ಮಡಿಕೇರಿ: ವಿದ್ಯಾರ್ಥಿಗಳ ಕೊರತೆಯಿಂದ ಸರ್ಕಾರಿ ಶಾಲೆಗಳು ಜೀವ ಉಳಿಸಿಕೊಳ್ಳಲು ಏದುಸಿರು ಬಿಡುತ್ತಿರುವ ಈ ಹೊತ್ತಿನಲ್ಲಿ ಇಲ್ಲೊಂದು ಸರ್ಕಾರಿ ಶಾಲೆಯಲ್ಲಿ ಮಕ್ಕಳ ಸಂಖ್ಯೆ ತುಸು ಏರಿಕೆ ಕಂಡು, ಆಶಾಭಾವನೆ ಮೂಡಿಸಿದೆ. ಶಾಲೆ ಹೊಂದಿರುವ ಸುಸಜ್ಜಿತ ಮೂಲಸೌಕರ್ಯ ಹಾಗೂ ಉತ್ತಮ ಬೋಧನೆಗಳಿಂದ ಈ ಶಾಲೆಯತ್ತ ಮತ್ತೆ ಪೋಷಕರು ಗಮನ ಹರಿಸುವಂತಾಗಿದೆ.
ತಾಲ್ಲೂಕಿನ ಬಿಳಿಗೇರಿ ಗ್ರಾಮದಲ್ಲಿರುವ ಹಾಕತ್ತೂರು ಸರ್ಕಾರಿ ಪ್ರೌಢಶಾಲೆಯೆ ಅಂತಹದ್ದೊಂದು ಅಪರೂಪದ ಶಾಲೆ ಎನಿಸಿದೆ. 1981ರಲ್ಲಿ ಆರಂಭವಾದ ಈ ಶಾಲೆಗೆ ಈಗ 44 ವರ್ಷಗಳು. ಇನ್ನು 6 ವರ್ಷದಲ್ಲಿ 50 ವರ್ಷ ಪೂರೈಸಲಿರುವ ಈ ಶಾಲೆಯಲ್ಲೂ ಇತ್ತೀಚಿನ ವರ್ಷಗಳಲ್ಲಿ ವಿದ್ಯಾರ್ಥಿಗಳ ಕೊರತೆ ಎದುರಾಗಿತ್ತು. 50 ವರ್ಷ ಪೂರೈಸುವುದೇ ಅನುಮಾನ ಎನಿಸಿತ್ತು. ಆದರೆ, ಈ ವರ್ಷ ದಾಖಲಾತಿಯಲ್ಲಿ ತುಸು ಚೇತರಿಕೆ ಕಂಡಿದೆ.
ಕಳೆದ 2 ವರ್ಷಗಳ ಹಿಂದೆ ಶಾಲೆಯಲ್ಲಿ ಮಕ್ಕಳ ಸಂಖ್ಯೆ 69 ಇತ್ತು. ಈ ವರ್ಷ ಈ ಸಂಖ್ಯೆ 80 ತಲುಪಿದೆ. ಮುಂದಿನ ವರ್ಷ 100 ದಾಟಿಸುವ ಉದ್ದೇಶ ಹೊಂದಲಾಗಿದೆ.
ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಕಳೆದ 5 ವರ್ಷಗಳಿಂದ ಶೇ 100ರಷ್ಟು ಫಲಿತಾಂಶ ದಾಖಲಿಸುತ್ತಿರುವುದು ಈ ಶಾಲೆಯ ಹೆಗ್ಗಳಿಕೆ. ಹಾಗಾಗಿಯೇ, ಇದು ಸುತ್ತಮುತ್ತಲ ಗ್ರಾಮಗಳಾದ ಮೇಕೇರಿ, ಕಗ್ಗೊಡ್ಲು, ತೊಂಬತ್ತುಮನೆ, ಹಾಕತ್ತೂರು, ಬಿಳಿಗೇರಿ ಗ್ರಾಮಗಳಿಂದ ವಿದ್ಯಾರ್ಥಿಗಳನ್ನು ಸೆಳೆಯುತ್ತಿದೆ.
ಈ ಶಾಲೆಯಲ್ಲಿ ಕಂಪ್ಯೂಟರ್ ಆಧಾರಿತ ಬೋಧನೆ ಇದೆ, ಪ್ರಯೋಗಾಲಯ, ಪಠ್ಯಕ್ಕೆ ಪೂರಕ ಮತ್ತು ಜ್ಞಾನಕ್ಕೆ ಪ್ರೇರಕವಾಗಿರುವ ಡಿಜಿಟಲ್ ಗ್ರಂಥಾಲಯ, ಸುಸಜ್ಜಿತವಾದ ಕ್ರೀಡಾಂಗಣ, ವಿಶಾಲವಾದ ಸಭಾಂಗಣ, ಸ್ಮಾರ್ಟ್ ತರಗತಿಗಳು, ಕಣ್ಮನ ಸೆಳೆಯುವ ಉದ್ಯಾನ ಸೇರಿದಂತೆ ಈ ಶಾಲೆಯಲ್ಲಿನ ಇನ್ನಿತರ ಸೌಲಭ್ಯಗಳು ಹತ್ತೂರ ಜನರು ಮೆಚ್ಚುವಂತೆ ಮಾಡಿವೆ.
