ADVERTISEMENT

ಸೋಮವಾರಪೇಟೆ | ಸ್ವಚ್ಛಂದವಾಗಿ ವಿಹರಿಸುತ್ತಿರುವ ಕಾಡು ಪ್ರಾಣಿಗಳು

ಲೋಕೇಶ್ ಡಿ.ಪಿ
Published 23 ಏಪ್ರಿಲ್ 2020, 19:30 IST
Last Updated 23 ಏಪ್ರಿಲ್ 2020, 19:30 IST
ಸೋಮವಾರಪೇಟೆ ಸಮೀಪದ ಕಾಜೂರು ಗ್ರಾಮದ ಟಾಟಾ ಕಾಫಿ ಸಂಸ್ಥೆಗೆ ಸೇರಿದ ಕಾಫಿ ತೋಟದಿಂದ ಕಾಡಿಗೆ ತೆರಳುತ್ತಿರುವ ಕಾಡಾನೆ ಹಿಂಡು.
ಸೋಮವಾರಪೇಟೆ ಸಮೀಪದ ಕಾಜೂರು ಗ್ರಾಮದ ಟಾಟಾ ಕಾಫಿ ಸಂಸ್ಥೆಗೆ ಸೇರಿದ ಕಾಫಿ ತೋಟದಿಂದ ಕಾಡಿಗೆ ತೆರಳುತ್ತಿರುವ ಕಾಡಾನೆ ಹಿಂಡು.   

ಸೋಮವಾರಪೇಟೆ: ಕೊರೊನಾದಿಂದ ದೇಶದಲ್ಲಿ ಕೇಂದ್ರ ಸರ್ಕಾರ ಲಾಕ್ ಡೌನ್ ಹೇರಿದ್ದರಿಂದ ಜನಸಾಮಾನ್ಯರು ಸಾಕಷ್ಟು ತೊಂದರೆ ಅನುಭವಿಸಿದ್ದರೂ, ಕಾಡು ಪ್ರಾಣಿಗಳು ಹಾಗೂ ಪಕ್ಷಿಗಳು ಮಾತ್ರ ಸ್ಚಚ್ಛಂದವಾಗಿ ವಿಹರಿಸುತ್ತಿರುವುದನ್ನು ಅರಣ್ಯ ಪ್ರದೇಶದ ಭಾಗಗಳಲ್ಲಿ ಕಾಣಬಹುದಾಗಿದೆ.

