
ಮಡಿಕೇರಿ: ರೈಲ್ವೆ ಸಂಪರ್ಕವೇ ಇರದ ಜಿಲ್ಲೆ ಎನಿಸಿದ ಕೊಡಗು ಜಿಲ್ಲೆಯಲ್ಲಿಯೂ ಒಂದು ರೈಲು ಓಡುತ್ತಿತ್ತು. ರಾಜಾಸೀಟ್ ಉದ್ಯಾನಕ್ಕೆ ಬಂದವರಿಗೆಲ್ಲ ಈ ರೈಲು ಅಚ್ಚುಮೆಚ್ಚಿನದ್ದಾಗಿತ್ತು. ರೈಲನ್ನೇ ನೋಡಿರದ ಇಲ್ಲಿನ ಬಡ ಮಕ್ಕಳಿಗಂತೂ ಅಪ್ಯಾಯಮಾನವಾಗಿತ್ತು. ಆದರೆ, ಈಗ ಅದು ನಿಂತು ವರ್ಷಗಳೇ ಉರುಳಿವೆ.
ಈಗ ಹಳೆಯ ರೈಲ್ವೆ ಟ್ರ್ಯಾಕ್, ತುಕ್ಕು ಹಿಡಿದು ನಿಂತಿರುವ ಬೋಗಿಗಳು ಗತಕಾಲದ ಪಳೆಯುಳಿಕೆಗಳನ್ನು ನೋಡಿದಂತೆ ಭಾಸವಾಗುತ್ತದೆ. ಇಂದಿಗೂ ಹಿರಿಯರು ಈ ರೈಲು ಓಡುತ್ತಿದ್ದ ಪರಿ, ಅದರಿಂದ ಕೇಳಿ ಬರುತ್ತಿದ್ದ ಚುಕುಬುಕು ಸದ್ದು, ಅದರ ಮೇಲೆ ತಾವು ಮಕ್ಕಳಿದ್ದಾಗ ವಿಹರಿಸುತ್ತಿದ್ದ ಬಗೆಗಳನ್ನು ನೆನೆಯುತ್ತಾರೆ. ಜೊತೆಗೆ, ಈ ರೈಲಿನ ಸ್ಥಿತಿ ಕಂಡು ಮಮ್ಮಲ ಮರುಗುತ್ತಾರೆ.
ಒಂದೆಡೆ ರೈಲ್ವೆ ಸಂಪರ್ಕವನ್ನೇ ಕಾಣದ ಕೊಡಗಿನ ಮಕ್ಕಳು ರೈಲಿನ ಅನುಭವ ಪಡೆಯಲು ಇದ್ದ ಏಕೈಕ ರೈಲು ಮೂಲೆ ಸೇರಿದ್ದರೆ, ಮತ್ತೊಂದೆಡೆ ಮೈಸೂರಿನ ರೈಲ್ವೆ ಸಂಗ್ರಹಾಲಯದಲ್ಲಿ ಮಕ್ಕಳ ರೈಲುಗಳು ಮಾತ್ರವಲ್ಲ, ಹಳೆಯ ರೈಲುಗಳಿಗೂ ಜೀವ ತುಂಬಲಾಗಿದೆ. ಅಕ್ಕಪಕ್ಕದ ಜಿಲ್ಲೆಯಲ್ಲಿರುವ ಈ ಅಗಾಧ ವ್ಯತ್ಯಾಸಕ್ಕೆ ದೂರುವುದಾದರೂ ಯಾರನ್ನು ಎಂಬ ಪ್ರಶ್ನೆ ಇಲ್ಲಿನ ಜನರದ್ದು.
ರಾಜಾಸೀಟ್ ಉದ್ಯಾನದಲ್ಲಿ ಮಕ್ಕಳ ರೈಲನ್ನು ಪುನರ್ ಆರಂಭಿಸಲು ರೈಲ್ವೆ ಇಲಾಖೆಗೆ ಪ್ರಸ್ತಾವ ಸಲ್ಲಿಸಿ ವರ್ಷಗಳೂ ಉರುಳಿವೆ. ಅಲ್ಲಿಂದಲೂ ತಜ್ಞರ ತಂಡ ಬಂದು ಪರಿಶೀಲನೆ ಮಾಡಿ, ವರದಿ ನೀಡಿದೆ. ಈ ವರದಿಯ ಮೇಲೆ ಯಾರೊಬ್ಬರೂ ಕಣ್ಣಾಯಿಸಿಲ್ಲ. ಇದೂ ಮೂಲೆ ಸೇರಿದ್ದು, ಮಕ್ಕಳನ್ನೇ ಕೇಂದ್ರೀಕರಿಸಿಕೊಂಡಿರುವ ಈ ಯೋಜನೆ ಹಳ್ಳ ಹಿಡಿದಿದೆ.
