ADVERTISEMENT

ಜಿಎಸ್‌ಟಿ ವಿರುದ್ಧ ಜೆಡಿಎಸ್‌ ಆಕ್ರೋಶ: ಕೇಂದ್ರ ಸರ್ಕಾರದ ವಿರುದ್ಧ ಕಿಡಿ

​ಪ್ರಜಾವಾಣಿ ವಾರ್ತೆ
Published 5 ಆಗಸ್ಟ್ 2022, 16:22 IST
Last Updated 5 ಆಗಸ್ಟ್ 2022, 16:22 IST
ಕೇಂದ್ರ ಸರ್ಕಾರದ ವಿರುದ್ದ ಜೆಡಿಎಸ್ ಕೊಡಗು ಜಿಲ್ಲಾ ಘಟಕದ ಕಾರ್ಯಕರ್ತರು ಶುಕ್ರವಾರ ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಿದರು
ಕೇಂದ್ರ ಸರ್ಕಾರದ ವಿರುದ್ದ ಜೆಡಿಎಸ್ ಕೊಡಗು ಜಿಲ್ಲಾ ಘಟಕದ ಕಾರ್ಯಕರ್ತರು ಶುಕ್ರವಾರ ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಿದರು   

ಮಡಿಕೇರಿ: ಜೀವನಾವಶ್ಯಕ ವಸ್ತುಗಳ ಮೇಲಿನ ಜಿಎಸ್‌ಟಿ ಹೇರಿಕೆ ವಿರೋಧಿಸಿ, ಬೆಲೆ ಏರಿಕ ಖಂಡಿಸಿ ಜೆಡಿಎಸ್‌ ಜಿಲ್ಲಾ ಘಟಕದ ಕಾರ್ಯಕರ್ತರು ಇಲ್ಲಿನ ಜಿಲ್ಲಾಧಿಕಾರಿ ಕಚೇರಿ ಮುಂದೆ ಶುಕ್ರವಾರ ಪ್ರತಿಭಟನೆ ನಡೆಸಿದರು.

ಸುರಿಯುತ್ತಿದ್ದ ಮಳೆಯ ನಡುವೆಯೂ ಅವರು ಕೊಡೆಗಳನ್ನಿಡಿದು ಮೆರವಣಿಗೆ ಹೊರಟು ಕೇಂದ್ರ ಸರ್ಕಾರದ ವಿರುದ್ಧ ಆಕ್ರೋಶ ಹೊರ ಹಾಕಿದರು.

ನಗರದ ಗಾಂಧಿ ಮೈದಾನದಿಂದ ಹೊರಟ ಮೆರವಣಿಗೆಯು ಜಿಲ್ಲಾಡಳಿತ ಭವನದವರೆಗೂ ನಡೆಯಿತು. ಹೆಚ್ಚಿನ ಸಂಖ್ಯೆಯಲ್ಲಿ ಕಾರ್ಯಕರ್ತರು ಭಾಗಿಯಾಗಿದ್ದರು.

ADVERTISEMENT

ಈ ವೇಳೆ ಮಾತನಾಡಿದ ಪಕ್ಷದ ಜಿಲ್ಲಾ ಘಟಕದ ಅಧ್ಯಕ್ಷ ಕೆ.ಎಂ.ಗಣೇಶ್, ‘ಕೇಂದ್ರ ಸರ್ಕಾರ ಅಗತ್ಯ ವಸ್ತುಗಳ ಮೇಲೆ ಜಿಎಸ್‌ಟಿ ವಿಧಿಸಿರುವುದರಿಂದ ಜನಸಾಮಾನ್ಯರಿಗೆ ಸಮಸ್ಯೆಯಾಗಿದೆ. ತೆರಿಗೆ ಹೆಚ್ಚಳ ಮಾಡಿರುವುದರಿಂದ ಬಡ ಜನರು ನಿತ್ಯ ಬಳಕೆಯ ವಸ್ತುಗಳ ಖರೀದಿಯನ್ನು ಕಡಿಮೆ ಮಾಡಿದ್ದಾರೆ. ಇಷ್ಟಾದರೂ ಸರ್ಕಾರಕ್ಕೆ ಒಂದಿಷ್ಟು ಕರುಣೆ ಎಂಬುದಿಲ್ಲ’ ಎಂದು ಕಿಡಿಕಾರಿದರು.

