ADVERTISEMENT

ನಿರ್ಲಕ್ಷ್ಯ ಬೇಡ ಎಚ್ಚರಿಕೆ ಇರಲಿ: ಅಧಿಕಾರಿಗಳಿಗೆ ಕೆ.ಜಿ.ಬೋಪಯ್ಯ ಸೂಚನೆ

​ಪ್ರಜಾವಾಣಿ ವಾರ್ತೆ
Published 9 ಏಪ್ರಿಲ್ 2020, 10:13 IST
Last Updated 9 ಏಪ್ರಿಲ್ 2020, 10:13 IST
ಮಡಿಕೇರಿಯಲ್ಲಿ ಗುರುವಾರ ನಡೆದ ಸಭೆಯಲ್ಲಿ ಶಾಸಕ ಕೆ.ಜಿ.ಬೋಪಯ್ಯ ಮಾತನಾಡಿದರು
ಮಡಿಕೇರಿಯಲ್ಲಿ ಗುರುವಾರ ನಡೆದ ಸಭೆಯಲ್ಲಿ ಶಾಸಕ ಕೆ.ಜಿ.ಬೋಪಯ್ಯ ಮಾತನಾಡಿದರು   

ಮಡಿಕೇರಿ: ‘ಸದ್ಯಕ್ಕೆ ಕೊಡಗು ಜಿಲ್ಲೆಯಲ್ಲಿ ಕೋವಿಡ್‌ 19 ಸೋಂಕಿತರು ಯಾರೂ ಇಲ್ಲ. ಹಾಗಂತ ನಿರ್ಲಕ್ಷ್ಯ ಬೇಡ. ಅಗತ್ಯ ಮುನ್ನೆಚ್ಚರಿಕೆ ವಹಿಸಿ’ ಎಂದು ಶಾಸಕ ಕೆ.ಜಿ.ಬೋಪಯ್ಯ ಅವರು ಅಧಿಕಾರಿಗಳಿಗೆ ಸೂಚಿಸಿದರು.

ನಗರದ ತಾ.ಪಂ ಕಚೇರಿಯಲ್ಲಿ ಗುರುವಾರ ನಡೆದ ಸಭೆಯಲ್ಲಿ ಅವರು ಮಾತನಾಡಿದರು.

‘ನೋಡೆಲ್ ಅಧಿಕಾರಿಗಳು ಚೆನ್ನಾಗಿ ಕೆಲಸ ಮಾಡುತ್ತಿದ್ದಾರೆ. ಸಣ್ಣಪುಟ್ಟ ಸಮಸ್ಯೆಗಳು ಕಂಡುಬಂದಲ್ಲಿ ನಿಯಮದ ಜೊತೆ ಮಾನವೀಯತೆ ನೆಲಗಟ್ಟಿನಲ್ಲಿ ಕೆಲಸ ಮಾಡಬೇಕು’ ಎಂದು ಬೋಪಯ್ಯ ಹೇಳಿದರು.

ADVERTISEMENT

ಮಡಿಕೇರಿ ತಾಲ್ಲೂಕು ಆರೋಗ್ಯಾಧಿಕಾರಿ ಡಾ.ಗೋಪಿನಾಥ್ ಮಾತನಾಡಿ, ‘ಪ್ರಾಥಮಿಕ ಆರೋಗ್ಯ ಕೇಂದ್ರ, ಸಮುದಾಯ ಆರೋಗ್ಯ ಕೇಂದ್ರದಲ್ಲಿ ಅಗತ್ಯ ಕ್ರಮ ವಹಿಸಲಾಗಿದೆ. ಆಶಾ ಕಾರ್ಯಕರ್ತೆಯರು, ಅಂಗನವಾಡಿ ಕಾರ್ಯಕರ್ತೆರು, ಆರೋಗ್ಯ ಇಲಾಖೆ ಸಿಬ್ಬಂದಿಗಳಿಗೆ ಅಗತ್ಯ ಮಾಸ್ಕ್ ಹಾಗೂ ಸ್ಯಾನಿಟೈಸರ್ ವಿತರಿಸಲಾಗಿದೆ. ಕ್ವಾರಂಟೈನ್‍ನಲ್ಲಿ ಇದ್ದವರು ಬಹುತೇಕ ಬಿಡುಗಡೆ ಆಗಿದ್ದಾರೆ. ಅಗತ್ಯ ಔಷಧಿ ಖರೀದಿಗೆ ಸರ್ಕಾರದ ಆದೇಶನ್ವಯ ಹಣ ಬಿಡುಗಡೆ ಮಾಡಲಾಗಿದೆ ಎಂದು ಮಾಹಿತಿ ನೀಡಿದರು.

