
ವಿರಾಜಪೇಟೆ: ಪಟ್ಟಣದ ತಾಲ್ಲೂಕು ಮೈದಾನದಲ್ಲಿ ಈಚೆಗೆ ನಡೆದ 50 ವರ್ಷ ಮೇಲ್ಪಟ್ಟ ಪುರುಷರ ಫುಟ್ಬಾಲ್ ಟೂರ್ನಿಯಲ್ಲಿ ಅಲ್ಪಾಲ್ ಎಫ್.ಸಿ ತಂಡ ಏಕೈಕ ಗೋಲಿನಿಂದ ಸ್ನೇಹಿತರ ಬಳಗ ತಂಡವನ್ನು ಮಣಿಸಿ ಪ್ರಶಸ್ತಿಯನ್ನು ಪಡೆದುಕೊಂಡಿತು.
ಹೊನಲು ಬೆಳಕಿನ ಟೂರ್ನಿಯಲ್ಲಿ ನಡೆದ ಅಂತಿಮ ಪಂದ್ಯದ ಮೊದಲಾರ್ಧದಲ್ಲಿ ಯಾವುದೇ ಗೋಲು ದಾಖಲಾಗಲಿಲ್ಲ. ದ್ವಿತೀಯಾರ್ಧದಲ್ಲಿ ಅಲ್ಪಾಲ್ ಎಫ್.ಸಿ ತಂಡದ ಮುನ್ನಡೆ ಆಟಗಾರ ಅಲ್ತಾಫ್ ಅವರು ಗೋಲು ಗಳಿಸುವ ಮೂಲಕ ತಂಡಕ್ಕೆ ಪ್ರಶಸ್ತಿ ದೊರೆಯುವಂತೆ ಮಾಡಿದರು. ಸ್ನೇಹಿತರ ಬಳಗ ತಂಡ ದ್ವಿತೀಯ ಸ್ಥಾನ ಪಡೆದುಕೊಂಡಿತು.
ಮೊದಲ ಸೆಮಿಫೈನಲ್ ಪಂದ್ಯದಲ್ಲಿ ಸ್ನೇಹಿತ ಬಳಗ ತಂಡವು 2–0 ಗೋಲುಗಳಿಂದ ಬ್ಲಾಕ್ ಅಂಡ್ ವೈಟ್ ತಂಡವನ್ನು ಮಣಿಸಿ ಫೈನಲ್ ಪ್ರವೇಶ ಪಡೆದಿತ್ತು. ದ್ವಿತೀಯ ಸೆಮಿಫೈನಲ್ ಪಂದ್ಯದಲ್ಲಿ ಅಲ್ಪಾಲ್ ಎಫ್.ಸಿ ತಂಡವು ಪೆನಾಲ್ಟಿ ಶೂಟೌಟ್‌ನಲ್ಲಿ ಶಿವಾಜಿ ತಂಡವನ್ನು ಮಣಿಸಿತು.
ಟೂರ್ನಿಯಲ್ಲಿ ಸ್ನೇಹಿತರ ಬಳಗ, ಬ್ಲೂ ಸ್ಟಾರ್ ಎಫ್.ಸಿ, ಅಲ್ಪಾಲ್ ಎಫ್.ಸಿ, ಬ್ಲಾಕ್ ಅಂಡ್ ವೈಟ್ ಎಫ್.ಸಿ, ಜಗ್ವಾರ್ ಎಫ್.ಸಿ, ಎಸ್.ಪಿ ಟವರ್ ಎಫ್.ಸಿ ಮತ್ತು ಸೌಪರ್ಣಿಕ ಎಫ್.ಸಿ, ಶಿವಾಜಿ ಎಫ್.ಸಿ ತಂಡಗಳು ಭಾಗವಹಿಸಿದ್ದವು. ವಿಜೇತ ತಂಡಗಳಿಗೆ ಟ್ರೋಫಿ ಮತ್ತು ನಗದು ಪುರಸ್ಕಾರ ನೀಡಿ ಗೌರವಿಸಲಾಯಿತು.
ಸಮಾರೋಪ ಸಮಾರಂಭದಲ್ಲಿ ಕಾಣತಂಡ ಬೀನಾ ಜಗದೀಶ್ ಮಾತನಾಡಿ, ‘ಸದೃಢತೆ, ಸಂಯಮ, ಶಿಸ್ತು ಮತ್ತು ಬದ್ಧತೆಯನ್ನು ಅಳವಡಿಸಿಕೊಂಡಲ್ಲಿ ಮಾತ್ರ ಗುರಿ ಸಾಧಿಸಲು ಸಾಧ್ಯ. ಕ್ರೀಡೆಗಳ ಆಯೋಜನೆಯಿಂದ ಆರೋಗ್ಯವಂತ ಸದೃಢ ಸಮಾಜವನ್ನು ಸೃಷ್ಟಿಸಲು ಸಾಧ್ಯ’ ಎಂದರು.
ನಿವೃತ್ತ ತೆರಿಗೆ ಅಧಿಕಾರಿ ಕೆ.ಬಿ. ಲಿಂಗರಾಜು ಮಾತನಾಡಿ, ‘ಕ್ರೀಡೆಯಿಂದ ಮಾತ್ರ ಪರಸ್ಪರ ಸ್ನೇಹ ಮಿಲನ ಸಾಧ್ಯ’ ಎಂದರು.
ಉದ್ಯಮಿ ಸಿ.ಎ.ನಾಸಿರ್, ಹಿಂದೂ ಮಲಯಾಳಿ ಅಸೋಸಿಯೇಷನ್ ಅಧ್ಯಕ್ಷ ವಿನೂಪ್ ಎ, ಮುತ್ತಪ್ಪ ಮಲಯಾಳಿ ಸಮಾಜ ಅಧ್ಯಕ್ಷ ಸುಮೇಶ್, ಅನೀಲ್ ಸೀನಪ್ಪ ಹಾಗೂ ಕೂರ್ಗ್ ಮಾಸ್ಟರ್ಸ್ ಕಪ್ ಆಯೋಜಕ ಸಂಸ್ಥೆಯ ಅಧ್ಯಕ್ಷ ಎಲ್.ಜಿ. ಭಾಸ್ಕರ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.