ADVERTISEMENT

ಮಡಿಕೇರಿ ದಸರಾ: ಮಂಟಪಗಳ ಶೋಭಾಯಾತ್ರೆ, ಚಲನವಲನ ರದ್ದು

ಟ್ರ್ಯಾಕ್ಟರ್‌ನಲ್ಲಿ ಮೆರವಣಿಗೆಗೆ ಅನುಮತಿ ನಿರಾಕರಣೆ, ಸರಕು ಸಾಗಣೆ ಆಟೊಕ್ಕೆ ಮಾತ್ರ ಅವಕಾಶ, ಸಾಂಸ್ಕೃತಿಕ ಕಾರ್ಯಕ್ರಮಗಳೂ ಇಲ್ಲ

ಅದಿತ್ಯ ಕೆ.ಎ.
Published 24 ಸೆಪ್ಟೆಂಬರ್ 2020, 20:00 IST
Last Updated 24 ಸೆಪ್ಟೆಂಬರ್ 2020, 20:00 IST
ಕಳೆದ ವರ್ಷದ ದಶಮಂಟಪ (ಸಂಗ್ರಹ ಚಿತ್ರ)
ಕಳೆದ ವರ್ಷದ ದಶಮಂಟಪ (ಸಂಗ್ರಹ ಚಿತ್ರ)   

ಮಡಿಕೇರಿ: ಮಡಿಕೇರಿ ಹಾಗೂ ಗೋಣಿಕೊಪ್ಪಲಿನಲ್ಲಿ ಸರಳ ಹಾಗೂ ಸಾಂಪ್ರದಾಯಿಕವಾಗಿ ದಸರಾ ಆಚರಣೆ ಮಾಡಲು ಅಂತಿಮವಾಗಿ ನಿರ್ಧಾರ ಕೈಗೊಳ್ಳಲಾಗಿದೆ. ನೂರಾರು ವರ್ಷಗಳ ಇತಿಹಾಸವಿದ್ದ ಮಡಿಕೇರಿ ದಸರಾ ಇತ್ತೀಚಿನ ವರ್ಷಗಳಲ್ಲಿ ಎರಡನೇ ಬಾರಿಗೆ ಕಳೆಗುಂದುತ್ತಿದೆ. 2018ರಲ್ಲೂ ಪ್ರಾಕೃತಿಕ ವಿಕೋಪದ ಕಾರಣಕ್ಕೆ ಸರಳವಾಗಿ ದಸರಾ ಆಚರಣೆ ನಡೆದಿತ್ತು. ಒಂದು ದಿನಕ್ಕೆ ಮಾತ್ರ ಸಾಂಸ್ಕೃತಿಕ ಕಾರ್ಯಕ್ರಮಗಳು ಸೀಮಿತಗೊಂಡಿದ್ದವು. ಈ ವರ್ಷವೂ ಒಂದು ದಿನದ ಕರಗೋತ್ಸವ ಹಾಗೂ ಕೊನೆಯ ದಿನದ ವಿಜಯದಶಮಿಗೆ ಸೀಮಿತವಾಗಲಿದೆ.

ಕೋವಿಡ್‌ ನಿಯಂತ್ರಣಕ್ಕೆ ಕೇಂದ್ರ, ರಾಜ್ಯ ಸರ್ಕಾರಗಳು ಹೊರಡಿಸಿರುವ ಮಾರ್ಗಸೂಚಿಯನ್ನು ಕಟ್ಟುನಿಟ್ಟಾಗಿ ಪಾಲಿಸುವಂತೆ ಕೊಡಗು ಜಿಲ್ಲಾಡಳಿತ ಸೂಚಿಸಿದ್ದು, ನಾಡಿನಲ್ಲೇ ಪ್ರಸಿದ್ಧಿ ಪಡೆದಿರುವ ಶೋಭಾಯಾತ್ರೆ ರದ್ದುಗೊಳ್ಳಲಿದೆ. ಜಿಲ್ಲಾಧಿಕಾರಿ ಅನೀಸ್‌ ಕಣ್ಮಣಿ ಜಾಯ್‌ ಅವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ದಸರಾ ಆಚರಣೆ ಕುರಿತು ಅಂತಿಮ ನಿರ್ಧಾರ ಕೈಗೊಳ್ಳಲಾಗಿದೆ.

