ADVERTISEMENT

ಹಾರಂಗಿ ಜಲಾಶಯಕ್ಕೆ ಒಳಹರಿವು ಏರಿಕೆ: ಕೆಳಸೇತುವೆ ಮುಳುಗಡೆ, ಸಂಚಾರ ಬಂದ್

ಹಾರಂಗಿ 25 ಸಾವಿರ ಕ್ಯೂಸೆಕ್ಸ್ ನೀರು ನದಿಗೆ ಬಿಡುಗಡೆ

​ಪ್ರಜಾವಾಣಿ ವಾರ್ತೆ
Published 28 ಜುಲೈ 2025, 6:55 IST
Last Updated 28 ಜುಲೈ 2025, 6:55 IST
ಕುಶಾಲನಗರ ಸಮೀಪದ ಹಾರಂಗಿ ಜಲಾಶಯಕ್ಕೆ ಭಾನುವಾರ ತಾಲ್ಲೂಕು ತಹಶೀಲ್ದಾರ್ ಕಿರಣ್ ಗೌರಯ್ಯ ಮತ್ತು ಕಂದಾಯ ಅಧಿಕಾರಿಗಳು ಭೇಟಿ ನೀಡಿ ಪರಿಶೀಲಿಸಿದರು
ಕುಶಾಲನಗರ ಸಮೀಪದ ಹಾರಂಗಿ ಜಲಾಶಯಕ್ಕೆ ಭಾನುವಾರ ತಾಲ್ಲೂಕು ತಹಶೀಲ್ದಾರ್ ಕಿರಣ್ ಗೌರಯ್ಯ ಮತ್ತು ಕಂದಾಯ ಅಧಿಕಾರಿಗಳು ಭೇಟಿ ನೀಡಿ ಪರಿಶೀಲಿಸಿದರು   

ಕುಶಾಲನಗರ: ಜಿಲ್ಲೆಯ ಕಾವೇರಿ ಹಾಗೂ ಹಾರಂಗಿ ಜಲಾನಯನ ಪ್ರದೇಶದಲ್ಲಿ ನಿರಂತರ ಮಳೆ ಸುರಿಯುತ್ತಿರುವುದರಿಂದ ಹಾರಂಗಿ ಜಲಾಶಯಕ್ಕೆ ಒಳಹರಿವಿನಲ್ಲಿ ಪ್ರಮಾಣದಲ್ಲಿ ಗಣನೀಯ ಏರಿಕೆ ಕಂಡು ಬಂದಿದೆ.

ಭಾನುವಾರ‌ ಬೆಳಿಗ್ಗೆ 25 ಸಾವಿರ ಕ್ಯೂಸೆಕ್‌ ನೀರನ್ನು ನದಿಗೆ ಹರಿ ಬಿಡುಗಡಲಾಯಿತು. ಕೆಲದಿನಗಳಿಂದ ಮಳೆ ಧಾರಕಾರವಾಗಿ ಸುರಿಯುತ್ತಿದ್ದು, ನದಿತೊರೆ ತೋಡುಗಳು ಉಕ್ಕಿ ಹರಿಯುತ್ತಿವೆ. ನಾಡಿನ ಜೀವ ನದಿ ಕಾವೇರಿ ಹಾರಂಗಿ ನದಿಗಳಲ್ಲೂ ಕೂಡ ನೀರಿ ಪ್ರಮಾಣ ಏರಿಕೆ ಕಂಡು ಬಂದಿದೆ.

ಕಣಿವೆ ರಾಮಲಿಂಗೇಶ್ವರ ದೇವಾಲಯ ಬಳಿ ಹಾರಂಗಿ ಹಾಗೂ ಕಾವೇರಿ ನದಿಗಳು ಸಂಗಮಗೊಂಡು ಹರಿಯುತ್ತಿದ್ದು, ನದಿಯ ನೀರಿನ ಮಟ್ಟದಲ್ಲಿ ಏರಿಕೆ ಕಂಡುಬಂದಿದೆ. ನದಿಗೆ ಅಡ್ಡವಾಗಿ ತೂಗು ಸೇತುವೆ ನಿರ್ಮಿಸಿದ್ದು, ಜನಸಂಚಾರಕ್ಕೆ ಅದನ್ನು ಬಂದ್ ಮಾಡಲಾಗಿದೆ.