ವ್ಯಾಪಾರಕ್ಕಾಗಿ ತರಕಾರಿಗಳನ್ನು ಇತರೆ ಜಿಲ್ಲೆಗಳಿಂದ ತರುವವರು ಅಲ್ಲಿನ ಆರ್‌ಎಂಸಿ ಅನುಮತಿ ಪತ್ರಗಳಿದ್ದಾರೆ ಮಾತ್ರ ಅಂತವರನ್ನು ಜಿಲ್ಲೆಯ ಪ್ರವೇಶಕ್ಕೆ ಅವಕಾಶ ಕಲ್ಪಿಸಬೇಕು. ರೈತರು ಅಥವಾ ವ್ಯಾಪಾರಿಗಳು ಅಲ್ಲದೇ ಬೇರೆಯವರಿಗೆ ಮಾರಾಟಕ್ಕೆ ಅವಕಾಶ ನೀಡಬೇಡಿ. ಹಳ್ಳಿಗಳಲ್ಲಿ ವ್ಯಾಪಾರದ ಹೆಸರಿನಲ್ಲಿ ಬರುವವರ ಮೇಲೆ ನಿಗಾ ಇರಲಿ ಎಂದು ಬೋಪಯ್ಯ ಎಚ್ಚರಿಸಿದರು.

ನಾಪೋಕ್ಲು ಭಾಗದಲ್ಲಿ ಮೊದಲು ಹೆಚ್ಚಿನ ಸಂಖ್ಯೆಯಲ್ಲಿ ಜನದಟ್ಟಣೆ ಇರುತ್ತಿತ್ತು. ಇದೀಗ ಕಡಿಮೆಯಾಗಿದೆ. ಪಡಿತರ ಪೂರೈಕೆ ಸಮರ್ಪಕವಾಗಿ ಆಗುತ್ತಿದ್ದು ಬಹುತೇಕ ಪೂರ್ಣಗೊಂಡಿದೆ ಎಂದು ಆಹಾರ ಇಲಾಖೆ ಉಪ ನಿರ್ದೇಶಕ ಗೌರವ್ ಕುಮಾರ್ ಶೆಟ್ಟಿ ಮಾಹಿತಿ ನೀಡಿದರು.

ಮಡಿಕೇರಿ ಡಿವೈಎಸ್‌ಪಿ ಬಾರಿಕೆ ದಿನೇಶ್ ಮಾತನಾಡಿ, ‘ಸಂಬಂಧಪಟ್ಟ ಗ್ರಾ.ಪಂ ಪಿಡಿಒಗಳ ಅನುಮತಿ ಇದ್ದರೆ ಮಾತ್ರ ವ್ಯಾಪಾರಕ್ಕೆ ಅನುವು ಮಾಡಿಕೊಡುತ್ತಿದ್ದೇವೆ’ ಎಂದು ಸ್ಪಷ್ಟನೆ ನೀಡಿದರು.