ಬೆಲೆ ಏರಿಕೆಯಿಂದ ಜನರು ಸಂಕಷ್ಟದಲ್ಲಿರುವಾಗಲೇ ತೆರಿಗೆ ಹೆಚ್ಚಳ ಮಾಡಿರುವುದು ಜನವಿರೋಧಿ ನೀತಿಯನ್ನು ತೋರಿಸುತ್ತದೆ ಎಂದು ಟೀಕಿಸಿದರು.

ಕೊಡಗಿನಲ್ಲಿ ಅಧಿಕ ಮಳೆಯಿಂದಾಗಿ ಅಪಾರ ಪ್ರಮಾಣದ ಆಸ್ತಿಪಾಸ್ತಿ ಹಾನಿ ಉಂಟಾಗಿದೆ. ಜನಜೀವನ ಅಸ್ತವ್ಯಸ್ತಗೊಂಡಿದೆ. ಮುಖ್ಯಮಂತ್ರಿಗಳು ಕೊಡಗಿಗೆ ಬಂದಾಗ ಅವರೊಂದಿಗೆ ಕಾಣಿಸಿಕೊಂಡಿದ್ದ ಜಿಲ್ಲೆಯ ಉಸ್ತುವಾರಿ ಸಚಿವರು ಆನಂತರ ಕಾಣೆಯಾಗಿದ್ದಾರೆ. ಜನರು ಸಂಕಷ್ಟದಲ್ಲಿದ್ದರೂ ಇತ್ತ ಬಾರದ ಸಚಿವರನ್ನು ಹುಡುಕಿಕೊಡಿ ಎಂದೂ ವ್ಯಂಗ್ಯವಾಡಿದರು.

ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ಕೋಮುವಾದಿ ನೀತಿಯಿಂದ ಅಲ್ಪಸಂಖ್ಯಾತರ, ಬಡವರ, ದಲಿತರ ಬದುಕು ಅತಂತ್ರವಾಗಿದೆ. ಕರಾವಳಿ ಭಾಗದಲ್ಲಿ ಸರಣಿ ಕೊಲೆಗಳಾದ ಕುಟುಂಬದ ಜತೆಗೂ ತಾರತಮ್ಯ ನೀತಿ ಅನುಸರಿಸಿದ್ದು ಸರಿಯಲ್ಲ ಎಂದು ಖಂಡಿಸಿದರು.

ಆರ್ಥಿಕ ಇಲಾಖೆಯಲ್ಲಿ ಒಳ್ಳೆಯ ತಜ್ಞರನ್ನು ನೇಮಕ ಮಾಡಬೇಕು, ಅತ್ಯುತ್ತಮ ಜ್ಞಾನ ಹೊಂದಿರುವ ಆರ್ಥಿಕ ಮಂತ್ರಿಗಳನ್ನು ನೇಮಕ ಮಾಡಬೇಕು, ಜನಸಾಮಾನ್ಯರಿಗೆ ಹೊರೆಯಾಗದ ರೀತಿಯಲ್ಲಿ ತೆರಿಗೆ ನೀತಿ ರೂಪಿಸಬೇಕು ಎಂದು ಒತ್ತಾಯಿಸಿದರು.

ಪ್ರತಿಭಟನೆಯಲ್ಲಿ ಜೆಡಿಎಸ್ ಯುವ ಘಟಕದ ಅಧ್ಯಕ್ಷ ವಿಶ್ವ, ಮಡಿಕೇರಿ ಕ್ಷೇತ್ರ ಅಧ್ಯಕ್ಷ ಸುರೇಶ್, ರಾಜ್ಯ ಸಮಿತಿ ಸದಸ್ಯರಾದ ತಮ್ಮಯ್ಯ, ಷರೀಫ್, ಜಿಲ್ಲಾ ಖಜಾಂಚಿ ಡೆನ್ನಿ ಬರೋಸ್, ಜಿಲ್ಲಾ ಕಾರ್ಯದರ್ಶಿ ಸುನೀಲ್, ನಗರಸಭೆ ಸದಸ್ಯ ಮುಸ್ತಫಾ, ಮಹಿಳಾ ಘಟಕ ಜಿಲ್ಲಾಧ್ಯಕ್ಷೆ ಪುಷ್ಪಾವತಿ, ಕಾರ್ಯದರ್ಶಿ ಲೀಲಾ ಶೇಷಮ್ಮ ಇದ್ದರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.