷಿಯ ಜೊತೆಗೆ ಭತ್ತದ ಕೃಷಿ ಚಟುವಟಿಕೆಗಳು ಗರಿಗೆದರಿವೆ. ಕೃಷಿಕರು ಅಲ್ಲಲ್ಲಿ ಗದ್ದೆ ಹದ ಮಾಡುವ ಕಾಯಕದಲ್ಲಿ ತೊಡಗಿದ್ದಾರೆ. ಗ್ರಾಮೀಣ ಪ್ರದೇಶಗಳಲ್ಲಿ ಯಂತ್ರೋಪಕರಣಗಳನ್ನು ಬಳಸಿ ರೈತರು ಗದ್ದೆ ಹದ ಮಾಡುತ್ತಿದ್ದಾರೆ.

ಕಳೆದ ಕೆಲವು ದಿನಗಳಿಂದ ಸುರಿದ ಮಳೆಯಿಂದಾಗಿ ಕೆರೆತೋಡುಗಳಲ್ಲಿ ನೀರು ಹರಿಯುತ್ತಿದೆ. ಸಮೀಪದ ಬಲಮುರಿಯಲ್ಲಿ ಕಿರುಸೇತುವೆಯ ಮಟ್ಟಕ್ಕೆ ಕಾವೇರಿ ನದಿನೀರು ಹರಿಯುತ್ತಿದೆ. ಗ್ರಾಮೀಣ ಪ್ರದೇಶದಲ್ಲಿ ಭತ್ತದ ಗದ್ದೆಯ ಉಳುಮೆ ಕಾರ್ಯ ನಡೆಯುತ್ತಿದೆ. ಅಲ್ಲಲ್ಲಿ ಭತ್ತದ ಬಿತ್ತನೆ ಮಾಡುವ ಮೂಲಕ ಕೃಷಿ ಕಾರ್ಯಕ್ಕೆ ರೈತರು ಚಾಲನೆ ನೀಡಿದ್ದಾರೆ. ಇಲ್ಲಿಗೆ ಸಮೀಪದ ಕೈಕಾಡು, ಪಾರಾಣೆ ನೆಲಜಿ, ಹೊದ್ದೂರು, ಬಲ್ಲಮಾವಟಿ ಗ್ರಾಮಗಳಲ್ಲಿ ಭತ್ತದ ಕೃಷಿ ಗಾಗಿ ಗದ್ದೆ ಉಳುಮೆ ಮಾಡುವ ದೃಶ್ಯಗಳು ಕಂಡುಬರುತ್ತವೆ.

ADVERTISEMENT

ಬಿಡುವು ಕೊಟ್ಟು ಸುರಿಯುತ್ತಿರುವ ಮಳೆ ಭತ್ತದ ಕೃಷಿಗೆ ಉತ್ತೇಜನಕಾರಿಯಾಗಿದೆ. ಗದ್ದೆಯನ್ನು ಹಸನುಗೊಳಿಸಿ ಭತ್ತದ ಬಿತ್ತನೆ ಕಾರ್ಯವನ್ನು ಪೂರೈಸಿದ್ದೇವೆ. ಒಂದು ತಿಂಗಳ ಬಳಿಕ ಸಸಿ ಬಂದ ಮೇಲೆ ನಾಟಿ ಕಾರ್ಯ ಆರಂಭವಾಗಲಿದೆ ಎಂದು ಬಲಮುರಿ ಗ್ರಾಮದ ವಸಂತ ಹೇಳಿದರು.

ಪುಲಿಕೋಟು ಗ್ರಾಮದಲ್ಲಿ ಟಿಲ್ಲರ್ ಮೂಲಕ ಗದ್ದೆಗಳನ್ನು ಉಳುಮೆ ಮಾಡುತ್ತಿದ್ದಾರೆ. ಗ್ರಾಮೀಣ ಪ್ರದೇಶದಲ್ಲಿ ಅಲ್ಲಲ್ಲಿ ಎತ್ತುಗಳ ಮೂಲಕ ಉಳುಮೆ ಮಾಡುವ ದೃಶ್ಯಗಳೂ ಕಂಡು ಬಂದವು.

