ADVERTISEMENT

ಕುಶಾಲನಗರ | ಕನ್ನಡ ಸಾಹಿತ್ಯ ಲೋಕಕ್ಕೆ ಕೊಡುಗೆ ಅಪಾರ: ಆರ್.ಕೆ.ಬಾಲಚಂದ್ರ

​ಪ್ರಜಾವಾಣಿ ವಾರ್ತೆ
Published 6 ಜನವರಿ 2026, 5:30 IST
Last Updated 6 ಜನವರಿ 2026, 5:30 IST
ಕುಶಾಲನಗರ ತಾಲ್ಲೂಕಿನ ತೊರೆನೂರಿನಲ್ಲಿ ಕಣಿವೆ ಕಟ್ಟೆ ಕೊಡಗು ವತಿಯಿಂದ ಏರ್ಪಡಿಸಿದ್ದ ರಾಷ್ಟ್ರಕವಿ ಕುವೆಂಪು ಅವರ ವಿಶ್ವಮಾನವ ಸಂದೇಶದ ಕುರಿತ ಕಾರ್ಯಕ್ರಮದಲ್ಲಿ ಜಿಲ್ಲಾ ಲೀಡ್ ಬ್ಯಾಂಕ್ ನಿವೃತ್ತ ವ್ಯವಸ್ಥಾಪಕ ಆರ್.ಕೆ.ಬಾಲಚಂದ್ರ‌ ಮಾತನಾಡಿದರು
ಕುಶಾಲನಗರ ತಾಲ್ಲೂಕಿನ ತೊರೆನೂರಿನಲ್ಲಿ ಕಣಿವೆ ಕಟ್ಟೆ ಕೊಡಗು ವತಿಯಿಂದ ಏರ್ಪಡಿಸಿದ್ದ ರಾಷ್ಟ್ರಕವಿ ಕುವೆಂಪು ಅವರ ವಿಶ್ವಮಾನವ ಸಂದೇಶದ ಕುರಿತ ಕಾರ್ಯಕ್ರಮದಲ್ಲಿ ಜಿಲ್ಲಾ ಲೀಡ್ ಬ್ಯಾಂಕ್ ನಿವೃತ್ತ ವ್ಯವಸ್ಥಾಪಕ ಆರ್.ಕೆ.ಬಾಲಚಂದ್ರ‌ ಮಾತನಾಡಿದರು   

ಕುಶಾಲನಗರ: ‘ಕನ್ನಡ ಸಾಹಿತ್ಯ ಲೋಕಕ್ಕೆ ರಾಷ್ಟ್ರಕವಿ ಕುವೆಂಪು ಕೊಡುಗೆ ಅಪಾರ. ಅವರ ವೈಚಾರಿಕ ನಿಲುವು ಮತ್ತು ಆದರ್ಶಗಳು ಇಂದಿಗೂ ನಮಗೆ ದಾರಿ ದೀಪ’ ಎಂದು ಜಿಲ್ಲಾ ಲೀಡ್ ಬ್ಯಾಂಕ್‌ನ ನಿವೃತ್ತ ವ್ಯವಸ್ಥಾಪಕ ಆರ್.ಕೆ.ಬಾಲಚಂದ್ರ ಹೇಳಿದರು.

ಸಮೀಪದ ತೊರೆನೂರಿನ ರೇವೇಗೌಡನಕೊಪ್ಪಲಿನ ಶನೇಶ್ವರ ದೇವಸ್ಥಾನದ ಆವರಣದಲ್ಲಿ ಕಣಿವೆ ಕಟ್ಟೆ ಕೊಡಗು ಬಳಗದಿಂದ ಈಚೆಗೆ ಏರ್ಪಡಿಸಿದ್ದ ರಾಷ್ಟ್ರಕವಿ ಕುವೆಂಪು ಅವರ ವಿಶ್ವ ಮಾನವ ಸಂದೇಶ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಕುವೆಂಪು ವಿಶ್ವ ಕಂಡ ಅಪ್ರತಿಮ ಸಾಹಿತಿ, ಚಿಂತಕ. ನೂರಾರು ಸಾಹಿತ್ಯಗಳನ್ನು ರಚಿಸುವ ಮೂಲಕ ಸಮಾಜದಲ್ಲಿ ವೈಚಾರಿಕ ಕ್ರಾಂತಿ ಬೆಳೆಸಲು ಪ್ರಮುಖ ಕಾರಣರಾಗಿದ್ದಾರು ಎಂದರು.

ADVERTISEMENT

ಸಮಾಜದ ಬಗ್ಗೆ ಕುವೆಂಪು ಅವರ ದೃಷ್ಟಿಕೋನ ಹಾಗೂ ಕಾಳಜಿ ಅಪ್ರತಿಮವಾದದ್ದು. ಸರ್ಕಾರ ಕುವೆಂಪು ಅವರ ಅನೇಕ ಚಿಂತನೆಗಳನ್ನು ಆಡಳಿತದಲ್ಲಿ ರೂಢಿಸಿಕೊಂಡಿದೆ. ಕುವೆಂಪು ಅವರ ವೈಚಾರಿಕತೆ ಬೆಳೆಸಿಕೊಳ್ಳುವ ಮೂಲಕ ಸಮಾಜದ ಪ್ರಗತಿಗೆ ಸಹಕರಿಸಬೇಕು ಎಂದು ತಿಳಿಸಿದರು.

