ನಾಪೋಕ್ಲು: ಕಳೆದ 24 ವರ್ಷಗಳಲ್ಲಿ 360 ಕುಟುಂಬಗಳ 3 ಸಾವಿರಕ್ಕೂ ಅಧಿಕ ಹಾಕಿ ಆಟಗಾರರು ಪಾಲ್ಗೊಳ್ಳುವ ಮೂಲಕ ದಾಖಲೆ ಮಾಡಿದ ಕುಂಡ್ಯೋಳಂಡ ಹಾಕಿ ಟೂರ್ನಿ ಕಳೆದ ವರ್ಷ ಅಧಿಕೃತವಾಗಿ ಗಿನ್ನಿಸ್ ಪುಟಗಳನ್ನು ಸೇರಿತು.
ಅದರ ಸವಿ ನೆನಪಿನಲ್ಲಿ ಈ ವರ್ಷ ಪಂದ್ಯಾವಳಿಯ ಬೆಳ್ಳಿ ಹಬ್ಬ ಬಂದಿದ್ದು, ಮುದ್ದಂಡ ಕಪ್‌ಗೆ ಭರ್ಜರಿ ಸಿದ್ದತೆ ನಡೆಸಲಾಗಿದೆ.
ಮಾರ್ಚ್ –ಏಪ್ರಿಲ್ ತಿಂಗಳುಗಳಲ್ಲಿ ಗ್ರಾಮ ದೇವಾಲಯಗಳಲ್ಲಿ ವಿವಿಧ ಉತ್ಸವಗಳು ಜರುಗಲಿದ್ದು, ಅಧಿಕ ಸಂಖ್ಯೆಯ ಭಕ್ತ ಸಮೂಹವನ್ನು ಸೆಳೆದರೆ, ಇತ್ತ ಕ್ರೀಡಾ ಮೈದಾನದಲ್ಲಿ ಜರುಗುವ ಕೊಡವ ಕೌಟುಂಬಿಕ ಹಾಕಿ ಉತ್ಸವ ಕ್ರೀಡಾ ಪ್ರೇಮಿಗಳ ಮನಸೆಳೆಯಲಿದೆ.
ಅಧಿಕ ಸಂಖ್ಯೆಯ ಕೊಡವ ಕುಟುಂಬಗಳನ್ನು ವ್ಯವಸ್ಥಿತವಾಗಿ ಆಡಿಸಲು ವೇಳಾಪಟ್ಟಿ ತಯಾರಿಸುವ ಕಾರ್ಯ ಭರದಿಂದ ಸಾಗಿದ್ದು, ಬಹುತೇಕ ಅಂತಿಮ ಹಂತ ತಲುಪಿದೆ. ಮಡಿಕೇರಿಯಲ್ಲಿನ ಕನೆಕ್ಟಿಂಗ್ ಕೊಡವ ಸಂಘಟನೆ ಕಚೇರಿಯಲ್ಲಿ ಈ ಕಾರ್ಯ ನಡೆಯುತ್ತಿದ್ದು ಕ್ರೀಡಾ ತರಬೇತುದಾರ ಕೇಚಂಡ ಪ್ರಸನ್ನ ನೇತೃತ್ವದಲ್ಲಿ ವೇಳಾಪಟ್ಟಿ ನಿಗದಿ ಪ್ರಕ್ರಿಯೆ ನಡೆಯುತ್ತಿದೆ. ಕೇಚಂಡ ಪ್ರಸನ್ನ 25 ವರ್ಷಗಳ ಅವಧಿಯಲ್ಲಿ 19 ಬಾರಿ ಟೈಸ್ ರಚನೆ ಮಾಡಿ ಗಮನ ಸೆಳೆದಿದ್ದಾರೆ.
