ಗೋಣಿಕೊಪ್ಪಲು: ಕೊಡವ ಸಂಸ್ಕೃತಿಯ ಉಳಿವಿಗಾಗಿ ದಕ್ಷಿಣ ಕೊಡಗಿನಲ್ಲಿ ನಡೆಯುತ್ತಿರುವ ಕೊಡವರ ಪಾದಯಾತ್ರೆಯ 3ನೇ ದಿನವಾದ ಮಂಗಳವಾರವೂ ಸಾವಿರಾರು ಮಂದಿ ಭಾಗಿಯಾದರು.
ಹಲವೆಡೆ ಪಾದಯಾತ್ರಿಕರ ಮೇಲೆ ಜನರು ಹೂಮಳೆಗರೆದರೆ, ಮತ್ತೆ ಕೆಲವೆಡೆ ತಂಪು ಪಾನೀಯ, ಎಳನೀರು ನೀಡಿ ಅವರ ದಣಿವಾರಿಸಿದರು. ಕೊಡವ ವಾಲಗ ಸೇರಿದಂತೆ ಕೊಡವ ಜನಪದ ವಾದ್ಯಗಳು ಮೆರವಣಿಗೆಗೆ ರಂಗು ತುಂಬಿದವು.
ಪೊನ್ನಂಪೇಟೆ ಕೊಡವ ಸಮಾಜದ ಆವರಣದಲ್ಲಿರುವ ಕಾವೇರಿ ಮಾತೆಗೆ ಬೆಳಿಗ್ಗೆ 9ಕ್ಕೆ ಪೂಜೆ ಸಲ್ಲಿಸಿ ಪಾದಯಾತ್ರೆಗೆ ಚಾಲನೆ ನೀಡಲಾಯಿತು. ಕೊಡವ ಉಡುಪು ಧರಿಸಿ ಎಂದಿನಂತೆ ‘ತಳಿಯತಕ್ಕಿ ಬೊಳಚ’ ಹಿಡಿದು ಮೆರವಣಿಗೆಯಲ್ಲಿ ಸಾಲಾಗಿ ಬಂದ ಮಹಿಳೆಯರು, ಪುರುಷರು ಹಾಗೂ ಯುವಕ ಯುವತಿಯರ ತಲೆಯ ಮೇಲೆ ಪೊನ್ನಂಪೇಟೆ ಬಸ್ ನಿಲ್ದಾಣದ ಬಳಿ ಹೂಮಳೆಗರೆದು ಶುಭ ಕೋರಿದರು. ಪೊನ್ನಂಪೇಟೆ ಸಾಯಿಶಂಕರ ವಿದ್ಯಾಸಂಸ್ಥೆಯ ವಿದ್ಯಾರ್ಥಿಗಳು ಸಾಲಾಗಿ ನಿಂತು ಮೆರವಣಿಗೆಕಾರರ ಮೇಲೆ ಹೂವುಗಳನ್ನು ಎರಚಿದರು.
ಪೊನ್ನಂಪೇಟೆಯಲ್ಲಿ ಕೊಡವ ಸಾಂಪ್ರದಾಯಕ ದಿರಿಸು ಧರಿಸಿದ ಹಿರಿಯರು ದುಡಿ ಬಾರಿಸಿಕೊಂಡು ಹೆಜ್ಜೆ ಹಾಕಿ ಮೆರವಣಿಗೆಗೆ ಕಳೆ ತುಂಬಿದರು. ಇವರೊಂದಿಗೆ ತಳಿಯತಕ್ಕಿ ಬೊಳಚ ಹಿಡಿದ ಮಹಿಳೆಯರು ಹೆಜ್ಜೆ ಹಾಕಿದರು.
ಅಲ್ಲಿಂದ ಗೋಣಿಕೊಪ್ಪಲು ಮುಖ್ಯರಸ್ತೆಯಲ್ಲಿ ಸಾಗಿ ಬಂದ ಪಾದಯಾತ್ರಿಗಳಿಗೆ ಜೋಡುಬೀಟಿ ಬಳಿ ಮೂಕಳಮಾಡ ಕುಟುಂಬಸ್ಥರು ಆರತಿ ಬೆಳಗಿ, ಪುಷ್ಪಾರ್ಚನೆ ಮಾಡಿ ಕೊಡವ ಸಂಪ್ರದಾಯದ ಕೆಂಪು ಚೌಕ ಹಿಡಿದು ಸ್ವಾಗತಿಸಿದರು. ಅಲ್ಲಿಂದ ಶಿಸ್ತುಬದ್ಧವಾಗಿ ಸಾಗಿ ಬಂದ ಮೆರವಣಿಗೆಗೆ ಜೋಡುಬೀಟಿಯಲ್ಲಿ ವಿವಿಧ ಜನಾಂಗದವರು ಮುಖ್ಯ ರಸ್ತೆಯ ಬದಿಯಲ್ಲಿ ನಿಂತು ತಂಪುಪಾನೀಯ ನೀಡಿ ಶುಭಕೋರಿದರು.
