ADVERTISEMENT

ಮಡಿಕೇರಿ | ಅಧಿಕಾರಿಗಳ ವಿರುದ್ಧ ಅಸಮಾಧಾನ

​ಪ್ರಜಾವಾಣಿ ವಾರ್ತೆ
Published 20 ಜನವರಿ 2026, 2:52 IST
Last Updated 20 ಜನವರಿ 2026, 2:52 IST
<div class="paragraphs"><p>ಜಿಲ್ಲಾ ಗ್ಯಾರಂಟಿ ಯೋಜನೆ ಅನುಷ್ಠಾನ ಸಮಿತಿ ಸಭೆಯಲ್ಲಿ ಅಧ್ಯಕ್ಷ ತೀತಿರ ಧರ್ಮಜ ಉತ್ತಪ್ಪ ಮಾತನಾಡಿದರು</p></div>

ಜಿಲ್ಲಾ ಗ್ಯಾರಂಟಿ ಯೋಜನೆ ಅನುಷ್ಠಾನ ಸಮಿತಿ ಸಭೆಯಲ್ಲಿ ಅಧ್ಯಕ್ಷ ತೀತಿರ ಧರ್ಮಜ ಉತ್ತಪ್ಪ ಮಾತನಾಡಿದರು

   

ಮಡಿಕೇರಿ: ಇಲ್ಲಿ ಸೋಮವಾರ ನಡೆದ ಗ್ಯಾರಂಟಿ ಯೋಜನಾ ಅನುಷ್ಠಾನ ಜಿಲ್ಲಾ ಸಮಿತಿ ಸಭೆಯಲ್ಲಿ ಅಧಿಕಾರಿಗಳ ವಿರುದ್ಧ ಸಮಿತಿ ಸದಸ್ಯರು ಅಸಮಾಧಾನ ಹೊರಹಾಕಿದರು. ಮಾತ್ರವಲ್ಲ, ಸದಸ್ಯರ ಗಮನಕ್ಕೆ ತಾರದೇ ತಯಾರಿಸಿರುವ ಗೃಹಲಕ್ಷ್ಮಿ ವಿವಿಧೋದ್ದೇಶ ಸಹಕಾರ ಸಂಘದ ನಿರ್ದೇಶಕರ ಪಟ್ಟಿಯನ್ನು ಒಪ್ಪಲು ಸಾಧ್ಯವಿಲ್ಲ ಎಂದು ನಿರಾಕರಿಸಿದರು.

ಇದಕ್ಕೆ ಸ್ಪಂದಿಸಿದ ಸಮಿತಿ ಅಧ್ಯಕ್ಷ ತೀತಿರ ಧರ್ಮಜ ಉತ್ತಪ್ಪ ‘ಗೃಹಲಕ್ಷ್ಮಿ ವಿವಿಧೋದ್ದೇಶ ಸಹಕಾರ ಸಂಘಕ್ಕೆ ಈಗಾಗಲೇ ತಾಲ್ಲೂಕುವಾರು ಆಯ್ಕೆ ಮಾಡಿರುವ ಪಟ್ಟಿಯನ್ನು ಪರಿಷ್ಕರಿಸಿ’ ಎಂದು ಸೂಚಿಸಿದರು.

ADVERTISEMENT

ಇದಕ್ಕೂ ಮುನ್ನ ವಿಷಯ ಪ್ರಸ್ತಾಪಿಸಿದ ಕುಶಾಲನಗರ ತಾಲ್ಲೂಕು ಗ್ಯಾರಂಟಿ ಯೋಜನಾ ಅನುಷ್ಠಾನ ಸಮಿತಿ ಅಧ್ಯಕ್ಷ ವಿ.ಪಿ.ಶಶಿಧರ್, ‘ತಾಲ್ಲೂಕು ಗ್ಯಾರಂಟಿ ಯೋಜನಾ ಅನುಷ್ಠಾನ ಸಮಿತಿ ಅಧ್ಯಕ್ಷರು ಮತ್ತು ಜಿಲ್ಲಾ ಸಮಿತಿ ಸದಸ್ಯರ ಗಮನಕ್ಕೆ ಬಾರದೆ ಪಟ್ಟಿಯನ್ನು ಕಳುಹಿಸಿಕೊಡಲಾಗಿದ್ದು, ಈ ಪಟ್ಟಿಯನ್ನು ಪರಿಷ್ಕರಿಸಬೇಕು’ ಎಂದು ಒತ್ತಾಯಿಸಿದರು.

ಗ್ಯಾರಂಟಿ ಯೋಜನೆ ಅನುಷ್ಠಾನಕ್ಕೆ ಸಂಬಂಧಿಸಿದಂತೆ ಜಿಲ್ಲಾ ಹಾಗೂ ತಾಲ್ಲೂಕು ಘಟಕಗಳಿಗೆ ಕಡ್ಡಾಯವಾಗಿ ಮಾಹಿತಿ ನೀಡಬೇಕು. ಅದನ್ನು ಬಿಟ್ಟು ಅಧಿಕಾರಿಗಳು ಪಟ್ಟಿ ತಯಾರಿಸುವುದು ಸರಿಯಲ್ಲ ಎಂದು ಹರಿಹಾಯ್ದರು. ಇವರ ಮಾತಿಗೆ ಸಮಿತಿಯ ಇತರ ಸದಸ್ಯರೂ ದನಿಗೂಡಿಸಿದರು.

ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪ ನಿರ್ದೇಶಕ ಪ್ರಸನ್ನ ಕುಮಾರ್, ‘ಗೃಹಲಕ್ಷ್ಮಿ ವಿವಿಧೋದ್ದೇಶ ಸಹಕಾರ ಸಂಘದ ಸದಸ್ಯತ್ವ ಪಡೆಯಲು ₹ 1 ಸಾವಿರ ನೀಡಿ ನೋಂದಣಿಯಾಗಬೇಕಿದೆ. ಆ ನಿಟ್ಟಿನಲ್ಲಿ ತಾಲ್ಲೂಕು ಮಟ್ಟದಲ್ಲಿ ಶಿಶು ಕಲ್ಯಾಣ ಅಧಿಕಾರಿಗಳು ಮಾಹಿತಿ ಒದಗಿಸಿರುವಂತೆಯೇ ಪಟ್ಟಿ ಕಳುಹಿಸಲಾಗಿದೆ’ ಎಂದು ಸಮರ್ಥಿಸಿಕೊಂಡರು.

‘ಜಿಲ್ಲೆಯ 5 ತಾಲ್ಲೂಕಿನಲ್ಲಿ ಪ್ರತೀ 10 ಜನರಂತೆ 50 ಜನರನ್ನು ಗೃಹಲಕ್ಷ್ಮಿ ವಿವಿಧೋದ್ದೇಶ ಸಂಘದ ನಿರ್ದೇಶಕರಾಗಿ ಪಟ್ಟಿ ತಯಾರಿಸಲಾಗಿದೆ’ ಎಂದು ಮಾಹಿತಿ ನೀಡಿದರು.

ಇದಕ್ಕೆ ಪ್ರತಿಕ್ರಿಯಿಸಿದ ಅಧ್ಯಕ್ಷ ತೀತಿರ ಧರ್ಮಜ ಉತ್ತಪ್ಪ, ‘ಪಟ್ಟಿಯಲ್ಲಿ ಲೋಪಗಳಿದ್ದಲ್ಲಿ ಪರಿಷ್ಕರಿಸಬೇಕು. ಆದರೆ, ಜಿಲ್ಲಾ ಹಾಗೂ ತಾಲ್ಲೂಕು ಅಧ್ಯಕ್ಷರ ಗಮನಕ್ಕೆ ತಂದು ಪಟ್ಟಿಯನ್ನು ತಯಾರಿಸಬೇಕಿತ್ತು’ ಎಂದು ಹೇಳಿದರು.

ಜಿಲ್ಲಾ ಉದ್ಯೋಗ ವಿನಿಮಯ ಅಧಿಕಾರಿ ಮಂಜುನಾಥ್ ಮಾತನಾಡಿ, ‘ಜಿಲ್ಲೆಯಲ್ಲಿ ಪದವಿ 1,625, ಡಿಪ್ಲೋಮಾ 24 ಮಂದಿ ಒಟ್ಟು 1,649 ಮಂದಿ ಯುವನಿಧಿ ಸೌಲಭ್ಯ ಪಡೆಯುತ್ತಿದ್ದು, ಇದುವರೆಗೆ ₹ 438.87 ಲಕ್ಷ ಪಾವತಿಯಾಗಿದೆ’ ಎಂದು ಹೇಳಿದರು.

ಯುವನಿಧಿ ಯೋಜನೆ ಸಂಬಂಧಿಸಿದಂತೆ ಕಾಲೇಜುಗಳಿಗೆ ತೆರಳಿ ಮಾಹಿತಿ ನೀಡುವಂತೆ ಧರ್ಮಜ ಉತ್ತಪ್ಪ ಸೂಚಿಸಿದರು.

ಸೆಸ್ಕ್ ಕಾರ್ಯಪಾಲಕ ಎಂಜಿನಿಯರ್ ರಾಮಚಂದ್ರ ಮಾತನಾಡಿ, ‘ಗೃಹಜ್ಯೋತಿ ಯೋಜನೆಯಡಿ ಶೇ 99.15 ರಷ್ಟು ಪ್ರಗತಿ ಸಾಧಿಸಲಾಗಿದೆ. ₹ 731.28 ಲಕ್ಷ ಸಹಾಯಧನ ಕಲ್ಪಿಸಲಾಗಿದೆ’ ಎಂದು ಅವರು ಹೇಳಿದರು.