ಪ್ರತಿವರ್ಷವು ಲಕ್ಷಾಂತರ ರೂಪಾಯಿ ಖರ್ಚು ಮಾಡಿ, ನಗರದ 10 ದೇವಸ್ಥಾನ ಸಮಿತಿಗಳೂ ಮಂಟಪ ನಿರ್ಮಾಣ ಮಾಡುತ್ತಿದ್ದವು. ಅವುಗಳು ಶೋಭಾಯಾತ್ರೆಯ ದಿನ, ಪೌರಾಣಿಕ ಕಥೆ ಸಾರುತ್ತ ವಿದ್ಯುತ್‌ ಬೆಳಕಿನಲ್ಲಿ ಜಗಮಗಿಸುತ್ತಿದ್ದವು. ಆದರೆ, ವರ್ಷ ಮಂಟಪ ನಿರ್ಮಾಣ ಕೈಬಿಡಲಾಗಿದೆ. ಟ್ರ್ಯಾಕ್ಟರ್‌ನಲ್ಲಿ ಕಳಸವಿಟ್ಟು ನಗರದಲ್ಲಿ ಪ್ರದಕ್ಷಿಣೆಗೆ ಅವಕಾಶ ನೀಡುವಂತೆ ಸಭೆಯಲ್ಲಿ ಪದಾಧಿಕಾರಿಗಳು ಕೋರಿದರೂ ಅದಕ್ಕೆ ಜಿಲ್ಲಾಡಳಿತದಿಂದ ಅವಕಾಶ ಸಿಕ್ಕಿಲ್ಲ.

ADVERTISEMENT

ಟ್ರ್ಯಾಕ್ಟರ್‌ ಬದಲಿಗೆ ಸರಕು ಸಾಗಣೆ ಆಟೋದಲ್ಲಿ ಕಳಸ ಕೊಂಡೊಯ್ದು ಸಂಪ್ರದಾಯದಂತೆ ಪೂಜೆ ನೆರವೇರಿಸಬೇಕು ಎಂದು ಜಿಲ್ಲಾಡಳಿತ ಹಾಗೂ ಪೊಲೀಸರು ಸೂಚನೆ ನೀಡಿದ್ದಾರೆ. ಅದನ್ನೂ ವಿಜಯದಶಮಿಯಂದು ರಾತ್ರಿ 7ರಿಂದ 10ರ ಒಳಗೆ ಮುಕ್ತಾಯ ಮಾಡಬೇಕು ಎಂದು ಜಿಲ್ಲಾಡಳಿತ ಎಚ್ಚರಿಕೆ ನೀಡಿದೆ.

ಬಹುತೇಕ ಕಾರ್ಯಕ್ರಮಗಳು ರದ್ದು:ಪ್ರತಿವರ್ಷವು ನವರಾತ್ರಿ ರಂಗಿಗೆ ಸಾಂಸ್ಕೃತಿಕ ಕಾರ್ಯಕ್ರಮಗಳು ಮೆರುಗು ನೀಡುತ್ತಿದ್ದವು. 9 ದಿನಗಳೂ ಮಂಜಿನ ನಗರಿಯ ಪ್ರೇಕ್ಷಕರನ್ನು ರಂಜಿಸುತ್ತಿದ್ದವು. ಈ ವರ್ಷ ಕೋವಿಡ್‌ ಆ ಮನರಂಜನೆಯನ್ನು ಕಸಿದುಕೊಂಡಿದೆ. ಕವಿಗೋಷ್ಠಿ ಸಹ ಇರುವುದಿಲ್ಲ.

