ADVERTISEMENT

ಮಡಿಕೇರಿ: ನೂತನ ಬಸ್‌ ನಿಲ್ದಾಣ ಹಾಳು ಕೊಂಪೆ

ಹಳೇ ಖಾಸಗಿ ಬಸ್‌ ನಿಲ್ದಾಣದ ಜಾಗದಲ್ಲೇ ಪ್ರಯಾಣಿಕರ ಪರದಾಟ

ವಿಕಾಸ್ ಬಿ.ಪೂಜಾರಿ
Published 23 ಜೂನ್ 2019, 19:30 IST
Last Updated 23 ಜೂನ್ 2019, 19:30 IST
ಮಡಿಕೇರಿ ರೇಸ್‌ ಕೋರ್ಸ್‌ ರಸ್ತೆಯಲ್ಲಿ ನಿರ್ಮಿಸಿರುವ ಖಾಸಗಿ ಬಸ್‌ ನಿಲ್ದಾಣ
ಮಡಿಕೇರಿ ರೇಸ್‌ ಕೋರ್ಸ್‌ ರಸ್ತೆಯಲ್ಲಿ ನಿರ್ಮಿಸಿರುವ ಖಾಸಗಿ ಬಸ್‌ ನಿಲ್ದಾಣ   

ಮಡಿಕೇರಿ: ನಗರದ ರೇಸ್ ಕೋರ್ಸ್‌ ರಸ್ತೆಯಲ್ಲಿ ನೂತನ ಖಾಸಗಿ ಬಸ್‌ ನಿಲ್ದಾಣ ನಿರ್ಮಾಣಗೊಂಡು ವರ್ಷ ಕಳೆದರೂ ಅದು ಪ್ರಯಾಣಿಕರಿಗೆ ಬಳಕೆಗೆ ಬಾರದೇ ಅನುಪಯುಕ್ತ ಕಟ್ಟಡದಂತೆ ಗೋಚರಿಸುತ್ತಿದೆ. ಸದ್ಯಕ್ಕೆ ಹಾಳು ಕೊಂಪೆಯಾಗಿದೆ. ಎಲ್ಲೆಂದರಲ್ಲಿ ಕಸ ಬಿದ್ದು ಮೂಗು ಮುಚ್ಚಿಕೊಂಡು ಓಡಾಡುವ ಸ್ಥಿತಿ ನಿರ್ಮಾಣವಾಗಿದೆ.

ಅಂದಾಜು ₹5 ಕೋಟಿ ವೆಚ್ಚದಲ್ಲಿ ನಗರಸಭೆಯಿಂದ ಬಸ್‌ ನಿಲ್ದಾಣ ಕಟ್ಟಡ ನಿರ್ಮಾಣವಾಗಿದ್ದು, ಜಿಲ್ಲಾ ಉಸ್ತುವಾರಿ ಸಚಿವರಾಗಿದ್ದ ಎಂ.ಆರ್‌.ಸೀತಾರಾಂ ಅವರು ವಿಧಾನಸಭೆ ಚುನಾವಣೆಗೂ ಮೊದಲೇ ತರಾತುರಿಯಲ್ಲಿ ನಿಲ್ದಾಣ ಉದ್ಘಾಟಿಸಿ ಪ್ರಯಾಣಿಕರ ಬಳಕೆಗೆ ಅರ್ಪಿಸಿದ್ದರು. ಆದರೆ, ಇದು ಪೂರ್ಣ ಪ್ರಮಾಣದಲ್ಲಿ ಬಳಕೆ ಆಗುತ್ತಿಲ್ಲ.

ಹೊಸ ನಿಲ್ದಾಣದಲ್ಲಿ ಬಸ್‌ ಸೌಲಭ್ಯ ಕಡಿಮೆ ಇರುವುದರಿಂದ ಪ್ರಯಾಣಿಕರು ಮಾತ್ರ ಹಳೇ ಬಸ್‌ ನಿಲ್ದಾಣವಿದ್ದ ಜಾಗದಲ್ಲಿ ನಿಂತು ಬಸ್‌ಗಾಗಿ ಕಾಯುತ್ತಿರುವ ದೃಶ್ಯ ಸಾಮಾನ್ಯವಾಗಿದೆ. ಇಲ್ಲಿ ತಂಗುದಾಣವಿಲ್ಲದೆ ಬಿಸಿಲಿನಲ್ಲೇ ನಿಲ್ಲುವಂತಾಗಿದೆ.

