
ನಾಪೋಕ್ಲು: ಕಾವೇರಿ ಮನೆ ಕುಟುಂಬಸ್ಥರಿಂದ ಅಯ್ಯಂಗೇರಿ ಸರ್ಕಾರಿ ಪ್ರಾಥಮಿಕ ಶಾಲಾ ಮೈದಾನದಲ್ಲಿ ಆಯೋಜಿಸಲಾಗಿದ್ದ ಹುತ್ತರಿ ಕಪ್ ಕ್ರೀಡಾಕೂಟದ ರಾಜ್ಯಮಟ್ಟದ ತೆಂಗಿನಕಾಯಿಗೆ ಗುಂಡು ಹೊಡೆಯುವ ಸ್ಪರ್ಧೆಯಲ್ಲಿ 0.22 ರೈಫಲ್ ವಿಭಾಗದಲ್ಲಿ ಜಗತ್ ಬೆಳ್ಳಿಯನ ಪ್ರಥಮಸ್ಥಾನ ಗಳಿಸಿ ಟ್ರೋಫಿಯನ್ನು ಮುಡಿಗೇರಿಸಿಕೊಂಡರು.
ದ್ವಿತೀಯ ಸ್ಥಾನ ಕೃತಿಕ ಬೆಳ್ಳಿಯನ ಹಾಗೂ ತೃತೀಯ ಸ್ಥಾನವನ್ನು ಜಗದೀಶ್ ಶಂಕರನ ಗಳಿಸಿಕೊಂಡರು. ವಿಜೇತರಿಗೆ ಕ್ರಮವಾಗಿ ₹10,000, ₹7, 000 ಹಾಗೂ ₹5,000 ನಗದು ಮತ್ತು ಟ್ರೋಫಿ ವಿತರಿಸಲಾಯಿತು.
12 ಬೋರ್ ವಿಭಾಗದಲ್ಲಿ ದಿಲಿಪ್ ಬೊಳ್ಳರಪಂಡ ಪ್ರಥಮ, ಪ್ರತಿಕ್ ಚೆಂಬು ದ್ವಿತೀಯ, ಭರತ್ ಕಾವೇರಿ ಮನೆ ತೃತೀಯ ಸ್ಥಾನವನ್ನು ಗಳಿಸಿಕೊಂಡರು. ಕ್ರಮವಾಗಿ ₹10,000, ₹7, 000 ಹಾಗೂ ₹5,000 ನಗದು ಮತ್ತು ಟ್ರೋಫಿ ಪಡೆದು ಸಂಭ್ರಮಿಸಿದರು.
ಎರ್ ಗನ್ ವಿಭಾಗದಲ್ಲಿ ಮಿಥುನ್ ಬೆಳ್ಳಿಯನ ಪ್ರಥಮ, ಡಿಶೀಲ್ ದ್ವಿತೀಯ, ಚೇತನ್ ಕುದುಕುಳಿ ತೃತೀಯ ಸ್ಥಾನವನ್ನು ಗಳಿಸಿಕೊಂಡರು. ವಿಜೇತರು ಕ್ರಮವಾಗಿ ₹5,000, ₹3,000, ₹2,000 ನಗದು ಹಾಗೂ ಟ್ರೋಫಿ ಪಡೆದರು.
ರಾಜ್ಯಮಟ್ಟದ ತೆಂಗಿನಕಾಯಿಗೆ ಗುಂಡು ಹೊಡೆಯುವ ಸ್ಪರ್ಧೆಯನ್ನು ರಾಜ್ಯ ಒಕ್ಕಲಿಗರ ಸಂಘದ ನಿರ್ದೇಶಕ ಹರಪಳ್ಳಿ ರವೀಂದ್ರ ಉದ್ಘಾಟಿಸಿದರು.
