ಸೋಮವಾರಪೇಟೆ: ತಾಲ್ಲೂಕು ಕೇಂದ್ರ ಸೇರಿದಂತೆ ಗ್ರಾಮೀಣ ಭಾಗಗಳಲ್ಲಿ ಮೊಬೈಲ್ ನೆಟ್‌ವರ್ಕ್ ಸಮಸ್ಯೆ ಕಾಡುತ್ತಿದ್ದು, ಗ್ರಾಮೀಣ ಭಾಗಗಳಲ್ಲಿ ಮಾತನಾಡಬೇಕೆಂದರೆ, ಬೆಟ್ಟಗುಡ್ಡ ಹತ್ತುವ ಪರಿಸ್ಥಿತಿ ನಿರ್ಮಾಣವಾಗಿದೆ.
‘ಗ್ರಾಮೀಣ ಭಾಗಗಳಲ್ಲಿ ಕೇವಲ ಬಿಎಸ್ಎನ್ಎಲ್ ನೆಟ್‌ವರ್ಕ್ ಮಾತ್ರ ಇದೆ. ತಾಲ್ಲೂಕಿನ ಶಾಂತಳ್ಳಿ ಹೋಬಳಿಯ ಹರಗ ಗ್ರಾಮದಲ್ಲಿ ಒಂದು ಟವರ್ ಇದೆ, ನೆಟ್‌ವರ್ಕ್ ಇಲ್ಲ. ಇತ್ತೀಚಿನ ದಿನಗಳಲ್ಲಿ ಸಮಸ್ಯೆ ಬಿಗಡಾಯಿಸಿದೆ. ಪ್ರತಿದಿನ ಒಂದಲ್ಲ ಒಂದು ಸಮಸ್ಯೆ ಕಾಡುತ್ತಿದೆ, ಪ್ರತಿದಿನ ಮೊಬೈಲ್‌ನಲ್ಲಿ ಮಾತನಾಡಲು ಸಾಧ್ಯವಾಗುತ್ತಿಲ್ಲ’ ಎಂದು ಹರಗ ಗ್ರಾಮದ ಶರಣ್ ಗೌಡ ದೂರಿದರು.
‘ಸಮಸ್ಯೆಯನ್ನು ಸಂಬಂಧಿಸಿದ ಅಧಿಕಾರಿಗಳ ಗಮನಕ್ಕೆ ತರಲಾಗಿದ್ದರೂ, ಯಾವುದೇ ಪ್ರಯೋಜನವಾಗುತ್ತಿಲ್ಲ’ ಎಂದು ದೂರಿದರು.
‘ಇಲ್ಲಿನ ಟವರ್ ಕನಿಷ್ಠ 20ರಿಂದ 25 ಗ್ರಾಮಗಳ ಸಂಪರ್ಕಕ್ಕೆ ಇದ್ದು, ಈ ಭಾಗದ ಜನರಿಗೆ ತುಂಬಾ ಕಷ್ಟಕರವಾಗಿದೆ. ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕರಿಗೆ ಮೊಬೈಲ್ ನೆಟ್‌ವರ್ಕ್ ಬಳಸಿಕೊಳ್ಳಲು ಸಾಧ್ಯವಾಗುತ್ತಿಲ್ಲ. ದೇಶದೆಲ್ಲೆಡೆ 4ಜಿ ಮತ್ತು 5ಜಿ ಬಂದರೂ, ನಮ್ಮ ಗ್ರಾಮದಲ್ಲಿ ಮಾತ್ರ ಇಂದಿಗೂ 2ಜಿ ಸೇವೆಯನ್ನೇ ಸರಿಯಾಗಿ ನೀಡಲು ಇಲಾಖೆ ಏದುಸಿರು ಬಿಡುತ್ತಿದೆ. ಸಮಸ್ಯೆಯನ್ನು ಇನ್ನಾದರೂ ಸಂಸದರು ಇತ್ತ ಗಮನಹರಿಸಿ ಪರಿಹರಿಸಬೇಕು’ ಎಂದು ಗ್ರಾಮಸ್ಥರು ಒತ್ತಾಯಿಸಿದ್ದಾರೆ.
‘ಪಟ್ಟಣದಲ್ಲೂ ನೆಟ್‌ವರ್ಕ್ ಸಮಸ್ಯೆ ಕಾಡುತ್ತಿದೆ. ಬೆಳಗ್ಗಿನಿಂದಲೂ ಇಂಟರ್ನೆಟ್ ಬಳಸಲು ಪರದಾಡಬೇಕಾಗಿದೆ. ಹೆಚ್ಚಿನ ಕಚೇರಿಗಳಲ್ಲಿ ಎಲ್ಲವೂ ಆನ್‌ಲೈನ್‌ನಲ್ಲಿಯೇ ಕೆಲಸವಾಗಬೇಕಿರುವುದರಿಂದ ಎಲ್ಲ ಕಡೆ ಬಿಎಸ್ಎನ್ಎಲ್ ಸಂಪರ್ಕವನ್ನೇ ಪಡೆದಿದ್ದಾರೆ. ತಾಲ್ಲೂಕಿನ ಗಡಿ ಭಾಗದಿಂದ ಕೆಲಸಕ್ಕಾಗಿ ಕಚೇರಿಗಳಿಗೆ ಬಂದರೆ ನೆಟ್‌ವರ್ಕ್ ಇಲ್ಲ ಎಂದು ಸಿಬ್ಬಂದಿ ತಿಳಿಸಿ ಸಾಗ ಹಾಕುತ್ತಿದ್ದಾರೆ. ಇದರಿಂದಾಗಿ ಹಣದೊಂದಿಗೆ ಸಮಯವೂ ವ್ಯರ್ಥವಾಗುತ್ತಿದೆ’ ಎಂದು ಕೊಡ್ಲಿಪೇಟೆಯ ಹರೀಶ್ ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.