ರಸ್ತೆಗಳಲ್ಲಿ ವಾಹನಗಳು ಮತ್ತು ಮನುಷ್ಯರ ಸಂಚಾರ ಕಡಿಮೆ ಇರುವುದರಿಂದ, ಯಾವುದೇ ಅಡಚಣೆಗಳಿಲ್ಲದೆ, ಪ್ರಾಣಿಗಳು ರಸ್ತೆಯ ಮೇಲೆ ಯಾವುದೇ ಹೊತ್ತಿನಲ್ಲಿ ನಡೆದಾಡುತ್ತಿದ್ದು, ಇದರಿಂದಾಗಿ ಕೆಲವು ಭಾರಿ ತುರ್ತು ಕೆಲಸ ಕಾರ್ಯಗಳಿಗೆ ತೆರಳುವವರಿಗೆ ಸಮಸ್ಯೆ ಎದುರಾಗಿದೆ.
ಐಗೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕಾಜೂರು ಜಂಕ್ಷನ್ ಬಳಿಯ ಟಾಟಾ ಕಾಫಿ ಸಂಸ್ಥೆಗೆ ಸೇರಿದ ಸ್ಥಳದಲ್ಲಿ ದಿನಂಪ್ರತಿ ಕಾಡಾನೆಗಳು ಸಂಜೆ 6 ರಿಂದ 7ರ ವರೆಗೆ ಕಾಡಿನಿಂದ ಟಾಟಾ ಕಾಫಿ ತೋಟಕ್ಕೆ ಹಾಗೂ ಬೆಳಿಗ್ಗೆ 6ರಿಂದ 7ರ ವರೆಗೆ ತೋಟದಿಂದ ಕಾಡಿಗೆ ತೆರಳಲು ರಸ್ತೆಯಲ್ಲಿ ಹೋಗುತ್ತಿದ್ದವು. ಆದರೆ, ಈಗ ರಸ್ತೆಯಲ್ಲಿ ವಾಹನಗಳ ಸಂಚಾರ ಕಡಿಮೆಯಾಗಿರುವುದರಿಂದ ಅವುಗಳಿಗೆ ಅನುಕೂಲವಾದ ಸಮಯದಲ್ಲಿ ರಸ್ತೆ ದಾಟುವುದು, ರಸ್ತೆ ಮದ್ಯದಲ್ಲಿಯೇ ನಡೆದುಕೊಂಡು ಹೋಗುವುದು ಸಾಮಾನ್ಯವಾಗಿದೆ. ಇದರಿಂದಾಗಿ ಜನರು ಭಯದಿಂದಲೇ ಸಂಚರಿಸಬೇಕಾಗಿದೆ.
ಕೋವರ್ ಕೊಲ್ಲಿ ಬಳಿಯಿಂದಲೂ ಮಡಿಕೇರಿಗೆ ತೆರಳುವ ರಸ್ತೆ ಇಳಿಜಾರು ಇರುವುದರಿಂದ ದ್ವಿ ಚಕ್ರ ವಾಹನ ಸೇರಿದಂತೆ ಹೆಚ್ಚಿನ ವಾಹನಗಳು ವಾಹನಗಳ ಇಂಜೀನ್ ಆಫ್ ಮಾಡಿಕೊಂಡೇ ತೆರಳುತ್ತಿದ್ದಾರೆ. ರಸ್ತೆಯ ತಿರುವುಗಳಲ್ಲಿ ಕಾಡಾನೆಗಳು ಇರುವುದರಿಂದ ಅಪಾಯ ಎದುರಾಗಬಹುದಾಗಿದೆ ಎಂದು ಐಗೂರು ಗ್ರಾಮ ಪಂಚಾಯಿತಿ ಸದಸ್ಯ ದಿನೇಶ್ ಹೇಳಿದರು.

ಕಾಡಾನೆಗಳು ಕಾಡಿನಿಂದ ಕಾಫಿ ತೋಟಕ್ಕೆ ತೆರಳುವ ಸ್ಥಳದಲ್ಲಿ ಆರು ಅಡಿ ಆಳ ಮತ್ತು ಅಗಲದ ಟ್ರಂಚ್ ನಿರ್ಮಾಣ ಮಾಡಲಾಗಿದೆ. ಆದರೆ, ಕೆಲವೆಡೆ ಕಲ್ಲು ಇರುವುದರಿಂದ ಆ ಸ್ಥಳದಲ್ಲಿ ಗುಂಡಿ ತೆಗೆದಿಲ್ಲ. ಕೆಲವು ಭಾಗಗಳಲ್ಲಿ ಆನೆಗಳೇ ಗುಂಡಿಗೆ ಪಕ್ಕದ ಮಣ್ಣು ತಳ್ಳಿ ಸಂಚರಿಸುತ್ತಿವೆ.
ಕಾಜೂರು ಗ್ರಾಮಕ್ಕೆ ತೆರಳುವ ರಸ್ತೆ ಬದಿಯಲ್ಲಿ ಅರಣ್ಯ ಇಲಾಖೆ ವತಿಯಿಂದ ಸೋಲಾರ್ ಬೇಲಿ ಅಳವಡಿಲಾಗಿದೆ. ಇದು ಕೆಲವೆಡೆಗಳಲ್ಲಿ ತುಂಡಾಗಿ ಕೆಳಗೆ ಬಿದ್ದಿದೆ. ಕೆಲವು ಸ್ಥಳಗಳಲ್ಲಿ ಸ್ಥಳೀಯರನ್ನು ಸೇರಿಸಿ ತಂಡವನ್ನು ಮಾಡಿ ಅದರ ನಿರ್ವಹಣೆಗೆ ಬಿಡಲಾಗಿದೆ. ಆದರೆ, ಸರ್ಕಾರದಿಂದ ಸೂಕ್ತ ಸಮಯದಲ್ಲಿ ನಿರ್ವಹಣೆಗೆ ಹಣ ಬಾರದಿರುವುದರಿಂದ ಸರಿಪಡಿಸಲು ಸಾಧ್ಯವಾಗುತ್ತಿಲ್ಲ ಎಂದು ಯಡವಾರೆ ಗ್ರಾಮದ ಮಚ್ಚಂಡ ಅಶೋಕ್ ದೂರಿದರು.