2003ರಲ್ಲಿ ನಾಪೋಕ್ಲುವಿನಲ್ಲಿ ಕಲಿಯಂಡ ಕುಟುಂಬದವರು ಕೊಡವ ಕೌಟುಂಬಿಕ ಹಾಕಿ ಟೂರ್ನಿಯನ್ನು ನಡೆಸಿದರು. ಬಳಿಕ ಬಿದ್ದಾಟಂಡ, ಕುಲ್ಲೇಟಿರ, ಅಪ್ಪಚೆಟ್ಟೋಳಂಡ, ಕುಂಡ್ಯೋಳಂಡ ಕುಟುಂಬಸ್ಥರು ನಾಪೋಕ್ಲುವಿನಲ್ಲಿ ಕೊಡವ ಕೌಟುಂಬಿಕ ಹಾಕಿ ಟೂರ್ನಿ ನಡೆಸಿ ಅತಿ ಹೆಚ್ಚು ಟೂರ್ನಿ ನಡೆಸಿದ ಪೊನ್ನಂಪೇಟೆಯ ದಾಖಲೆಯನ್ನು ಸರಿಗಟ್ಟಿದರು. ಪೊನ್ನಂಪೇಟೆಯಲ್ಲಿ ಚೆಪ್ಪುಡಿರ, ಕಳ್ಳಿಚಂಡ, ಅಳಮೇಂಗಡ, ಮನೆಯಪಂಡ ಮತ್ತು ಮಚ್ಚಮಡ ಕುಟುಂಬಗಳು ಕೊಡವ ಕೌಟುಂಬಿಕ ಹಾಕಿ ಟೂರ್ನಿಯನ್ನು ಆಯೋಜಿಸಿವೆ.
ಟೂರ್ನಿಯ ಮೊದಲ ಪಂದ್ಯ ನಡೆದಾಗ ಭಾಗವಹಿಸಿದ್ದು ಕೇವಲ 16 ತಂಡಗಳು. ಕರಡ ಗ್ರಾಮದ ಸಹಕಾರದೊಂದಿಗೆ 1997ರಲ್ಲಿ ನಿವೃತ್ತ ಬ್ಯಾಂಕ್ ಅಧಿಕಾರಿ ಪಾಂಡಂಡ ಕುಟ್ಟಪ್ಪ ಹಾಗೂ ಶಿಕ್ಷಕರಾಗಿದ್ದ ಸೋದರ ಕಾಶಿ ತಮ್ಮ ತಂದೆ ಮುದ್ದಪ್ಪ ಅವರ ನೆನಪಿನಾರ್ಥ ಕೊಡವ ಕುಟುಂಬಗಳ ನಡುವೆ ಹಾಕಿ ಟೂರ್ನಿ ಆರಂಭಿಸಿದರು. ನಂತರ, ಪಕ್ಕದ ಗ್ರಾಮವಾದ ಅರಪಟ್ಟುವಿನಲ್ಲಿ ಕೋಡಿರ ಪ್ರವೀಣ್ ಅವರು ತಮ್ಮ ಕುಟುಂಬದ ಸಹಕಾರದೊಂದಿಗೆ 2ನೇ ವರ್ಷದ ಹಾಕಿ ಟೂರ್ನಿಯನ್ನು ನಡೆಸಿದರು. ಹೀಗೆ ಪ್ರತಿವರ್ಷ ತಂಡಗಳು ಹೆಚ್ಚುತ್ತಾ ಕೊಡಗಿನ ಪ್ರಮುಖ ಹಬ್ಬವಾಯಿತು.
