ಮಡಿಕೇರಿ: ಮಡಿಕೇರಿ ದಸರೆ ಹೊಸ್ತಿಲಲ್ಲಿದೆ. ಆದರೆ, ನಗರದೊಳಗೆ ಎಲ್ಲಲ್ಲೂ ಗುಂಡಿಗಳಿವೆ. ‘ಬೆಳಕಿನ ದಸರೆ’ಗೆ ಮುನ್ನುಡಿ ಬರೆಯಲಿರುವ ಕರಗೋತ್ಸವಕ್ಕೆ ಇನ್ನು ಉಳಿದಿರುವುದು ಕೇವಲ ಎಂಟೇ ದಿನಗಳು ಮಾತ್ರ. ಹೀಗಿದ್ದರೂ, ನಗರದಲ್ಲಿ ನಡೆಯುತ್ತಿರುವ ಸಿದ್ಧತೆಗಳು ಏನೇನೂ ಸಾಲದಂತಾಗಿವೆ.
ನಗರದಲ್ಲಿರುವ ಬಹುತೇಕ ಎಲ್ಲ ರಸ್ತೆಗಳಲ್ಲೂ ಗುಂಡಿಗಳಿವೆ. ಗುಂಡಿಗಳೇ ಇಲ್ಲದ ರಸ್ತೆಗಳು ಹುಡುಕಿದರೂ ಸಿಗದ ಸ್ಥಿತಿ ನಗರದಲ್ಲಿದೆ. ಲಕ್ಷಾಂತರ ಮಂದಿ ಆಗಮಿಸುವ ದಸರೆ ನಗರಿಯ ಸ್ಥಿತಿ ಶೋಚನೀಯವಾಗಿದೆ.
ಎಲ್ಲ ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳು ಎಲ್ಲ ತಪ್ಪನ್ನೂ ಮಳೆಯ ಮೇಲೆ ಹಾಕುತ್ತಾರೆ. ಮಳೆ ಹೆಚ್ಚಾಗಿದ್ದರಿಂದ ರಸ್ತೆಗಳು ಹಾಳಾಗಿವೆ. ದುರಸ್ತಿಗೆ ಸಮಯವನ್ನೇ ಮಳೆ ಕೊಟ್ಟಿಲ್ಲ. ಹೀಗೆ ಮಳೆಯನ್ನೇ ಈ ಎಲ್ಲ ಸಮಸ್ಯೆಗಳಿಗೆ ಹಾಗೂ ದುರಸ್ತಿ ಮಾಡದಿರುವುದಕ್ಕೆ ಪ್ರಮುಖ ಜವಾಬ್ದಾರಿಯನ್ನಾಗಿ ಮಾಡಿ ನುಣುಚಿಕೊಳ್ಳುತ್ತಿದ್ದಾರೆ. ಇದು ಪ್ರತಿ ವರ್ಷವೂ ನಡೆಯುತ್ತಿದ್ದು, ಈ ವರ್ಷವೂ ಮುಂದುವರಿದಿದೆ.
ಯಾರೊಬ್ಬರೂ ಸಹ ಮೈಸೂರಿನಲ್ಲಿ ಜಂಬೂಸವಾರಿ ಮಾರ್ಗವನ್ನು ಅತ್ಯುತ್ತಮ ಕಾಂಕ್ರೀಟ್ ರಸ್ತೆಯನ್ನಾಗಿಸಿರುವುದರ ಕಡೆಗೆ ಗಮನಕೊಡುವುದೇ ಇದೆ. ಶಾಶ್ವತವಾದ ಹಾಗೂ ಅಷ್ಟೇ ಉತೃಷ್ಠವಾದ ಕಾಂಕ್ರೀಟ್ ರಸ್ತೆಗಳನ್ನು ನಿರ್ಮಿಸಿದರೆ ಪ್ರತಿ ವರ್ಷವೂ ಗುಂಡಿ ಮುಚ್ಚುವುದಕ್ಕೆ ಹಣ ವ್ಯಯಿಸುವುದು ತಪ್ಪುತ್ತದೆ ಎಂಬ ಆಲೋಚನೆ ಇನ್ನೂ ಯಾರಿಗೂ ಬಂದಂತಿಲ್ಲ. ಹಾಗಾಗಿಯೇ, ಪ್ರತಿ ವರ್ಷವೂ ಕೊನೆಗಳಿಗೆಯಲ್ಲಿ ಗುಂಡಿ ಮುಚ್ಚುವ ಪ್ರಹಸನ ನಡೆಯುತ್ತಿದೆ.