ADVERTISEMENT

ಸಾರ್ವಜನಿಕರ ಹಿತದೃಷ್ಟಿಯಿಂದ ಎಲ್ಲ ಬಸ್‌ಗಳೂ ಹೊಸ ಖಾಸಗಿ ಬಸ್ ನಿಲ್ದಾಣಕ್ಕೆ ಸ್ಥಳಾಂತರಗೊಳ್ಳಬೇಕು ಎಂದು ಜಿಲ್ಲಾಡಳಿತ ಆದೇಶ ನೀಡಿದ್ದರೂ, ನೂತನ ನಿಲ್ದಾಣದಲ್ಲಿ ಪ್ರಯಾಣಿಕರು ಬಸ್‌ಗೆ ಕಾದು ಕುಳಿತರೂ ಬಸ್‌ಗಳು ಇರುವುದಿಲ್ಲ. ಬಸ್ ಇದ್ದರೂ ಪ್ರಯಾಣಿಕರು ಇಲ್ಲದಂತಹ ಪರಿಸ್ಥಿತಿ ನಿರ್ಮಾಣವಾಗಿದೆ.

ಸ್ವಚ್ಛತೆ ಇಲ್ಲ: ನೂತನ ನಿಲ್ದಾಣ ಸುತ್ತ ಸ್ವಚ್ಛತೆ ಮರೀಚಿಕೆಯಾಗಿದೆ. ಮಳೆಗಾಲ ಆರಂಭದಲ್ಲಿಯೇ ಆವರಣದಲ್ಲಿ ಕೆಸರು ಆವರಿಸಿದೆ. ನಿಲ್ದಾಣದ ಒಳಭಾಗದಲ್ಲಿ ಮಳೆಯ ನೀರು ಬಿದ್ದು, ಅಶುಚಿತ್ವ ಕಂಡುಬಂದಿದೆ. ಇಲ್ಲಿರುವ ನೂತನ ಶೌಚಾಲಯ ಕೂಡ ನಿರ್ವಹಣೆ ಇಲ್ಲದೇ ಬಳಕೆಯಿಂದ ದೂರ ಉಳಿದಿದೆ. ರಾತ್ರಿ ವೇಳೆ ವಿದ್ಯುತ್ ಸಹ ಇರುವುದಿಲ್ಲ. ಇದರಿಂದ ಕತ್ತಲೆ ಆವರಿಸಿರುತ್ತದೆ.

ನಿಲ್ದಾಣದಲ್ಲಿ ಬಸ್‌ಗಳ ನಿಲುಗಡೆಗೆ ವ್ಯವಸ್ಥಿತ ಜಾಗವಿದ್ದರೂ ಬಸ್‌ಗಳನ್ನು ಅಡ್ಡಾದಿಡ್ಡಿ ನಿಲ್ಲಿಸಲಾಗುತ್ತಿದೆ. ಯಾವ ಬಸ್ ಎಲ್ಲಿಗೆ ಹೋಗುತ್ತದೆ, ಎಷ್ಟು ಹೊತ್ತಿಗೆ ಹೊರಡುತ್ತದೆ ಎನ್ನುವ ಮಾಹಿತಿಯ ಫಲಕವನ್ನೂ ಅಳವಡಿಸಿಲ್ಲ.