2022ನೇ ಸಾಲಿನಲ್ಲಿ ರಾಜ್ಯಮಟ್ಟದ ಉತ್ತಮ ಮತದಾರರ ಸಾಕ್ಷರತಾ ಸಂಘದ ಪ್ರಶಸ್ತಿ ಈ ಶಾಲೆಗೆ ಲಭಿಸಿದೆ. 2022–23ನೇ ಸಾಲಿನಲ್ಲಿ ಬೆಂಗಳೂರಿನಲ್ಲಿ ನಡೆದ ಯುವಸಂಸತ್ ಕಾರ್ಯಕ್ರಮದಲ್ಲಿ ಶಾಲೆಯ ವಿದ್ಯಾರ್ಥಿನಿ ಎಸ್.ಮೇಘಾ ಭಾಗವಹಿಸಿದ್ದು ವಿಶೇಷ. ಇದೇ ಸಾಲಿನಲ್ಲಿ ಎಸ್.ಮೇಘಾ ವಿಜ್ಞಾನ ವಸ್ತು ಪ್ರದರ್ಶನದಲ್ಲಿ ತಾಲ್ಲೂಕು, ಜಿಲ್ಲೆ ಹಾಗೂ ರಾಜ್ಯಮಟ್ಟದಲ್ಲಿ ಭಾಗವಹಿಸಿ ಪ್ರಥಮ ಸ್ಥಾನ ಗಳಿಸುವ ಮೂಲಕ ರಾಜ್ಯವೇ ಈ ಶಾಲೆಯತ್ತ ಒಮ್ಮೆ ತಿರುಗಿ ನೋಡುವಂತೆ ಮಾಡಿದ್ದು ವಿಶೇಷ.
2023–24ನೇ ಸಾಲಿನಲ್ಲಿ ಗದಗದಲ್ಲಿ ನಡೆದ ರಾಜ್ಯಮಟ್ಟದ ಯುವಸಂಸತ್ ಕಾರ್ಯಕ್ರಮದಲ್ಲಿ ಶಾಲೆಯ ವಿದ್ಯಾರ್ಥಿನಿ ಪಿ.ಸುಪ್ರತಾ ಭಾಗವಹಿಸಿದ್ದಳು. ಶಾಲೆಯ ಬಿ.ಎನ್.ಪೃಥ್ವಿ ತಯಾರಿಸಿದ್ದ ಕಾಳು ಮೆಣಸು ತೂರುವ ಯಂತ್ರವು ರಾಷ್ಟ್ರಮಟ್ಟದ ಇನ್‌ಸ್ಪೈರ್ ಮಾನಕ್ ಅವಾರ್ಡ್‌ಗೆ ಪಾತ್ರವಾಗಿತ್ತು.
ಜಿಲ್ಲಾಮಟ್ಟದ ಗ್ರಾಮೀಣ ಕ್ರೀಡಾಕೂಟದಲ್ಲಿ ಭಾಗವಹಿಸಿರುವ ಈ ಶಾಲೆಯ ವಿದ್ಯಾರ್ಥಿಗಳು ಸಾಧನೆ ಮಾಡಿರುವುದು ಮತ್ತು ವಿಶೇಷ ಎನಿಸಿದೆ. ಈ ಶಾಲೆಯಲ್ಲಿ ಸದ್ಯ 7 ಮಂದಿ ಶಿಕ್ಷಕರು ಇದ್ದಾರೆ.
ರಾಜ್ಯ ರಾಷ್ಟ್ರಮಟ್ಟದಲ್ಲಿ ಹಲವು ಸಾಧನೆಗಳನ್ನು ಮಾಡಿ ಶಾಲೆಯು ಪ್ರಗತಿಯತ್ತ ಸಾಗುತ್ತಿದ್ದು ಉತ್ತಮ ಶಾಲೆ ಎಂಬ ಪ್ರಶಸ್ತಿಗೆ ಭಾಜನವಾಗಿದ್ದು ಸರ್ವರ ಸಹಕಾರ ಇದಕ್ಕೆ ಕಾರಣವಾಗಿದೆ.ಎಂ.ವನಜಾ ಪ್ರಭಾರಿ ಮುಖ್ಯ ಶಿಕ್ಷಕಿ
ಸಮುದಾಯ ಹಾಕತ್ತೂರು ಮತ್ತು ಮೇಕೇರಿ ಗ್ರಾಮ ಪಂಚಾಯಿತಿ ಪೋಷಕರು ಮತ್ತು ಶಾಲಾ ಅಭಿವೃದ್ಧಿ ಮತ್ತು ಮೇಲುಸ್ತುವಾರಿ ಸಮಿತಿ ಹಳೆಯ ವಿದ್ಯಾರ್ಥಿಗಳ ಸಂಘದ ಬೆಂಬಲದೊಂದಿಗೆ ಶಾಲೆ ಮುನ್ನಡೆಯುತ್ತಿದೆ.ಮುನೀರ್ ಶಿಕ್ಷಕರು
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.