ಮುಚ್ಚಿದ ಗುಂಡಿಗಳೂ ಸಹ ದಸರೆ ಮುಗಿದ ಸ್ವಲ್ಪ ದಿನಗಳಲ್ಲೆ ಮತ್ತೆ ಬಾಯ್ತೆರೆಯುತ್ತವೆ. ಅದರ ಅಕ್ಕಪಕ್ಕದಲ್ಲೂ ಗುಂಡಿಗಳು ಮೂಡುತ್ತದೆ. ಒಂದೇ ಒಂದು ಮಳೆಗೆ ಮತ್ತೆಲ್ಲ ರಸ್ತೆಗಳೂ ಹೊಂಡಮಯವಾಗುತ್ತಿವೆ. ಶಾಶ್ವತವಾದ ರಸ್ತೆ ಕಾಮಗಾರಿ ಎನ್ನುವುದು ಮಡಿಕೇರಿಯ ಪಾಲಿಗೆ ಮರೀಚಿಕೆ ಎನಿಸಿದೆ.
ಕರಗಧಾರಿಗಳಿಗೆ ಸಂಕಷ್ಟ
ರಸ್ತೆ ಗುಂಡಿಗಳು ಕೇವಲ ದಸರಾ ದಶಮಂಟಪಗಳ ಶೋಭಾಯಾತ್ರೆಗಷ್ಟೇ ತೊಂದರೆಯಾಗಿಲ್ಲ. ಅದಕ್ಕೂ ಮೊದಲು ನಡೆಯುವ ಕರಗೋತ್ಸವಕ್ಕೂ ಅವು ಉಪಟಳಕಾರಿಯಾಗಿವೆ. ನಗರದ ನಾಲ್ಕೂ ಶಕ್ತಿದೇವತೆಗಳ ಕರಗಧಾರಿಗಳು ಕರಗಗಳನ್ನು ಹೊತ್ತು ಬರಿಗಾಲಿನಲ್ಲಿ ಹೆಜ್ಜೆ ಹಾಕುತ್ತಾ, ಕುಣಿಯುತ್ತಾ ಹೋಗುತ್ತಾರೆ. ಕರಗೋತ್ಸವದ ನಂತರವೂ ಅವರು ನಿತ್ಯ ತಮ್ಮ ದೇಗುಲ ವ್ಯಾಪ್ತಿಯ ರಸ್ತೆಗಳಲ್ಲಿ ಬರಿಗಾಲಿನಲ್ಲಿ ಕರಗ ಹೊತ್ತು ನಡೆಯುತ್ತಾರೆ. ಆಗ ಗುಂಡಿಮಯ ರಸ್ತೆಗಳು ಅಕ್ಷರಶಃ ತೊಂದರೆ ಕೊಡುತ್ತವೆ.
ಮತ್ತೊಂದೆಡೆ, ಐತಿಹಾಸಿಕ ಮಡಿಕೇರಿ ದಸರೆಯಲ್ಲಿ ಕರಗೋತ್ಸವ ನಡೆಯುವ ಪಂಪಿನ ಕೆರೆಯ ಆವರಣದಲ್ಲಿ ಇನ್ನೂ ಕಾಮಗಾರಿ ಪೂರ್ಣಗೊಂಡಿಲ್ಲ. ಕೆರೆಯ ಆವರಣದಲ್ಲಿ ಕರಗ ಕಟ್ಟೆಗಳಿಗೆ ಮಾರ್ಬಲ್ ಅಳವಡಿಸುವ ಕೆಲಸ ಹಾಗೂ ಮುಖ್ಯ ದ್ವಾರದ ಕಾಮಗಾರಿ ಇನ್ನೂ ನಡೆಯುತ್ತಿದೆ. ಭಾನುವಾರ ಈ ಕಾಮಗಾರಿಗಳನ್ನು ಮಡಿಕೇರಿ ನಗರಸಭಾ ಉಪಾಧ್ಯಕ್ಷ ಮಹೇಶ್ ಜೈನಿ ವೀಕ್ಷಿಸಿದರು. ಶುಚಿತ್ವದ ಕುರಿತೂ ಪರಿಶೀಲಿಸಿದರು.