ಕರಗೋತ್ಸವದ ಮೆರವಣಿಗೆಯೂ ಇಲ್ಲ:ಅ.17ರಂದು ಸಂಜೆ ಮಡಿಕೇರಿ ದಸರಾಕ್ಕೆ ಚಾಲನೆ ಸಿಗಲಿದೆ. ಅಂದು ಮೆರವಣಿಗೆ ನಡೆಸುವುದು ಬೇಡ. ಮೆರವಣಿಗೆ ನಡೆಸಿದರೆ, ಸಾಕಷ್ಟು ಜನದಟ್ಟಣೆ ಆಗಲಿದ್ದು ಸಮಸ್ಯೆ ತಂದೊಡ್ಡಲಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಬೇಕಿದ್ದರೆ ಮರು ದಿನದಿಂದ ಮನೆ ಮನೆಗೆ ಕರಗ ಕೊಂಡೊಯ್ಯಲು ಅವಕಾಶ ನೀಡಲಾಗುವುದು ಎಂದು ಜಿಲ್ಲಾಡಳಿತ ತಿಳಿಸಿದೆ.

ಗೋಣಿಕೊಪ್ಪಲಿನಲ್ಲಿ ನೀರಸ:‘ಕೊರೊನಾ ಕಾರಣಕ್ಕೆ ಗೋಣಿಕೊಪ್ಪಲು ದಸರಾ ಸಮಿತಿಯೂ ದಸರಾವನ್ನು ಸರಳವಾಗಿ ನಡೆಸಲು ನಿರ್ಧರಿಸಿದೆ. ಗೋಣಿಕೊಪ್ಪಲಿನಲ್ಲಿ ಈ ವರ್ಷ ಯಾವುದೇ ಶೊಭಾಯಾತ್ರೆ ಇರುವುದಿಲ್ಲ. ಆದರೆ, ಧಾರ್ಮಿಕ ವಿಧಿವಿಧಾನದಂತೆ ಅ.17ರಂದು ಚಾಮುಂಡೇಶ್ವರಿ ದೇವಿಯ ವಿಗ್ರಹ ಪ್ರತಿಷ್ಠಾಪಿಸಿ, ಪೂಜೆ ನೆರವೇರಿಸಲಾಗುವುದು’ ಎಂದು ಪದಾಧಿಕಾರಿಗಳು ತಿಳಿಸಿದ್ದಾರೆ.

ಕೊರೊನಾ ತೀವ್ರತೆ:‘ರಾಜ್ಯದಲ್ಲಿ ಕೊರೊನಾ ದಿನದಿಂದ ತೀವ್ರತೆ ಪಡೆದುಕೊಳ್ಳುತ್ತಿದೆ. ಜೊತೆಗೆ ಸಾವು– ನೋವುಗಳಿಗೆ ಕಾರಣವಾಗುತ್ತಿದ್ದು, ಎಚ್ಚರಿಕೆ ಗಂಟೆಯಾಗಿದೆ. ಇನ್ನು ನಾಲ್ಕೈದು ತಿಂಗಳು ಎಚ್ಚರಿಕೆ ಹೆಜ್ಜೆ ಇಡಬೇಕಿದ್ದು, ಸರಳವಾಗಿಯೇ ಈ ವರ್ಷ ದಸರಾ ನಡೆಸೋಣ. ಜನರ ಯೋಗಕ್ಷೇಮ ಮುಖ್ಯ’ ಎಂಬುದು ಜನರು ಅಭಿಪ್ರಾಯವಾಗಿದೆ.

