ADVERTISEMENT

ಅಕ್ರಮ ವಲಸಿಗ ಸಮಸ್ಯೆಗೆ ಯಾರು ಹೊಣೆ: ಸಂತೋಷ್ ಎಸ್ ಲಾಡ್ ಪ್ರಶ್ನೆ

​ಪ್ರಜಾವಾಣಿ ವಾರ್ತೆ
Published 17 ಸೆಪ್ಟೆಂಬರ್ 2025, 20:04 IST
Last Updated 17 ಸೆಪ್ಟೆಂಬರ್ 2025, 20:04 IST
ಸಂತೋಷ್ ಲಾಡ್
ಸಂತೋಷ್ ಲಾಡ್   

ಮಡಿಕೇರಿ: ‘ಕೇಂದ್ರದಲ್ಲಿ ಬಿಜೆಪಿ ಸರ್ಕಾರ ಇದೆ. ದೇಶದೊಳಗೆ ಅಕ್ರಮ ವಲಸಿಗರು ಬರುತ್ತಿದ್ದಾರೆ ಎಂದರೆ ಅದಕ್ಕೆ ಯಾರು ಹೊಣೆ? ಅವರು ಹೇಗೆ ಬರುತ್ತಿದ್ದಾರೆ’ ಎಂದು ಕಾರ್ಮಿಕ ಖಾತೆ ಸಚಿವ ಸಂತೋಷ್ ಎಸ್ ಲಾಡ್ ಪ್ರಶ್ನಿಸಿದರು.

‘ಬಿಜೆಪಿಯು ಅಧಿಕಾರಕ್ಕೆ ಬಂದ ನಂತರ ವಲಸಿಗರನ್ನು ಒಳಗೆ ಬಿಟ್ಟುಕೊಳ್ಳುತ್ತಿದೆಯೇ ಹೊರತು, ಯಾವ ಅಕ್ರಮ ವಲಸಿಗರನ್ನೂ ಹೊರಗೆ ಕಳಿಸಿಲ್ಲ. ಆದರೆ, ನಾವು ರಾಜ್ಯದಲ್ಲಿರಬಹುದಾದ ಅಕ್ರಮ ವಲಸಿಗರ ಪತ್ತೆಗಾಗಿ ಕ್ಯೂಆರ್ ಕೋಡ್, ಗುರುತಿನ ಪ್ರಮಾಣಪತ್ರ.. ಸೇರಿದಂತೆ ಕಾನೂನುಬದ್ಧ ವ್ಯವಸ್ಥೆ ರೂಪಿಸಲು ಪ್ರಯತ್ನಿಸುತ್ತಿದ್ದೇವೆ’ ಎಂದು ಅವರು ಇಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು.

‘ಮನೆಗೆ ಭೇಟಿ ನೀಡಿದಾಗ ಜನ ಕೊಡುವ ಜಾತಿಯ ಮಾಹಿತಿಯನ್ನೇ ಅಧಿಕಾರಿಗಳು ದಾಖಲಿಸಿಕೊಳ್ಳುತ್ತಾರೆ. ಈ ಕುರಿತು ಬಿಜೆಪಿಯವರು ರಾಜ್ಯಪಾಲರಿಗೆ ಏಕೆ ದೂರು ಕೊಟ್ಟರೋ ತಿಳಿಯದು. ಹಾಗಾದರೆ, ರಾಜ್ಯದಲ್ಲಿ ಸಮೀಕ್ಷೆಯನ್ನೂ ನಡೆಸಬಾರದೇ’ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ADVERTISEMENT

‘ಹಿಂದೂಗಳ ಬಗ್ಗೆ ಮಾತನಾಡುವ ಬಿಜೆಪಿಯವರು ರಾಷ್ಟ್ರಪತಿಯನ್ನು ಏಕೆ ದೇಗುಲದೊಳಗೆ ಕರೆದೊಯ್ಯಲಿಲ್ಲ, ದೇಶದಲ್ಲಿ ಅಸ್ಪೃಶ್ಯತೆ, ಜಾತಿವ್ಯವಸ್ಥೆ ಏಕೆ ಬಂತು ಎಂಬುದಕ್ಕೆ ಉತ್ತರ ಕೊಡಲಿ. ಈಗಲೂ ಹಲವು ಜಾತಿಗಳ ಜನರನ್ನು ದೇಗುಲದ ಒಳಗೆ ಬಿಡುತ್ತಿಲ್ಲ. ಶ್ರೀಮಂತ ಹಿಂದೂಗಳು ಬಡ ಹಿಂದೂಗಳ ಜೊತೆ ವೈವಾಹಿಕ ಸಂಬಂಧ ಹೊಂದಲಿ. ಆಸ್ತಿಗಳನ್ನು ಬರೆದುಕೊಡಲಿ. ಬಿಜೆಪಿ ಒಂದೇ ಒಂದು ಪ್ರಗತಿಪರ ಚರ್ಚೆಯನ್ನೂ ಮಾಡುತ್ತಿಲ್ಲ’ ಎಂದು ದೂರಿದರು.

‘ಕುರುಬ ಸಮುದಾಯವನ್ನು‌ ಪರಿಶಿಷ್ಟ ಪಂಗಡಕ್ಕೆ ಸೇರಿಸುವ ಪ್ರಸ್ತಾವ ಸದ್ಯ ಬಂದಿಲ್ಲ. ಬಂದ ನಂತರ ಪ‍್ರತಿಕ್ರಿಯಿಸುವೆ’ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.