ಟ್ರೋಫಿ ದಾನಿ ಎಡಿಕೇರಿ ಪ್ರಸನ್ನ ಮಾತನಾಡಿ, ‘ಕುಟುಂಬದ ಒಗ್ಗಟ್ಟಿನಿಂದ ಕ್ರೀಡೆಗೆ ಯಶಸ್ಸು ಲಭಿಸಲಿದೆ. ಗ್ರಾಮೀಣ ಕ್ರೀಡಾಕೂಟದಿಂದ ಸ್ನೇಹ, ಪ್ರೀತಿ, ಒಗ್ಗಟ್ಟು ಬಲವರ್ಧನೆ ಆಗಲಿದೆ’ ಎಂದರು.
ಕಾವೇರಿ ಮನೆ ಭರತ್ ಅಧ್ಯಕ್ಷತೆ ವಹಿಸಿದ್ದರು. ಅಯ್ಯಂಗೇರಿ ಗ್ರಾಮ ಪಂಚಾಯತಿ ಸದಸ್ಯ ರಂಜಿತ್, ಕಾವೇರಿ ಮನೆ ಮಮತಾ ಸುನಿಲ್, ಕೇನೆರ ಮೀನಾಕ್ಷಿ, ಪ್ರಕಾಶ್, ಕಾರುಗುಂದ, ಗೌಡ ಸಮಾಜದ ಕಾರ್ಯದರ್ಶಿ ಬೆಳ್ಳಿಯನ ರವಿ, ಶರತ್ ಪದಕಲ್ಲು, ಶ್ರೀಕೃಷ್ಣ ಯುವಕ ಸಂಘದ ಕಾರ್ಯದರ್ಶಿ ದೀಪಕ್ ಪಾಲ್ಗೊಂಡಿದ್ದರು.
ಓಟದ ಸ್ಪರ್ಧೆ: ಅಂಜೇರಿರ ಟಿಸನ್ ಮಾದಪ್ಪ ವಿಜೇತ
ಭಾಗಮಂಡಲದ ಭಗಂಡೇಶ್ವರ ದೇವಾಲಯದಿಂದ ಅಯ್ಯಂಗೇರಿ ಶಾಲಾ ಮೈದಾನದವರೆಗೆ 8 ಕಿ.ಮೀ ಓಟದ ಸ್ಪರ್ಧೆಯನ್ನು ಭಾಗಮಂಡಲ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಹೊಸೂರು ಸತೀಶ್ ಕುಮಾರ್ ಉದ್ಘಾಟಿಸಿದರು. ಪುರುಷರ ವಿಭಾಗದಲ್ಲಿ ಬಿಳಿಗೇರಿಯ ಅಂಜೇರಿರ ಟಿಸನ್ ಮಾದಪ್ಪ ಕುಶಾಲನಗರದ ನಿತಿನ್ ಯು.ಎನ್. ಹಾಗೂ ಕೆದಂಬಾಡಿ ಕೃಷ್ಣ ಕ್ರಮವಾಗಿ ಪ್ರಥಮ ದ್ವಿತೀಯ ತೃತೀಯ ಬಹುಮಾನ ಗಳಿಸಿದರು. ಮಹಿಳೆಯರ ವಿಭಾಗದಲ್ಲಿ ಕಟ್ಟೆ ಮನೆ ಪ್ರಕೃತಿ ಬೋಪಯ್ಯ ಪ್ರಥಮ ಚೆಟ್ಟಿಮಾನಿಯ ಆಮೆಮನೆ ರಶ್ಮಿತಾ ಹಾಗೂ ಸುಳ್ಯಕೋಡಿ ವಂಶಿಕ ಕ್ರಮವಾಗಿ ದ್ವಿತೀಯ ತೃತೀಯ ಬಹುಮಾನ ಗಳಿಸಿದರು. 15 ವರ್ಷದೊಳಗಿನ ಬಾಲಕರ ವಿಭಾಗದಲ್ಲಿ ಸೂದನ ಗವಿನ್ ಕೂರನ ಸಮರ್ಥ್ ಹಾಗೂ ಮಸೂದ್ ಕ್ರಮವಾಗಿ ಪ್ರಥಮ ದ್ವಿತೀಯ ತೃತೀಯ ಬಹುಮಾನ ಗಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.