ADVERTISEMENT

ಮೀಸಲು ಅರಣ್ಯದಲ್ಲಿ ಆನೆಗಳಿಗೆ ಬೇಕಾದ ಆಹಾರವನ್ನು ಬೆಳೆಸಿ, ಕುಡಿಯಲು ಸಮರ್ಪಕ ನೀರಿನ ವ್ಯವಸ್ಥೆ ಮಾಡಿದಲ್ಲಿ ಆನೆಗಳು ಊರಿನತ್ತ ಮುಖ ಮಾಡುವುದು ಕಡಿಮೆಯಾಗುತ್ತದೆ. ಆದರೆ, ಕಾಡಿನಲ್ಲಿ ಕುಡಿಯಲು ನೀರಿಲ್ಲ. ಮೇಯಲು ಆಹಾರವಿಲ್ಲ. ಇದರಿಂದಾಗಿ ಬೇಸಿಗೆ ಬಂದ ತಕ್ಷಣ ಆನೆಗಳ ಹಿಂಡು ಇಲ್ಲಿ ಸೇರುತ್ತವೆ. ಈ ಸಮಯ ಬೆಳಿಗ್ಗೆ ಹಾಗೂ ಸಂಜೆ ವಾಹನಗಳು ಹಾಗೂ ಜನರು ತಿರುಗಾಡಲು ಭಯಪಡಬೇಕಿದೆ. ಅಲ್ಲದೆ, ತೋಟಗಳಲ್ಲಿ ಹಗಲಿನಲ್ಲಿಯೇ ಸಂಚರಿಸುವುದರಿಂದ ಕಾರ್ಮಿಕರು ಕೆಲಸಕ್ಕೂ ಬರಲು ಹಿಂದೇಟು ಹಾಕುತ್ತಿದ್ದಾರೆ ಎಂದು ಸ್ಥಳೀಯ ರೈತರ ದೂರಾಗಿದೆ.

ಹಿಂದೆ ಕೇವಲ ಹಲಸಿನ ಹಣ್ಣು ಮತ್ತು ಬಿದಿರಿನ ಜೊತೆಗೆ ಸೊಪ್ಪನ್ನು ತಿನ್ನುತ್ತಿದ್ದ ಕಾಡಾನೆಗಳು, ಈಗ ಕಾಫಿ ಹಣ್ಣು, ಕಿತ್ತಳೆ ಹಣ್ಣು ಸೇರಿದಂತೆ ಸಿಕ್ಕಿದಲನ್ನೆಲ್ಲಾ ತಿನ್ನುವುದರೊಂದಿಗೆ, ತೋಟವನ್ನು ಹಾಳುಮಾಡುತ್ತಿವೆ. ಆನೆಗಳ ಹಿಂಡಿನಲ್ಲಿ ಮರಿಗಳಿದ್ದರೆ, ಅವುಗಳ ಪುಂಡಾಟಕ್ಕೆ ಕಾಫಿ ಗಿಡಗಳು ನೆಲಕಚ್ಚುತ್ತಿವೆ ಎಂದು ಸ್ಥಳಿಯರಾದ ಹೊನ್ನಪ್ಪ ಹೇಳಿದರು.