ಮತ್ತೊಮ್ಮೆ ಮನವಿ:‘ಯಾವುದೇ ಕಾರಣಕ್ಕೂ ಜನರನ್ನು ಸೇರಿಸುವುದಿಲ್ಲ. ಪ್ರತಿ ದೇವಸ್ಥಾನ ಸಮಿತಿಗೆ ಒಂದು ಟ್ರ್ಯಾಕ್ಟರ್‌ನಲ್ಲಿ ಕಳಸ ಹಾಗೂ ಒಂದು ದೇವರ ಮೂರ್ತಿ ಇರಿಸಿ ಕೊಂಡೊಯ್ಯಲು ಅವಕಾಶ ನೀಡಬೇಕು ಎಂಬುದು ನಮ್ಮ ಮನವಿ. ಮಡಿಕೇರಿ ದಸರಾಕ್ಕೆ ನೂರಾರು ವರ್ಷಗಳ ಇತಿಹಾಸವಿದೆ. ದಶಮಂಟಪಗಳ ಪದಾಧಿಕಾರಿಗಳ ಸಭೆ ನಡೆಸಿ, ನಿರ್ಧಾರಕ್ಕೆ ಬರಲಿದ್ದೇವೆ. ಜಿಲ್ಲಾಧಿಕಾರಿ ಅನೀಸ್‌ ಕಣ್ಮಣಿ ಜಾಯ್‌ ಅವರನ್ನು ಸೋಮವಾರ ಭೇಟಿ ಮಾಡಿ ಸಂಪ್ರದಾಯದ ಬಗ್ಗೆ ತಿಳಿಸುತ್ತೇವೆ. ಬೆಳಿಗ್ಗಿನ ಜಾವ ಬನ್ನಿ ಕಡಿಯುವ ಸಂಪ್ರದಾಯವಿದೆ. ಅದನ್ನೂ ನಿರ್ಧರಿಸಬೇಕಿದೆ’ ಎಂದು ದಶಮಂಟಪಗಳ ಸಮಿತಿ ಅಧ್ಯಕ್ಷ ಬಿ.ಗುರುರಾಜ್‌ ‘ಪ್ರಜಾವಾಣಿ’ಗೆ ತಿಳಿಸಿದರು.

ಆರ್ಥಿಕತೆಗೆ ಪೆಟ್ಟು:ಕೊಡಗಿನಲ್ಲಿ ಮಳೆಗಾಲ ಮುಗಿದ ಕೂಡಲೇ ದಸರಾ ಹಾಗೂ ಕಾವೇರಿ ತುಲಾ ಸಂಕ್ರಮಣ ಜಾತ್ರೆಗೆ ಪ್ರತಿವರ್ಷ ಹೆಚ್ಚಿನ ಸಂಖ್ಯೆಯಲ್ಲಿ ಪ್ರವಾಸಿಗರು ಬರುತ್ತಿದ್ದರು. ಆರ್ಥಿಕ ಚಟುವಟಿಕೆಗಳು ಗರಿಗೆದರುತ್ತಿದ್ದವು. ಆದರೆ, ಕೊರೊನಾ ಎಲ್ಲದಕ್ಕೂ ಕಡಿವಾಣ ಹಾಕಿದೆ. ಕೊರೊನಾ ನಿಯಂತ್ರಣಕ್ಕೆ ಹೇರಿದ್ದ ಲಾಕ್‌ಡೌನ್‌ ಹಾಗೂ ಆ ನಂತರದ ಬೆಳವಣಿಗೆಗಳಿಂದ ಹೆದರಿ ಪ್ರವಾಸಿಗರು ಮಡಿಕೇರಿಯತ್ತ ಬರುತ್ತಿಲ್ಲ. ಬಂದವರೂ ಹೋಮ್‌ಸ್ಟೇ, ಲಾಡ್ಜ್‌ ಹಾಗೂ ರೆಸಾರ್ಟ್‌ಗಳಲ್ಲಿ ಉಳಿಯುವ ಮನಸ್ಸು ಮಾಡುತ್ತಿಲ್ಲ. ಮೊದಲೇ ಕುಸಿದಿರುವ ಆರ್ಥಿಕತೆಗೆ ಮತ್ತಷ್ಟು ಪೆಟ್ಟು ಬೀಳುವ ಆತಂಕವಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.