ADVERTISEMENT

ಕೋವಿಡ್ ಗೆದ್ದವರ ಕಥೆಗಳು | ‘ಭಯ ಬೀಳಲಿಲ್ಲ, ಧೃತಿಗೆಡಲಿಲ್ಲ’

ಸಿ.ಎಸ್.ಸುರೇಶ್
Published 23 ಜುಲೈ 2020, 19:30 IST
Last Updated 23 ಜುಲೈ 2020, 19:30 IST
ತಿರುಮಲೇಶ್, ಭಾಗಮಂಡಲ
ತಿರುಮಲೇಶ್, ಭಾಗಮಂಡಲ   

ನಾಪೋಕ್ಲು: ಕೋವಿಡ್–19 ಆಸ್ಪತ್ರೆಗೆ ತೆರಳಿದ್ದು ‘ಬಿಗ್‍ಬಾಸ್’ ಮನೆಗೆ ಹೋಗಿ ಬಂದಂತಾಯಿತು ಅಷ್ಟೇ... ಬೆಂಗಳೂರಿನ ಖಾಸಗಿ ಕಂಪೆನಿಯಲ್ಲಿ ಕೆಲಸ ಮಾಡುತ್ತಿದ್ದೆ. ಜೂನ್ 29ಕ್ಕೆ ಬೆಂಗಳೂರು ಬಿಟ್ಟಿದ್ದೆ. ಜೂನ್ 30ರಂದು ಮಡಿಕೇರಿಯ ಕೋವಿಡ್ ಆಸ್ಪತ್ರೆಯಲ್ಲಿ ಕುಟುಂಬ ಸಹಿತ ತಪಾಸಣೆಗೆ ಒಳಗಾದೆ. ಎರಡು ದಿನ ಬಿಟ್ಟು ಕರೆ ಮಾಡಿ ತಿಳಿಸುತ್ತೇವೆ ಎಂದು ವೈದ್ಯಕೀಯ ಸಿಬ್ಬಂದಿಗಳು ಮಾಹಿತಿ ನೀಡಿದರು.

ಜುಲೈ 9ರಂದು ಕೋವಿಡ್ ಪರೀಕ್ಷೆಯ ಫಲಿತಾಂಶ ಬಂತು. ನನ್ನದು ಪಾಸಿಟಿವ್; ಮನೆಯವರು ಸೇಫ್. ನೆಗಡಿ, ಕೆಮ್ಮು, ಶೀತ,- ಯಾವುದೇ ಕೊರೊನ ಲಕ್ಷಣಗಳಿರಲಿಲ್ಲ. ಆದರೆ, ಕೊರೊನ ಪಾಸಿಟಿವ್ ಬಂದಿತ್ತು. ಭಯಬೀಳಲಿಲ್ಲ. ಧೃತಿಗೆಡಲಿಲ್ಲ. ವೈದ್ಯಕೀಯ ಸಿಬ್ಬಂದಿ ಕೊಟ್ಟ ಸೂಚನೆಗಳನ್ನು ತಪ್ಪದೆ ಪರಿಪಾಲಿಸಿದೆ. ಮುಂಜಾಗ್ರತಾ ಕ್ರಮಗಳನ್ನು ಕೈಗೊಂಡೆ. ಮನೆಯವರು ಧೈರ್ಯ ತುಂಬಿದರು. ಕೋವಿಡ್-19 ಗೆದ್ದಿದ್ದೇನೆ. ಕೃಷಿ ಕಾರ್ಯಗಳನ್ನು ನಡೆಸುತ್ತಿದ್ದೇನೆ.