ಶಕ್ತಿ ಯೋಜನೆ ಸಂಬಂಧಿಸಿದಂತೆ ಮಾಹಿತಿ ನೀಡಿದ ಕೆಎಸ್‍ಆರ್‌ಟಿಸಿ ಮಡಿಕೇರಿ ಘಟಕದ ವ್ಯವಸ್ಥಾಪಕ ಈರಸಪ್ಪ, ‘ಅಗತ್ಯವಿರುವ ಕಡೆಗಳಲ್ಲಿ ಕೆಎಸ್‍ಆರ್‌ಟಿಸಿ ಬಸ್‍ಗಳ ಸಂಚಾರಕ್ಕೆ ಅವಕಾಶ ಕಲ್ಪಿಸಲಾಗಿದೆ’
ಎಂದರು.

ಉಪಾಧ್ಯಕ್ಷರಾದ ಕೆ.ಸಿ.ಭೀಮಯ್ಯ, ನಾಸೀರ್ ಅವರು ಹಲವು ವಿಷಯಗಳನ್ನು ಪ್ರಸ್ತಾಪಿಸಿದರು. ಸದಸ್ಯರಾದ ಎಸ್.ಕೆ.ಸುಂದರ, ಮುಸ್ತಪ, ಪಿ.ಎಲ್.ಸುರೇಶ್, ಎನ್.ಆರ್.ಪದವಿ, ಕೆ.ಜಿ.ಪೀಟರ್, ಮಂದ್ರೀರ ಮೋಹನ್ ದಾಸ್, ಪಿ.ವಿ.ಜಾನ್ಸನ್, ಜಿಲ್ಲಾ ಪಂಚಾಯಿತಿ ಯೋಜನಾಧಿಕಾರಿ ಅಬ್ದುಲ್ ನಬಿ ಭಾಗವಹಿಸಿದ್ದರು.

ಗ್ಯಾರಂಟಿ ಯೋಜನಾ ಅನುಷ್ಠಾನ ಜಿಲ್ಲಾ ಸಮಿತಿ ಸಭೆ

ಹಲವು ಸದಸ್ಯರಿಂದ ಅಧಿಕಾರಿಗಳ ವಿರುದ್ಧ ಅಸಮಾಧಾನ

ನಿರ್ದೇಶಕರ ಪಟ್ಟಿ ಪರಿಷ್ಕರಿಸಲು ತೀರ್ಮಾನ

ಪ್ರತಿಧ್ವನಿಸಿದ ಪಡಿತರ ಚೀಟಿ ಸಮಸ್ಯೆ

ಸೋಮವಾರಪೇಟೆ ತಾಲ್ಲೂಕು ಗ್ಯಾರಂಟಿ ಅನುಷ್ಠಾನ ಸಮಿತಿ ಅಧ್ಯಕ್ಷ ಕಾಂತರಾಜು ಮಾತನಾಡಿ, ‘ಬಿಪಿಎಲ್ ಪಡಿತರ ಚೀಟಿದಾರರನ್ನು ಎಪಿಎಲ್‍ಗೆ ವರ್ಗಾಯಿಸಲಾಗಿದೆ. ಇದನ್ನು ಕೂಡಲೇ ಪರಿಶೀಲಿಸಬೇಕು. ಬಡವರಿಗೆ ಅನ್ಯಾಯವಾಗಬಾರದು’ ಎಂದು ಹೇಳಿದರು.

ಈ ಕುರಿತು ಪ್ರತಿಕ್ರಿಯಿಸಿದ ಧರ್ಮಜ ಉತ್ತಪ್ಪ, ‘ಬಿಪಿಎಲ್‍ನಿಂದ ಎಪಿಎಲ್ ಆಗಿದ್ದಲ್ಲಿ ಯಾವುದೇ ಕುಟುಂಬ ತಹಶೀಲ್ದಾರ್ ಕಚೇರಿಯ ಆಹಾರ ಶಾಖೆಗೆ ಮನವಿ ಸಲ್ಲಿಸಿ ಬಿಪಿಎಲ್ ಕಾರ್ಡ್ ಪಡೆಯಬೇಕು. ಅರ್ಹರೆಲ್ಲರಿಗೂ ಬಿಪಿಎಲ್ ಪಡಿತರ ಚೀಟಿ ದೊರೆಯಬೇಕು’ ಎಂದು ತಿಳಿಸಿದರು.

ಪ್ರತಿಕ್ರಿಯಿಸಿದ ಆಹಾರ ನಿರೀಕ್ಷಕಿ ವೀಣಾ, ‘ಈಚೆಗೆ ಬಿಪಿಎಲ್‌ನಿಂದ ಎಪಿಎಲ್‍ಗೆ ಬದಲಾಗಿದ್ದಲ್ಲಿ, ಸರಿಪಡಿಸಿಕೊಳ್ಳಲು ಅವಕಾಶವಿದೆ. ಆದರೆ, ಈ ಹಿಂದೆ ಆಗಿರುವುದನ್ನು ಸದ್ಯ ಬದಲಾಯಿಸಲು ಅವಕಾಶವಿಲ್ಲ’ ಎಂದು ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.