ಗೋಣಿಕೊಪ್ಪಲು ನಾಡಹಬ್ಬ ದಸರಾ ಸಮಿತಿ ಸಭೆ ಅಧ್ಯಕ್ಷ ಪ್ರಭಾಕರ್ ನೆಲ್ಲಿತ್ತಾಯ ಅವರ ಅಧ್ಯಕ್ಷತೆಯಲ್ಲಿ ಈಚಿಗೆ ಜರುಗಿತು. ಕಾರ್ಯದರ್ಶಿ ಸುದರ್ಶನ್ ಬಾರಿತ್ತಾಯ, ಖಜಾಂಚಿ ರಜಿತ್ ಕುಟ್ಟ, ಸದಸ್ಯ ಎಂ.ಜಿ.ಸುಬ್ರಮಣಿ ಪಾಲ್ಗೊಂಡಿದ್ದರು
ಗೋಣಿಕೊಪ್ಪಲು: ಇಲ್ಲಿನ ಕಾವೇರಿ ದಸರಾ ನಾಡಹಬ್ಬದಂದು ನಡೆಯುತ್ತಿದ್ದ ದಶಮಂಟಪ ಶೋಭಾಯಾತ್ರೆಯಲ್ಲಿ ಈ ಬಾರಿ ಡಿಜೆ ಬಳಸದಿರಲು ದಶಮಂಟಪ ಸಮಿತಿ ನಿರ್ಧರಿಸಿದೆ. ಇದರ ಬದಲು ವಾದ್ಯಮೇಳ ಬಳಸಿಕೊಳ್ಳಲು ಚಿಂತನೆ ನಡೆಸಿದೆ.
ಈ ಕುರಿತು ಇತ್ತೀಚೆಗೆ ನಡೆದ ಸಭೆಯಲ್ಲಿ ಮಾತನಾಡಿದ ನಾಡಹಬ್ಬ ದಸರಾ ಸಮಿತಿ ಅಧ್ಯಕ್ಷ ಪ್ರಭಾಕರ್ ನೆಲ್ಲಿತ್ತಾಯ, ‘ಡಿಜೆ ಬದಲಿಗೆ ಕೊಡಗಿನ ವಾಲಗ ಬಳಸಿಕೊಂಡು ನಾಡ ದೇವಿ ಮೆರವಣಿಗೆಯಲ್ಲಿ ಪಾಲ್ಗೊಳ್ಳಲಾಗುವುದು. ಪೊಲೀಸ್ ಇಲಾಖೆ ಈ ಬಗ್ಗೆ ಹೊರಡಿಸಿರುವ ಆದೇಶವನ್ನು ಗೌರವಿಸಲಾಗುವುದು’ ಎಂದರು.
‘ಶೋಭಾಯಾತ್ರೆಯಲ್ಲಿ ಯುವಕ, ಯುವತಿಯರು ಹೆಚ್ಚಿನ ಸಂಖ್ಯೆಯಲ್ಲಿ ಡಿಜೆ ಸೌಂಡಿಗೆ ಕುಣಿದು ಕುಪ್ಪಳಿಸುತ್ತಿದ್ದರು. ಪೊಲೀಸ್ ಆದೇಶದಿಂದ ಅವರಿಗೆ ನಿರಾಶೆಯಾಗಬಹುದು. ಆದರೆ ಆರೋಗ್ಯದ ದೃಷ್ಟಿಯಿಂದ ಚಿಂತಿಸಿರುವ ಪೊಲೀಸ್ ಆದೇಶಕ್ಕೆ ಮನ್ನಣೆ ನೀಡಲು ನಿರ್ಧರಿಸಲಾಗಿದೆ’ ಎಂದರು.
ಇದೇ ನಾಡಹಬ್ಬ ದಸರಾ ಸಮಿತಿ 37 ವರ್ಷಗಳಿಂದ ಸ್ತಬ್ಧ ಚಿತ್ರ ಮತ್ತು ದಶಮಂಟಪ ಶೋಭಾಯಾತ್ರೆಯನ್ನು ಯಶಸ್ವಿಯಾಗಿ ನಡೆಸಿಕೊಂಡು ಬರುತ್ತಿದೆ. ಈ ಬಾರಿಯೂ ಕೂಡ ಮತ್ತಷ್ಟು ಉತ್ತಮ ರೀತಿಯಲ್ಲಿ ನಡೆಸಲು ಗಂಭೀರ ಚಿಂತನೆ ನಡೆಸಿದೆ ಎಂದರು. ಸಾಮಾಜಿಕ ಮತ್ತು ಪೌರಾಣಿಕ ವಿಭಾಗಗಳಲ್ಲಿ ಸ್ತಬ್ಧ ಚಿತ್ರ:
ಸ್ತಬ್ಧ ಚಿತ್ರ ಈ ಕುರಿತು ಮಾತನಾಡಿದ ಪ್ರಭಾಕರ್ ನೆಲ್ಲಿತ್ತಾಯ, ‘ಸಾಮಾಜಿಕ ಮತ್ತು ಪೌರಾಣಿಕ ವಿಭಾಗಗಳಲ್ಲಿ ಸ್ತಬ್ಧ ಚಿತ್ರ ಆಯೋಜಿಸಲಾಗುತ್ತಿದೆ. ದಸರಾ ಉತ್ಸವದ ಪ್ರಮುಖ ಆಕರ್ಷಣೆ ಸ್ತಬ್ಧ ಚಿತ್ರವಾಗಿದ್ದು ಇದನ್ನು ವಿವಿಧ ಸಂಘ ಸಂಸ್ಥೆಗಳು ಅತ್ಯಾಕರ್ಷಕವಾಗಿ ತಯಾರಿಸಬೇಕು’ ಎಂದು ಮನವಿ ಮಾಡಿಕೊಂಡರು.
ಭಾಗವಹಿಸಿದ ಸ್ತಬ್ಧ ಚಿತ್ರಗಳಿಗೆ ಪ್ರಥಮ, ದ್ವಿತೀಯ ಹಾಗೂ ತೃತೀಯ ಬಹುಮಾನವಾಗಿ ಆಕರ್ಷಕ ನಗದು ಮತ್ತು ಫಲಕ ನೀಡಲಾಗುವುದು. ಮೆರವಣಿಗೆಯಲ್ಲಿ ಪಾಲ್ಗೊಳ್ಳುವ ಕಲಾ ತಂಡಗಳಿಗೂ ಉತ್ತಮ ನಗದು ಬಹುಮಾನ ನೀಡಲಾಗುವುದು ಎಂದು ತಿಳಿಸಿದರು.
ಹೆಚ್ಚಿನ ಮಾಹಿತಿಗೆ ಮೊಬೈಲ್ ಫೋನ್ 8762478982 ಸಂಪರ್ಕಿಸಬಹುದು ಎಂದು ಅವರು ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.