ಇಂತಹದ್ದೊಂದು ಯೋಜನೆ ಬದಲಿಗೆ ಈಚೆಗಷ್ಟೇ ಇಲ್ಲೊಂದು ಗಾಜಿನ ಸೇತುವೆ ನಿರ್ಮಿಸಲು ಇನ್ನಿಲ್ಲದ ಕಸರತ್ತು ನಡೆದಿತ್ತು. ಮುಗುಮ್ಮಾಗಿಯೇ ಟೆಂಡರ್ ಕರೆದು ಟೆಂಡರ್ ಸಹ ಆಗಿತ್ತು. ಆದರೆ, ಸ್ಥಳೀಯರ ಪ್ರಬಲ ವಿರೋಧದಿಂದಾಗಿ ಈ ಯೋಜನೆಯನ್ನು ಸ್ಥಗಿತಗೊಳಿಸಲಾಯಿತು. ಇಷ್ಟೆಲ್ಲ ಮಾಡುವವರಿಗೆ ಇಲ್ಲೊಂದು ಮಕ್ಕಳ ರೈಲು ಇತ್ತು ಎಂಬುದಾದರೂ ನೆನಪಿಗೆ ಬಾರದೇ ಹೋಗಿದ್ದು ಸೋಜಿಗ ಮೂಡಿಸುತ್ತದೆ ಎಂದು ಸ್ಥಳೀಯರು ದೂರುತ್ತಾರೆ.
ಗ್ರೇಟರ್ ರಾಜಾಸೀಟ್ ನಿರ್ಮಾಣವಾದಾಗಲೂ ಮಕ್ಕಳ ರೈಲಿಗೆ ಜೀವ ತುಂಬುವ ಕೆಲಸವನ್ನು ಯಾರೂ ಮಾಡಲಿಲ್ಲ. ಈ ಗ್ರೇಟರ್ ರಾಜಾಸೀಟ್‌ನಲ್ಲಿ ಮಕ್ಕಳಿಗಾಗಿ ಸಾಹಸ ಕ್ರೀಡೆಗಳಿಗೆ ಬೇಕಾದ ಪರಿಕರಗಳನ್ನು ಅಳವಡಿಸಲಾಯಿತಾದರೂ, ಅವು ಹಣ ಇದ್ದವರಿಗಷ್ಟೇ ಮೀಸಲಾಗಿವೆ. ಬಡ ಮಕ್ಕಳು ಈ ಆಟಗಳನ್ನು ಕೇವಲ ನೋಡಿಯೇ ಆನಂದಿಸುವ ಸನ್ನಿವೇಶ ಇದೆ. ಇಂತಹ ಬಡ ಮತ್ತು ಮಧ್ಯಮ ವರ್ಗದ ಮಕ್ಕಳ ಮನರಂಜನೆಗಾಗಿಯಾದರೂ ಹಿಂದೆ ಇದ್ದಂತೆ ಮಕ್ಕಳ ರೈಲು ಇಲ್ಲಿ ಸಂಚರಿಸಬೇಕು ಎಂಬುದು ಜನರ ಒತ್ತಾಯ.
ಮುಂದೆ ನಡೆಯುವ ರಾಜಾಸೀಟ್ ಉದ್ಯಾನ ಅಭಿವೃದ್ಧಿ ಕುರಿತು ಸಭೆ ಅಥವಾ ಜಿಲ್ಲಾ ಪ್ರಗತಿ ಪರಿಶೀಲನಾ ಸಭೆಯಲ್ಲಾದರೂ ಈ ವಿಷಯ ಪ್ರಸ್ತಾಪವಾಗಿ, ಮಕ್ಕಳ ರೈಲಿಗೆ ಮತ್ತೆ ಜೀವ ಬರಬಹುದೇ ಎಂಬ ನಿರೀಕ್ಷೆ ಇಲ್ಲಿನ ಜನರದ್ದು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.