ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಕರ್ನಾಟಕ ಕೊಡವ ಸಾಹಿತ್ಯ ಅಕಾಡೆಮಿ, ಬಿದ್ದಾಟಂಡ ಕುಟುಂಬ, ನಾಲ್ಕುನಾಡು ಪ್ಲಾಂಟರ್ಸ್ ಕ್ಲಬ್ ಅಸೋಸಿಯೇಷನ್ ಮತ್ತು ಕೊಡವ ಸಮಾಜ ಸಂಸ್ಕೃತಿ ಮತ್ತು ಕ್ರೀಡಾ ಅಸೋಷಿಯೇಷನ್ ವತಿಯಿಂದ ನಾಪೋಕ್ಲುವಿನ ಬಿದ್ದಾಟಂಡ ಕುಟುಂಬಸ್ಥರ ಗದ್ದೆಯಲ್ಲಿ ಗುರುವಾರ ನಡೆದ ‘ಐಪಣಿರ ಆಯಿಮೆ ಪಿಞ್ಞ ಕಳಿ ಪೈಪೋಟಿ’ ಕಾರ್ಯಕ್ರಮ
ಮಡಿಕೇರಿ: ಬೀಸುತ್ತಿದ್ದ ಕುಳಿರ್ಗಾಳಿಗೆ ಮೈಯೊಡ್ಡಿದ ಸುಮಾರು 500ಕ್ಕೂ ಅಧಿಕ ವಿದ್ಯಾರ್ಥಿಗಳು ಕೆಸರಿನೋಕುಳಿಯಲ್ಲಿ ಮಿಂದೆದ್ದರು.
ನಾಪೋಕ್ಲುವಿನ ಬಿದ್ದಾಟಂಡ ಕುಟುಂಬಸ್ಥರ ಗದ್ದೆಯಲ್ಲಿ ಗುರುವಾರ ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಕರ್ನಾಟಕ ಕೊಡವ ಸಾಹಿತ್ಯ ಅಕಾಡೆಮಿ, ಬಿದ್ದಾಟಂಡ ಕುಟುಂಬ, ನಾಲ್ಕುನಾಡು ಪ್ಲಾಂಟರ್ಸ್ ಕ್ಲಬ್ ಅಸೋಸಿಯೇಷನ್ ಮತ್ತು ಕೊಡವ ಸಮಾಜ ಸಂಸ್ಕೃತಿ ಮತ್ತು ಕ್ರೀಡಾ ಅಸೋಷಿಯೇಷನ್ ವತಿಯಿಂದ ನಡೆದ ‘ಐಪಣಿರ ಆಯಿಮೆ ಪಿಞ್ಞ ಕಳಿ ಪೈಪೋಟಿ’ ಯಲ್ಲಿ ಕಂಡು ಬಂತು.
ಇಲ್ಲಿ ನಡೆದ ವಿವಿಧ ಕ್ರೀಡಾ ಸ್ಪರ್ಧೆಗಳಲ್ಲಿ 13 ಶಾಲಾ ಕಾಲೇಜುಗಳ ವಿದ್ಯಾರ್ಥಿಗಳು ಭಾಗವಹಿಸಿದ್ದರು. ಸುಮಾರು 500ಕ್ಕೂ ಅಧಿಕ ವಿದ್ಯಾರ್ಥಿಗಳು ನಾಟಿ ಓಟ, ರಿಲೇ, ಭತ್ತ ಪೈರು ಕೀಳುವ ಮತ್ತಿತರ ಸ್ಪರ್ಧೆಗಳಲ್ಲಿ ಭಾಗಿಯಾಗಿ ಸಂಭ್ರಮಿಸಿದರು. ಹಿರಿಯರು ತೆಂಗಿನ ಕಾಯಿಗೆ ಗುಂಡು ಹೊಡೆಯುವ ಸ್ಪರ್ಧೆಯಲ್ಲಿ ಪಾಲ್ಗೊಂಡು ಗಮನ ಸೆಳೆದರು.
ಭತ್ತದ ಸಸಿಮಡಿ ಅಗೆದು ತೆಗೆಯುವುದು, ನಾಟಿಮಾಡುವುದು ಕುರಿತು ಪ್ರಾತ್ಯಕ್ಷಿಕೆ, ತೆಂಗಿನಕಾಯಿಗೆ ಗುಂಡು ಹೊಡೆಯುವುದು, ಕೆಸರುಗದ್ದೆ ಓಟ, ಹಗ್ಗ ಜಗ್ಗಾಟ, ಭತ್ತದ ಪೈರು ತೆಗೆಯುವ ಹಾಗೂ ನಾಟಿ ನೆಡುವ ಸ್ಪರ್ಧೆಗಳು ನಡೆದವು.
ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಮುಖ್ಯಮಂತ್ರಿಯ ಕಾನೂನು ಸಲಹೆಗಾರ ಹಾಗೂ ಶಾಸಕ ಎ.ಎಸ್.ಪೊನ್ನಣ್ಣ, ‘ಕೊಡಗಿನ ಪೂರ್ವಜರು ಉಳಿಸಿ ಬೆಳೆಸಿಕೊಂಡು ಬಂದಿರುವ ಕೃಷಿ ಪದ್ಧತಿ, ಸಂಸ್ಕೃತಿ, ಕಲೆ, ಪರಂಪರೆಗಳನ್ನು ಇಂದಿನ ಯುವಜನರು ಮರೆಯದೆ ಮುಂದುವರಿಸಿಕೊಂಡು ಹೋಗಬೇಕು’ ಎಂದು ತಿಳಿಸಿದರು.
ಕೊಡಗಿನ ಜನರು ಹಿಂದಿನಿಂದಲೂ ಕೃಷಿಯನ್ನು ನಂಬಿ ಬದುಕು ಕಟ್ಟಿಕೊಂಡಿದ್ದಾರೆ. ಕೃಷಿ ಜೊತೆಗೆ ಕಲೆ, ಸಂಸ್ಕೃತಿ, ಭಾಷೆ ಉಳಿಸಿ ಬೆಳೆಸಿಕೊಂಡು ಬಂದಿದ್ದು, ಅದನ್ನು ಮುಂದಿನ ಪೀಳಿಗೆಗೂ ತಿಳಿಸಬೇಕು ಎಂದು ಹೇಳಿದರು.
‘ಆಟ್‍ಪಾಟ್’ ಜೊತೆಗೆ ಸಂಸ್ಕೃತಿ, ಆಚಾರ-ವಿಚಾರ ಕಲೆಗಳನ್ನು ಉಳಿಸಿ ಬೆಳೆಸಿಕೊಂಡು ಹೋಗುವುದು ಆದ್ಯ ಕರ್ತವ್ಯವಾಗಿದೆ. ಆ ನಿಟ್ಟಿನಲ್ಲಿ ಪ್ರತಿಯೊಬ್ಬರಲ್ಲಿಯೂ ಹೆಚ್ಚಿನ ಜವಾಬ್ದಾರಿಯಿದ್ದು, ಈ ಬಗ್ಗೆ ಗಮನಹರಿಸಬೇಕು ಎಂದು ತಿಳಿಸಿದರು.
‘ಕೊಡವ ಭಾಷಿಕ ಜನರ ಸಾಹಿತ್ಯ, ಸಂಸ್ಕೃತಿ, ಕಲೆಗಳು ಇಡೀ ವಿಶ್ವದಲ್ಲಿಯೇ ಮಾದರಿಯಾಗಿದ್ದು, ಗೌರವಿಸುತ್ತಾರೆ ಎಂಬುದನ್ನು ಯಾರೂ ಸಹ ಮರೆಯಬಾರದು. ಕೊಡಗಿನ ಸಂಸ್ಕೃತಿ ಬಗ್ಗೆ ರಾಷ್ಟ್ರ ಮತ್ತು ಅಂತರರಾಷ್ಟ್ರೀಯ ಮಟ್ಟದಲ್ಲಿಯೂ ಸಹ ಮೆಚ್ಚುಗೆ ಇದ್ದು, ಅಷ್ಟರ ಮಟ್ಟಿಗೆ ಶ್ರೀಮಂತಿಕೆ ಹೊಂದಿದೆ. ಅದನ್ನು ಉಳಿಸಿ ಬೆಳೆಸಿಕೊಂಡು ಹೋಗುವುದು ಎಲ್ಲಾ ಕೊಡವ ಭಾಷಿಕರ ಕರ್ತವ್ಯವಾಗಿದೆ’ ಎಂದೂ ಹೇಳಿದರು.
