ಮಡಿಕೇರಿ: ಬಾಳೆಕಾಯಿ ಸಾಕಷ್ಟು ಪೌಷ್ಠಿಕಾಂಶವುಳ್ಳ ತರಕಾರಿ. ಇದನ್ನು ಹಾಗೆಯೇ ಹಸಿಯಾಗಿ ತಿನ್ನಲು ಸಾಧ್ಯವಿಲ್ಲ. ಇದನ್ನು ಸೇವಿಸಬೇಕಾದರೆ ಬೇಯಿಸಿ, ಅದಕ್ಕೆ ಮಸಾಲೆ ಸೇರಿಸಿ ಪಲ್ಯ ಮಾಡಿಕೊಂಡೇ ತಿನ್ನಬೇಕಿದೆ. ಇಲ್ಲವೇ ಎಣ್ಣೆಯಲ್ಲಿ ಕರೆದು ಚಿಪ್ಸ್ ಮಾಡಿಕೊಂಡು ಸೇವಿಸಬೇಕಿದೆ. ಬೇಯಿಸುವ ವೇಳೆ ಕೆಲವೊಂದು ಪೌಷ್ಠಿಕಾಂಶಗಳು ನಾಶವಾಗುವ ಸಾಧ್ಯತೆಗಳೂ ಇವೆ. ಆದರೆ, ಇಲ್ಲೊಬ್ಬರು ಅದನ್ನು ಬೇಯಿಸದೇ ಸೇವಿಸಲು ಅನುಕೂಲವಾಗುವಂತೆ ಪುಡಿ ಮಾಡಿ ಮಾರಾಟ ಮಾಡುತ್ತಿದ್ದಾರೆ.
ವಿರಾಜಪೇಟೆ ತಾಲ್ಲೂಕಿನ ಅಮ್ಮತ್ತಿಯಲ್ಲಿರುವ ಲಾವಣ್ಯ ರೈ ಬಾಳೆಕಾಯಿ ಪುಡಿ ತಯಾರಿಸುವ ಅಪರೂಪದ ಮಹಿಳೆ. ಇವರು ಮಹಾತ್ಮ ಗಾಂಧೀಜಿ ಅವರ ಗುಡಿ ಕೈಗಾರಿಕೆ ಪರಿಕಲ್ಪನೆಯಡಿ ಕೇವಲ 2 ಯಂತ್ರಗಳ ಸಹಾಯದಿಂದ ಕಳೆದ ಒಂದು ವರ್ಷದಿಂದ ತಾವೇ ಬಾಳೆಕಾಯಿ ಪುಡಿ ತಯಾರಿಸುತ್ತಿದ್ದಾರೆ.
‘ಮೊದಲಿಗೆ ನಾನೇ ಸ್ವತಃ ಒಂದು ಉದ್ದಿಮೆ ಶುರು ಮಾಡುವ ಕುರಿತು ಚಿಂತಿಸಿದಾಗ ಚಿಕ್ಕಮಗಳೂರಿನ ಸ್ನೇಹಿತರೊಬ್ಬರು ಈ ಸಲಹೆ ನೀಡಿದರು. ನಂತರ, ಕೃಷಿ ಇಲಾಖೆಯ ಅಧಿಕಾರಿಗಳೊಂದಿಗೆ ಚರ್ಚಿಸಿದಾಗ ಅವರು ಪ್ರಧಾನಮಂತ್ರಿ ಕಿರು ಆಹಾರ ಸಂಸ್ಕರಣಾ ಉದ್ದಿಮೆ ನಿಯಮಬದ್ಧಗೊಳಿಸುವಿಕೆಯ ಯೋಜನೆಯ (ಪಿಎಂಎಫ್‍ಎಂಇ) ಮಾಹಿತಿ ನೀಡಿದರು. ಈ ಯೋಜನೆಯಡಿ ಕೆನೆರಾ ಬ್ಯಾಂಕಿನಿಂದ ಸಾಲವೂ ಸಿಕ್ಕಿತು’ ಎಂದು ಅವರು ತಾವು ಈ ಉದ್ದಿಮೆ ಶುರು ಮಾಡಿದ ಕುರಿತು ತಿಳಿಸಿದರು.