ದೂರವಾದ ನಿಲ್ದಾಣ: ನಗರದ ಹೃದಯ ಭಾಗದಿಂದ 1 ಕಿ.ಮೀ ದೂರದಲ್ಲಿರುವ ನಿಲ್ದಾಣದಿಂದ ನಗರಕ್ಕೆ ಆಟೊಗಳನ್ನು ಏರಿ ಬರುವ ಪರಿಸ್ಥಿತಿಯಿದೆ. ಅದಕ್ಕೂ ದುಡ್ಡು ಕೊಡಬೇಕು. ಜಿಲ್ಲಾ ಸಂಕೀರ್ಣ, ತಾಲ್ಲೂಕು ಕಚೇರಿ, ಜಿ.ಪಂ ಇಲಾಖೆ, ಜಿಲ್ಲಾ ಆಸ್ಪತ್ರೆ, ಅಂಚೆ ಕಚೇರಿ, ಮಾರುಕಟ್ಟೆ, ಸರ್ಕಾರಿ ಶಾಲೆ, ಕಾಲೇಜುಗಳು ಬಸ್‌ ನಿಲ್ದಾಣದಿಂದ ದೂರವಿರುವ ಕಾರಣ ಸಮಯಕ್ಕೆ ಸರಿಯಾಗಿ ಬರಲು ಸಾಧ್ಯವಾಗುತ್ತಿಲ್ಲ ಎಂದು ಪ್ರಯಾಣಿಕರು ಬೇಸರದಿಂದ ನುಡಿಯುತ್ತಾರೆ.

ಮಾರ್ಗಸೂಚಿ ಅಂತಿಮಗೊಂಡಿಲ್ಲ: ನೂತನ ಬಸ್ ನಿಲ್ದಾಣಕ್ಕೆ ಬಸ್‌ಗಳು ಹೋಗುವ, ಬರುವ ಮಾರ್ಗಗಳ ಬಗ್ಗೆ ರೂಪುರೇಷೆ ಸಿದ್ಧಪಡಿಸಲಾಗುತ್ತಿದೆ. ಜನರಲ್‌ ತಿಮ್ಮಯ್ಯ ವೃತ್ತದಿಂದ ರಾಜಾಸೀಟ್‌ ಮೂಲಕ ರೇಸ್‌ ಕೋರ್ಸ್‌ ರಸ್ತೆಯ ಬಸ್ ನಿಲ್ದಾಣಕ್ಕೆ ಖಾಸಗಿ ಬಸ್‌ಗಳು ಬಂದು ಸೇರುವುದು, ನಿಲ್ದಾಣದಿಂದ ಹೊರಡುವ ಬಸ್‌ಗಳು ಪ್ರೆಸ್‌ಕ್ಲಬ್‌, ಕಾಲೇಜು ರಸ್ತೆ, ಕೊಹಿನೂರು ರಸ್ತೆಯ ಮೂಲಕ ಹೊರ ಹೋಗಲು ನಕ್ಷೆ ತಯಾರು ಮಾಡಲಾಗಿದೆ. ಆದರೆ, ಅದು ಇನ್ನೂ ಕಾರ್ಯರೂಪಕ್ಕೆ ಬಂದಿಲ್ಲ.

ರಸ್ತೆ ವಿಸ್ತರಣೆ: ನಗರದ ಹೃದಯಭಾಗದ ರಸ್ತೆಗಳಲ್ಲಿ ಏಕಮುಖ ಸಂಚಾರ ವ್ಯವಸ್ಥೆ ಜಾರಿಗೊಳಿಸಲು ಜಿಲ್ಲಾಡಳಿತ ತೀರ್ಮಾನಿಸಿತ್ತು. ಈ ಬಗ್ಗೆ ನಗರಸಭೆ, ಪೊಲೀಸ್, ಕಂದಾಯ, ಆರ್‌ಟಿಒ, ಪಿಡಬ್ಲ್ಯುಡಿ ಇಲಾಖೆ ಅಧಿಕಾರಿಗಳು ಸಂಚಾರ ಮಾರ್ಗ ಸರ್ವೆ ಮಾಡಿ ಒತ್ತುವರಿ ತೆರವುಗೊಳಿಸುವ ಕಾರ್ಯ ಆಗಿದ್ದರೂ ಬಸ್‌ಗಳು ಮಾತ್ರ ಈ ರಸ್ತೆಗಳಲ್ಲಿ ಬರುತ್ತಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.