ಈವರ್ಷ ಮುದ್ದಂಡ ಕಪ್‌ನಲ್ಲಿ ಆಟವಾಡಲು 396 ತಂಡಗಳು ಹೆಸರು ನೋದಾಯಿಸಿಕೊಂಡಿವೆ. ಕೊಡಗು ಮಾತ್ರವಲ್ಲದೆ ಹೊರ ಜಿಲ್ಲೆಯ ಹೊರಗೆ ಉದ್ಯೋಗದಲ್ಲಿರುವವರು ಏಪ್ರಿಲ್ ಮೇ ತಿಂಗಳಲ್ಲಿ ರಜೆ ಕಾಯ್ದಿರಿಸಿ ತಮ್ಮ ಕುಟುಂಬದ ಪರವಾಗಿ ಆಡಲು ಆಗಮಿಸುತ್ತಿದ್ದಾರೆ. ರಾಷ್ಟ್ರಮಟ್ಟದಲ್ಲಿ ಈ ಟೂರ್ನಿ ಗಮನ ಸೆಳೆದು ಸುದ್ದಿಯಾಗುತ್ತಿದೆ.
2018ರಲ್ಲಿ ನಾಪೋಕ್ಲುವಿನಲ್ಲಿ ಕುಲ್ಲೇಟಿರ ಕೌಟುಂಬಿಕ ಹಾಕಿ ಉತ್ಸವ ನಡೆಯಿತು. ಹಾಕಿಯಲ್ಲಿ ಮಾಜಿ ಚಾಂಪಿಯನ್ ಆಗಿರುವ ಕುಲ್ಲೇಟಿರ ಕುಟುಂಬದಲ್ಲಿ ಹಾಕಿ ಆಟಗಾರರು ಮಾತ್ರವಲ್ಲದೆ, ಕ್ರೀಡಾ ಪ್ರೇಮಿಗಳು ಸಾಕಷ್ಟು ಸಂಖ್ಯೆಯಲ್ಲಿದ್ದು 3 ಬಾರಿ ಚಾಂಪಿಯನ್ ಆಗಿದೆ. 1998ರಲ್ಲಿ ಕೋಡಿರ ಕಪ್, 1999ರಲ್ಲಿ ಬಲ್ಲಚಂಡ ಕಪ್, 2002ರಲ್ಲಿ ಚಕ್ಕೆರ ಕಪ್ ಗೆದ್ದುಕೊಂಡಿತ್ತು. ನಂತರ, ಹಲವು ಬಾರಿ ಸೆಮಿಫೈನಲ್ ಪ್ರವೇಶ ಪಡೆದುಕೊಂಡಿತ್ತು.
ಕಲಿಯಂಡ ತಂಡ ಕೊಡವ ಹಾಕಿ ಉತ್ಸವದ ಮೊದಲ ಚಾಂಪಿಯನ್‌ರಾದ ಗೌರವಕ್ಕೆ ಪಾತ್ರರಾಗಿದ್ದರೆ, ಪಳಂಗಂಡ ಅತಿ ಹೆಚ್ಚು ಬಾರಿ ಪ್ರಶಸ್ತಿ ಗೆದ್ದುಕೊಂಡ ತಂಡವಾಗಿದೆ. ಇಲ್ಲಿಯವರೆಗೆ ಪಳಂಗಂಡ ತಂಡ 5 ಬಾರಿ ಚಾಂಪಿಯನ್ ಆಗಿದ್ದು 2 ಬಾರಿ ರನ್ನರ್ ಪ್ರಶಸ್ತಿ ಪಡೆದುಕೊಂಡಿದೆ. ಕಲಿಯಂಡ ತಂಡ ಎರಡು ಬಾರಿ ಚಾಂಪಿಯನ್ ಆಗಿದ್ದು ಎರಡು ಬಾರಿ ರನ್ನರ್ ಅಪ್ ಪ್ರಶಸ್ತಿ ಗೆದ್ದುಕೊಂಡಿದೆ. ಪಳಂಗಂಡ 2006ರಲ್ಲಿ ಕಳ್ಳಿಚಂಡ ಕಪ್, 2010ರಲ್ಲಿ ಮನೆಯಪಂಡ ಕಪ್, 2011ರಲ್ಲಿ ಮಚ್ಚಮಾಡ ಕಪ್, 2012ರಲ್ಲಿ ಐಚೆಟ್ಟಿರ ಕಪ್, 2015ರಲ್ಲಿ ಕುಪ್ಪಂಡ ಕಪ್ ಗೆದ್ದುಕೊಂಡಿದೆ. 2010, 2011, 2012ರಲ್ಲಿ ಸತತ 3 ಬಾರಿ ಪ್ರಶಸ್ತಿ ಗೆದ್ದು ಹ್ಯಾಟ್ರಿಕ್ ಸಾಧನೆ ಮಾಡಿದೆ. ಆದರೆ, ಬಿದ್ದಾಟಂಡ ಕಪ್‌ನಲ್ಲಿ ಕ್ವಾರ್ಟರ್ ಫೈನಲ್‌ನಲ್ಲಿ ಪರದಂಡ ತಂಡದ ವಿರುದ್ಧ ಸೋಲು ಅನುಭವಿಸಿತ್ತು.