ಕೊಡವ ಭಾಷಿಕ ಸಂಸ್ಕೃತಿಯು ವಿಭಿನ್ನತೆ ಹೊಂದಿದ್ದು, ಎಲ್ಲೆಡೆ ಗಮನ ಸೆಳೆಯುತ್ತದೆ. ಅದನ್ನು ಅರ್ಥ ಮಾಡಿಕೊಂಡು ಕೊಡವ ಸಂಸ್ಕೃತಿ, ಪರಂಪರೆ ಮತ್ತು ಕಲೆಗಳನ್ನು ಮತ್ತಷ್ಟು ಔನ್ನತ್ಯಕ್ಕೆ ಕೊಂಡೊಯ್ಯಬೇಕು. ಆ ನಿಟ್ಟಿನಲ್ಲಿ ಅಕಾಡೆಮಿಯ ಎಲ್ಲರೂ ಶ್ರಮಿಸಬೇಕು’ ಎಂದು ಕಿವಿಮಾತು ಹೇಳಿದರು.
ರಾಷ್ಟ್ರದಲ್ಲಿ ಜನಸಂಖ್ಯೆ ಹೆಚ್ಚುತ್ತಿದ್ದರೆ ಕೊಡವ ಭಾಷಿಕ ಜನಾಂಗದವರ ಜನಸಂಖ್ಯೆ ವರ್ಷದಿಂದ ವರ್ಷಕ್ಕೆ ಕಡಿಮೆಯಾಗುತ್ತಿದೆ. ಆದರೂ ಸಹ ಕ್ರೀಡೆ ಸೇರಿದಂತೆ ವಿವಿಧ ಕ್ಷೇತ್ರದಲ್ಲಿ ಸಾಧನೆ ಮಾಡಿರುವುದನ್ನು ಮತ್ತು ಮಾಡುತ್ತಿರುವುದನ್ನು ಮರೆಯುವಂತಿಲ್ಲ ಎಂದು ತಿಳಿಸಿದರು. ಬಹು ವರ್ಷಗಳ ನಂತರ ಭಾರತ ಮುಖ್ಯ ಹಾಕಿ ತಂಡಕ್ಕೆ ಜಿಲ್ಲೆಯ ಚಂದೂರ ಬಿ.ಪೂವಣ್ಣ ಆಯ್ಕೆಯಾಗಿದ್ದಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಈ ವೇಳೆ ಎ.ಎಸ್.ಪೊನ್ನಣ್ಣ ಅವರು ತೆಂಗಿನಕಾಯಿಗೆ ಗುಂಡು ಹೊಡೆಯುವ ಮೂಲಕ ಗಮನ ಸೆಳೆದರು.
ಗ್ರಾಮ ಪಂಚಾಯತಿ ಅಧ್ಯಕ್ಷೆ ವನಜಾಕ್ಷಿ ರೇಣುಕೇಶ್ ಭತ್ತದ ಪೈರುಗಳನ್ನು ತೆಗೆಯುವುದರ ಮೂಲಕ ಕ್ರೀಡಾಕೂಟಕ್ಕೆ ಚಾಲನೆ ನೀಡಿದರು. ನಾಲ್ಕುನಾಡು ಪ್ಲಾಂಟರ್ಸ್ ಕ್ಲಬ್ ಅಸೋಷಿಯೇಷನ್ ಅಧ್ಯಕ್ಷ ಬಾಚಮ್ಮಂಡ ಲವ ಚಿಣ್ಣಪ್ಪ, ನಾಪೋಕ್ಲು ಕಾಫಿ ಪ್ಲಾಂಟರ್ ಬಿದ್ದಾಟಂಡ ಜೀವನ ತಿಮ್ಮಯ್ಯ, ಬಿದ್ದಾಟಂಡ ಕುಟುಂಬದ ಅಧ್ಯಕ್ಷರಾದ ಕಾರ್ಯಪ್ಪ, ಕರ್ನಾಟಕ ಕೊಡವ ಸಾಹಿತ್ಯ ಅಕಾಡೆಮಿಯ ಮಾಜಿ ಅಧ್ಯಕ್ಷ ಬಿದ್ದಾಟಂಡ ಎಸ್.ತಮ್ಮಯ್ಯ, ಕೃಷಿಕರಾದ ಮುಕ್ಕಾಟಿರ ಸುತನ್ ಸುಬ್ಬಯ್ಯ, ಕಲಿಯಂಡ ಸಂಪನ್ ಸೋಮಣ್ಣ, ಕುಡಿಯರ ಮುತ್ತಪ್ಪ, ಅಕಾಡೆಮಿ ಸದಸ್ಯರಾದ ಪುತ್ತರಿರ ಪಪ್ಪು ತಿಮ್ಮಯ್ಯ, ಕಂಬೆಯಂಡ ಡೀನಾ ಬೋಜಣ್ಣ, ಮೊಳ್ಳೆಕುಟ್ಟಂಡ ದಿನು ಬೋಜಪ್ಪ, ಪಾನಿಕುಟ್ಟಿರ ಕೆ.ಕುಟ್ಟಪ್ಪ, ಕುಡಿಯರ ಕಾವೇರಪ್ಪ, ಚೊಟ್ಟೆಯಂಡ ಎ.ಸಂಜು ಕಾವೇರಪ್ಪ ಮತ್ತು ನಾಪಂಡ ಸಿ. ಗಣೇಶ್, ಪೊನ್ನಿರ ಯು.ಗಗನ್, ಚೆಪ್ಪುಡಿರ ಎಸ್.ಉತ್ತಪ್ಪ, ನಾಯಕಂಡ ಬೇಬಿ ಚಿಣ್ಣಪ್ಪ ಭಾಗವಹಿಸಿದ್ದರು.