ಕೃಷಿ ಪೂರಕ ಸಾಗಾಣಿಕೆ, ಮಾರಾಟಕ್ಕೆ ವಿನಾಯಿತಿಯಿದೆ. ಜಿಲ್ಲಾಡಳಿತ ಸೂಚಿಸಿದ ಸಮಯದಲ್ಲಿ ಬಂದು ರಸಗೊಬ್ಬರ ಖರೀದಿಸಬೇಕು. ಲೋಡಿಂಗ್‍ಗೆ ಹೆಚ್ಚಿನ ಸಮಯ ತಗುಲಿದರೆ, ಬಿಲ್‍ನಲ್ಲಿ ಸಮಯ ನಿಗದಿಪಡಿಸಬೇಕೆಂದು ಬೋಪಯ್ಯ ನಿರ್ದೇಶನ ನೀಡಿದರು.

ಜನತಾ ಬಜಾರ್ ಸರಿಯಾದ ಸಮಯಕ್ಕೆ ತೆರೆಯುತ್ತಿಲ್ಲ. ಇದರಿಂದ ಜನಸಂದಣಿ ಹೆಚ್ಚಾಗುತ್ತಿದೆ ಎಂದು ದಿನೇಶ್ ಗಮನ ಸೆಳೆದರು.

ಸಂಬಂಧಪಟ್ಟವರೊಂದಿಗೆ ಮಾತನಾಡುತ್ತೇನೆ ಎಂದು ಶಾಸಕ ಬೋಪಯ್ಯ ಭರವಸೆ ನೀಡಿದರು.

ತಾಲ್ಲೂಕು ಪಂಚಾಯಿತಿ ಇಒ ಲಕ್ಷ್ಮಿ ಚಂದ್ರಶೇಖರ್ ಮಾತನಾಡಿ, ಕೋಳಿ, ಹಂದಿಗಳಿಗೆ ಸಮರ್ಪಕ ಫೀಡ್ ದೊರೆಯುತ್ತಿಲ್ಲ. ಈ ನಿಟ್ಟಿನಲ್ಲಿ ಹೈನುಗಾರಿಕೆ ಪೂರಕ ಉದ್ಯಮಗಳು ಜಿಲ್ಲಾಡಳಿತ ಸೂಚಿಸಿರುವ ಸಮಯದಲ್ಲಿ ಸೇವೆ ನೀಡಬೇಕೆಂದು ತಿಳಿಸಿದರು. ತಹಶೀಲ್ದಾರ್ ಮಹೇಶ್ ಹಾಗೂ ಇತರೆ ಇಲಾಖೆ ಅಧಿಕಾರಿಗಳು ಹಾಜರಿದ್ದರು.

ನದಿ ದಾಟಿ ಬರುತ್ತಿದ್ದಾರೆ!:ಅಕ್ಕಪಕ್ಕದ ಜಿಲ್ಲೆಗಳಿಂದ ಜನರು ಕಾವೇರಿ ನದಿಯನ್ನು ದಾಟಿ ಕೊಡಗಿಗೆ ಬರುತ್ತಿದ್ದಾರೆ. ಕೆಲವರು ಕಾಲುದಾರಿಯ ಮೂಲಕವೂ ಕೊಡಗು ಜಿಲ್ಲೆಗೆ ಬರುತ್ತಿದ್ದಾರೆ. ಜಿಲ್ಲಾ ಉಸ್ತುವಾರಿ ಸಚಿವ ವಿ.ಸೋಮಣ್ಣ ಅವರ ಗಮನ ಸೆಳೆಯಲಾಗುವುದು ಎಂದು ಬೋಪಯ್ಯ ಹೇಳಿದರು.

ಗಡಿ ಬಂದ್ ಹಿನ್ನೆಲೆ ಕುಶಾಲನಗರ, ಗುಡ್ಡೆಹೊಸೂರು ಭಾಗದಿಂದ ನದಿ ದಾಟಿ ಬರುತ್ತಿದ್ದಾರೆ. ಈ ಬಗ್ಗೆ ಕ್ರಮವಹಿಸಬೇಕು ಹಾಗೂ ಕರಿಕೆ ಮೂಲಕ ಬರುವ ರಸ್ತೆಯನ್ನು ಮುಚ್ಚಲಾಗಿದೆ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.