ADVERTISEMENT

ಕೊಡಗು ಜಿಲ್ಲೆಯಲ್ಲಿ ಸಂಚಲನ ಮೂಡಿಸಿದ ಬ್ರಿಜೇಶ್ ಕಾಳಪ್ಪ ‘ರಾಜೀನಾಮೆ’ ನಿರ್ಧಾರ

ಕಾಂಗ್ರೆಸ್‌ ಪ್ರಾಥಮಿಕ ಸದಸ್ಯತ್ವಕ್ಕೆ ರಾಜೀನಾಮೆ

​ಪ್ರಜಾವಾಣಿ ವಾರ್ತೆ
Published 2 ಜೂನ್ 2022, 5:32 IST
Last Updated 2 ಜೂನ್ 2022, 5:32 IST
ಬ್ರಿಜೇಶ್ ಕಾಳಪ್ಪ
ಬ್ರಿಜೇಶ್ ಕಾಳಪ್ಪ   

‌ಮಡಿಕೇರಿ: ಕೆಪಿಸಿಸಿ ವಕ್ತಾರ, ಕಾಂಗ್ರೆಸ್‌ ನಾಯಕ ಹಾಗೂ ಸುಪ್ರೀಂ ಕೋರ್ಟ್‌ ವಕೀಲರಾಗಿದ್ದ ಬ್ರಿಜೇಶ್‌ ಕಾಳಪ್ಪ ಪಕ್ಷಕ್ಕೆ ರಾಜೀನಾಮೆ ನೀಡಿರುವುದು ಕೊಡಗು ಜಿಲ್ಲೆಯ ರಾಜಕೀಯ ಪಕ್ಷಗಳಲ್ಲಿ ಸಂಚಲನ ಮೂಡಿಸಿದೆ.

ಕಾಂಗ್ರೆಸ್ ಪಕ್ಷದ ಕಾರ್ಯಕರ್ತರಲ್ಲಿ, ಮುಖಂಡರ ಅಚ್ಚರಿಗೂ ಕಾರಣ ವಾಗಿದೆ. ಪ್ರಾಮಾಣಿಕತೆ ಹಾಗೂ ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಳ್ಳುವ ಅವರ ಗುಣದಿಂದಾಗಿ ಕಾಂಗ್ರೆಸ್ ಗೆ ಇದು ದೊಡ್ಡ ಹೊಡೆತ ಎಂದೇ ವಿಶ್ಲೇಷಿಸಲಾಗುತ್ತಿದೆ. ಮುಂದಿನ ಅವರ ನಡೆ ಏನು ಎಂಬ ಬಗ್ಗೆಯೂ ತೀವ್ರ ಕುತೂಹಲ ಮೂಡಿದೆ. 2005 ರ ನಂತರ ಜಿಲ್ಲೆಯಲ್ಲಿ ಕಾಂಗ್ರೆಸ್ ವಿಧಾನಸಭೆಯ ಖಾತೆಯನ್ನೇ ತೆರೆದಿರಲಿಲ್ಲ. ಬಿಜೆಪಿಯ ಪ್ರಬಲ ಕೋಟೆ ಎನಿಸಿದ ಕೊಡಗಿನಲ್ಲಿ ಅಗತ್ಯ ವಸ್ತುಗಳ ಬೆಲೆಏರಿಕೆ ಹಾಗೂ ದುಬಾರಿ ಎನಿಸಿದ ಇಂಧನ ಬೆಲೆಗಳನ್ನೇ ಪ್ರಧಾನವಾಗಿಟ್ಟುಕೊಂಡು ಖಾತೆ ತೆರೆಯ ಬಹುದು ಎಂಬ ಸ್ಥಳೀಯ ಕಾಂಗ್ರೆಸ್ ನಾಯಕರ ಲೆಕ್ಕಾಚಾರಕ್ಕೂ ಇದು ಪೆಟ್ಟು ನೀಡಿದೆ.

‘ಕಳೆದ ವಿಧಾನಸಭಾ ಚುನಾವಣೆ ಯಲ್ಲಿ ವಿರಾಜಪೇಟೆಯಿಂದ ಟಿಕೆಟ್ ಆಕಾಂಕ್ಷಿಯಾಗಿದ್ದ ಕಾಳಪ್ಪ ಅವರಿಗೆ ಟಿಕೆಟ್ ಕೈ ತಪ್ಪಿದಾಗಲೇ ಬೇಸರಗೊಂಡಿದ್ದರು. ಈಗ ರಾಜ್ಯ ರಾಜಕೀಯದಲ್ಲಿ ಮುಂದುವರಿಸುವ ಆಸಕ್ತಿ ಹೈಕಮಾಂಡ್ ಗೆ ಇಲ್ಲ ಎಂದೇ ಭಾವಿಸಿ ಅವರು ರಾಜೀನಾಮೆಯಂತಹ ನಿರ್ಧಾರ ಕೈಗೊಂಡಿರಬಹುದು’ ಎಂಬ ಚರ್ಚೆಗಳೂ
ಆರಂಭವಾಗಿವೆ.

ADVERTISEMENT

'ಬ್ರಿಜೇಶ್ ಕಾಳಪ್ಪ ಅವರು ಹೆಚ್ಚಿನ ಸಮಯವನ್ನು ನವದೆಹಲಿಯಲ್ಲೇ ಕಳೆದರೂ ಕೊಡಗಿನವರಿಗೆ ಅವರು ನಮ್ಮವರೆಂಬ ಭಾವನೆ ದಟ್ಟ ವಾಗಿದೆ.‌ ವಿಶೇಷವಾಗಿ ಅವರ ಪ್ರಾಮಾಣಿಕತೆ ಗಾಗಿ, ಅವರ ತೂಕತಪ್ಪದ ಮಾತುಗಳಿ ಗಾಗಿಯೇ ಮೆಚ್ಚುವವರೂ ಇದ್ದಾರೆ. ಬಿಜೆಪಿಯ ಪ್ರಬಲ ಕೋಟೆಗೆ ಲಗ್ಗೆ ಇಡಲು ಅವರು ಸಮರ್ಥ ಮುಂದಾಳತ್ವ ವಹಿಸಿಕೊಳ್ಳಬಲ್ಲ ನಾಯಕರಾಗಿದ್ದರು’ ಎಂದು ಹೆಸರು ಬಹಿರಂಗಪಡಿಸಲು ಬಯಸದ ಮುಖಂಡರೊಬ್ಬರು ತಿಳಿಸಿದರು.

ಈ ಕುರಿತು ಪ್ರಜಾವಾಣಿಗೆ ಪ್ರತಿಕ್ರಿಯಿಸಿದ ಪಕ್ಷದ ಜಿಲ್ಲಾ ಘಟಕದ ಅಧ್ಯಕ್ಷ ಧರ್ಮಜ ಉತ್ತಪ್ಪ, 'ರಾಜೀನಾಮೆ ನೀಡುತ್ತಾರೆ ಎಂದು ಭಾವಿಸಿರಲಿಲ್ಲ. ಏಕೆ ರಾಜೀನಾಮೆ ನೀಡಿದರೋ ಗೊತ್ತಿಲ್ಲ' ಎಂದು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.