ಮುದ್ದಂಡ ಹಾಕಿ ಟೂರ್ನಿಯ ಕ್ರೀಡಾ ಜ್ಯೋತಿ ಇಂದು ಉದ್ಘಾಟನೆ
ನಾಪೋಕ್ಲು: ಮುದ್ದಂಡ ಕಪ್ ಹಾಕಿ ಉತ್ಸವದ ಕ್ರೀಡಾ ಜ್ಯೋತಿ ಮಾರ್ಚ್ 25ರಂದು ಕೊಡವ ಹಾಕಿ ಉತ್ಸವದ ಜನಕರಾದ ಕರಡ ಗ್ರಾಮದ ಪಾಂಡಂಡ ಕುಟುಂಬದ ಐನ್ ಮನೆಯಲ್ಲಿ ಉದ್ಘಾಟನೆಗೊಳ್ಳಲಿದೆ. ಮುದ್ದಂಡ ಕಪ್ ಹಾಕಿ ಉತ್ಸವ ಸಮಿತಿ ಮತ್ತು ಕೊಡವ ಹಾಕಿ ಅಕಾಡೆಮಿಯ ಸಂಯುಕ್ತ ಆಶ್ರಯದಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಕ್ರೀಡಾ ಜ್ಯೋತಿಯನ್ನು ಶಾಸಕ ಎ.ಎಸ್.ಪೊನ್ನಣ್ಣ ಹಾಗೂ ಕೊಡವ ಹಾಕಿ ಹಬ್ಬದ ಜನಕ ಕುಟ್ಟಪ್ಪ ಅವರ ಪತ್ನಿ ಲೀಲಾಕುಟ್ಟಪ್ಪ ಉದ್ಘಾಟಿಸಲಿದ್ದಾರೆ. 1997ರಿಂದ ಇದುವರೆಗೆ ಹಾಕಿ ಉತ್ಸವ ಆಯೋಜಿಸಿದ್ದ ಎಲ್ಲಾ ಕುಟುಂಬಗಳ ಐನ್ ಮನೆಗಳಿಗೆ ಮ್ಯಾರಥಾನ್ ಮೂಲಕ ಕ್ರೀಡಾ ಜ್ಯೋತಿಯನ್ನು ಕೊಂಡೊಯ್ಯಲಾಗುತ್ತದೆ. ಮಾರ್ಚ್ 28ರಂದು ಬೆಳಿಗ್ಗೆ 9 ಗಂಟೆಗೆ ಮಡಿಕೇರಿಯ ಜನರಲ್ ತಿಮ್ಮಯ್ಯ ವೃತ್ತದಿಂದ ಫೀಲ್ಡ್ ಮಾರ್ಷಲ್ ಕೆ.ಎಂ ಕಾರ್ಯಪ್ಪ ಕಾಲೇಜು ಮೈದಾನದವರೆಗೆ ಬೃಹತ್ ಮೆರವಣಿಗೆ ಮೂಲಕ ಕ್ರೀಡಾ ಜ್ಯೋತಿ ಸಾಗಲಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.