ಭಾಗಮಂಡಲದಲ್ಲಿ 2017ರಲ್ಲಿ ಹೊಸಮನೆ ಕಟ್ಟಿಸಿದ್ದೇನೆ. ಎಲ್ಲಾ ಸೌಲಭ್ಯಗಳಿವೆ. ಹತ್ತಿರದಲ್ಲಿ ಯಾವುದೇ ಮನೆಗಳಿಲ್ಲ. ತೋಟದ ಮನೆ ಹೆಂಡತಿ ಮಗಳು ಹಾಗೂ ನಾದಿನಿಯೊಂದಿಗೆ ವಾಸವಾಗಿದ್ದೇನೆ. ಅವರು ಹೋಂ ಕ್ವಾರಂಟೈನ್ ಆದರು. ಎರಡು ದಿನದ ಮಟ್ಟಿಗೆ ಕೋವಿಡ್ ಆಸ್ಪತ್ರೆಗೆ ದಾಖಲಾಗಬೇಕು ಎಂದರು.

ADVERTISEMENT

ಜೂನ್ 10ರಂದು ಆಸ್ಪತ್ರೆಗೆ ದಾಖಲಾದೆ. ರಕ್ತ, ಇಸಿಜಿ ಮತ್ತಿತರ ಪರೀಕ್ಷೆಗಳನ್ನು ನಡೆಸಿದರು. ಎಲ್ಲಾ ನಾರ್ಮಲ್ ಆಗಿತ್ತು. ಬಳಿಕ ನವೋದಯ ಶಾಲೆಗೆ ಶಿಫ್ಟ್ ಮಾಡಿದರು. ಮೂರುದಿನ ಅಲ್ಲಿದ್ದ ಬಳಿಕ ಬಿಡುಗಡೆ ಮಾಡಿದರು. ಈಗ ಮನೆಗೆ ಬಂದು ಎಂಟು ದಿನಗಳು ಕಳೆದಿವೆ. ಕೃಷಿ ಚಟುವಟಿಕೆಗಳನ್ನು ನಿಶ್ಚಿಂತೆಯಿಂದ ಮಾಡುತ್ತಿದ್ದೇನೆ. ಆರೋಗ್ಯದ ಯಾವ ಸಮಸ್ಯೆಯೂ ಇಲ್ಲ.

ಕೊರೊನಾ ಕಾಯಿಲೆ ಬಗ್ಗೆ ಭಯ ಬೇಡ. ಸರ್ಕಾರದ ವತಿಯಿಂದ ಕೋವಿಡ್ ಸೋಂಕು ತಗುಲಿದವರಿಗೆ ಸಕಲ ಸೌಲಭ್ಯಗಳನ್ನು ಒದಗಿಸಲಾಗುತ್ತಿದೆ. ಕೋವಿಡ್ ಆಸ್ಪತ್ರೆಯ ವೈದ್ಯರು ಸಿಬ್ಬಂದಿಗಳು ಆಂಬ್ಯುಲೆನ್ಸ್ ಚಾಲಕ ಪ್ರತಿಯೊಬ್ಬರೂ ಮಾನವೀಯತೆ ಮೆರೆದಿದ್ದಾರೆ. ನನಗೆ ಪಾಸಿಟಿವ್ ಎಂದು ತಿಳಿದಾಗ ಸ್ವಲ್ಪ ತಲೆಬಿಸಿಯಾಗಿತ್ತು. ಚಿಂತಿಸುವ ಅಗತ್ಯವೇ ಇಲ್ಲ. ಆರೋಗ್ಯ ಕಾಪಾಡಿಕೊಳ್ಳುವುದು ನಮ್ಮ ಕರ್ತವ್ಯ. ಅಧಿಕಾರಿಗಳು ಜಿಲ್ಲೆಯ ಜನರಿಗೆ ಸಾಕಷ್ಟು ಧೈರ್ಯ ತುಂಬಿದ್ದಾರೆ. ಮುಂಜಾಗ್ರತಾ ಕ್ರಮಗಳಾದ ಮಾಸ್ಕ್ ಧರಿಸುವುದು, ಸಮುದಾಯದ ಜೊತೆ ಬೆರೆಯದಿರುವುದು, ಆರೋಗ್ಯವನ್ನು ಕಾಪಾಡಿಕೊಳ್ಳುವುದು ನಮ್ಮ ಕರ್ತವ್ಯ.

– ತಿರುಮಲೇಶ್, ಭಾಗಮಂಡಲ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.