ಕಾಫಿ ತೋಟಗಳಲ್ಲಿ ಕಾಫಿ ಗಿಡಗಳನ್ನು ನೆಡುವ, ಕಳೆ ನಿರ್ಮೂಲನೆ ಮಾಡುವ ಕೆಲಸವೂ ನಡೆಯುತ್ತಿದೆ. ಕಾಳು ಮೆಣಸಿನ ಕೃಷಿಯತ್ತಲೂ ರೈತರ ಗಮನಹರಿಸಿದ್ದಾರೆ. ಇಲ್ಲಿನ ನರ್ಸರಿಗಳಲ್ಲಿ ಕಾಫಿ, ಅಡಿಕೆ, ಕಾಳು ಮೆಣಸಿನ ಗಿಡಗಳು ಭರ್ಜರಿಯಾಗಿ ಮಾರಾಟವಾಗುತ್ತಿವೆ.

ಹೊದ್ದೂರು, ನೆಲಜಿ, ಬಲ್ಲಮಾವಟಿ, ಪೇರೂರು, ಪುಲಿಕೋಟು ಭಾಗಗಳಲ್ಲಿ ಭತ್ತದ ಕೃಷಿಯ ಜೊತೆಗೆ ಕಾಫಿ ತೋಟದ ಕೆಲಸಗಳೂ ಭರದಿಂದ ಸಾಗುತ್ತಿವೆ. ಪುಲಿಕೋಟು ಗ್ರಾಮದಲ್ಲಿ ಭತ್ತದ ನಾಟಿ ಕಾರ್ಯ ಶನಿವಾರ ಬಿರುಸಿನಿಂದ ಸಾಗಿತು. ಭತ್ತದ ನಾಟಿಗಾಗಿ ಸಸಿಮಡಿಗಳಿಂದ ಅಗೆ ತೆಗೆಯುವ ಕಾರ್ಯ, ಉಳುಮೆ ಮಾಡುವ ಕಾರ್ಯವೂ ನಡೆಯುತ್ತಿದೆ.

ಕಾರ್ಮಿಕರ ಕೊರತೆಯ ನಡುವೆಯೂ ಸ್ಥಳೀಯ ಕಾರ್ಮಿಕರನ್ನು ಒಗ್ಗೂಡಿಸಿ ಪರವೂರಿನಿಂದ ಬಂದ ಕಾರ್ಮಿಕರನ್ನು ಬಳಸಿ ರೈತರು ನಾಟಿ ಕಾರ್ಯ ಕೈಗೊಳ್ಳುತ್ತಿದ್ದಾರೆ. ಕೂಲಿಕಾರ್ಮಿಕರ ಅಭಾವ, ಕಾಡು ಪ್ರಾಣಿಗಳ ಉಪಟಳ...ಮತ್ತಿತರ ಕಾರಣಗಳಿಂದ ಹಲವು ರೈತರು ಭತ್ತದ ಕೃಷಿಯನ್ನು ಕೈಬಿಟ್ಟಿದ್ದರೂ ಕೆಲವೆಡೆ ಸಾಂಪ್ರದಾಯಿಕ ನಾಟಿ ಕೆಲಸ ಬಿರುಸಿನಿಂದ ನಡೆಯುತ್ತಿದೆ.

ನಾಪೋಕ್ಲು ಸಮೀಪದ ಪುಲಿಕೋಟು ಗ್ರಾಮದಲ್ಲಿ ಭತ್ತದ ನಾಟಿ ಕೆಲಸ ಬಿರುಸಿನಿಂದ ಸಾಗಿತು
ಕಾಫಿ ತೋಟಗಳಲ್ಲಿಯೂ ಬಿರುಸಿನ ಚಟುವಟಿಕೆ | ಕೆಲವೆಡೆ ಕೃಷಿ ಕಾರ್ಮಿಕರ ಅಭಾವ | ಸಾಂಪ್ರದಾಯಿಕ ನಾಟಿಗೂ ಮನ್ನಣೆ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.