
ಸೋಮವಾರಪೇಟೆ: ಬಿಡದೇ ಸುರಿಯುತ್ತಿರುವ ಪುನರ್ವಸು ಮಳೆಗೆ ಜನರು ಹ್ಶೆರಾಣಾಗಿದ್ದು, ಸಾಕಷ್ಟು ಹಾನಿಯೊಂದಿಗೆ ಜನರು ಕತ್ತಲೆಯಲ್ಲಿಯೇ ಕಾಲ ಕಳೆಯುವಂತಾಗಿದೆ.
ಐಗೂರು, ತಾಕೇರಿ, ಅಬ್ಬೂರುಕಟ್ಟೆ, ದೊಡ್ಡಮಳ್ತೆ, ಶಾಂತಳ್ಳಿ, ತೋಳೂರುಶೆಟ್ಟಳ್ಳಿ ಸೇರಿದಂತೆ ಹಲವು ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಮಳೆಯಿಂದ ಹೆಚ್ಚಿನ ಹಾನಿಯಾಗಿವೆ. ವಿದ್ಯುತ್ ಮಾರ್ಗಗಳ ಮೇಲೆ ಮರಗಳು ಉರುಳಿದ್ದರಿಂದ ಪಟ್ಟಣ ಸೇರಿದಂತೆ ಗ್ರಾಮೀಣ ಭಾಗಗಳಲ್ಲಿ ವಿದ್ಯುತ್ ಸಮಸ್ಯೆ ಎದುರಾಯಿತು. ಪಟ್ಟಣಕ್ಕೆ ಮಾತ್ರ ಸಂಜೆ 6 ಗಂಟೆಯ ನಂತರ ವಿದ್ಯುತ್ ನೀಡಲು ಇಲಾಖೆ ಸಫಲರಾದರೂ, ಇನ್ನೂ ಗ್ರಾಮೀಣ ಭಾಗಗಳಲ್ಲಿ ಸಮಸ್ಯೆ ಪರಿಹರಿಸಲು ಸಾಧ್ಯವಾಗಲಿಲ್ಲ.
ಕಳೆದ ಎರಡು ದಿನಗಳಿಂದ ಬಿಡುವು ನೀಡದೆ ಎಲ್ಲೆಡೆ ಮಳೆ ಸುರಿಯುತ್ತಿರುವುದರಿಂದ, ಜನರು ಮನೆಯಿಂದ ಹೊರಗೆ ಬರಲು ಪರದಾಡುವಂತಾಗಿದೆ. ಶೀತಗಾಳಿ ಬೀಸುತ್ತಿರುವುದರಿಂದ ಚಳಿ ಹೆಚ್ಚಾಗಿದೆ. ಭಾನುವಾರ ಇಡೀ ರಾತ್ರಿ ಜೋರಾದ ಗಾಳಿಯೊಂದಿಗೆ ಮಳೆ ಸುರಿಯುತ್ತಿದ್ದರಿಂದ ಮನೆಯೊಳಗೆ ಜನರು ನೆಮ್ಮದಿಯ ನಿದ್ರೆ ಮಾಡಲು ಸಾಧ್ಯವಾಗುತ್ತಿಲ್ಲ.
ಸಮೀಪದ ನೇಗಳ್ಳೆ ಕರ್ಕಳ್ಳಿ ಗ್ರಾಮದ ನಿವಾಸಿ ಜಯಂತಿ ಎಂಬುವವರ ವಾಸದ ಮನೆಯ ಮೇಲೆ ಬೃಹತ್ ಮರ ಉರುಳಿ ಚಾವಣಿ, ಹೆಂಚುಗಳು, ಗೋಡೆಗೆ ಹಾನಿಯಾಗಿದೆ. ಇಲ್ಲಿನ ಮಹದೇಶ್ವರ ಬ್ಲಾಕ್ ನಿವಾಸಿ ಸುರೇಶ್ ಅವರ ಮನೆಯ ಕಾಂಪೌಂಡ್ ಕುಸಿದಿದೆ. ಸ್ಥಳಕ್ಕೆ ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ ನಾಚಪ್ಪ ತೆರಳಿ ಮಾಹಿತಿ ಪಡೆದರು. ತಾಲ್ಲೂಕಿನ ಶುಂಟಿ ಗ್ರಾಮದಲ್ಲಿ ಗಾಳಿ ಮಳೆಗೆ ಮನೆಯೊಂದರ ಮೇಲೆ ವಿದ್ಯುತ್ ಕಂಬ ಉರುಳಿದೆ.
ಇಂದು ತಾಲ್ಲೂಕಿನಾದ್ಯಂತ ಭಾರಿ ಮಳೆ ಸುರಿಯುತ್ತಿರುವುದರಿಂದ ನದಿ ತೊರೆಗಳು ತುಂಬಿ ಹರಿಯುತ್ತಿದ್ದು, ಅಪಾಯದ ಅಂಚಿನಲ್ಲಿವೆ, ಕೆಲವೆಡೆ ಕೃಷಿ ಭೂಮಿಯನ್ನು ಆಕ್ರಮಿಸಿ ನೀರು ಹರಿಯುತ್ತಿವೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.