ADVERTISEMENT

ನದಿಯ ಬಳಿ ಜನರು ನೀರಿನ ಹರಿವಿನ ದೃಶ್ಯವನ್ನು ವೀಕ್ಷಿಸುತ್ತಿರುವುದು ಕಂಡು ಬಂದಿದೆ. ನಿರಂತರವಾಗಿ ಸುರಿಯುತ್ತಿರುವ ಮಳೆಯಿಂದ ಹಳ್ಳ, ಕೊಳ್ಳಗಳಲ್ಲಿ ನೀರಿನ ಹರಿವು ಏರತೊಡಗಿದೆ. ಕೆರೆಗಳಲ್ಲಿಯೂ ನೀರಿನ ಮಟ್ಟ ಹೆಚ್ಚಿದ್ದು, ಗದ್ದೆಗಳು ನೀರಿನಿಂದ ಜಲಾವೃತ್ತಗೊಂಡಿವೆ.

ಪರಿಶೀಲನೆ: ತಾಲ್ಲೂಕು ತಹಶೀಲ್ದಾರ್ ಕಿರಣ್ ಗೌರಯ್ಯ ಮತ್ತು ಕಂದಾಯ ಅಧಿಕಾರಿಗಳು ವಿವಿಧೆಡೆ ತೆರಳಿ ಮಳೆಯಾಗಿ ಉಂಟಾಗಿರುವ ಹಾನಿ ಪ್ರಮಾಣ ಹಾಗೂ ನದಿ ದಂಡೆಯಲ್ಲಿ ಸ್ಥಿತಿಗತಿಗಳ ಪರಿಶೀಲನೆ ನಡೆಸಿದರು. ಜೊತೆಗೆ ನದಿಯಂಚಿನ‌ ಗ್ರಾಮಗಳ ಜನರಿಗೆ ಸುರಕ್ಷಿತ ಸ್ಥಳಗಳಿಗೆ ತೆರಳುವಂತೆ ಸೂಚನೆ ನೀಡಿದರು.

ಕುಶಾಲನಗರ ಸಮೀಪದ ಹಾರಂಗಿ ಜಲಾಶಯಕ್ಕೆ ಭಾನುವಾರ ತಾಲ್ಲೂಕು ತಹಶೀಲ್ದಾರ್ ಕಿರಣ್ ಗೌರಯ್ಯ ಮತ್ತು ಕಂದಾಯ ಅಧಿಕಾರಿಗಳು ಭೇಟಿ ನೀಡಿ ಪರಿಶೀಲಿಸಿದರು
ಕಾವೇರಿ ನದಿಯಲ್ಲಿ ನೀರಿನ ಮಟ್ಟದಲ್ಲಿ ಏರಿಕೆ ಕಂಡು ಬರುತ್ತಿದ್ದು ನದಿ ಪಾತ್ರದ ಜನತೆ ಸುರಕ್ಷಿತ ಸ್ಥಳಗಳಿಗೆ ತೆರಳಬೇಕು. ಮೀನುಗಾರರು ಎಚ್ಚರಿಕೆಯಿಂದ ಇರಬೇಕು.
– ಪುಟ್ಟಸ್ವಾಮಿ, ನೀರಾವರಿ ಇಲಾಖೆಯ ಕಾರ್ಯಪಾಲಕ ಎಂಜಿನಿಯರ್

ಮುಳುಗಿದ ಸೇತುವೆ

ಹಾರಂಗಿ‌ ಜಲಾಶಯದಿಂದ ಹೆಚ್ಚಿನ ನೀರನ್ನು ನದಿಗೆ ಹರಿಸಲಾಗುತ್ತಿರುವ ಹಿನ್ನೆಲೆಯಲ್ಲಿ ಕೆಳಸೇತುವೆ ಮೇಲೆ ನೀರು ಹರಿಯುತ್ತಿರುವುದರಿಂದ ವಾಹನ ಸಂಚಾರ ಬಂದ್ ಆಗಿದೆ. ಇದರಿಂದ ಅಕ್ಕಪಕ್ಕದ ಗ್ರಾಮಗಳಾದ ಯಡವನಾಡು ಹುದುಗೂರುಅತ್ತೂರು ದೊಡ್ಡಸೂರು ಹಾರಂಗಿ ಭಾಗಕ್ಕೆ ಸಂಪರ್ಕ ಕಡಿತಗೊಂಡಿದೆ.ಈ ಗ್ರಾಮಗಳ ಜನರು ಹತ್ತಾರೂ ಕಿಲೋಮೀಟರ್ ದೂರ ಕ್ರಮಿಸಿ ಕೂಡಿಗೆ ಮಾರ್ಗವಾಗಿ ತಮ್ಮ ಗ್ರಾಮಗಳಿಗೆ ತೆರಳಬೇಕಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.