ಮುಂದೆ ಕೊಯಮತ್ತೂರಿನಿಂದ ಯಂತ್ರಗಳನ್ನು ತರಿಸಿದ ಇವರು ಬಾಳೆಕಾಯಿ ಪುಡಿ ಮಾಡಲು ಆರಂಭಿಸಿದರು.
ಪುಡಿ ಮಾಡುವುದು ಹೇಗೆ?
ಮೊದಲು ಬಾಳೆಕಾಯಿಯನ್ನು ಕತ್ತರಿಸಿಕೊಳ್ಳಬೇಕು. ನಂತರ, ಅದನ್ನು ಒಣಗಿಸುವ ಯಂತ್ರಕ್ಕೆ ಹಾಕಿ ಚೆನ್ನಾಗಿ ಒಣಗಿಸಿಕೊಳ್ಳಬೇಕು. ಈ ವೇಳೆ ಕೇವಲ ನೀರಿನ ಅಂಶಗಳು ಮಾತ್ರ ಹೋಗುತ್ತವೆ. ತದನಂತರ, ಪುಡಿ ಮಾಡುವ ಯಂತ್ರಕ್ಕೆ ಹಾಕಿದರೆ ಅದು ಪುಡಿಯಾಗುತ್ತದೆ. ಹುಡಿಯಾದ ಬಾಳೆಕಾಯಿ ಸವಿಯಲು ಸಿದ್ಧವಾಗುತ್ತದೆ.
ಇದನ್ನು ನೀರು ಅಥವಾ ಹಾಲಿನೊಂದಿಗೆ ಮಿಶ್ರ ಮಾಡಿ 6 ತಿಂಗಳು ತುಂಬಿದ ಮಗುವಿನಿಂದ ಹಿಡಿದು ವಯೋವೃದ್ಧರವರೆಗೂ ಸೇವಿಸಬಹುದು. ಅತ್ಯಧಿಕ ಪೌಷ್ಠಿಕಾಂಶಗಳನ್ನು ಹೊಂದಿರುವ ಬಾಳೆಕಾಯಿ ಪುಡಿ ಆರೋಗ್ಯಕ್ಕೆ ಪೂರಕ ಎಂದು ಅವರು ಹೇಳುತ್ತಾರೆ.
ಈ ಪುಡಿಯನ್ನು ಬೇಕರಿ ಉತ್ಪನ್ನಗಳಿಗೆ ಸೇರಿಸಿ ಅದರ ರುಚಿ ಹೆಚ್ಚಿಸಬಹುದು. ಚಪಾತಿ, ರೊಟ್ಟಿ ಹಿಟ್ಟಿನ ಜೊತೆ ಈ ಪುಡಿಯನ್ನು ಮಿಶ್ರಣ ಮಾಡಿದರೆ ರುಚಿಯ ಜೊತೆಗೆ ಪೌಷ್ಠಿಕಾಂಶವೂ ಸಿಗುತ್ತದೆ.
ಇದರೊಂದಿಗೆ ಅವರು ಅರಿಸಿನದ ಪುಡಿ, ಮೆಣಸಿನ ಪುಡಿ, ಧನಿಯ ಪುಡಿ ಸೇರಿದಂತೆ ಇತರೆ ಮಸಾಲೆ ಉತ್ಪನ್ನಗಳನ್ನೂ ತಯಾರಿಸುತ್ತಾರೆ. ಮೊಳಕೆ ಕಾಳಿನ ಸಿರಿಧಾನ್ಯದ ಪುಡಿಯನ್ನೂ ಇವರು ತಯಾರಿಸಿ ಸೈ ಎನಿಸಿಕೊಂಡಿದ್ದಾರೆ.