ಶಾಶ್ವತ ರಸ್ತೆ ಬೇಕು ದಸರಾ ದಶಮಂಟಪಗಳು ಸಾಗುವ ದಾರಿಯಲ್ಲಿ ಶಾಶ್ವತವಾದ ರಸ್ತೆ ನಿರ್ಮಾಣವಾಗಬೇಕು. ಈಗ ಪ್ರತಿ ವರ್ಷವೂ ಕೇವಲ ಗುಂಡಿ ಮುಚ್ಚುವ ಕಾರ್ಯವಷ್ಟೇ ನಡೆಯುತ್ತಿದೆ. ಇದರ ಬದಲು ಉತ್ತಮ ಗುಣಮಟ್ಟದಿಂದ ಕೂಡಿದ ರಸ್ತೆಯನ್ನು ನಿರ್ಮಾಣ ಮಾಡಿಕೊಡಬೇಕುಬಿ.ಎಂ.ಹರೀಶ್ ಮಡಿಕೇರಿ ದಸರಾ ದಶಮಂಟಪ ಸಮಿತಿ ಅಧ್ಯಕ್ಷ
ಕರಗೋತ್ಸವ ಆರಂಭಕ್ಕೂ ಮುನ್ನವೇ ದುರಸ್ತಿ ಮಾಡಿ ಮಡಿಕೇರಿ ನಗರದಲ್ಲಿ ಕರಗೋತ್ಸವ ಆರಂಭವಾಗುವ ಮುನ್ನವೆ ರಸ್ತೆ ಗುಂಡಿಗಳನ್ನು ಮುಚ್ಚುವ ಕಾರ್ಯ ಆರಂಭಿಸಿ. ಕರಗಧಾರಿಗಳು ಬರಿಗಾಲಿನಲ್ಲಿ ನಡೆಯುವುದರಿಂದ ಕೇವಲ ಮುಖ್ಯರಸ್ತೆಗಳನ್ನು ಮಾತ್ರವಲ್ಲ ನಗರದ ಒಳಭಾಗದ ರಸ್ತೆಗಳನ್ನು ದುರಸ್ತಿಪಡಿಸಿ. ಈ ಕೆಲಸ ಜರೂರು ಎಂದು ಪರಿಗಣಿಸಿ ಆದಷ್ಟು ಬೇಗ ಮಾಡಿರಿಜಿ.ವಿ.ರವಿಕುಮಾರ್ ಕಂಚಿ ಕಾಮಾಕ್ಷಿ ದೇವಾಲಯ ಸಮಿತಿಯ ಗೌರವಾಧ್ಯಕ್ಷ
ಟೆಂಡರ್ ಆಗಿದೆ ಕಾರ್ಯಾದೇಶವೂ ನೀಡಲಾಗಿದೆ ಮಳೆ ನಿಂತಿಲ್ಲ ರಸ್ತೆ ಗುಂಡಿಗಳನ್ನು ಮುಚ್ಚಲು ₹ 10 ಲಕ್ಷದ ಟೆಂಡರ್ ಆಗಿದೆ. ಕಾರ್ಯಾದೇಶವನ್ನೂ ನೀಡಲಾಗಿದೆ. ಕೆಲಸ ಮಾಡಲು ಗುತ್ತಿಗೆದಾರರೂ ತಯಾರಾಗಿ ಎಲ್ಲ ಪರಿಕರಗಳೊಂದಿಗೆ ಬಂದಿದ್ದಾರೆ. ಆದರೆ ಶನಿವಾರ ಮತ್ತೆ ಮಳೆ ಸುರಿದಿದೆ. ಇದರಿಂದ ನೀರಿನ ತೇವಾಂಶ ಹೆಚ್ಚಾಗಿದೆ. ಗುಂಡಿಗಳಲ್ಲಿ ನೀರು ನಿಂತಿದೆ. ಈಗ ಗುಂಡಿ ಮುಚ್ಚಿದರೆ ಹೆಚ್ಚು ಕಾಲ ಬಾಳಿಕೆ ಬರುವುದಿಲ್ಲ. ಹಾಗಾಗಿ ತೇವಾಂಶ ಹೋಗಿ ಗುಂಡಿ ಒಣಗಲಿ ಎಂದು ಕಾಯುತ್ತಿದ್ದೇವೆ. ಆದರೆ ಭಾನುವಾರವೂ ಮೋಡಮುಸುಕಿದ ವಾತಾವರಣ ಇದೆ. ಸ್ವಲ್ಪ ಬಿಸಿಲು ಬಂದರೂ ಸಾಕು ಗುಂಡಿ ಮುಚ್ಚುವ ಕೆಲಸ ಆರಂಭಿಸಲಾಗುವುದು. ಇನ್ನು ಶಾಶ್ವತ ರಸ್ತೆ ನಿರ್ಮಾಣ ಕುರಿತು ಹೇಳುವುದಾದರೆ ರಾಜಾಸೀಟ್ ರಸ್ತೆಯನ್ನು ನಗರೋತ್ಥಾನ ನಿಧಿಯಲ್ಲಿ ಅಭಿವೃದ್ಧಿಪಡಿಸುವ ಉದ್ದೇಶ ಇದೆ.ಎಚ್.ಆರ್.ರಮೇಶ್ ಮಡಿಕೇರಿ ನಗರಸಭೆಯ ಪೌರಾಯುಕ್ತ.