ಸಾಹಿತಿ ಜೆ.ಸೋಮಣ್ಣ ಮಾತನಾಡಿ, ‘ಹುಟ್ಟುವ ಪ್ರತಿ ಮಗುವು ವಿಶ್ವಮಾನವ. ಆ ನಂತರ ಮಗುವನ್ನು ಜಾತಿ, ಮತದ ಕಟ್ಟುಪಾಡುಗಳಿಂದ ಬಂಧಿಸಲಾಗುತ್ತದೆ. ಇದು ಸರಿಯಲ್ಲ. ಯಾವುದೇ ವ್ಯಕ್ತಿ ಜಾತಿಯಿಂದ ಮುಖ್ಯನಾಗಬಾರದು. ನೈತಿಕ ವ್ಯಕ್ತಿತ್ವದಿಂದ ಮುಖ್ಯನಾಗಬೇಕು ಎಂಬ ಪರಿಕಲ್ಪನೆ ಕುವೆಂಪು ಅವರದಾಗಿತ್ತು ಎಂದರು.

ಕುವೆಂಪು ಅವರ ಜಾತ್ಯಾತೀತ ಮನೋಭಾವದಿಂದ ಮೂಡಿ ಬಂದ ಆಶಯವೇ ವಿಶ್ವಮಾನವ ಸಂದೇಶವಾಗಿದೆ. ಬುದ್ಧ, ಬಸವಣ್ಣನ ಹಾಗೆ ಸಮಾಜದಲ್ಲಿ ವ್ಯಕ್ತಿ ಸ್ವತಂತ್ರವಾಗಿ, ವೈಚಾರಿಕ ದೃಷ್ಟಿಕೋನ ಬೆಳೆಸಿಕೊಂಡುವ ವಿಶ್ವ ಮಾನವನಾಗಿ ರೂಪುಗೊಳ್ಳಬೇಕು ಎಂಬುದು ಸಂದೇಶವಾಗಿದೆ ಎಂದರು.

ಲೇಖಕ ಕಣಿವೆ ಭಾರದ್ವಾಜ ಆನಂದತೀರ್ಥ, ಕುವೆಂಪು ಅವರ ಬದುಕಿನ ಒಳನೋಟ ಹಾಗೂ ಅವರ ವೈಚಾರಿಕ ಚಿಂತನೆ ಬಗ್ಗೆ ತಿಳಿಸಿದರು.

ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ‌ ನಿಕಟ ಪೂರ್ವ ಅಧ್ಯಕ್ಷ ಬಿ.ಎಸ್.ಲೋಕೇಶ್ ಸಾಗರ್ ಕಾರ್ಯಕ್ರಮ ಉದ್ಘಾಟಿಸಿ
ಮಾತನಾಡಿ, ಪ್ರತಿಯೊಬ್ಬರೂ ಕುವೆಂಪು ಅವರನ್ನು ವೈಜ್ಞಾನಿಕ ನೆಲಗಟ್ಟಿನಲ್ಲಿ ನೋಡುವ ಮೂಲಕ ಅವರ ಆದರ್ಶಗಳನ್ನು ಮೈಗೂಢಿಸಿಕೊಳ್ಳಬೇಕು ಎಂದರು.

ತೊರೆನೂರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ನಿರ್ದೇಶಕ ಕೆ.ಎಸ್.ಕೃಷ್ಣೇಗೌಡ, ಜಿಲ್ಲಾ ವೀರಶೈವ ಮಹಾಸಭಾದ ಅಧ್ಯಕ್ಷ ಎಚ್.ವಿ.ಶಿವಪ್ಪ, ಜಿಲ್ಲಾ ಶರಣ ಸಾಹಿತ್ಯ ಪರಿಷತ್ತು ಅಧ್ಯಕ್ಷ ಕೆ.ಎಸ್.ಮೂರ್ತಿ, ಎಸ್.ಬಿ.ಎಂ ಬ್ಯಾಂಕ್ ನಿವೃತ್ತ ಹಿರಿಯ ಅಧಿಕಾರಿ ಸೂದನ ರತ್ನಾವತಿ, ಕಣಿವೆ ಕಟ್ಟೆಯ ಪ್ರಧಾನ ಸಂಚಾಲಕ ಕೆ.ವಿ.ಉಮೇಶ್, ಸಂಚಾಲಕರಾದ ಟಿ.ಜಿ.ಪ್ರೇಮಕುಮಾರ್, ಎಂ.ಎನ್.ವೆಂಕಟನಾಯಕ್, ಲೇಖಕರಾದ ಸುನೀತ ಲೋಕೇಶ್, ಲೀಲಾಕುಮಾರಿ ತೊಡಿಕಾನ, ಮಾಲಾದೇವಿ ಪಾಲ್ಗೊಂಡಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.