‘ಸದ್ಯ ನಾನು ಮತ್ತು ನನ್ನ ಪತಿ ಲೋಕೇಶ್ ಶೆಟ್ಟಿ ಇಬ್ಬರೇ ಈ ಕಾರ್ಯ ಮಾಡುತ್ತಿದ್ದೇವೆ. ಮಾರುಕಟ್ಟೆ ವಿಸ್ತರಿಸಿದರೆ ಕೆಲಸಕ್ಕೆ ಕಾರ್ಮಿಕರನ್ನು ನೇಮಕ ಮಾಡಿಕೊಳ್ಳಬೇಕಾಗುತ್ತದೆ’ ಎಂದು ಅವರು ಹೇಳುತ್ತಾರೆ. ‘ಶ್ರೀಫುಡ್’ ಎಂಬ ಹೆಸರಿನಡಿ ಇವರು ಉತ್ಪನ್ನಗಳನ್ನು ಮಾರಾಟ ಮಾಡುತ್ತಾರೆ.
‘ಯಾವುದೇ ಕೃತಕ ಬಣ್ಣಗಳು, ರಾಸಾಯನಿಕಗಳನ್ನು ಸೇರಿಸದೇ ಕೇವಲ ತರಕಾರಿ, ಧಾನ್ಯಗಳನ್ನಷ್ಟೇ ಉಪಯೋಗಿಸಿ ತಯಾರಿಸಲಾಗುತ್ತದೆ’ ಎಂದು ಲಾವಣ್ಯ ರೈ ಹೇಳುತ್ತಾರೆ.
ಮಾಹಿತಿಗೆ lavanyarai365@gmail.com ಸಂಪರ್ಕಿಸಬಹುದು.
ಒಣಗಿಸುವಾಗ ಪೌಷ್ಠಿಕಾಂಶ ನಷ್ಟವಾಗದು; ನೀರಜಾ
‘ಏಕರೂಪದ ಉಷ್ಣಾಂಶದಲ್ಲಿ ಯಂತ್ರದೊಳಗೆ ಬಾಳೆಕಾಯಿ ಒಣಗುವುದರಿಂದ ಯಾವುದೇ ಪೌಷ್ಠಿಕಾಂಶ ನಷ್ಟವಾಗದು. ಒಂದು ವೇಳೆ ಸೂರ್ಯನ ಬಿಸಿಲಿಗೆ ಇಟ್ಟರೆ ಅದಕ್ಕೆ ದೂಳು ಗಾಳಿಯಲ್ಲಿರುವ ಅಂಶಗಳು ಸೇರುವ ಅಪಾಯ ಇದೆ. ಈ ಯಂತ್ರದಲ್ಲಿ ಯಾವುದೇ ಬಾಹ್ಯ ಅಂಶಗಳು ಸೇರ್ಪಡೆಯಾಗದೇ ಸಂಪೂರ್ಣ ಒಣಗುವುದರಿಂದ ರುಚಿ ಹದಗೆಡುವುದಿಲ್ಲ ಪೌಷ್ಠಿಕಾಂಶವೂ ನಷ್ಟವಾಗುವುದಿಲ್ಲ’ ಎಂದು ಪ್ರಧಾನಮಂತ್ರಿ ಕಿರು ಆಹಾರ ಸಂಸ್ಕರಣಾ ಉದ್ದಿಮೆ ನಿಯಮಬದ್ಧಗೊಳಿಸುವಿಕೆಯ ಯೋಜನೆಯ (ಪಿಎಂಎಫ್‍ಎಂಇ) ಜಿಲ್ಲಾ ಸಂಪನ್ಮೂಲ ವ್ಯಕ್ತಿ ಹಾಗೂ ಜಿಲ್ಲಾ ತರಬೇತುದಾರರಾದ ಕೆ.ಜಿ.ನೀರಜಾ ‘ಪ್ರಜಾವಾಣಿ’ಗೆ ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.