ಕರ್ನಾಟಕ ಕೊಡವ ಸಾಹಿತ್ಯ ಅಕಾಡೆಮಿ, ನಾಲ್ಕುನಾಡು ಪ್ಲಾಂಟರ್ಸ್ ಕ್ಲಬ್ ಹಾಗೂ ನಾಪೋಕ್ಲು ಕೊಡವ ಸಮಾಜದ ಕ್ರೀಡಾ ಮತ್ತು ಸಾಂಸ್ಕೃತಿಕ,ಮನೋರಂಜನಾ ಕೂಟ, ಬಿದ್ದಾಟಂಡ ಕುಟುಂಬಸ್ಥರ ಸಂಯುಕ್ತ ಆಶ್ರಯದಲ್ಲಿ ಗುರುವಾರ ನಾಪೋಕ್ಲುವಿನ ಬಿದ್ದಾಟಂಡ ಕುಟುಂಬಸ್ಥರ ಗದ್ದೆಯಲ್ಲಿ ಆಯೋಜಿಸಲಾಗಿದ್ದ ಕಾರ್ಯಕ್ರಮದಲ್ಲಿ ಗ್ರಾಮ ಪಂಚಾಯತಿ ಅಧ್ಯಕ್ಷೆ ವನಜಾಕ್ಷಿ ರೇಣುಕೇಶ್ ಭತ್ತದ ಅಗೆ ತೆಗೆಯುವುದರ ಮೂಲಕ ಚಾಲನೆ ನೀಡಿದರು.
‘ಹಿಂದಿನ ಕೃಷಿ ಪದ್ಧತಿ ಉಳಿಸಿ’
ಕರ್ನಾಟಕ ಕೊಡವ ಸಾಹಿತ್ಯ ಅಕಾಡೆಮಿಯ ಅಧ್ಯಕ್ಷರಾದ ಅಜ್ಜಿನಿಕಂಡ ಸಿ.ಮಹೇಶ್ ನಾಚಯ್ಯ ಮಾತನಾಡಿ, ‘ಹಿಂದಿನ ಕೃಷಿ ಪದ್ಧತಿಯನ್ನು ಉಳಿಸಿಕೊಂಡು ಕೊಡವ ಭಾಷಿಕ ಜನಾಂಗದ ಅಭಿವೃದ್ಧಿಗೆ ಎಲ್ಲರೂ ಕೈಜೋಡಿಸಬೇಕು’ ಎಂದು ಹೇಳಿದರು.
ಕೊಡವ ಭಾಷಿಕ 21 ಮೂಲ ಜನಾಂಗದವರು ಕೃಷಿ ಭೂಮಿಯನ್ನು ಪೂಜಿಸಿಕೊಂಡು ಬದುಕು ನಡೆಸುತ್ತಿದ್ದಾರೆ. ಕೊಡವ ಭಾಷಿಕರಿಗೆ ಭೂಮಿ, ತೋಟ, ಬಾಣೆಯು ಪಾರಂಪರಿಕವಾಗಿ ಬಂದಿದ್ದು, ಇದನ್ನು ಉಳಿಸಿಕೊಂಡು ಬರಬೇಕು ಎಂದರು.
ಸರ್ಕಾರ ಅಕಾಡೆಮಿಗೆ ಎಲ್ಲಾ ರೀತಿಯ ಸಹಕಾರ ನೀಡುತ್ತಿದೆ. ಅಕಾಡೆಮಿಯ ಎಲ್ಲರೂ ಒಟ್ಟುಗೂಡಿ ತಂಡವಾಗಿ ಉತ್ತಮ ಕಾರ್ಯಕ್ರಮ ಆಯೋಜಿಸಿಕೊಂಡು ಹೋಗಬೇಕುಎ.ಎಸ್.ಪೊನ್ನಣ್ಣ, ಶಾಸಕ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.