ಗೋಣಿಕೊಪ್ಪಲು ತಲುಪುತ್ತಿದ್ದಂತೆ, ಅಲ್ಲಿನ ಪೊನ್ನಂಪೇಟೆ ವೃತ್ತದ ಬಳಿ ಸ್ಥಳೀಯ ಇಗ್ಗುತಪ್ಪ ಕೊಡವ ಸಂಘದವರು ಒಡ್ಡೋಲಗದ ಮೂಲಕ ನಗರಕ್ಕೆ ಭಕ್ತಿಪೂರ್ವಕವಾಗಿ ಮೆರವಣಿಗೆಯಲ್ಲಿದ್ದವರನ್ನು ಬರಮಾಡಿಕೊಂಡರು. ಉಮಾಮಹೇಶ್ವರಿ ದೇವಸ್ಥಾನದವರೆಗೂ ಮುಖ್ಯ ರಸ್ತೆಯಲ್ಲಿ ಕೊಡವ ವಾಲಗದ ಮೂಲಕ ಬಂದ ಮೆರವಣಿಗೆಗೆ ಬಸ್ ನಿಲ್ದಾಣದಲ್ಲಿ ತಡೆದು ವಿವಿಧ ವರ್ಗದ ಜನರು, ಸಂಘ–ಸಂಸ್ಥೆಯವರು ಹಾಗೂ ಕೊಡವ ಜನಾಂಗದವರು ಪುಷ್ಪಾರ್ಚನೆಗೈದರು. ಮೆರವಣಿಗೆಯಲ್ಲಿದ್ದ ಮುಖಂಡರಿಗೆ ಕೈಕುಲುಕಿ ಶುಭಾಶಯ ಹೇಳಿ ಬೀಳ್ಕೊಟ್ಟರು.
ತುಸು ದೂರದಲ್ಲಿ ಹೆದ್ದಾರಿ ಬದಿಯ ಕಾವೇರಿ ಕಾಲೇಜಿನ ಮೈದಾನದಲ್ಲಿರುವ ಫೀಲ್ಡ್ ಮಾರ್ಷಲ್ ಕೆ.ಎಂ. ಕಾರ್ಯಪ್ಪ, ಜನರಲ್ ತಿಮ್ಮಯ್ಯ ಅವರ ಪ್ರತಿಮೆಗೆ ಪಾದಯಾತ್ರೆಯ ಮುಖಂಡರು ಪುಷ್ಪನಮನ ಸಲ್ಲಿಸಿದರು.
ಕೊಡವ ಭಾಷಿಕ ಜನಾಂಗದವರ ಬೆಂಬಲ
ಮುಂದೆ ಕೈಕೇರಿ ತಲುಪುತ್ತಿದ್ದಂತೆ, ಅಲ್ಲಿನ ಸವಿತಾ ಸಮಾಜದವರು, ವಿವಿಧ ಕೊಡವ ಭಾಷಿಕ ಜನಾಂಗದ ಮುಖಂಡರು ಸಿಹಿಪಾನೀಯ, ಎಳನೀರು, ಕುಡಿಯುವ ನೀರು ನೀಡಿ ಬರಮಾಡಿಕೊಂಡರು. ಕೊಡವ ಭಾಷಿಕ ಜನಾಂಗದ ಒಕ್ಕೂಟದ ಅಧ್ಯಕ್ಷ ಮೇಚೇರಿ ನಾಣಯ್ಯ ಹಾಗೂ ಪದಾಧಿಕಾರಿಗಳು ಸೇರಿ ಪಾದಯಾತ್ರೆಯೊಂದಿಗೆ ಹೆಜ್ಜೆ ಹಾಕಿದರು.
ಪೊನ್ನಂಪೇಟೆ ಗೋಣಿಕೊಪ್ಪಲು ಭಾಗದಲ್ಲಿ ಸಾಗರೋಪಾದಿಯಲ್ಲಿ ಬಂದ ಜನರಿಂದ ವಾಹನ ಸಂಚಾರಕ್ಕೆ ಅಡಚಣೆಯಾಗದಂತೆ ಮೆರವಣಿಗೆಯ ಒಂದು ಬದಿಯಲ್ಲಿ ಕಾರ್ಯಕರ್ತರು ಹಗ್ಗ ಹಿಡಿದು ಸಾಗಿದರು. ಇದರಿಂದ ವಾಹನ ಸಂಚಾರ ಮತ್ತು ಮೆರವಣಿಗೆ ಏಕ ಕಾಲದಲ್ಲಿ ಸುಗಮವಾಗಿ ಸಾಗಿತು.
ಬಳಿಕ, ಸಂಜೆ 5 ಗಂಟೆ ವೇಳೆಗೆ ಬಿಟ್ಟಂಗಾಲ ತಲುಪಿ, ಅಲ್ಲಿನ ಹೆಗಡೆ ಸಮಾಜದಲ್ಲಿ ವಾಸ್ತವ್ಯ ಹೂಡಲಾಯಿತು. ಬುಧವಾರ ಬೆಳಿಗ್ಗೆ ವಿರಾಜಪೇಟೆಯತ್ತ ಸಂಚಾರ ಮುಂದುವರಿಯಲಿದೆ ಎಂದು ಆಯೋಜಕರು ತಿಳಿಸಿದರು.
ಮಂಗಳವಾರ ಬೆಳಿಗ್ಗೆ ಪೊನ್ನಂಪೇಟೆ ಕೊಡವ ಸಮಾಜದಿಂದ ಜಾಥಾ ಸಂಜೆ ಬಿಟ್ಟಂಗಾಲ ತಲುಪಿದ ಪಾದಯಾತ್ರೆ ಬುಧವಾರ ವಿರಾಜಪೇಟೆಯತ್ತ ಪಯಣ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.