ಗುಂಡಿ ಮುಚ್ಚಲಾಗುತ್ತಿದೆ ಶಾಶ್ವತ ರಸ್ತೆ ಬೇಕಾಗಿದೆ ಈಗ ಕೆಲವು ದಿನಗಳಿಂದ ಮಡಿಕೇರಿ ನಗರದ ಅಲ್ಲಲ್ಲಿ ರಸ್ತೆ ಗುಂಡಿಗಳನ್ನು ಮುಚ್ಚುವ ಕಾರ್ಯ ನಡೆಯುತ್ತಿದೆ. ಪ್ರತಿ ವರ್ಷವೂ ದಸರೆಯ ಹೊಸ್ತಿಲಲ್ಲಿ ಈ ಕಾರ್ಯ ನಡೆಯುತ್ತಲೇ ಇರುತ್ತದೆ. ಇದಕ್ಕೆ ಬದಲಾಗಿ ದಶಮಂಟಪಗಳು ಸಾಗುವ ರಸ್ತೆಯನ್ನು ಉತ್ತಮ ಗುಣಮಟ್ಟದಿಂದ ಶಾಶ್ವತವಾದ ರಸ್ತೆಯನ್ನಾಗಿ ನಿರ್ಮಿಸಿದರೆ ಪ್ರತಿ ವರ್ಷ ಗುಂಡಿ ಮುಚ್ಚುವುದಕ್ಕೆ ತಗುಲುವ ವೆಚ್ಚವಾದರೂ ಉಳಿತಾಯವಾಗುತ್ತದೆ.ಅರುಣ್ ಕುಮಾರ್ ಮಡಿಕೇರಿ ದಸರಾ ಸಮಿತಿ ಕಾರ್ಯಧ್ಯಕ್ಷ
ಗುಂಡಿಯನ್ನೂ ಮುಚ್ಚುತ್ತೇವೆ ಶಾಶ್ವತ ರಸ್ತೆಯನ್ನೂ ನಿರ್ಮಿಸುತ್ತೇವೆ ಮಳೆ ಇದ್ದುದ್ದರಿಂದ ರಸ್ತೆಗಳ ಗುಂಡಿ ಮುಚ್ಚುವ ಕಾರ್ಯ ಇಂದಿನಿಂದ ಆರಂಭವಾಗಲಿದೆ. ದಸರೆಯ ಒಳಗೆ ಈ ಕಾರ್ಯ ಪೂರ್ಣವಾಗಲಿದೆ. ಮಳೆಗಾಲ ಮುಗಿದ ಬಳಿಕ ಎನ್‌ಡಿಆರ್‌ಎಫ್ ನಿಧಿಯಿಂದ ಮಡಿಕೇರಿ ನಗರದ ಪ್ರಮುಖ ರಸ್ತೆಗಳನ್ನು ಶಾಶ್ವತ ರಸ್ತೆಗಳನ್ನಾಗಿ ನಿರ್ಮಾಣ ಮಾಡುವ ಚಿಂತನೆ ಇದೆಮಹೇಶ್ ಜೈನಿ ಮಡಿಕೇರಿ ನಗರಸಭೆಯ ಉಪಾಧ್ಯಕ್ಷ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.