ದಿನಂಪ್ರತಿ ಕಾಡಾನೆಗಳ ಚಲನ ವಲನವನ್ನು ವೀಕ್ಷಿಸಿ ಟಾಟಾ ಕಾಫಿ ಸಂಸ್ಥೆಗೆ ನೀಡಬೇಕಿದೆ. 15 ಆನೆಗಳಿದ್ದು, ಈಗ ನಾಲ್ಕರಿಂದ ಐದು ಆನೆಗಳ ಹಿಂಡು ಬೇರೆ ಬೇರೆಯಾಗಿ ಸಂಚರಿಸುತ್ತಿವೆ. ಆನೆಗಳು ತೋಟದಿಂದ ಕಾಡಿಗೆ ತೆರಳುವ ಸಂದರ್ಭ ವಾಹನಗಳಿಂದ ಅಡಚಣೆಯಾದಲ್ಲಿ ಅವುಗಳು ತೋಟಗಳಿಗೆ ನುಗ್ಗಿ ಹೆಚ್ಚಿನ ಹಾನಿ ಮಾಡುತ್ತಿವೆ. ಆನೆಗಳಿಗೆ ಕುಡಿಯಲು ನೀರಿನ ವ್ಯವಸ್ಥೆ ಕಲ್ಪಿಸಿದಲ್ಲಿ ಹೊರಗೆ ಬರುವುದಿಲ್ಲ. ಆದುದ್ದರಿಂದ, ಇಲ್ಲಿಯೇ ಇರುವ ನೀರಿನ ಹೊಳೆಗೆ ಕಟ್ಟೆ ಕಟ್ಟಿಸಿದಲ್ಲಿ ಅದರಿಂದ ನೀರನ್ನು ಎತ್ತಿ ಕಾಡಿನ ಕೆರೆಗೆ ತುಂಬಿಸುವ ಕೆಲಸವನ್ನು ಟಾಟಾ ಕಾಫಿ ಸಂಸ್ಥೆಯಿಂದ ಮಾಡಲಾಗುವುದು ಎಂದು ಟಾಟಾ ಕಾಫಿ ಸಂಸ್ಥೆಯ ಆನೆಗಳ ಚಲನವಲನ ವೀಕ್ಷಕ ಮಹೇಶ್ ಹೇಳಿದರು.

ಸ್ಥಳಿಯ ಆರ್ ಎಫ್ಒ ಶಮಾ ಮಾತನಾಡಿ, ‘ಈಗಾಗಲೇ ಅರಣ್ಯದಂಚಿಗೆ ರೈಲ್ವೆ ಕಂಬಿಗಳ ತಡೆ ಬೇಲಿ ನಿರ್ಮಿಸುವ ಸಲುವಾಗಿ ಕ್ರಿಯಾ ಯೋಜನೆ ಸರ್ಕಾರಕ್ಕೆ ಕಳುಹಿಸಲಾಗಿದ್ದು, ಕರೊನಾ ಹಿನ್ನೆಲೆಯಲ್ಲಿ ತಡವಾಗಿದೆ. ಆನೆ ಕಾರಿಡಾರ್ ನಲ್ಲಿ ಟಾಟಾ ಕಾಫಿ ಸಂಸ್ಥೆಯವರು ಸೋಲಾರ್ ತಂತಿ ಅಳವಡಿಸಿರುವುದರಿಂದ ಸಮಸ್ಯೆಯಾಗಿತ್ತು. ಸಂಸ್ಥೆಯ ವ್ಯವಸ್ಥಾಪಕರೊಂದಿಗೆ ಮಾತನಾಡಿ ಸೋಲಾರ್ ಬೇಲಿ ತೆರವುಗೊಳಿಸಲಾಗಿದೆ. ಕೆಲವು ಕಿಡಿಗೇಡಿಗಳು ಅರಣ್ಯಕ್ಕೆ ಬೆಂಕಿ ಇಟ್ಟು ಅರಣ್ಯ ನಾಶ ಮಾಡುತ್ತಿರುವುದರಿಂದ ಹೆಚ್ಚಿನ ಸಮಸ್ಯೆಯಾಗಿದೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.